ನವದೆಹಲಿ : ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ 30 ವರ್ಷದ ವ್ಯಕ್ತಿಯೊಬ್ಬನನ್ನು ಅಕ್ರಮವಾಗಿ ಗಡಿ ದಾಟಿದ್ದಕ್ಕಾಗಿ ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ. ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿದ ನಂತರ ತಾನು ಪ್ರೀತಿಸುತ್ತಿದ್ದ ಮಹಿಳೆಯನ್ನು ಭೇಟಿಯಾಗಲು ಗಡಿ ದಾಟಿದ್ದಾಗಿ ವ್ಯಕ್ತಿ ಹೇಳಿದ್ದಾನೆ ಎಂದು ಪಾಕಿಸ್ತಾನದ ಪೊಲೀಸರು ಹೇಳಿದ್ದಾರೆ.
ಪಾಕಿಸ್ತಾನದ ಪಂಜಾಬ್ ಪೊಲೀಸರು ಮಂಡಿ ಬಹೌದ್ದೀನ್ ನಗರದಲ್ಲಿ ಬಂಧಿಸಿರುವ ಅಲಿಗಢದ ವ್ಯಕ್ತಿಯನ್ನು ನಾಗ್ಲಾ ಖಟ್ಕರಿ ಗ್ರಾಮದ ನಿವಾಸಿ ಬಾದಲ್ ಬಾಬು ಎಂದು ಗುರುತಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯೊಂದಿಗೆ ಪ್ರಣಯ ಸಂಬಂಧ ಬೆಳೆದಿದ್ದು, ಹೀಗಾಗಿ ಆಕೆಯನ್ನು ಖುದ್ದಾಗಿ ಭೇಟಿಯಾಗಲು ವೀಸಾ ಅಥವಾ ಪ್ರಯಾಣದ ದಾಖಲೆಗಳಿಲ್ಲದೆ ದೇಶವನ್ನು ಪ್ರವೇಶಿಸಿದ್ದಾಗಿ ಬಾಬು ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಇಂಡಿಯಾ ಟುಡೇ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಯಾವುದೇ ಪ್ರಯಾಣದ ದಾಖಲೆಗಳನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಡಿಸೆಂಬರ್ 27 ರಂದು ಬಾದಲ್ ಬಾಬು ಅವರನ್ನು ಬಂಧಿಸಲಾಯಿತು ಎಂದು ವರದಿ ತಿಳಿಸಿದೆ. ಪಾಕಿಸ್ತಾನದ ವಿದೇಶಿಯರ ಕಾಯಿದೆ, 1946 ರ ಸೆಕ್ಷನ್ 13 ಮತ್ತು 14 ರ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನಂತರ ಬಾಬು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅವರು ಜನವರಿ 10, 2025 ರಂದು ಮತ್ತೆ ಹಾಜರಾಗಲಿದ್ದಾರೆ.
ಅಲಿಗಢದ ವ್ಯಕ್ತಿ ತನ್ನ ಪ್ರೇಮಕಥೆಯನ್ನು ಒಪ್ಪಿಕೊಂಡಿದ್ದರೂ ಸಹ, ಪಾಕಿಸ್ತಾನದ ಅಧಿಕಾರಿಗಳು ಈ ಹಿಂದೆ ಭಾರತ-ಪಾಕಿಸ್ತಾನ ಗಡಿಯನ್ನು ಎರಡು ಬಾರಿ ದಾಟಲು ಪ್ರಯತ್ನಿಸಿ ವಿಫಲವಾದ ಕಾರಣ ಅವರ ಅಕ್ರಮ ಪ್ರವೇಶಕ್ಕೆ ಬೇರೆ ಉದ್ದೇಶವಿದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.
ಬಾಬು, ತನ್ನ ಮೂರನೇ ಪ್ರಯತ್ನದಲ್ಲಿ ಯಶಸ್ವಿಯಾಗಿ ಪಾಕಿಸ್ತಾನವನ್ನು ದಾಟಿ ಮಂಡಿ ಬಹೌದ್ದೀನ್‌ಗೆ ತಲುಪಿದ್ದಾನೆ. ಅಲ್ಲಿ ಆತ ಆನ್‌ಲೈನ್‌ನಲ್ಲಿ ಸಂವಹನ ನಡೆಸುತ್ತಿದ್ದ ಮಹಿಳೆಯ ಸಂಪರ್ಕಕ್ಕೆ ಬಂದಿದ್ದ, ಅದು ನಂತರ ಪ್ರೇಮಕ್ಕೆ ತಿರುಗಿದೆ ಎಂದು ಹೇಳಲಾಗಿದೆ.
ಈತ ಇದಕ್ಕೂ ಮೊದಲು ಆತ ಎರಡು ಬಾರಿ ಪಾಕಿಸ್ತಾನಕ್ಕೆ ಪ್ರವೇಶಿಸಲು ವಿಫಲ ಯತ್ನ ನಡೆಸಿದ್ದ ಎಂದು ಹೇಳಲಾಗಿದೆ. ಆದರೆ, ಆತನ ಪ್ರಯತ್ನವನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ವಿಫಲಗೊಳಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಖೋಖರ್ ಗಡಿ ಹೊರಠಾಣೆಯಲ್ಲಿ ಆತನನ್ನು ವಶಕ್ಕೆ ಪಡೆದು ಪ್ರಾಥಮಿಕ ತನಿಖೆಯ ನಂತರ ಪೊಲೀಸರಿಗೆ ಒಪ್ಪಿಸಿದ್ದರು.
ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಬಾದಲ್ ಬಾಬು ಅವರ ಕುಟುಂಬಕ್ಕೆ ಪಾಕಿಸ್ತಾನದಲ್ಲಿ ಆತನ ಬಂಧನದ ವಿಷಯ ತಿಳಿಯಿತು. ದೀಪಾವಳಿಗೆ 20 ದಿನಗಳ ಮೊದಲು ಬಾಬು ಮನೆಗೆ ಬಂದಿದ್ದ ಎಂದು ಅವರ ತಂದೆ ಕೃಪಾಲ್ ಸಿಂಗ್ ಹೇಳಿರುವುದಾಗಿ ನ್ಯೂಸ್ 18 ಹಿಂದಿ ವರದಿ ಮಾಡಿದೆ. ನವೆಂಬರ್ 30 ರಂದು ವೀಡಿಯೊ ಕಾಲ್ ಮೂಲಕ ಕೊನೆಯದಾಗಿ ಮಗನ ಜೊತೆ ಅವರು ಮಾತನಾಡಿದ್ದರು. ಆ ನಂತರ ಮನೆಯವರು ಆತನೊಂದಿಗೆ ಮಾತನಾಡಿರಲಿಲ್ಲ. ಇದೀಗ ಬಾಬು ಅವರನ್ನು ವಾಪಸ್ ಕರೆತರುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಪಾಕಿಸ್ತಾನ ಅಥವಾ ಭಾರತೀಯ ರಾಯಭಾರ ಕಚೇರಿಯಿಂದ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ ಎಂದು ಅಲಿಗಢ ಎಸ್‌ಎಸ್‌ಪಿ ಸಂಜೀವ ಸುಮನ್ ನ್ಯೂಸ್ 18 ಹಿಂದಿಗೆ ತಿಳಿಸಿದ್ದಾರೆ. ಪೊಲೀಸರು ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಗಡಿಯಾಚೆಗಿನ ಪ್ರೇಮಕಥೆ ವರದಿಯಾಗುತ್ತಿರುವುದು ಇದೇ ಮೊದಲಲ್ಲ. ಪ್ರೇಮಕ್ಕಾಗಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಪಾಕಿಸ್ತಾನಿ ಪ್ರಜೆಗಳಾದ ಸೀಮಾ ಹೈದರ್ ಮತ್ತು ಇಕ್ರಾ ಜೀವನಿ ಅವರ ಕಥೆಗಳು ಹೆಡ್‌ಲೈನ್ ಪಡೆದಿದ್ದವು.ಸೀಮಾ ಹೈದರ್ ತನ್ನ ಪ್ರೇಮಿ ಸಚಿನ್ ಮೀನಾರನ್ನು ಪಬ್‌ಜೀ (PUBG) ಆಡುವಾಗ ಪರಿಚಿತರಾದರು, ಇಕ್ರಾ ಜೀವನಾನಿ ಆನ್‌ಲೈನ್‌ನಲ್ಲಿ ಬೋರ್ಡ್ ಗೇಮ್ ‘ಲುಡೋ’ ಆಡುವಾಗ ಭಾರತೀಯನ ಪ್ರೀತಿಯಲ್ಲಿ ಬಿದ್ದಿದ್ದಳು.
2023 ರಲ್ಲಿ ವರದಿಗಳು ಜೀವಾನಿ “ನಾಚಿಕೆ ಸ್ವಭಾವದ ಹದಿಹರೆಯದವಳು” ಎಂದು ಹೇಳಿದ್ದವು, ಅವಳು ತನ್ನ ಆಭರಣಗಳನ್ನು ಮಾರಾಟ ಮಾಡಿದಳು ಮತ್ತು ದುಬೈಗೆ ವಿಮಾನ ಟಿಕೆಟ್‌ಗಳನ್ನು ಖರೀದಿಸಲು ಸ್ನೇಹಿತರಿಂದ ಹಣವನ್ನು ಎರವಲು ಪಡೆದಳು ಮತ್ತು ಅಲ್ಲಿಂದ ಕಾಠ್ಮಂಡುವಿಗೆ ಆಗಮಿಸಿ, ಅವಳು ಭಾರತವನ್ನು ದಾಟಿದಳು ಎಂದು ವರದಿಯಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ