ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ (ವಿಜಯಕುಮಾರ ಆರ್.) ಅವರು ನಿಧನ ಹೊಂದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಸರಿಗಮ ವಿಜಿ ಕಳೆದ ಕೆಲ ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಒಂದು ವಾರದಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ (ಜನವರಿ 15) ಬೆಳಿಗ್ಗೆ ನಿಧನರಾಗಿದ್ದಾರೆ. ಅವರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಜನವರಿ 16 ಬೆಳಿಗ್ಗೆ ಚಾಮರಾಜಪೇಟೆಯ ಟಿ ಆರ್ ಮಿಲ್ ಬಳಿ ಬರುವ ಚೀತಾಗಾರದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.
ಅವರ ಪೂರ್ಣ ಹೆಸರು ವಿಜಯಕುಮಾರ ಆರ್. ಬೆಂಗಳೂರು ನಗರದ ಹೆಚ್‌ಎಎಲ್ ಬಳಿಯ ವಿಮಾನಪುರದಲ್ಲಿ ಅವರು ಜನಿಸಿದರು. ತಂದೆ ರಾಮಯ್ಯ ಹೆಚ್‌ಎಎಲ್ ಉದ್ಯೋಗಿ ಆಗಿದ್ದರುಅವರು ಪಿಯುಸಿ ಓದುವಾಗ ನಟ ಅಶೋಕ ಜೊತೆ ಸೇರಿ ನಾಟಕಗಳಲ್ಲಿ ಬಣ್ಣ ಹಚ್ಚಿದ್ದರು. ಮುಂದೆ ನಾಟಕಗಳಲ್ಲಿ ನಟಿಸುತ್ತಿದ್ದ ಸರಿಗಮ ವಿಜಿ ಅವರಿಗೆ ‘ಸಂಸಾರದಲ್ಲಿ ಸರಿಗಮ’ ನಾಟಕ ಬಹಳ ಹೆಸರು ಕೊಟ್ಟಿತ್ತು. ಇದೇ ಕಾರಣಕ್ಕೆ ಅವರಿಗೆ ಸರಿಗಮ ವಿಜಿ ಎಂಬ ಹೆಸರು ಬಂದಿತ್ತು. ನಾಟಕದಿಂದ ಸಿನಿಮಾಕ್ಕೆ ಪದಾರ್ಪಣೆ ಮಾಡಿದ ಅವರು ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರ, ಹಾಸ್ಯ ಪಾತ್ರಗಳಲ್ಲಿ ಹೆಚ್ಚಾಗಿ ಅಭಿನಯಿಸಿದ್ದಾರೆ.
ಆರಂಭದಲ್ಲಿ ಕೆಲ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅವರು ‘ಬೆಳುವಲದ ಮಡಿಲಲ್ಲಿ’ ಸಿನಿಮಾ ಮೂಲಕ ನಟನೆ ಪ್ರವೇಶ ಮಾಡಿದರು. 2018ರ ಸುಮಾರಿಗೆ ಅವರು ಕನ್ನಡದಲ್ಲಿ ಸುಮಾರು 269 ಚಿತ್ರಗಳಲ್ಲಿ ನಟಿಸಿದ್ದರು. 80 ಕ್ಕೂ ಹೆಚ್ಚು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದರು. ಅನೇಕ ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದ ಸರಿಗಮ ವಿಜಿ ಅವರು ಕನ್ನಡ ಸೀರಿಯಲ್‌ಗಳಿಗೆ ಸುಮಾರು 2400 ಎಪಿಸೋಡ್ಗಳನ್ನು ನಿರ್ದೇಶನ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ