ಅಹಮದಾಬಾದ್ : ಒಂದು ತಿಂಗಳ ಅಂತರದಲ್ಲಿ ಐವರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಗುಜರಾತಿನಲ್ಲಿ ಬಂಧಿಸಿದ್ದಾರೆ. ರೈಲು ಪ್ರಯಾಣಿಕರನ್ನೇ ಟಾರ್ಗೆಟ್ ಮಾಡಿ ಅವರನ್ನು ಕೊಲೆ ಮಾಡಿ ಪರಾರಿಯಾಗಿ ಊರಿಂದ ಊರಿಗೆ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದೇ ರೋಚಕ.
ಬಂಧಿತನನ್ನು ಹರಿಯಾಣದ ರೋಟಕ್ ನಿವಾಸಿ ರಾಹುಲ್ ಕರವೀರ ಜಾಟ್ ಎಂದು ಗುರುತಿಸಲಾಗಿದೆ. ಗುಜರಾತ್‌ನಲ್ಲಿ ಇತ್ತೀಚೆಗೆ 19 ವರ್ಷದ ಯುವತಿಯ ಕೊಲೆಯಾಗಿತ್ತು. ಅದರ ಬೆನ್ನು ಹತ್ತಿ ಹೊರಟ ಪೊಲೀಸರು ರಾಹುಲ್ ಕರವೀರ್ ಜಾಟ್ ಎಂಬಾತನನ್ನು ಬಂಧಿಸಿದ್ದಾರೆ. ಈ ವೇಳೆ ಆತ ಒಂದು ತಿಂಗಳಲ್ಲಿ ವಿವಿಧೆಡೆ ಇತರ ನಾಲ್ವರನ್ನು ಕೊಲೆ ಮಾಡಿದ ಬಗ್ಗೆ ಮಾಹಿತಿ ಹೊರಬಂದ ನಂತರ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಗುಜರಾತಿನ ವಾಪಿ ರೈಲು ನಿಲ್ದಾಣದಲ್ಲಿ ಆತನನ್ನು ಬಂಧಿಸುವ ಮುನ್ನ ಪೊಲೀಸರು ವಿವಿಧ ರಾಜ್ಯಗಳಲ್ಲಿ ಈತನಿಗಾಗಿ ಶೋಧಿಸಿದ್ದರು. ಗುಜರಾತ್‌ನ ವಿವಿಧ ಜಿಲ್ಲೆಗಳಲ್ಲಿ ಕನಿಷ್ಠ 2,000 ಸಿಸಿ ಟಿವಿ ಕ್ಯಾಮೆರಾ ದೃಶ್ಯವಾಳಿಗಳನ್ನು ಪರಿಶೀಲಿಸಿದ್ದರು.
ಸದ್ಯ ಪೊಲೀಸ್ ವಶದಲ್ಲಿರುವ 5 ನೇ ತರಗತಿ ಡ್ರಾಪ್‌ಔಟ್ ರಾಹುಲ್ ತಾನು ನಡೆಸಿದ ಕೃತ್ಯಗಳನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ʼʼರೈಲು ಪ್ರಯಾಣಿಕರನ್ನು ಕೊಲೆ ಮಾಡಿ ಅವರಿಂದ ಹಣ ದೋಚಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ವಿವಿಧ ಕಡೆಗಳಿಗೆ ಸಂಚರಿಸುವ ರೈಲು ಏರುವ ಒಬ್ಬಂಟಿ ಮಹಿಳೆಯರೇ ಈತನ ಪ್ರಮುಖ ಟಾರ್ಗೆಟ್. ವಿಶೇಷವಾಗಿ ವಿಕಲಚೇತನ ಪ್ರಯಾಣಿಕರಿಗೆ ಮೀಸಲಾದ ಬೋಗಿಗಳಲ್ಲಿ ಈತ ತನ್ನ ದುಷ್ಕೃತ್ಯ ಎಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪದೇ ಪದೆ ಸ್ಥಳ ಬದಲಾಯಿಸುತ್ತಿದ್ದ ಈತನ ಪತ್ತೆಯೇ ಪೊಲೀಸರಿಗೆ ಸವಾಲಾಗಿತ್ತು. ಆರೋಪಿಯ ಛಾಯಾಚಿತ್ರವನ್ನು ಕೈದಿಗಳ ರಾಷ್ಟ್ರೀಯ ಡೇಟಾಬೇಸ್‌ನೊಂದಿಗೆ ಮ್ಯಾಪ್ ಮಾಡಿದ ನಂತರ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಈ ವರ್ಷದ ಆರಂಭದಲ್ಲಿ ಜೋಧ್‌ಪುರ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡಿದ್ದ ಹಾಗೂ ವಿವಿಧೆಡೆ ಈತನ ವಿರುದ್ಧ 13 ಎಫ್‌ಐಆರ್ ದಾಖಲಾಗಿವೆ ಎಂಬುದು ಪೊಲೀಸರಿಗೆ ಗೊತ್ತಾಯಿತು.
ಸ್ಥಳೀಯ ಪೊಲೀಸರು ಮತ್ತು ರೈಲ್ವೆ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಈತ ಸೆರೆ ಸಿಕ್ಕಿದ್ದಾನೆ. ಈತ ಕರ್ನಾಟಕ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ತಲಾ 1 ಕೊಲೆ ಮಾಡಿದ್ದಾನೆ ಎಂದು ಎಸ್‌ಪಿ ಕರಣರಾಜ ವಘೇಲಾ ಮಾಹಿತಿ ನೀಡಿದ್ದಾರೆ.
ನವೆಂಬರ್ 14ರಂದು ಗುಜರಾತ್‌ನ ಉದ್ವಾಡಾ ರೈಲ್ವೆ ನಿಲ್ದಾಣದ ಹಳಿಗಳ ಬಳಿ ಮಹಿಳೆಯ ಶವ ಪತ್ತೆಯಾದ ನಂತರ ವಲ್ಸಾದ್ ಜಿಲ್ಲಾ ಪೊಲೀಸರು ತನಿಖೆ ಆರಂಭಿಸಿದ ನಂತರ ಪ್ರಕರಣ ತಿರುವು ಪಡೆಯಿತು. ನಂತರ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ತಿಳಿದು ಬಂದಿತ್ತು.
ಹೀಗಾಗಿ ಹಲವು ತಂಡಗಳನ್ನು ರಚಿಸಿ ಕೊಲೆಗಾರನ ಪತ್ತೆಗೆ ಮುಂದಾದರು. ಈ ವೇಳೆ ಮಹಿಳೆಯ ಶವ ಪತ್ತೆಯಾದ ಪ್ರದೇಶದಿಂದ ವಶಪಡಿಸಿಕೊಳ್ಳಲಾದ ಅದೇ ಬಟ್ಟೆಗಳನ್ನು ಧರಿಸಿದ ಆರೋಪಿಯ ಚಲನವಲ ರೈಲ್ವೆ ನಿಲ್ದಾಣದ ಸಿಸಿಟಿವಿಗಳಲ್ಲಿ ಸೆರೆಯಾಗಿತ್ತು. ಇದರ ಆಧಾರದಲ್ಲಿ ತನಿಖೆ ಕೈಗೊಂಡ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಆಗ ಆತ ಈ ಹಿಂದೆ ನಡೆಸಿದ್ದ ಕೊಲೆಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಬಂಧಿತನಾಗುವ ಕೆಲವು ದಿನಗಳ ಹಿಂದಷ್ಟೇ ಆತ ತೆಲಂಗಾಣದ ಸಿಕಂದರಬಾದ್ ರೈಲ್ವೆ ಸ್ಟೇಷನ್ ಬಳಿ ಮಹಿಳೆಯನ್ನು ಕೊಲೆ ಮಾಡಿದ್ದ. ಅದಕ್ಕೂ ಮುನ್ನ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದ ಸೊಲ್ಲಾಪುರ ರೈಲು ನಿಲ್ದಾಣದಲ್ಲಿ ಮಹಿಳೆಯೊಬ್ಬರನ್ನು ಕೊಲೆ ಮಾಡಿದ್ದ. ಪಶ್ಚಿಮ ಬಂಗಾಳದ ಹೌರಾದಲ್ಲಿ ವೃದ್ಧನನ್ನು ಕೊಲೆ ಮಾಡಿದ್ದ ಹಾಗೂ ಕರ್ನಾಟಕದ ಮೂಲ್ಕಿಯ ರೈಲು ಪ್ರಯಾಣಿಕರೊಬ್ಬರ ಕೊಲೆಯ ಹಿಂದೆಯೂ ಈತನ ಕೈವಾಡವಿದೆ ಎಂಬುದು ಪೊಲೀಸರಿಗೆ ಗೊತ್ತಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ