ಹಾಂಕಾಂಗ್ : ಇತ್ತೀಚಿಗೆ ಕ್ರಿಪ್ಟೋಕರೆನ್ಸಿ ಉದ್ಯಮಿ ಜಸ್ಟಿನ್ ಸನ್ ಹರಾಜಿನಲ್ಲಿ 6.2 ಮಿಲಿಯನ್ ಡಾಲರ್ (52.45 ಕೋಟಿ ರೂ.) ಕೊಟ್ಟು ಗೋಡೆ ಮೇಲೆ ಟೇಪ್ ಹಾಕಿ ಅಂಟಿಸಿದ್ದ ಬಾಳೆಹಣ್ಣನ್ನು ಖರೀದಿಸಿದ್ದರು. ಈಗ ಅವರು ತಾವು ಅಷ್ಟೊಂದು ಮೊತ್ತಕ್ಕೆ ಖರೀದಿಸಿದ್ದ “ಕಮೀಡಿಯನ್” ಕಲಾಕೃತಿ ಗೋಡೆ ಮೇಲೆ ಟೇಪ್ ಹಾಕಿ ಅಂಟಿಸಿದ್ದ ಬಾಳೆಹಣ್ಣನ್ನು ಶುಕ್ರವಾರ ತಿಂದಿದ್ದಾರೆ.
ಹಾಂಕಾಂಗ್ನ ಖಾಸಗಿ ಹೋಟೆಲ್ನಲ್ಲಿ ಬಾಳೆಹಣ್ಣನ್ನು ಗೋಡೆಗೆ ಟೇಪ್ ಹಾಕಿ ಅಂಟಿಸಲಾಗಿತ್ತು. ಬಾಳೆಹಣ್ಣನ್ನು ಕಚ್ಚಿ ತಿಂದ ನಂತರ ಜಸ್ಟಿನ್ ಸನ್, ಇದು ಇತರ ಬಾಳೆಹಣ್ಣುಗಳಿಗಿಂತ ಇದು ನಿಜವಾಗಿಯೂ ತುಂಬಾ ಚೆನ್ನಾಗಿದೆ ಎಂದು ಹೇಳಿದರು.
ಜುಸ್ಟಿನ್ ಸನ್ ಡಜನ್‌ಗಟ್ಟಲೆ ಪತ್ರಕರ್ತರು ಮತ್ತು ಪ್ರಭಾವಿಗಳ ಮುಂದೆ ಬಾಳೆಹಣ್ಣನ್ನು ತಿಂದ ನಂತರ ಪರಿಕಲ್ಪನಾ ಕಲೆ ಮತ್ತು ಕ್ರಿಪ್ಟೋಕರೆನ್ಸಿಯ ನಡುವೆ ಸಮಾನಾಂತರವಿದೆ ಎಂದರು.
ಕ್ರಿಪ್ಟೋಕರೆನ್ಸಿ ಉದ್ಯಮಿ ಜಸ್ಟಿನ್ ಸನ್ ಅವರು ಕಲಾಕೃತಿ “ಕಮೀಡಿಯನ್”ನನ್ನು ಎನ್ಎಫ್ಟಿ ಮತ್ತು ವಿಕೇಂದ್ರೀಕೃತ ಬ್ಲಾಕ್‌ಚೈನ್ ತಂತ್ರಜ್ಞಾನಕ್ಕೆ ಹೋಲಿಸಿದ್ದಾರೆ. ಗೋಡೆ ಮೇಲೆ ಟೇಪ್ ಹಾಕಿ ಅಂಟಿಸಿದ್ದ ಬಾಳೆಹಣ್ಣು ಇಟಾಲಿಯನ್ ಕಲಾವಿದ ಮೌರಿಜಿಯೊ ಕ್ಯಾಟೆಲನ್ (Maurizio Cattelan) ಅವರ ಕಲಾಕೃತಿ. ಈ ಕಲಾಕೃತಿಗೆ ಕಲಾವಿದ ಮೌರಿಜಿಯೋ “ಕಮೀಡಿಯನ್” ಎಂದು ಹೆಸರಿಟ್ಟಿದ್ದರು. ಕಳೆದ ವಾರ ನ್ಯೂಯಾರ್ಕ್‌ನ ಸೋಥೆಬಿಸ್ನಲ್ಲಿ ನಡೆದ ಈ ಕಲಾಕೃತಿಯ ಹರಾಜಿನಲ್ಲಿ ಭಾಗವಹಿಸಿದ್ದ ಏಳು ಬಿಡ್‌ದಾರರ ಪೈಕಿ ಜಸ್ಟಿನ್ ಸನ್ ಅವರು 6.2 ಮಿಲಿಯನ್ ಡಾಲರ್ (52.45 ಕೋಟಿ ರೂ.) ಕೊಟ್ಟು ಕಲಾಕೃತಿಯನ್ನು ಖರೀದಿಸಿದ್ದರು.
ಈ ಕಲಾಕೃತಿಯ ವಿಶೇಷತೆ ಏನು..?
2019ರಲ್ಲಿ ಮಿಯಾಮಿ ಬೀಚ್ನಲ್ಲಿ ನಡೆದ ಆರ್ಟ್ ಬಾಸೆಲ್ನಲ್ಲಿ ಮೊದಲ ಬಾರಿಗೆ ಕಲಾವಿದ ಮೌರಿಜಿಯೊ ಕ್ಯಾಟೆಲನ್ ಅವರು, ಬಿಳಿ ಗೋಡೆಗೆ ಹಳದಿ ಬಾಳೆಹಣ್ಣನ್ನು ಟೇಪ್ನಿಂದ ಅಂಟಿಸಿದ ಕಲಾಕೃತಿ ಪ್ರದರ್ಶನಕ್ಕಿಟ್ಟಿದ್ದರು. ಆಗ ನೋಡುಗರು ತಮಾಷೆಯಾಗಿದೆ ಎಂದು ಇದನ್ನು ವ್ಯಾಖ್ಯಾನಿಸಿದ್ದರು. ಹಾಗೂ ಪ್ರಶ್ನೆ ಹಾಗೂ ಟೀಕೆಗಳ ಮಳೆಯನ್ನೇ ಸುರಿಸಿದ್ದರು. ಅದನ್ನು ಕಲೆ ಎಂದು ಪರಿಗಣಿಸಬೇಕೆ ಎಂಬ ಪ್ರಶ್ನೆಗಳಿಗೂ ಕಾರಣವಾಯಿತು. ಅಷ್ಟೇ ಅಲ್ಲ ಒಂದು ಹಂತದಲ್ಲಿ ಇನ್ನೊಬ್ಬ ಕಲಾವಿದ ಗೋಡೆಯಿಂದ ಬಾಳೆಹಣ್ಣನ್ನು ತೆಗೆದು ತಿಂದ ವಿದ್ಯಮಾನವೂ ನಡೆದಿತ್ತು. ಇಷ್ಟೆಲ್ಲ ಚರ್ಚೆಗಳ ನಡುವೆಯೂ ಈ ಕಲಾಕೃತಿ ಬಹಳ ಗಮನ ಸೆಳೆದಿತ್ತು. ಗ್ಯಾಲರಿಯ ಮಾಹಿತಿ ಪ್ರಕಾರ, ಆ ಕಲಾಕೃತಿಯ ಮೂರು ಆವೃತ್ತಿಗಳು $120,000 ಮತ್ತು $150,000 ನಡುವೆ ಮಾರಾಟವಾಗಿದ್ದವು.
ಇಷ್ಟೊಂದು ದೊಡ್ಡ ಮೊತ್ತ ನೀಡಿ ಖರೀದಿಸಿದ್ದಕ್ಕೆ ಕಾರಣವೇನು..?
ಐದು ವರ್ಷಗಳ ನಂತರ ಪುನಃ ಅದೇ ರೀತಿಯ ಕಲಾಕೃತಿಯನ್ನು ಕ್ರಿಪ್ಟೋಕರೆನ್ಸಿ ಫ್ಲಾಟ್ಫಾರ್ಮ್ TRON ನ ಸಂಸ್ಥಾಪಕ ಜಸ್ಟಿನ್ ಸನ್ ಸೋಥೆಬಿ ಹರಾಜಿನಲ್ಲಿ ಹಿಂದಿನ ಬೆಲೆಯ 50 ಪಟ್ಟು ಹೆಚ್ಚು ಬೆಲೆ ಪಾವತಿಸಿ ಖರೀದಿಸಿದ್ದಾರೆ. ನಿಖರವಾಗಿ ಹೇಳುವುದಾದರೆ, ಸನ್ ಅವರು ಒಂದು ಬಾಳೆಹಣ್ಣನ್ನು ಗೋಡೆಯ ಟೇಪ್ನಿಂದ ಅಂಟಿಸುವ ಮತ್ತು ಅದನ್ನು ಕಮೀಡಿಯನ್ ಎಂದು ಕರೆಯುವ ಅಧಿಕಾರವಿರುವ ದೃಢೀಕರಣದ ಪ್ರಮಾಣಪತ್ರವನ್ನು ಅಷ್ಟು ಬೆಲೆ ಕೊಟ್ಟು ಖರೀದಿಸಿದಂತಾಗಿದೆ.
ʼಕಮಿಡಿಯನ್ʼ ಬಾಳೆಹಣ್ಣು ಖರೀದಿಸಿದ ಬಳಿಕ ಮಾತನಾಡಿದ್ದ ಜಸ್ಟಿನ್ ಸನ್, “ನಾನು ಮೌರಿಜಿಯೊ ಕ್ಯಾಟೆಲನ್ ಅವರ ಸಾಂಪ್ರದಾಯಿಕ ಕೃತಿಯಾದ ಕಮಿಡೀಯನ್ ಅನ್ನು $6.2 ಮಿಲಿಯನ್‌ಗೆ ನನ್ನದಾಗಿಸಿಕೊಂಡಿದ್ದೇನೆ ಎಂದು ಹೇಳಲು ಉತ್ಸುಕನಾಗಿದ್ದೇನೆ. ಇದು ಕೇವಲ ಕಲಾಕೃತಿಯಲ್ಲ, ಕಲೆ, ಮೇಮ್ಸ್ ಹಾಗೂ ಕ್ರಿಪ್ಟೋಕರೆನ್ಸಿ ಸಮುದಾಯದ ಪ್ರಪಂಚಗಳಿಗೆ ಕೊಂಡಿಯಾಗುವ ಸಾಂಸ್ಕೃತಿಕ ವಿದ್ಯಾಮಾನವನ್ನು ಈ ಬಾಳೆಹಣ್ಣು ಪ್ರತಿನಿಧಿಸುತ್ತದೆ. ಈ ಕಲಾಕೃತಿ ಭವಿಷ್ಯದಲ್ಲಿ ಹೆಚ್ಚು ಚಿಂತನೆ ಮತ್ತು ಚರ್ಚೆಗೆ ಸ್ಫೂರ್ತಿ ನೀಡುತ್ತದೆ” ಎಂದು ಹೇಳಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ