ಮುಂಬರುವ 24H ದುಬೈ 2025 ಕಾರ್ ಗ್ರ್ಯಾಂಡ್ ಪ್ರಿಕ್ಸ್ ರೇಸ್‌ನ ಅಭ್ಯಾಸದ ವೇಳೆ ದಕ್ಷಿಣ ಭಾರತದ ಖ್ಯಾತ ನಟ (ಬಹುತೇಕ ತಮಿಳು) ಅಜಿತ ಅವರ ಕಾರು ಅಪಘಾತಕ್ಕೀಡಾಗಿದೆ. ವೀಡಿಯೊದಲ್ಲಿ ವೇಗವಾಗಿ ಬರುತ್ತಿದ್ದ ಅಜಿತ ಅವರ ಕಾರು ನಿಲುಗಡೆಗೆ ಮೊದಲು ನಿಯಂತ್ರಣ ಕಳೆದುಕೊಂಡು ಗೋಡೆಗೆ ಡಿಕ್ಕಿ ಹೊಡೆದಿದೆ. ನಟ ಅಜಿತ ಅವರು ಅಪಾಯದಿಂದ ಪಾರಾಗಿದ್ದಾರೆ.
180 ಕಿಮೀ ವೇಗದಲ್ಲಿ ಅಜಿತ್ ಅವರು ಕಾರು ಚಲಾಯಿಸುತ್ತಿದ್ದರು. ಈ ವೇಳೆ ತಡೆಗೋಡೆಗೆ ಡಿಕ್ಕಿಯಾಗಿದೆ ಎಂದು ಹೇಳಲಾಗಿದೆ. ಅವರ ತಂಡವು ಬಿಡುಗಡೆ ಮಾಡಿದ ವೀಡಿಯೊದಲ್ಲಿ, ತಡೆಗೋಡೆಗೆ ಅಪ್ಪಳಿಸಿದ ನಂತರ ಅವರ ಕಾರು ಏಳು ಬಾರಿ ತಿರುಗಿ ಬೀಳುತ್ತದೆ. ಅಪ್ಪಳಿಸಿದ ರಭಸಕ್ಕೆ ಕಾರಿನ ಮುಂಬಾಗ ನುಜ್ಜುಗುಜ್ಜಾಗಿದೆ. ನಂತರ ಅವರನ್ನು ಕಾರಿನಿಂದ ಪಾರು ಮಾಡಿ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯಲಾಯಿತು.
ಅವರ ಮ್ಯಾನೇಜರ್ ಸುರೇಶಚಂದ್ರ ಅವರು ನಟನ ಆರೋಗ್ಯದ ಬಗ್ಗೆ ನವೀಕರಣವನ್ನು ಹಂಚಿಕೊಂಡಿದ್ದಾರೆ. “ಅಜಿತ್ ಅವರು ಗಾಯಗೊಂಡಿಲ್ಲ, ಆರೋಗ್ಯವಾಗಿದ್ದಾರೆ. ಇದು ಸಂಭವಿಸಿದಾಗ ಅವರು ಗಂಟೆಗೆ 180 ಕಿಮೀ ವೇಗದಲ್ಲಿ ಚಾಲನೆ ಮಾಡುತ್ತಿದ್ದರು” ಎಂದು ಅವರು ತಿಳಿಸಿದ್ದಾರೆ.
ನಟ ಅಜಿತ ಅವರಿಗೆ ಕಾರ್ ರೇಸ್ ಮತ್ತು ಬೈಕ್ ರೇಸ್ ಎಂದರೆ ಬಲು ಇಷ್ಟ. ಅಜಿತ್ ಅವರ ನಟನಾ ವೃತ್ತಿಜೀವನದ ಜೊತೆಗೆ, ಡ್ರೈವಿಂಗ್ ಮತ್ತು ಬೈಕಿಂಗ್‌ನಲ್ಲಿ ಹೆಚ್ಚು ಉತ್ಸಾಹವನ್ನು ಹೊಂದಿದ್ದಾರೆ. ಅಜಿತ್ ಅವರು ಅಜಿತಕುಮಾರ ರೇಸಿಂಗ್ ತಂಡವನ್ನು ಹೊಂದಿದ್ದಾರೆ.
ಅವರು ಸ್ಪರ್ಧಾತ್ಮಕ ರೇಸ್‌ನಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ. ಅವರ ತಂಡದಲ್ಲಿ ಮ್ಯಾಥ್ಯೂ ಡೆಟ್ರಿ, ಫ್ಯಾಬಿಯನ್ ಡಫಿಯಕ್ಸ್ ಮತ್ತು ಕ್ಯಾಮೆರಾನ್ ಮೆಕ್ಲಿಯೋಡ್ ಇತರ ಸದಸ್ಯರಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಜಿತಕುಮಾರ ರೇಸಿಂಗ್ ತಂಡದ ವ್ಯವಸ್ಥಾಪಕರಾಗಿ ಫ್ಯಾಬಿಯನ್ ಡಫಿಯಕ್ಸ್ ಅಧಿಕಾರ ವಹಿಸಿಕೊಂಡಿದ್ದಾರೆ.ಅವರು ದುಬೈ ಕಾರ್ ರೇಸ್‌ನಲ್ಲಿ ಪಾಲ್ಗೊಳ್ಳಲು ತನ್ನ ತಂಡದೊಂದಿಗೆ ಅಭ್ಯಾಸ ಮಾಡುತ್ತಿದ್ದರು. ತಂಡವು 24 ಗಂಟೆಗಳ ಕಾಲ ಓಡಿಸಬೇಕು, ಪ್ರತಿ ಸದಸ್ಯರು ಆರು ಗಂಟೆಗಳ ಕಾಲ ಚಾಲನೆ ಮಾಡುತ್ತಾರೆ. ಅಜಿತ್ ತನ್ನ ಆರು ಗಂಟೆಗಳನ್ನು ಪೂರ್ಣಗೊಳಿಸಲು ಬಾಕಿ ಇರುವ ಕೆಲವೇ ನಿಮಿಷಗಳಲ್ಲಿ ಅಪಘಾತ ಸಂಭವಿಸಿದೆ.
ಈ ಮುಂಬರುವ ಸ್ಪರ್ಧೆಯು ಅಜಿತ್ ಅವರ ರೇಸಿಂಗ್ ಸಂಸ್ಥೆಯ ಕಾರ್ ರೇಸಿಂಗ್‌ನ ಚೊಚ್ಚಲ ಪ್ರವೇಶವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ