ಮುಂಬೈ: ಮನೆಗೆ ನುಗ್ಗಿದ ದರೋಡೆಕೋರನಿಂದ ಚಾಕು ಇರಿತಕ್ಕೆ ಒಳಗಾದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ನಿವಾಸದಲ್ಲಿ ಮಕ್ಕಳ ಕೇರ್‌ಟೇಕರ್ ಅವರು ಪೊಲೀಸರ ಮುಂದೆ ಹೇಳಿಕೆ ನೀಡಿದ್ದು, ತಾನು ಸ್ನಾನಗೃಹದ ಬಳಿ ನೆರಳನ್ನು ಮೊದಲು ಗಮನಿಸಿರುವುದಾಗಿ ಹೇಳಿದ್ದಾಳೆ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಸ್ 18 ವರದಿ ಮಾಡಿದೆ.
ಮಾಧ್ಯಮಗಳ ವರದಿಗಳ ಪ್ರಕಾರ, ಸೈಫ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಪೊಲೀಸರ ಎದುರು ಕೆಲವು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಸೈಫ್ ಅಲಿ ಖಾನ್ ಪುತ್ರ ಜೇಹ್ ಅಲಿ ಖಾನ್ ಮಲಗಿದ್ದ ಕೋಣೆಗೆ ನುಗ್ಗಿದ ಕಳ್ಳನೊಬ್ಬ 1 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟ ಎಂದು ನರ್ಸ್ ಹೇಳಿದ್ದಾರೆ.
ಆರಂಭದಲ್ಲಿ, ದಂಪತಿಯ ಕಿರಿಯ ಮಗನನ್ನು ಕರೀನಾ ಕಪೂರ್ ನೋಡಿಕೊಳ್ಳುತ್ತಿದ್ದಾರೆ ಎಂದು ತಾನು ಭಾವಿಸಿದ್ದೆ. ಆದರೆ ತನಗೆ ಅನುಮಾನ ಬಂದ ನಂತರ ಹೆಚ್ಚಿನ ಪರಿಶೀಲನೆ ನಡೆಸಿದಾಗ 35-40 ವರ್ಷದ ಅಪರಿಚಿತ ವ್ಯಕ್ತಿ ಇದ್ದಕ್ಕಿದ್ದಂತೆ ದಾಳಿ ಮಾಡಿದ್ದಾನೆ. ಆ ವ್ಯಕ್ತಿ ಹರಿತವಾದ ಆಯುಧವನ್ನು ತೋರಿಸಿ ಮೌನವಾಗಿರುವಂತೆ ಬೆದರಿಕೆ ಹಾಕಿದ್ದಾನೆ ಎಂದು ಕೇರ್ ಟೇಕರ್ ಹೇಳಿದ್ದಾರೆ.
ಅದೇ ಸಮಯಕ್ಕೆ ಮತ್ತೊಬ್ಬ ಸೇವಕಿ ಬಂದಳು, ಆಗ ದರೋಡೆಕೋರ ಅವರ ಬಳಿ 1 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾನೆ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಕಟ್ಟಡದ 12ನೇ ಮಹಡಿಯಲ್ಲಿ ವಾಸವಾಗಿರುವ ಸೈಫ್ ಅಲಿ ಖಾನ್ ಗದ್ದಲ ಕೇಳಿ ಕೆಳಗೆ ಬಂದರು. ನಂತರ ಸೈಫ್ ಅಲಿ ಖಾನ್ ಮತ್ತು ದರೋಡೆಕೋರನ ನಡುವೆ ಜಗಳ ನಡೆಯಿತು, ಈ ಸಂದರ್ಭದಲ್ಲಿ ಆತ ಸೈಫ್ ಅಲಿ ಖಾನ್ ಅವರಿಗೆ ಚಾಕುವಿನಿಂದ ಇರಿದಿದ್ದಾನೆ. ಹರಿತವಾದ ಚಾಕು ಮುರಿದು ಸೈಫ್‌ನ ದೇಹದ ಒಳಗೆ ಸೇರಿಕೊಂಡಿದೆ.
ಸೈಫ್ ಅವರ ಗಾಯಗಳ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಸಿಬ್ಬಂದಿ ಅವರ ಹಿರಿಯ ಮಗ ಇಬ್ರಾಹಿಂ ಅವರನ್ನು ಕರೆದಿದ್ದಾರೆ. ಕಟ್ಟಡದ 8 ನೇ ಮಹಡಿಯಲ್ಲಿ ವಾಸಿಸುವ ಪುತ್ರ ಇಬ್ರಾಹಿಂ ಮತ್ತು ಸೈಫ್ ಅವರ ಪುತ್ರಿ ಸಾರಾ ಅಲಿ ಖಾನ್, ತಕ್ಷಣವೇ ಧಾವಿಸಿ ಬಂದರು. ಹಾಗೂ ತಮ್ಮ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು. ಆ ಸಮಯದಲ್ಲಿ ಯಾವುದೇ ಚಾಲಕ ಲಭ್ಯವಿಲ್ಲದ ಕಾರಣ ಮತ್ತು ಕುಟುಂಬದಲ್ಲಿ ಯಾರಿಗೂ ತಮ್ಮ ಎಲೆಕ್ಟ್ರಿಕ್ ವಾಹನವನ್ನು ಚಲಾಯಿಸಲು ಬಾರದ ಕಾರಣ, ಅವರು ಸೈಫ್ ಅವರನ್ನು ಆಟೋರಿಕ್ಷಾದಲ್ಲಿ ಲೀಲಾವತಿ ಆಸ್ಪತ್ರೆಗೆ ಸಾಗಿಸಿದ್ದಾರೆ .
ನಿಮ್ಮ ಕಾಮೆಂಟ್ ಬರೆಯಿರಿ