ವೀಡಿಯೊಗಳು…| ಮದುವೆ ಮಂಟಪಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದ ಚಿರತೆ ; ಅರಣ್ಯ ಸಿಬ್ಬಂದಿ ಮೇಲೆ ದಾಳಿ-ಗಾಯ

ಮದುವೆ ಮನೆಗೆ ಚಿರತೆಯೊಂದು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ಬುಧವಾರ ಲಕ್ನೋದ ಪಾರಾ ಪ್ರದೇಶದಲ್ಲಿ ನಡೆದಿದೆ. ಲಕ್ನೋ ನಗರದ ಬುದ್ಧೇಶ್ವರ ರಿಂಗ್ ರಸ್ತೆಯ ಎಂಎಂ ಲಾನ್‌ನಲ್ಲಿ ಬುಧವಾರ ರಾತ್ರಿ 11: 40 ರ ಸುಮಾರಿಗೆ ಈ ಆಘಾತಕಾರಿ ಘಟನೆ ಸಂಭವಿಸಿದ್ದು, ಮದುವೆಗೆ ಬಂದ ನೂರಾರು ಅತಿಥಿಗಳು ಗಾಬರಿಗೊಂಡು ಪಾರಾಗಲು ಸುರಕ್ಷಿತ ಸ್ಥಳಕ್ಕೆ ಓಡಿಹೋಗಿದ್ದಾರೆ. ಚಿರತೆ ದಾಳಿಯಿಂದ ಅರಣ್ಯ ಸಿಬ್ಬಂದಿ ಗಾಯಗೊಂಡಿದ್ದಾರೆ
ಮಾಹಿತಿ ಪ್ರಕಾರ, ಚಿರತೆ ಮದುವೆ ಸಮಾರಂಭಕ್ಕೆ ನುಗ್ಗಿ ಕೋಲಾಹಲವನ್ನು ಸೃಷ್ಟಿಸಿತು. ಜನರು ಈ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಮಾಹಿತಿ ಪಡೆದ ಪೊಲೀಸರು ಹಾಗೂ ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ತಕ್ಷಣವೇ ಆಗಮಿಸಿದವು. ಮದುವೆ ಸಮಾರಂಭದಲ್ಲಿ ಗದ್ದಲ ಸೃಷ್ಟಿಸಿದ ಚಿರತೆಯು ಹಿಡಿಯುವ ಪ್ರಯತ್ನದ ವೇಳೆ ಮತ್ತೆ ಗದ್ದಲ ಎಬ್ಬಿಸಿದ್ದು, ಅದರ ದಾಳಿಯಲ್ಲಿ ಅರಣ್ಯ ಸಿಬ್ಬಂದಿ ಗಾಯಗೊಂಡಿದ್ದಾರೆ.

ಸ್ಥಳೀಯ ನಿವಾಸಿ ದೀಪಕಕುಮಾರ ಎಂಬುವರು ತಮ್ಮ ಸಹೋದರಿಯ ಮದುವೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಚಿರತೆ ನುಗ್ಗಿ ಅವಾಂತರ ಸೃಷ್ಟಿಸಿದೆ ಎಂದು ಡಿಸಿಪಿ ವಿಶ್ವಜೀತ ಶ್ರೀವಾಸ್ತವ ಅವರು ವಿವರ ನೀಡಿದ್ದಾರೆ. ತಕ್ಷಣ ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ಮತ್ತೊಂದು ತಂಡ ಸ್ಥಳಕ್ಕೆ ಆಗಮಿಸಿ ಅಲ್ಲಿದ್ದವರನ್ನು ತೆರವು ಮಾಡಿದರು. ಅರಣ್ಯ ಇಲಾಖೆಯು ಚಿರತೆಯನ್ನು ಹಿಡಿಯಲು ಹುಡುಕಾಟ ಪ್ರಾರಂಭಿಸಿತು ಎಂದು ಡಿಸಿಪಿ ತಿಳಿಸಿದ್ದಾರೆ.
ಆರಂಭದಲ್ಲಿ, ಕೆಲವು ಅತಿಥಿಗಳು ಇದು ಬೀದಿ ನಾಯಿ ಎಂದು ಭಾವಿಸಿದ್ದರು. ಆದರೆ, ಚಿರತೆ ಜನಸಂದಣಿಯತ್ತ ಸಾಗುತ್ತಿದ್ದಂತೆ ಅವರು ಭಯಭೀತರಾದರು. ಗೊಂದಲದಲ್ಲಿ ಇಬ್ಬರು ಕ್ಯಾಮರಾಮೆನ್ ಬಿದ್ದು ಗಾಯಗೊಂಡಿದ್ದಾರೆ. ಗಲಾಟೆಯಿಂದ ಗಾಬರಿಗೊಂಡ ಚಿರತೆ ಆವರಣದಲ್ಲಿರುವ ಸಭಾಂಗಣದ ಮೇಲ್ಛಾವಣಿಯ ಮೇಲೆ ಹಾರಿದೆ. ಅತಿಥಿಗಳು ಊಟ ಮಾಡುತ್ತಿದ್ದು, ಚಿರತೆ ಡೇರೆಯ ಹಿಂದಿನಿಂದ ಮದುವೆ ಮಂಟಪಕ್ಕೆ ಪ್ರವೇಶಿಸಿದ ವಿಶೇಷ ಕ್ಷಣಗಳನ್ನು ಛಾಯಾಗ್ರಾಹಕರು ಸೆರೆಹಿಡಿದಿದ್ದಾರೆ.

ಅರಣ್ಯ ಸಿಬ್ಬಂದಿ ಆಸ್ಪತ್ರೆಗೆ ದಾಖಲು
ಮಾಹಿತಿ ನೀಡಿದ ನಂತರ ಅರಣ್ಯ ಇಲಾಖೆಯ ತಂಡವು ಸ್ಥಳಕ್ಕೆ ತಲುಪಿದೆ. ತಂಡವು ಮದುವೆ ಮಂಟಪದ ಎರಡನೇ ಮಹಡಿಗೆ ಹತ್ತಿದಾಗ, ಚಿರತೆ ಒಡೆದ ಪೀಠೋಪಕರಣಗಳ ಹಿಂದೆ ಅಡಗಿಕೊಂಡಿರುವುದು ಕಂಡುಬಂದಿದೆ. ಅರಣ್ಯ ಸಿಬ್ಬಂದಿ ಮುಕದ್ದರ್ ಅಲಿ ಚಿರತೆಯ ಬಳಿಗೆ ಬರುತ್ತಿದ್ದಂತೆ ಅದು ದಾಳಿ ಮಾಡಿ ಅವರ ಬಲಗೈಗೆ ಕಚ್ಚಿದೆ. ಅವರು ಚಿರತೆಯಿಂದ ತಪ್ಪಿಸಿಕೊಂಡರು. ಆಗ ಅಲ್ಲಿಂದ ಅದು ಓಡಿ ಹೋಯಿತು. ಕೂಡಲೇ ಅಲಿಗೆ ಪ್ರಥಮ ಚಿಕಿತ್ಸೆ ನೀಡಿ ನಂತರ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು.
ಸಭಾಂಗಣ ಪ್ರದೇಶದಲ್ಲಿ ಚಿರತೆ ಅಡಗಿಕೊಂಡಿದ್ದು, ಹೊರಗಿನ ಕಬ್ಬಿಣದ ನಾಲೆಯನ್ನು ಮುಚ್ಚಲಾಯಿತು. ರೈಫಲ್‌ಗಳೊಂದಿಗೆ ಪೊಲೀಸ್ ಅಧಿಕಾರಿಗಳ ಗುಂಪು ಬ್ಯಾಂಕ್ವೆಟ್ ಹಾಲ್‌ನೊಳಗೆ ಬೀಗ ಹಾಕಲಾದ ಸ್ಥಳಕ್ಕೆ ಹೋಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅವರು ಮೆಟ್ಟಿಲುಗಳನ್ನು ಹತ್ತುವಾಗ ಚಿರತೆ ಅರಣ್ಯ ಸಿಬ್ಬಂದಿ ಮೇಲೆ ದಾಳಿ ಮಾಡಿದೆ, ಕೈ ಕಚ್ಚಿದೆ. ಚಿರತೆ ಸಿಬ್ಬಂದಿ ಕೈಯಿಂದ ರೈಫಲ್ ಅನ್ನು ಎಳೆಯಲು ಪ್ರಯತ್ನಿಸಿದೆ, ಆದರೆ ಗದ್ದಲವಾದ ನಂತರ ಅದು ಮೇಲಕ್ಕೆ ಓಡಿಹೋಗಿದೆ. ಅಧಿಕಾರಿಗಳು ಅಲ್ಲಿಂದ ಹೊರಬಂದು ಆ ಸ್ಥಳವನ್ನು ಮತ್ತೆ ಲಾಕ್ ಮಾಡಿದ್ದಾರೆ.
ರಾತ್ರಿಯ ಕಾರ್ಯಾಚರಣೆಯ ನಂತರ ಅಂತಿಮವಾಗಿ ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ ಚಿರತೆಯನ್ನುಸೆರೆ ಹಿಡಿಯಲಾಯಿತು.

ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಲಕ್ನೋ ವಿಭಾಗೀಯ ಅರಣ್ಯಾಧಿಕಾರಿ ಸಿತಾಂಶು ಪಾಂಡೆ ಅವರು ಚಿರತೆಯನ್ನು ಸೆರೆಹಿಡಿಯಲು ನಾಲ್ಕು ಗಂಟೆಗಳಿಗೂ ಹೆಚ್ಚು ಸಮಯ ತೆಗೆದುಕೊಂಡಿತು ಎಂದು ಹೇಳಿದ್ದಾರೆ.
“ಮಲಿಹಾಬಾದ್‌ನಲ್ಲಿ ದಟ್ಟವಾದ ಅರಣ್ಯವಿದೆ. ಅದರ ಮೇಲೆ ಲಖಿಂಪುರ ಖೇರಿ, ದುಧ್ವಾ ಹುಲಿ ಸಂರಕ್ಷಿತ ಪ್ರದೇಶ ಮತ್ತು ಪಿಲಿಭಿತ್ ಹುಲಿ ಸಂರಕ್ಷಿತ ಪ್ರದೇಶಗಳಿವೆ. ಚಿರತೆ ಚುರುಕಾದ ಪ್ರಾಣಿಯಾಗಿರುವುದರಿಂದ ಅದು ಎಲ್ಲಿಂದಲಾದರೂ ಬಂದಿರಬಹುದು” ಎಂದು ಅವರು ಹೇಳಿದ್ದಾರೆ.
ಚಿರತೆ ಹಿಡಿಯುವ ಮೊದಲು, ಅಧಿಕಾರಿಗಳು ಶಾಂತವಾಗಿರಲು ಮತ್ತು ಏಕಾಂಗಿಯಾಗಿ ಹೊರಗೆ ಹೋಗದಂತೆ ನಿವಾಸಿಗಳಿಗೆ ಮನವಿ ಮಾಡಲಾಗಿತ್ತು. ನಂತರ ಚಿರತೆ ಸೆರೆ ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ನಲ್ಲಿ ನೀರು ವಿವಾದ: ಕೇಂದ್ರ ಸಚಿವರ ಇಬ್ಬರು ಸೋದರಳಿಯಂದಿರ ನಡುವೆ ಗುಂಡಿನ ಚಕಮಕಿ, ಓರ್ವ ಸಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement