ರಘುಪತಿ ಯಾಜಿ
ಯಕ್ಷಗಾನದ ಪುನರ್‌ವ್ಯಾಖ್ಯಾನವಾಗಬೇಕು. ಯಕ್ಷಗಾನ ಜನಪದ ಕಲೆ ಅಲ್ಲ, ಅದು ಶಾಸ್ತ್ರೀಯ ಕಲೆ ಎಂದು ಈಗ ಅನೇಕ ವಿದ್ವಾಂಸರು ಹೇಳುತ್ತಿದ್ದಾರೆ. ಯಕ್ಷಗಾನ ಜನಪದ ಅಲ್ಲ ಎಂದರೆ ಅದು ಹೇಗೆ ಮತ್ತು ಯಾಕೆ..? ಅದು ಶಾಸ್ತ್ರೀಯ ಎಂದಾದರೆ ಅದು ಹೇಗೆ ಮತ್ತು ಯಾಕೆ ಎಂಬುದರ ಕುರಿತು ಯಕ್ಷಗಾನ ಬಯಲಾಟದ ಪುನರ್‌ವ್ಯಾಖ್ಯಾನ ಆಗಬೇಕು. ಯಕ್ಷಗಾನ ಬಯಲಾಟವು ಶಾಸ್ತ್ರೀಯ ಎಂದಾದರೆ ಅದು ಹೇಗೆ ಮತ್ತು ಯಾಕೆ ಎಂಬುದಕ್ಕೇ ಈ ʼದಶರೂಪಕಗಳ ದಶಾವತಾರʼ ಎಂಬ ಪುಸ್ತಕ ಬರೆದಿದ್ದೇನೆ.
ಹೀಗೆಂದವರು ನಿವೃತ್ತ ಸಂಪಾದಕರು ಹಾಗೂ ಸಾಹಿತಿಗಳಾದ ಅಶೋಕ ಹಾಸ್ಯಗಾರ ಅವರು. ತಾವು ಬರೆದ ಯಕ್ಷಗಾನದ ʼದಶರೂಪಕಗಳ ದಶಾವತಾರʼ ಎಂಬ ಸಂಶೋಧನಾ ಪುಸ್ತಕದ ಲೋಕಾರ್ಪಣೆ (ಜನವರಿ ೨೧, ೨೦೨೫)ಯ ಹಿನ್ನೆಲೆಯಲ್ಲಿ ಅವರು ಕನ್ನಡಿ.ನ್ಯೂಸ್‌ಗೆ ಸಂದರ್ಶನ ನೀಡಿದ್ದಾರೆ. ಯಕ್ಷಗಾನದ ಪ್ರಸಂಗಗಳು ಸಹ ಭರತನ ನಾಟ್ಯಶಾಸ್ತ್ರದ ಮೇಲೆ ಇರುವುದರಿಂದ ಇದರ ಮರುವ್ಯಾಖ್ಯಾನದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಹಿಂದಿನ ಕಾಲದಲ್ಲಿ ಯಕ್ಷಗಾನದಲ್ಲಿ ಕಲಾವಿದ ಕುಣಿತ ತಪ್ಪಿದರೆ ಅಥವಾ ಆಭಾಸವಾಗುವ ರೀತಿಯಲ್ಲಿ ಅಭಿನಯಿಸಿದರೆ ಪ್ರೇಕ್ಷಕರು ಕಲಾವಿದರನ್ನು ಪ್ರಶ್ನಿಸುತ್ತಿದ್ದರು. ಆದರೆ ಈಗ ಹಾಗಿಲ್ಲ. ಕಲಾವಿದ ತಪ್ಪಿದಾಗ ಅಥವಾ ಕಲೆಗೆ ಆಭಾಸವಾಗುವ ರೀತಿಯಲ್ಲಿ ಪಾತ್ರ ನಿರ್ವಹಿಸಿದಾಗ ಅದನ್ನು ಪ್ರಶ್ನಿಸುವುದಿಲ್ಲ. ಇದಕ್ಕಾಗಿಯೇ ಈಗ ಪ್ರೇಕ್ಷಕರಿಗೂ ಯಕ್ಷಗಾನದ ಬಗ್ಗೆ ಸ್ವಲ್ಪಮಟ್ಟಿನ ತರಬೇತಿ ಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಜೊತೆಗೆ ಯಕ್ಷಗಾನದ ಪುನರ್‌ವ್ಯಾಖ್ಯಾನವೂ ಆಗಬೇಕು ಎಂದು ಅನೇಕ ವಿದ್ವಾಂಸರು ಹೇಳುತ್ತಿದ್ದಾರೆ. ನನ್ನ ಅಭಿಪ್ರಾಯವೂ ಯಕ್ಷಗಾನವು ಪುನರ್‌ವ್ಯಾಖ್ಯಾನಕ್ಕೆ ಒಳಪಡಬೇಕು ಎಂಬುದೇ ಆಗಿದೆ ಎಂದು ಅವರು ಹೇಳಿದರು.
ಯಕ್ಷಗಾನದ ಸಂಶೋಧನಾ ಪುಸ್ತಕ ʼದಶರೂಪಗಳ ದಶಾವತಾರʼ ಬರೆಯಬೇಕು ಎಂಬ ಪ್ರೇರಣೆ ಉಂಟಾದದ್ದು ಹೇಗೆ ?
ಇದಕ್ಕೆ ಸುಮಾರು ೪೦ ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ೧೯೮೫ರ ಆಸುಪಾಸು ಇರಬಹುದು. ಆಗ ನಾನು ಕಾರವಾರದ ಬಿಣಗಾದಲ್ಲಿ ನೌಕರಿ ಮಾಡುತ್ತಿದ್ದೆ. ಆ ವೇಳೆ ಕಾರವಾರದಲ್ಲಿ ಅಖಿಲ ಕರ್ನಾಟಕ ವಕೀಲರ ಸಮ್ಮೇಳನ ನಡೆದಿತ್ತು. ಅಲ್ಲಿ ಕರ್ಕಿ ಮೇಳದ ಆಟ (ಯಕ್ಷಗಾನ) ಇತ್ತು. ಗಧಾಯುದ್ಧ ಆಖ್ಯಾನ. ಪಿ.ವಿ.ಹಾಸ್ಯಗಾರರ ಕೌರವ, ನಾರಾಯಣ ಹಾಸ್ಯಗಾರರ ಕೃಷ್ಣ ಹಾಗೂ ಕೆ.ಪಿ.ಹಾಸ್ಯಗಾರರ ಪ್ರೇತ ನೃತ್ಯವಿತ್ತು. ನಾನೂ ಹೋಗಿದ್ದೆ. ಅದ್ಭುತ ಆಟ. ಆಟ ಮುಗಿದ ಮೇಲೆ ನಾನು ಪಿ.ವಿ.ಹಾಸ್ಯಗಾರರನ್ನು ಭೇಟಿಯಾದೆ. ಅವರ ಬಳಿ ಯಕ್ಷಗಾನದ ದಶಾವತಾರಗಳ ಆಟ ಆಗುವುದಿಲ್ಲ ಯಾಕೆ ಎಂಬ ಪ್ರಶ್ನೆ ಮುಂದಿಟ್ಟೆ. ಅದಕ್ಕೆ ಅವರು ನೀನು ಹೇಳಿದ ದಶಾವತಾರಗಳೇ ಬೇರೆ. ಯಕ್ಷಗಾನದ ದಶಾವತಾರವೇ ಬೇರೆ, ಇದು ಯಕ್ಷಗಾನಕ್ಕೆ ಸಂಬಂಧಪಟ್ಟ ೧೦ ಅಂಶಗಳು ಎಂದು ಉತ್ತರ ನೀಡಿದರು. ನಾಟ್ಯಶಾಸ್ತ್ರದ ದಶರೂಪಕಗಳನ್ನೇ ಪ್ರಾದೇಶಿಕವಾಗಿ ಯಕ್ಷಗಾನಕ್ಕೆ ಅನ್ವಯಿಸುವಾಗ ದಶಾವತಾರ ಎಂದು ಕರೆದರು ಎಂಬ ವಿಷಯವನ್ನು ಅವರು ಹೇಳಿದರು. ಕರ್ಕಿಗೆ ಬಾ, ಅದರ ಬಗ್ಗೆ ಒಂದು ಪಸ್ತಕವಿದೆ. ಅದನ್ನು ಕೊಡುತ್ತೇನೆ ಎಂದರು. ನಾವು ಅವರದ್ದೇ ಕುಟುಂಬದವರಾದರೂ ಅವರು ಹಾಗೆ ಹೇಳಿದ್ದು ಯಾಕೆಂದರೆ ಆಗ ನಾವು ಸಿದ್ದಾಪುರ ತಾಲೂಕಿನ ಹಳ್ಳಿಯಲ್ಲಿದ್ದೆವು. ಅಲ್ಲಿ ನಮ್ಮ ತಂದೆ ಶಿಕ್ಷಕರಾಗಿದ್ದರು.
ಪಿ.ವಿ ಹಾಸ್ಯಗಾರರು ಹೇಳಿದ ಮೇಲೆಯೇ ಯಕ್ಷಗಾನದ ದಶಾವತಾರಗಳು ಎಂದರೆ ಅದು ವಿಷ್ಣುವಿನ ಹತ್ತು ಅವತಾರಗಳ ಬಗ್ಗೆ ಅಲ್ಲ ಎಂಬುದು ನನಗೆ ಗೊತ್ತಾಗಿದ್ದು. ಆಗ ಇದರ ಬಗ್ಗೆ ಕುತೂಹಲ ಹಾಗೂ ಜಿಜ್ಞಾಸೆ ಇನ್ನಷ್ಟು ಹೆಚ್ಚಾಯಿತು. ನಂತರ ಯಾವ್ಯಾವುದೋ ಕಾರಣಕ್ಕೆ ತಕ್ಷಣವೇ ಕರ್ಕಿಗೆ ಹೋಗಿ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಅವರು ತೀರಿಕೊಂಡರು. ಆದರೆ ಅಂದು ಅವರು ಹೇಳಿದ ನಂತರ ಇದರ ಬಗ್ಗೆ ಉಂಟಾದ ಕುತೂಹಲವೇ ಪ್ರೇರಣೆಯಾಗಿ ಸುಮಾರು ೪೦ ವರ್ಷಗಳ ನಂತರ ದಶರೂಪಕಗಳ ದಶಾವತಾರ ಎಂಬ ಪುಸ್ತಕ ಬರೆಯಲು ಕಾರಣವಾಯಿತು.
ನಂತರದ ದಿನಗಳಲ್ಲಿ ಇದು ಸಾಕಾರಗೊಂಡಿದ್ದು ಹೇಗೆ..?
ಪಿ.ವಿ.ಹಾಸ್ಯಗಾರರು ಹೇಳಿದ್ದು ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿಯಿತು. ಹೀಗಾಗಿ ಅವರು ಹೇಳಿದ ಪುಸ್ತಕವನ್ನು ನಾನು ತರಿಸಿದೆ. ಐಬಿಎಚ್‌ಪ್ರಕಾಶನದ ಕವಿ-ಕಾವ್ಯ ಮಾಲೆ ಸರಣಿಯಲ್ಲಿ ಯಕ್ಷಗಾನದ ಬಗ್ಗೆ ಪುಸ್ತಕ ಹೊರತಂದಿದ್ದರು. ಅದಕ್ಕೆ ಪಿ.ವಿ.ಹಾಸ್ಯಗಾರರೇ ಸಂಪಾದಕರಾಗಿದ್ದರು. ಅದರಲ್ಲಿ ಯಕ್ಷಗಾನದ ದಶಾವತಾರದ ಬಗ್ಗೆ ಇತ್ತು. ಅಂದರೆ ಪ್ರವೇಶ ಕುಣಿತ, ತೆರೆ ಕುಣಿತ, ಬಾಲಗೋಪಾಲ ವೇಷಗಳು, ಕೋಡಂಗಿ ನೃತ್ಯ ಸೇರಿದಂತೆ ಯಕ್ಷಗಾನದ ಲಕ್ಷಣಗಳ ಬಗ್ಗೆ ಇತ್ತು. ಆಗ ಇದರ ಮೂಲ ಹುಡುಕಬೇಕೆಂಬುದು ತಲೆಯಲ್ಲಿ ಬಂತು. ಆಗ ಕಾರವಾರದಲ್ಲಿ ಅಷ್ಟೊಂದು ಯಕ್ಷಗಾನಗಳು ಆಗುತ್ತಿರಲಿಲ್ಲ. ಚೆಂಡಿಯಾದ ವರೆಗೆ ಯಕ್ಷಗಾನ ಮೇಳಗಳು ಬರುತ್ತಿದ್ದವು. ಹೀಗಾಗಿ ಆಲೋಚನೆ ಸ್ವಲ್ಪಮಟ್ಟಿಗೆ ಸುಪ್ತವಾಗಿತ್ತು.
ಆದರೆ ನಾನು ಶಿರಸಿಗೆ ಬಂದ ನಂತರದಲ್ಲಿ ಈ ಆಲೋಚನೆ ಮೊಳಕೆಯೊಡೆದು ಚಿಗುರಿತು. ಶಿರಸಿಯಲ್ಲಿ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೆ. ೨೦೧೧ರಲ್ಲಿ ರಾಜೀವ ಅಜ್ಜೀಬಳ ಅವರು ಶಿರಸಿಯ ಸಾಹಿತ್ಯ ಪರಿಷತ್‌ಅಧ್ಯಕ್ಷರಾದರು. ನಾನು ಅವರಿಗೆ ಸಹಾಯ-ಸಹಕಾರ ಮಾಡುತ್ತಿದ್ದೆ. ಆಗ ಅಂತಾರಾಷ್ಟ್ರೀಯ ಅರಣ್ಯ ವರ್ಷವಾಗಿತ್ತು. ಹೀಗಾಗಿ ನಾವು ಸಾಹಿತ್ಯ ಸಮ್ಮೇಳನವನ್ನು ವಿಭಿನ್ನವಾಗಿ ಮಾಡಬೇಕೆಂದು ತೀರ್ಮಾನಿಸಿ ಅರಣ್ಯ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಿದೆವು. ಹಿರಿಯ ಪತ್ರಕರ್ತರಾದ ನಾಗೇಶ ಹೆಗಡೆಯವರು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಸಮ್ಮೇಳನದಲ್ಲಿ ಸ್ವಲ್ಪ ದುಡ್ಡು ಉಳಿಯಿತು. ಆಗ ಆ ಹಣದಿಂದ ಪದ್ಯ ಬಗೆಯವ ಬಗೆ ಎಂಬಂತೆ ಅನೇಕ ಕವಿಗಳ ಕಾವ್ಯಗಳು ಏನನ್ನು ಧ್ವನಿಸುತ್ತವೆ ಎಂಬುದರ ಬಗ್ಗೆ ಪುಸ್ತಕವನ್ನು ಹೊರತರಬೇಕು ಎಂದು ನಿರ್ಧರಿಸಿ ಅದಕ್ಕೆ ಮುಂದಾದೆವು. ಅದರಲ್ಲಿ ನಾನು ತೊಡಗಿಗೊಂಡಾಗ ಕಾವ್ಯದ ಧ್ವನಿಸುವಿಕೆಯ ಬಗ್ಗೆ ತಿಳಿದುಕೊಳ್ಳಲು ನನಗೆ ಅನೂಕೂಲವಾಯಿತು. ಯಕ್ಷಗಾನದ ಪದ್ಯಗಳೂ ಕಾವ್ಯವೇ ಆಗಿದ್ದರಿಂದ ಹಾಗೂ ನಾಠ್ಯಶಾಸ್ತ್ರವೂ ಕಾವ್ಯದ ರೂಪದಲ್ಲೇ ಇದ್ದುದರಿಂದ ಅವು ಏನನ್ನು ಧ್ವನಿಸುತ್ತವೆ ಎಂದು ತಿಳಿದುಕೊಳ್ಳಲು ಅನುಕೂಲವಾಯಿತು.
ಯಕ್ಷಗಾನದ ದಶಾವತರದ ಬಗ್ಗೆ ಹುಡುಕುತ್ತ ಹೋದಾಗ ಎ.ಆರ್.ಕೃಷ್ಣ ಶಾಸ್ತ್ರೀಯವರ ಸಂಸ್ಕೃತ ನಾಟಕಗಳು ಎಂಬ ಪುಸ್ತಕದಲ್ಲಿ ದಶರೂಪಕಗಳ ಬಗ್ಗೆ ಸಿಕ್ಕಿತು. ನಂತರ ಸಂಸ್ಕೃತ ವಿದ್ವಾಂಸರಾಗಿದ್ದ ಹಾಸಣಗಿಯ ರಾ.ಭ.ಹಾಸಣಗಿಯವರು ೧೯೫೦ರಲ್ಲಿ ಬರೆದ “ಯಕ್ಷ ನಾಟಕಗಳುʼ ಎಂಬ ಪುಸ್ತಕವನ್ನು ಪರಿಚಿತರೊಬ್ಬರು ತಂದುಕೊಟ್ಟರು. ಅದರಲ್ಲಿಯೂ ದಶರೂಪಕಗಳ ಬಗ್ಗೆ ಇತ್ತು. ಅಲ್ಲದೆ, ಅತ್ತಿಮುರುಡು ವಿಶ್ವೇಶ್ವರ ಅವರು ಅನುವಾದ ಮಾಡಿದ ರಾಧಾವಲ್ಲಭ ತ್ರಿಪಾಠಿ ಬರೆದ Encyclopedia of Natyashastra ಎಂಬ ಪುಸ್ತಕದ ಕನ್ನಡಾನುವಾದದ ಪ್ರೂಫ್‌ನೋಡುವ ಅವಕಾಶ ಸಿಕ್ಕಿತು. ರಾಧಾವಲ್ಲಭ ತ್ರಿಪಾಠಿ ತಮ್ಮ ಪುಸ್ತಕದಲ್ಲಿ ಯಕ್ಷಗಾನವನ್ನೂ ಉಲ್ಲೇಖಿಸಿದ್ದಾರೆ. ಅಲ್ಲಿ ಅವರು ನಾಟ್ಯಗಳ ಪ್ರಕಾರಗಳು ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಅದನ್ನು ಓದುವಾಗ ಅದರಲ್ಲಿದ್ದ ವಿಷಯಗಳಿಂದ ಈ ಬಗ್ಗೆ ಮತ್ತಷ್ಟು ಕಲ್ಪನೆ ಬಂತು. ಹೀಗೆ ಅನೇಕ ಪುಸ್ತಕಗಳ ಅಧ್ಯಯನದ ನಂತರ ಈ ಪುಸ್ತಕ ಸಾಕಾರಗೊಂಡಿತು.
ಯಕ್ಷಗಾನದ ದಶಾವತಾರ ಯಾವುವು..?
ನಾಟಕ (ನಾಟಕ ಎಂದರೆ ರೂಪಕ) ಎಂಬುದು ಯಕ್ಷಗಾನದ ಮೊದಲ ಅವತಾರ. ಪ್ರಕರಣ ಎಂಬುದು ದ್ವಿತೀಯಾವತಾರ, ಅಂಕ ಎಂಬುದು ತೃತೀಯಾವತಾರ, ಭಾಣ ಎಂಬುದು ಚತುರ್ಥಾವತಾರ, ಪ್ರಹಸನ ಎಂಬುದು ಪಂಚಮಾವತಾರ, ವೀಥಿ ಎಂಬುದು ಷಷ್ಠಾವತಾರ, ವ್ಯಾಯೋಗ ಎಂಬುದು ಸಪ್ತಮಾವತಾರ, ಡಿಮ ಎಂಬುದು ಅಷ್ಟಮಾವತಾರ, ಸಮಕಾರ ಎಂಬುದು ನವಮಾವತಾರ ಹಾಗೂ ಈಹಾಮೃಗ ಎಂಬುದು ದಶಮಾವತಾರವಾಗಿದೆ. ಇವೆಲ್ಲವೂ ನಾಟ್ಯಶಾಸ್ತ್ರದಲ್ಲಿ ಬರುವ ಹತ್ತು ರೂಪಕಗಳಾಗಿವೆ.
ಸಂಶೋಧನಾ ಗ್ರಂಥ ಬರೆಯುವಾಗ ನಾಟ್ಯಶಾಸ್ತ್ರದ ಸಂಸ್ಕೃತ ಶಬ್ದಗಳನ್ನು ಪ್ರಾದೇಶಿಕ ಭಾಷೆಯಲ್ಲಿ ಅನ್ವಯಿಸಲು ಸಾಧ್ಯವಾಗಿದ್ದು ಹೇಗೆ..?
ಇದಕ್ಕಾಗಿ ನಾನು ೧೩೬ಕ್ಕೂ ಹೆಚ್ಚು ಪುಸ್ತಕಗಳನ್ನು ರೆಫರೆನ್ಸ್(Reference) ಮಾಡಬೇಕಾಯ್ತು. ಅದಕ್ಕಿಂತ ಹೆಚ್ಚು ಪುಸ್ತಕಗಳನ್ನು ಓದಬೇಕಾಯಿತು. ಮುಖ್ಯವಾಗಿ ನನಗೆ ಎ.ಎಸ್.ಆಪ್ಟೆ ಬರೆದ ಸಂಸ್ಕೃತ-ಇಂಗ್ಲಿಷ್‌ಪದಕೋಶದಿಂದ ಸಹಾಯವಾಯಿತು. ಈ ಪುಸ್ತಕ ನಾಟ್ಯಶಾಸ್ತ್ರದ ಸಂಸ್ಕೃತ ಶಬ್ದಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಅನ್ವಯಿಸಿದ ಬಗ್ಗೆ ಸ್ವಲ್ಪಮಟ್ಟಿನ ನಿಖರತೆ ಸಿಗುವಂತೆ ಮಾಡಿತು. ನಂತರ ರಾಮಚಂದ್ರ-ಗುಣಚಂದ್ರರು ನಾಟ್ಯಶಾಸ್ತ್ರದ ಬಗ್ಗೆ ಬರೆದ ಪುಸ್ತಕದಲ್ಲಿ ವಿವರಣೆಗಳು-ವ್ಯಾಖ್ಯಾನಗಳು ದೊರೆತವು. ನೋಡಿ ಈ ತರಹದ ಪುಸ್ತಕ ಬರೆಯಬೇಕಿದ್ದರೆ ಮೂಲ ಶಬ್ದಗಳಿಗೆ ಪ್ರಾದೇಶಿಕವಾಗಿ ಪರ್ಯಾಯ ಶಬ್ದಗಳು ಯಾವುವು..? ಅದಕ್ಕೆ ಪರ್ಯಾಯ ವ್ಯಾಖ್ಯಾನಗಳು ಏನು ಎಂಬುದನ್ನು ಹುಡುಕಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ನಾನು ೧೩೬ಕ್ಕೂ ಹೆಚ್ಚು ಪುಸ್ತಕಗಳನ್ನು ರೆಫರೆನ್ಸ್‌ಮಾಡಬೇಕಾಯ್ತು.
ಯಕ್ಷಗಾನದ ಸಂಶೋಧನಾ ಪುಸ್ತಕ ʼದಶರೂಪಕಗಳ ದಶಾವತಾರʼ ಬರೆಯುವಾಗ ಎದುರಾದ ಸವಾಲುಗಳು ಯಾವುವು..?
ಭರತನ ನಾಟ್ಯಶಾಸ್ತ್ರದ ಕಾಲಾವಧಿ ಸುಮಾರು ಎರಡು ಸಾವಿರ ವರ್ಷಗಳಷ್ಟು ಹಿಂದೆ. ಅದನ್ನು ಈಗಿನ ಕಾಲಕ್ಕೆ ಹೇಗೆ ಅನ್ವಯಿಸುವುದು ಎಂಬುದೇ ಬರೆಯುವಾಗ ಎದುರಾದ ಸವಾಲು. ನಾಟ್ಯಶಾಸ್ತ್ರದಲ್ಲಿನ ದಶರೂಪಕಗಳೇ ಯಕ್ಷಗಾನದಲ್ಲಿ ದಶಾವತಾರವಾದವು. ಸಂಸ್ಕೃತ ಭಾಷೆಯ ನಾಟ್ಯಶಾಸ್ತ್ರವನ್ನು ಬೇರೆ ಬೇರೆ ಭಾಷೆಗಳಿಗೆ ಅನ್ವಯಿಸುವಾಗ ಅದನ್ನು ಜನರಿಗೆ ಅರ್ಥವಾಗುವಾಗುವ ರೀತಿಯಲ್ಲಿ ಅಥವಾ ಅವರಿಗೆ ಹತ್ತಿರವಾಗುವ ರೀತಿಯಲ್ಲಿ ಅನ್ವಯಿಸಬೇಕಲ್ಲ..? ಹೀಗಾಗಿ ನಾಟ್ಯಶಾಸ್ತ್ರದ ದಶರೂಪಕಗಳನ್ನು ಯಕ್ಷಗಾನದಲ್ಲಿ ಅನ್ವಯಿಸುವಾಗ ಜನರಿಗೆ ಹೆಚ್ಚು ಹತ್ತಿರವಿರುವ ಪದ ಬಳಸಿ ದಶಾವತಾರ ಎಂದು ಕರೆಯಲಾಯಿತು. ಇದು ಯಾಕೆ ಬಂತು ಎಂಬುದನ್ನು ತಿಳಿಯಲು ಅಧ್ಯಯನ ಮಾಡಬೇಕಾಯಿತು.
ಸುಮಾರು ೧೦-೧೨ನೇ ಶತಮಾನದ ಕಾಲಘಟ್ಟದಲ್ಲಿ ಸಂಸ್ಕೃತ ದೃಶ್ಯ ಕಾವ್ಯಗಳಂತೆ ಬೇರೆಬೇರೆ ಭಾಷೆಗಳಲ್ಲಿನ ದೃಶ್ಯ ಕಾವ್ಯಗಳನ್ನು ನಾಟ್ಯಕ್ಕೆ ಅಳವಡಿಸುವಾಗ ಅದಕ್ಕೆ ನಾಟ್ಯಶಾಸ್ತ್ರವನ್ನು ಅನ್ವಯಿಸುವುದು ನಡೆಯಿತು. ಆಗ ಪದ ಬಳಕೆ ಸೇರಿದಂತೆ ನಾಟ್ಯಶಾಸ್ತ್ರವನ್ನು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಅನ್ವಯಿಸಬೇಕಾಯಿತು. ನಾಟ್ಯಶಾಸ್ತ್ರವನ್ನು ಯಕ್ಷಗಾನದಲ್ಲಿ ಅಳವಡಿಸುವಾಗಲೂ ಇದೇ ಸವಾಲು ಎದುರಾಯಿತು. ಉದಾಹರಣೆಗೆ ನಾಟ್ಯಶಾಸ್ತ್ರದ ಪೂರ್ವರಂಗ ಯಕ್ಷಗಾನದಲ್ಲಿ ಸಭಾಲಕ್ಷಣವಾಯಿತು. ಯಕ್ಷಗಾನದ ಚೌಕಿಮನೆಯೂ ನಾಟ್ಯಶಾಸ್ತ್ರದ ಪೂರ್ವರಂಗದಲ್ಲಿಯೇ ಬರುತ್ತದೆ. ನಾಟ್ಯಶಾಸ್ತ್ರದಲ್ಲಿ ಬರುವ ಧ್ರುವಾ ಗೀತೆಗಳು ಯಕ್ಷಗಾನದ ಚೌಕಿಮನೆ ಪದ್ಯಗಳು ಹಾಗೂ ಪೀಠಿಕೆ ಪದ್ಯಗಳಾದವು. ಹೀಗೆ ನಾಟ್ಯಶಾಸ್ತ್ರವನ್ನು ಯಕ್ಷಗಾನದಲ್ಲಿ ಅನ್ವಯಿಸುವಾಗ ಅದನ್ನು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಅನ್ವಯಿಸಲಾಯಿತು. ಅಲ್ಲದೆ, ನಾಟ್ಯಕ್ಕೆ ಬೇಕಾದ ಸಂಸ್ಕೃತ ಕಾವ್ಯಗಳ ಛಂದಸ್ಸುಗಳನ್ನೂ ಸಹ ಕನ್ನಡದ ಜಾಯಮಾನಕ್ಕೆ ತಕ್ಕಂತೆ ಅಳವಡಿಸಬೇಕಾಗುತ್ತದೆ. ಯಕ್ಷಗಾನದಲ್ಲಿಯೂ ಇದು ನಡೆಯಿತು
ಅಲ್ಲದೆ, ವೇದಗಳ ಕಾಲದಿಂದ ಈಗಿನ ಕಾಲದ ವರೆಗಿನ ಕಾವ್ಯ ಧಾರೆ ಹೇಗಿತ್ತು ಮತ್ತು ಹೇಗೆ ಸಾಗಿ ಬಂತು ಎಂಬುದರ ಬಗ್ಗೆಯೂ ಅಧ್ಯಯನ ಮಾಡಬೇಕಾಯಿತು. ಶ್ರವ್ಯ ಕಾವ್ಯಗಳು ದೃಶ್ಯ ಕಾವ್ಯಗಳಾಗಿ ಪರಿವರ್ತನೆ ಆಗಿದ್ದು ಹೇಗೆ ಎಂಬುದರ ಬಗ್ಗೆಯೂ ನೋಡಬೇಕಾಯ್ತು. ಉದಾಹರಣೆಗೆ ಕುಮಾರವ್ಯಾಸನ ಭಾರತವನ್ನು ಯಕ್ಷಗಾನಕ್ಕೆ ಅಳವಡಿಸುವಾಗ ಅದನ್ನು ಯಕ್ಷಗಾನೀಯವಾಗಿ ಹೇಗೆ ಅನ್ವಯಿಸಲಾಯಿತು ಎಂಬುದನ್ನು ನೋಡುವುದು ಮುಖ್ಯ. ಪಂಪನ ವಿಕ್ರಮಾರ್ಜುನ ವಿಜಯವನ್ನು ಕ್ರಿ.ಶ.೯೪೦ರಲ್ಲಿ ಬರೆದದ್ದು. ಆದರೆ ಕುಮಾರವ್ಯಾಸನ ಭಾರತವನ್ನು ಬರೆದದ್ದು ಕ್ರಿ.ಶ.೧೪೧೯ರ ಸುಮಾರಿಗೆ. ವಿಕ್ರಮಾರ್ಜುನ ವಿಜಯ ಕಾವ್ಯವನ್ನು ಯಕ್ಷಗಾನಕ್ಕೆ ಅನ್ವಯಿಸಿದ್ದು ಕಂಡುಬರುವುದಿಲ್ಲ. ಕುಮಾರವ್ಯಾಸನ ಭಾರತವನ್ನು ಯಕ್ಷಗಾನೀಯವಾಗಿ ಅನ್ವಯಿಸಿದ್ದು ಹೆಚ್ಚಾಗಿ ಕಂಡುಬರುತ್ತದೆ. ಅಂದರೆ ಯಕ್ಷಗಾನದ ಪ್ರಯೋಗಗಳು ಆರಂಭವಾಗುವ ಕಾಲಘಟ್ಟದಲ್ಲಿ ಕುಮಾರವ್ಯಾಸ ಭಾರತವು ಬಂತು. ಇದನ್ನೆಲ್ಲ ನೋಡಬೇಕಾಗುತ್ತದೆ.
ಅಲ್ಲದೆ, ಕೆಲವು ಶತಮಾನಗಳ ಹಿಂದೆ ಬೇರೆ ಬೇರೆ ನಾಟ್ಯ ಪ್ರಕಾರಗಳು ಮತ್ತು ಕಲಾ ಪ್ರಕಾರಗಳು ಹಾಗೂ ಯಕ್ಷಗಾನದ ನಡುವೆ ಕೊಡು-ಕೊಳ್ಳುವಿಕೆಗಳು ನಡೆದವು. ಇದರಿಂದಾಗಿಯೂ ಯಕ್ಷಗಾನ ನಿರ್ದಿಷ್ಟ ಸ್ವರೂಪವನ್ನು ಪಡೆದುಕೊಂಡಿತು. ಜೊತೆಗೆ ಕಲಾವಿದನ ಚಿಂತನೆಯೂ ಈ ಚೌಕಟ್ಟಿನೊಳಗೆ ಸೇರಿತು. ಹೀಗಾಗಿ ನಾವು ಇಂತಹ ಪುಸ್ತಕಗಳನ್ನು ಬರೆಯುವಾಗ ಈ ಕೊಡು-ಕೊಳ್ಳುವಿಕೆಗಳು ಹೇಗಾದವು. ಮತ್ತು ಯಕ್ಷಗಾನ ಯಾವುದರಿಂದ ಯಾವುದನ್ನು ಪಡೆಯಿತು. ಅದನ್ನು ಯಕ್ಷಗಾನಕ್ಕೆ ತಕ್ಕಂತೆ ಹೇಗೆ ಮಾರ್ಪಾಡು ಮಾಡಿಕೊಳ್ಳಲಾಯಿತು ಎಂಬುದನ್ನೂ ನೋಡಬೇಕಾಗುತ್ತದೆ.
.
ಯಕ್ಷ ಎಂದರೇನು…? ಇದರ ವಿಶೇಷತೆ ಏನು..?
ಯಕ್ಷ ಎಂದರೆ ಪೂಜೆ. ಯಕ್ಷಗಾನ ಆರಾಧನೆ ಕಲೆ. ಇದು ಪೂಜಾ ಪ್ರಬಂಧದಲ್ಲಿ ಬರುತ್ತದೆ. ಗಣಪತಿಯನ್ನು ಮಹಾಯಕ್ಷ ಎಂದು ಕರೆಯುತ್ತಾರೆ. ಪ್ರತಿಶಿರಸ್ಸು ಎಂದರೆ ಮುಖವಾಡ. ಯಕ್ಷಗಾನದಲ್ಲಿ ಯಕ್ಷ-ನಾಗ-ಗಜ ಈ ಮೂರು ಒಂದರಲ್ಲಿ ಒಂದು ಪ್ರತಿಬಿಂಬಿತವಾಗಿದೆ. ಯಕ್ಷಗಾನದ ಆರಂಭದ ಮೊದಲು ಗಣೇಶ ಪದ್ಯ (ಪೂಜೆ) ನಡೆಯಬೇಕಾಗುತ್ತದೆ. ಯಕ್ಷಗಾನದ ಕಿರೀಟವು ಗಣೇಶ ವಿದ್ಯೆಯಲ್ಲಿ ಬರುತ್ತದೆ. ಕಿರೀಟದಲ್ಲಿ ಕಂಡುಬರುವ ಚಿಹ್ನೆ ಪುರಾತನ ಓಂಕಾರದ ಚಿಹ್ನೆ. ಪಗಡೆಯಲ್ಲಿ ನವಿಲುಗರಿಯ ಚಿಹ್ನೆ ಕಂಡುಬರುತ್ತದೆ. ಅಂದರೆ ಸುಬ್ರಹ್ಮಣ್ಯ. ಅದರ ಮೇಲಿರುವ ಪಟ್ಟೆಗಳು ಅದು ನಾಗರಹಾವಿನ ಕೆಳ ಮೈಯಲ್ಲಿರುವ ಗೆರೆಗಳನ್ನು ಪ್ರತಿನಿಧಿಸುತ್ತದೆ. ಮೊದಲಿನ ಪುರುಷ ವೇಷದ ಎದೆಗವಚಗಳ ಚಿಹ್ನೆ ನಾಗರಹಾವಿನ ಹೆಡೆಯ ಕೆಳಗಡೆಯ ಗುರುತನ್ನು ಪ್ರತಿನಿಧಿಸುತ್ತದೆ. ಭುಜಕೀರ್ತಿ ಇತ್ಯಾದಿ ಧಿರಿಸುಗಳ ಸಹ ಈ ಮೂರರಲ್ಲಿ ಒಂದನ್ನು ಪ್ರತಿಬಿಂಬಿಸುತ್ತದೆ.
ಹೈಗುಂದಲ್ಲಿರುವ ಯಕ್ಷದೇವರು ಗಣಪತಿ. ಅದು ಇಡಗುಂಜಿಯ ಮಹಾಗಣಪತಿಯ ಪ್ರತಿರೂಪವೇ ಆಗಿದೆ ಎಂದು ಮೂರ್ತಿಶಿಲ್ಪ ತಜ್ಞ ಅ.ಸುಂದರ ಎನ್ನುವವರು ಹೇಳಿದ್ದಾರೆ. ಹೀಗಾಗಿ ಯಕ್ಷಗಾನದಲ್ಲಿ ಚೌಕಿಪೂಜೆಯಲ್ಲಿ ಗಣಪತಿ ಪೂಜೆ ನಡೆಯುತ್ತದೆ. ರಂಗಸ್ಥಳವೂ ಒಂದು ನಿರ್ಮಾಣವಾಗಿದ್ದರಿಂದ ಕಟ್ಟಡದ ವಾಸ್ತುಪೂಜೆಯಂತೆಯೇ ಇಲ್ಲಿ ಗಣಪತಿ ಪೂಜೆ ನಡೆಯುತ್ತದೆ. ನಂತರ ಕಥಾನಕವು ಆರಂಭವಾಗುತ್ತದೆ.
ಉಳಿದ ನಾಟ್ಯ ಪ್ರಕಾರಗಳಿಗೆ ಹೋಲಿಸಿದರೆ ಯಕ್ಷಗಾನದ ವಿಶೇಷತೆಯೇನು..?
ಯಕ್ಷಗಾನವನ್ನು ವಾಗಂಗಾಭಿನಯ ಎಂದೂ ಕರೆಯುತ್ತಾರೆ. ಅಂದರೆ ಇಲ್ಲಿ ಗಾಯನವಿದೆ, ನೃತ್ಯವಿದೆ, ಅಭಿನಯವಿದೆ ಹಾಗೂ ಮಾತಿದೆ. ಭಾರತದ ಉಳಿದ ನಾಟ್ಯಪ್ರಕಾರಗಳಲ್ಲಿ ಮಾತಿಲ್ಲ. ಗಾಯನ, ನೃತ್ಯಾಭಿನಯ ಮಾತ್ರ ಇದೆ. ಇದೇ ಯಕ್ಷಗಾನದ ವಿಶೇಷತೆ. ಆದರೆ, ಯಕ್ಷಗಾನದಲ್ಲಿ ಮಾತನಾಡಲು ಒಂದು ಪದ್ಧತಿ ಇದೆ, ಕ್ರಮವಿದೆ. ಯಕ್ಷಗಾನದ ಆಖ್ಯಾನಗಳು ಪೌರಾಣಿಕಕ್ಕೆ ಸಂಬಂಧಿಸಿದ್ದರಿಂದ ಇದರ ಮಾತು ಕಾವ್ಯವನ್ನು ಧ್ವನಿಸಬೇಕು. ನಾಟ್ಯಶಾಸ್ತ್ರದಲ್ಲಿ ಮಾತನಾಡುವುದಕ್ಕೂ ಸ್ಪಷ್ಟವಾಗಿ ಹೇಳಲಾಗಿದೆ. ಉದಾಹರಣೆಗೆ ರಾಜನನ್ನು ಸಂಬೋಧಿಸುವಾಗ ಹೇಗೆ ಸಂಬೋಧಿಸಬೇಕು. ಸೇವಕನನ್ನು, ಮಂತ್ರಿಯನ್ನು, ದೂತನನ್ನು, ಸ್ತ್ರೀ ಪಾತ್ರಗಳನ್ನು ಸಂಬೋಧಿಸುವಾಗ ಹೇಗೆ ಸಂಬೋಧಿಸಬೇಕು ಎಂಬುದಕ್ಕೆ ಒಂದು ಕ್ರಮವಿದೆ. ಇದು ಯಕ್ಷಗಾನದಲ್ಲಿಯೂ ಇದೆ. ಅದನ್ನು ಕಲಾವಿದ ಅನುಸರಿಸಬೇಕಾಗುತ್ತದೆ. ಜೊತೆಗೆ ನೃತ್ಯಾಭಿನಯ ಹಾಗೂ ಮಾತುಗಾರಿಕೆಯಲ್ಲಿ ಸಮನ್ವಯತೆ ಇರಬೇಕು. ಅದಿದ್ದರೆ ಯಕ್ಷಗಾನ ಪರಿಣಾಮಕಾರಿಯಾಗುತ್ತದೆ. ಅದಕ್ಕೆ ಯಕ್ಷಗಾನವನ್ನು ವಾಗಂಗಾಭಿನಯ ಎಂದು ಕರೆದಿದ್ದಾರೆ.
ಯಕ್ಷಗಾನ ಶಾಸ್ತ್ರೀಯತೆ ಬಗ್ಗೆ ನಿಮ್ಮ ಅಭಿಪ್ರಾಯ..?
ಭರತನ ನಾಟ್ಯಶಾಸ್ತ್ರದಲ್ಲಿರುವುದೆಲ್ಲವೂ ಯಕ್ಷಗಾದನಲ್ಲಿದೆ. ಭರತನ ನಾಟ್ಯಶಾಸ್ತ್ರದ ೨೦ನೇ ಅಧ್ಯಾಯದಲ್ಲಿ ದಶರೂಪಕಗಳ ವಿಧಾನಗಳ ಬಗ್ಗೆ ಹೇಳಲಾಗಿದೆ. ಅವೆಲ್ಲವೂ ಯಕ್ಷಗಾನದಲ್ಲಿ ದಶಾವತಾರದ ರೂಪದಲ್ಲಿದೆ ಅಷ್ಟೆ. ಯಕ್ಷಗಾನದ ಚೌಕಿಮನೆಯು ನಾಟ್ಯಶಾಸ್ತ್ರದ ನಾಟ್ಯಗೃಹದ ಕಲ್ಪನೆ. ಯಕ್ಷಗಾನದ ರಂಗಸ್ಥಳವು ನಾಟ್ಯಶಾಸ್ತ್ರದಲ್ಲಿ ಹೇಳಿದ ನಾಟ್ಯಮಂಟಪವನ್ನೇ ಆಧರಿಸಿ ರಚನೆಯಾಗಿದೆ. ಚೌಕಿಮನೆಯಲ್ಲಿ ದೇವರ ಸ್ಥಾಪನೆ ನಾಟ್ಯಶಾಸ್ತ್ರದಲ್ಲಿ ಉಲ್ಲೇಖವಾಗಿರುವ ರಂಗದೈವತ ಪೂಜೆ. ಚೌಕಿಮನೆಯಲ್ಲಿ ಮುಖವರ್ಣಿಕೆಯೊಂದಿಗೆ ಪಾತ್ರಧಾರಿ ಸಿದ್ಧವಾಗುವುದು ನಾಟ್ಯಶಾಸ್ತ್ರದ ಆಹಾರ್ಯಾಭಿನಯ. ಯಕ್ಷಗಾನದ ಸಭಾಲಕ್ಷಣ ನಾಟ್ಯಶಾಸ್ತ್ರದಲ್ಲಿ ಬರುವ ಪೂರ್ವರಂಗವೇ ಆಗಿದೆ.
ಚೌಕಿಯಿಂದ ತೆರೆಕುಣಿತದ ವರೆಗಿನ ಪ್ರಕ್ರಿಯೆಯನ್ನು ನಾಟ್ಯಶಾಸ್ತ್ರದಲ್ಲಿ ಪ್ರಾವೇಶಿಕಿ ಧ್ರುವಾ ಎಂದು ಕರೆಯುತ್ತಾರೆ. ಕಥಾವಸ್ತವನ್ನು ನಾಟ್ಯಶಾಸ್ತ್ರದಲ್ಲಿ ಇತಿ ವೃತ್ತ ಎಂದು ಕರೆಯಲಾಗಿದೆ. ಇಲ್ಲಿ ಪ್ರಸಿದ್ಧ, ಕಲ್ಪಿತ ಹಗೂ ಮಿಶ್ರ ಎಂಬ ಮೂರು ವಿಧಗಳಿವೆ, ಇವೆಲ್ಲವೂ ಯಕ್ಷಗಾನದಲ್ಲಿದೆ. ಯಕ್ಷಗಾನದಲ್ಲಿ ಕಥಾನಕದ ಆರಂಭದಲ್ಲಿ ನಡೆಯುವ ಒಡ್ಡೋಲಗ ಹಾಗೂ ಪೀಠಿಕೆಯ ಮಾತನ್ನು ಭಾರತಿ ವೃತ್ತಿ ಎಂದು ನಾಟ್ಯಶಾಸ್ತ್ರದಲ್ಲಿ ಕರೆಯಲಾಗಿದೆ. ಮಾತು ಮುಗಿಯುತ್ತಿದ್ದಂತೆ ಪದ್ಯ ಎತ್ತುಗಡಿ ಮಾಡುವುದಕ್ಕೆ ಪ್ರರೋಚನ ಎಂದು ನಾಟ್ಯಶಾಸ್ತ್ರದಲ್ಲಿ ಉಲ್ಲೇಖವಿದೆ. ನಾಟ್ಯಶಾಸ್ತ್ರದ ವಾಗಂಗಾಭಿನಯ ಯಕ್ಷಗಾದಲ್ಲಿದೆ. ಯಕ್ಷಗಾನದಲ್ಲಿ ವೃತ್ತಾಕಾರವಾಗಿ ಕುಣಿಯುವುದು ನಾಟ್ಯಶಾಸ್ತ್ರದಲ್ಲಿ ಮಂಡಲಾಚಾರಿಗೆ ಸಮನಾಗಿದೆ. ದೇಹ-ಮಾತು-ಮನಸ್ಸುಗಳ ವಿಚಿತ್ರ ಚೇಷ್ಟೆಯನ್ನು ನಾಟ್ಯಶಾಸ್ತ್ರದಲ್ಲಿ ವೃತ್ತಿ ಎಂದು ಉಲ್ಲೇಖಿಸಲಾಗಿದೆ. ಇವೆಲ್ಲವೂ ಯಕ್ಷಗಾನದಲ್ಲಿದೆ.ತೆರೆ ಕುಣಿಯವಾಗ ಹಾಗೂ ತೆರೆ ತೆಗೆಯುವಾಗ ಯಕ್ಷಗಾನದಲ್ಲಿ ಹಾಡುವ ಪದ್ಧತಿಗೆ ನಾಟ್ಯಶಾಸ್ತ್ರದಲ್ಲಿ ಉತ್ಥಾಪನಿ ಧ್ರುವಾ ಎಂದು ಉಲ್ಲೇಖಿಸಲಾಗಿದೆ.
ಇನ್ನು ರಂಗಸ್ಥಳದ ವಿಚಾರಕ್ಕೆ ಬಂದರೆ ನಾಟ್ಯಶಾಸ್ತ್ರದಲ್ಲಿ ವಿಕೃಷ್ಣ, ಚತುರಶ್ರ ಹಾಗೂ ತ್ರ್ಯಶ್ಯ ಎಂಬ ಮೂರು ಬಗೆಯ ರಂಗಸ್ಥಳದ ಬಗ್ಗೆ ಹೇಳಲಾಗಿದೆ. ಇದಕ್ಕೆ ಅಳತೆಗಳನ್ನೂ ಹೇಳಲಾಗಿದೆ. ವಿಕೃಷ್ಣ ಅಂದರೆ ಅದು ಉದ್ದದ ರಂಗವಾಗಿದೆ. ಇದು ದೇವತೆಗಳಿಗೆ. ಚತುರಶ್ರ ಇದು ಜನಸಾಮಾನ್ಯರ ರಂಗಸ್ಥಳವಾಗಿದೆ. ಇದನ್ನು ಯಕ್ಷಗಾನಕ್ಕೆ ಅನ್ವಯಿಸಲಾಗಿದೆ. ಇನ್ನು ತ್ರ್ಯಶ್ಯ ಇದು ತ್ರಿಕೋನಾಕಾರದಲ್ಲಿರುವ ರಂಗಸ್ಥಳ. ಇದು ಏಕಪಾತ್ರಾಭಿನಯಕ್ಕೆ ಹೇಳಲಾಗಿದೆ. ಇದಲ್ಲದೆ ಇನ್ನೂ ಅನೇಕ ಸಂಗತಿಗಳನ್ನು ಭರತನ ನಾಟ್ಯಶಾಸ್ತ್ರದಿಂದ ಯಕ್ಷಗಾನಕ್ಕೆ ಅನ್ವಯಿಸಲಾಗಿದೆ. ಅದನ್ನು ನಾನು ನನ್ನ ಪುಸ್ತಕದಲ್ಲಿ ಹೇಳಿದ್ದೇನೆ. ಹೀಗೆ ಹತ್ತು ಹಲವು ಅಂಶಗಳು ಯಕ್ಷಗಾನ ಶಾಸ್ತ್ರೀಯವಾಗಿದೆ ಎಂಬುದಕ್ಕೆ ಪುಷ್ಟಿಗಳನ್ನು ನೀಡುತ್ತವೆ.
ಉಳಿದಂತೆ ಯಕ್ಷಗಾನದ ವಿಶೇಷತೆ ಏನು..?
ಯಕ್ಷಗಾನದಲ್ಲಿ ಪ್ರಕೃತಿ ತತ್ವ ಹಾಗೂ ಸೃಷ್ಟಿ-ಸ್ಥಿತಿ-ಲಯ ತತ್ವಗಳನ್ನು ಕಾಣಬಹುದು. ಯಕ್ಷಗಾನದಲ್ಲಿ ವೇಷದ ಆಗಮನ ಹಾಗೂ ನಿರ್ಗಮನವು ಭೂಮಿಯ ತಿರುಗುವಿಕೆಯನ್ನು ಪ್ರತಿಬಿಂಬಿಸುತ್ತದೆ. ಯಕ್ಷಗಾನದಲ್ಲಿ ಭಾಗವತನ ಎಡಗಡೆಯಿಂದ ಪಾತ್ರದ ಆಗಮನವಾಗುತ್ತದೆ. ನಿರ್ಗಮನವು ಭಾಗವತನ ಬಲಗಡೆಯಿಂದ ಆಗುತ್ತದೆ. ಭೂಮಿಯೂ ಇದೇರೀತಿಯಲ್ಲಿ ತಿರುಗುತ್ತದೆ.
ಇನ್ನು ಯಕ್ಷಗಾನದಲ್ಲಿ ಸೃಷ್ಟಿ-ಸ್ಥಿತಿ-ಲಯ ತತ್ವವನ್ನು ಕಾಣಬಹುದು. ಚೌಕಿಮನೆಯಲ್ಲಿ ಪಾತ್ರ ತಯಾರಾಗಿ ತೆರೆ ಕುಣಿತದ ವರೆಗಿನ ಪ್ರಕ್ರಿಯೆಯನ್ನು ನಾವು ಸೃಷ್ಟಿ ತತ್ವ ಎನ್ನಬಹುದು. ಭಾಗವತ ಯಕ್ಷಗಾನವನ್ನು ಮುನ್ನಡೆಸುತ್ತಾನೆ. ಅದು ಸ್ಥಿತಿಯ ತತ್ವ. ಹಾಗೂ ನಂತರ ವೇಷಗಳು ನಿರ್ಗಮನವಾಗಿ ವೇಷಧಾರಿ ತನ್ನ ಮೂಲ ಸ್ವರೂಪಕ್ಕೆ ಹೋಗುವುದನ್ನು ಲಯ ತತ್ವ ಎಂದು ವ್ಯಾಖ್ಯಾನಿಸಬಹುದು.
ನಾಟ್ಯಶಾಸ್ತ್ರದ ೧೧೬ನೇ ಶ್ಲೋಕದಲ್ಲಿ
ನ ತಜ್ಞಾನಂ ನ ತಚ್ಛಿಲ್ಪಂ ನ ಸಾ ವಿದ್ಯಾ ನ ಸಾ ಕಲಾ |
ನಾಸೌ ಯೋಗೋ ನ ತತ್‌ಕರ್ಮ ನಾಟ್ಯೆಸ್ಮಿನ್‌ಯತ್ರ ದೃಶ್ಯತೆ |
ಎಂದು ಹೇಳಿದ್ದಾರೆ. ಅಂದರೆ ನಾಟ್ಯಶಾಸ್ತ್ರದಲ್ಲಿ ಹೇಳಿರುವಂತೆ ಜ್ಞಾನ, ವಿದ್ಯೆ, ಕಲೆ, ಯೋಗ, ಕರ್ಮ ಇವೆಲ್ಲವೂ ಯಕ್ಷಗಾನದಲ್ಲಿದೆ. ಹೀಗಾಗಿ ಇದೊಂದು ಪರಿಪೂರ್ಣ ಕಲೆ.
ನಿಮ್ಮ ಕಾಮೆಂಟ್ ಬರೆಯಿರಿ