ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಜನವರಿ 29ರಂದು ಬೆಳಗ್ಗೆ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಬೆಳಗಾವಿ ನಗರದ ವಡಗಾವಿ ನಿವಾಸಿಗಳಾದ ತಾಯಿ-ಮಗಳಾದ ಜ್ಯೋತಿ ಹತ್ತರವಾಠ (50) ಹಾಗೂ ಮೇಘಾ ಹತ್ತರವಾಠ, ಶೆಟ್ಟಿ ಗಲ್ಲಿಯ ಅರುಣ ಕೋರ್ಪಡೆ ಹಾಗೂ ಶಿವಾಜಿನಗರ ನಿವಾಸಿ ಮಹಾದೇವಿ ಬಾವನೂರ ಮೃತರು ಎಂದು ತಿಳಿದುಬಂದಿದೆ. ಇವರು ಬೆಳಗಾವಿಯಿಂದ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಟೂರಿಸ್ಟ್ ಬಸ್ಸಿನಲ್ಲಿ ಪ್ರಯಾಗ್ ರಾಜ್ ಗೆ ತೆರಳಿದ್ದರು.
ಜ. 29ರಂದು ಮೌನಿ ಅಮಾವಾಸ್ಯೆಯಾಗಿದ್ದರಿಂದ ಈ ಪುಣ್ಯದಿನದಂದು ಪ್ರಯಾಗರಾಜ್ ನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಕೋಟಿಗಟ್ಟಲೆ ಜನರು ಆಗಮಿಸಿದ್ದರು. ಸಂದರ್ಭದಲ್ಲಿ ನೂಕು ನುಗ್ಗಲು ಸಂಭವಿಸಿತ್ತು. ಮುಂಜಾನೆ ನದಿಯಲ್ಲಿ ಸ್ನಾನ ಮಾಡುವಾಗ ಕಾಲ್ತುಳಿತ ಸಂಭವಿಸಿ ಹಲವರು ಗಾಯಗೊಂಡಿದ್ದರು. ಅವರಲ್ಲಿ ಬೆಳಗಾವಿಯ ಈ ನಾಲ್ವರು ಸಹ ಸೇರಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಬೆಳಗಾವಿಯ ನಾಲ್ವರು ಮೃತಪಟ್ಟಿದ್ದಾರೆ. ಈ ಬಗ್ಗೆ ಕುಟುಂಬಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ