ಕಳುವು ಮಾಡಿದ ಬೈಕ್ ಅನ್ನು ಮಾಲೀಕರಿಗೆ ಹಿಂದಿರುಗಿಸಲು 450 ಕಿಮೀ ಪ್ರಯಾಣ ಮಾಡಿದ ಕಳ್ಳ..! ಕ್ಷಮಾಪಣೆ ಪತ್ರದ ಜೊತೆಗೆ ಹಣವನ್ನೂ ಇಟ್ಟು ಹೋದ…!!

ಇತ್ತೀಚೆಗೆ ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ನಡೆದ ವಿಲಕ್ಷಣ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ಅಪರೂಪದ ಘಟನೆಯೊಂದರಲ್ಲಿ, ತಮಿಳುನಾಡಿನ ವ್ಯಕ್ತಿಯೊಬ್ಬ ಕಳುವು ಮಾಡಿದ ಬೈಕ್‌ ಅನ್ನು ಕದ್ದ ಸ್ಥಳದಲ್ಲಿಯೇ ತಂದಿಟ್ಟಿದ್ದಲ್ಲದೆ, ಕ್ಷಮೆಯಾಚನೆಯ ಪತ್ರ ಬರೆದಿಟ್ಟು, ಅದರ ಜೊತೆಗೆ ಹಣವನ್ನೂ ಇಟ್ಟು ಹೋದ ಘಟನೆ ನಡೆದಿದೆ.
ತಿತಮಿಳನಾಡಿನ ರುಪ್ಪುವನಂ ಬಳಿಯ ಡಿ ಪಲಯ್ಯೂರ್ ಎಂಬಲ್ಲಿ ಇಂತಹ ಅಪರೂಪದ ಘಟನೆ ನಡೆದಿದ್ದು, ಅಲ್ಲಿನ ನಿವಾಸಿ ವೀರಮಣಿ ಎಂಬವರು ಇದನ್ನು ಪ್ರತ್ಯಕ್ಷವಾಗಿ ಕಂಡಿದ್ದಾರೆ. ವೀರಮಣಿ ಮಲಗುವ ಮುನ್ನ ತಮ್ಮ ದ್ವಿಚಕ್ರ ವಾಹನವನ್ನು ತಮ್ಮ ಮನೆಯ ಮುಂದೆ ನಿಲ್ಲಿಸುತ್ತಿದ್ದರು. ಆದರೆ, ಒಂದು ದಿನ ಅವರು ಗಾಬರಿಯಾದರು. ಯಾಕೆಂದರೆ ಬೆಳಿಗ್ಗೆ ಎದ್ದು ನೋಡಿದಾಗ ಅವರ ಬೈಕ್ ನಿಲ್ಲಿಸಿದ ಸ್ಥಳದಿಂದ ನಾಪತ್ತೆಯಾಗಿತ್ತು. ಆಘಾತಕ್ಕೊಳಗಾದ ಅವರು ಮತ್ತು ಅವರ ಕುಟುಂಬದವರು ಬೈಕ್‌ ಅನ್ನು ಎಲ್ಲೆಡೆ ಹುಡುಕಾಡಿದರು. ಆದರೆ ಬೈಕ್‌ ಮಾತ್ರ ಎಲ್ಲಿಯೂ ಪತ್ತೆಯಾಗಲಿಲ್ಲ. ನಂತರ ಕಳ್ಳತನವಾಗಿದೆ ಎಂದು ಎಂದು ಅರಿತ ವೀರಮಣಿ ತಿರುಪ್ಪುವನಂ ಪೊಲೀಸ್ ಠಾಣೆಗೆ ಬೈಕ್‌ ಕಳ್ಳತನದ ಬಗ್ಗೆ ದೂರು ನೀಡಿದ್ದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸಿದರೂ ಬೈಕ್‌ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ನಾಪತ್ತೆಯಾದ ಬೈಕ್‌ನ ಸುಳಿವು ಸಿಗದೆ ಅನೇಕ ದಿನಗಳು ಕಳೆದವು. ಆದರೆ, ಫೆಬ್ರವರಿ 24ರಂದು ರಾತ್ರಿ ಅನಿರೀಕ್ಷಿತವಾದದ್ದು ನಡೆಯಿತು. ವೀರಮಣಿ ಅವರ ಬೈಕು ಅವರ ಮನೆಯ ಮುಂದೆಪ್ರತ್ಯಕ್ಷವಾಗಿತ್ತು. ಅದರ ಜೊತೆಗೆ ಒಂದು ಪತ್ರವೂ ಇತ್ತು.

ಪ್ರಮುಖ ಸುದ್ದಿ :-   ಸರಿಯಾಗಿ ಓದುತ್ತಿಲ್ಲ ಎಂದು ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದು, ತಾನೂ ಆತ್ಮಹತ್ಯೆಗೆ ಶರಣಾದ ತಂದೆ...!

ವೀರಮಣಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪತ್ರ ಓದಿ ಆಶ್ಚರ್ಯಚಕಿತರಾದರು. ಅದರಲ್ಲಿ ಕಳ್ಳ ತನ್ನ ಕೃತ್ಯದ ಬಗ್ಗೆ ಅದರಲ್ಲಿ ವಿವರಣೆ ನೀಡಿದ್ದ ಎಂದು ಟಿವಿ9 ತೆಲುಗು ವರದಿ ಹೇಳಿದೆ.
ಕಳ್ಳ ಬೇರೆ ಪ್ರದೇಶದಿಂದ ಪ್ರಯಾಣಿಸುತ್ತಿರುವಾಗ ತನಗೆ ತುರ್ತು ಸ್ಥಿತಿ ಎದುರಾಗಿದೆ ಎಂದು ಪತ್ರದಲ್ಲಿ ಆತ ಉಲ್ಲೇಖಿಸಿದ್ದಾನೆ. ಚತುಷ್ಪಥದ ಹೆದ್ದಾರಿಯ ಬಳಿ ಸಿಕ್ಕಿಬಿದ್ದ ತನಗೆ ವಾಹನ ಬೇಕಿತ್ತು ಮತ್ತು ತನಗೆ ಮೊದಲು ಕಂಡದ್ದು ಈ ಬೈಕ್‌. ಆ ಸಮಯದಲ್ಲಿ, ಹೇಳದೆ ಬೈಕ್‌ ತೆಗೆದುಕೊಂಡು ಹೋಗುವುದು ತಪ್ಪು ಎಂದು ತನಗೆ ಅನಿಸಲಿಲ್ಲ. ಆದರೆ ನಂತರ ತನಗೆ ಅಪರಾಧಿ ಮನೋಭಾವ ಉಂಟಾಯಿತು. ಹೀಗಾಗಿ ಆದ ತಪ್ಪನ್ನು ಸರಿಪಡಿಸಲು ನಿರ್ಧರಿಸಿದೆ. ಎಲ್ಲವನ್ನೂ ಸರಿಮಾಡಲು ನಿರ್ಧರಿಸಿ ಬೈಕ್ ಅನ್ನು ಅದರ ಮಾಲೀಕರಿಗೆ ಹಿಂದಿರುಗಿಸಲು 450 ಕಿ.ಮೀ.ದೂರದಿಂದ ತಂದಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾನೆ.

ತನ್ನ ಅನಿವಾರ್ಯ ಪರಿಸ್ಥಿತಿ ವೀರಮಣಿ ಅವರ ಬೈಕ್‌ ಅನ್ನು ಅನುಮತಿಯಿಲ್ಲದೆ ತೆಗೆದುಕೊಂಡು ಹೋಗುವಂತೆ ಮಾಡಿದೆ ಎಂದು ಅಪರಿಚಿತ ಕಳ್ಳ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದಾನೆ. ಪತ್ರದಲ್ಲಿ ತನ್ನ ಕೃತ್ಯಕ್ಕೆ ಕ್ಷಮೆಯಾಚನೆ ಜೊತೆಗೆ ಬೈಕ್‌ನ ಪೆಟ್ರೋಲ್ ಟ್ಯಾಂಕ್‌ನಲ್ಲಿದ್ದ ಪೆಟ್ರೋಲ್‌ ಖಾಲಿ ಮಾಡಿದ್ದಕ್ಕೆ 1,500 ರೂ. ಗಳನ್ನು ಪತ್ರದ ಜೊತೆಗೆ ಆತ ಇಟ್ಟು ಹೋಗಿದ್ದಾನೆ. “ನಿಮ್ಮ ಬೈಕು ನನಗೆ ತುರ್ತು ಪರಿಸ್ಥಿತಿಯಲ್ಲಿ ಸಹಾಯ ಮಾಡಿದೆ. ನಾನು ನಿಮಗೆ ಋಣಿಯಾಗಿದ್ದೇನೆ. ದಯವಿಟ್ಟು ಈ ಹಣವನ್ನು ಸ್ವೀಕರಿಸಿ ನನ್ನನ್ನು ಕ್ಷಮಿಸಿ” ಎಂದು ಕಳ್ಳ ಪತ್ರದಲ್ಲಿ ಬರೆದಿದ್ದಾನೆ…!
ನಂತರ ಪ್ರಕರಣವನ್ನು ಅಲ್ಲಿಯೇ ಕ್ಲೋಸ್‌ ಮಾಡಲಾಗಿದೆಯೋ ಅಥವಾ ಕಳ್ಳನ ವಿರುದ್ಧ ಪೊಲೀಸ್ ಕ್ರಮ ತೆಗೆದುಕೊಳ್ಳಲಾಗಿದೆಯೇ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

ಪ್ರಮುಖ ಸುದ್ದಿ :-   ಆಘಾತಕಾರಿ ವೀಡಿಯೊ..| ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ, ಮಗುವಿನ ಮೇಲೆ ಬೀದಿ ಹಸುವಿನ ದಾಳಿ; ಮಹಿಳೆ ಆಸ್ಪತ್ರೆಗೆ ದಾಖಲು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement