ಹುಲಿಯ ಜೊತೆ ಕಾದಾಟ ನಡೆಸಿ ತನ್ನ ಒಡೆಯನನ್ನು ರಕ್ಷಿಸಿದ ನಾಯಿ ! ಓಡಿ ಹೋದ ಹುಲಿ…!! ಆದರೆ…

ಉಮಾರಿಯಾ: ಮನುಷ್ಯರ ಮೇಲಿನ ನಾಯಿಯ ಅಚಲ ನಿಷ್ಠೆ ಹಾಗೂ ನಂಬಿಕೆಯನ್ನು ಎತ್ತಿ ತೋರಿಸುವ ಘಟನೆಯೊಂದರಲ್ಲಿ ಜರ್ಮನ್ ಶೆಫರ್ಡ್ ನಾಯಿಯೊಂದು ಹುಲಿಯಿಂದ ತನ್ನ ಮಾಲೀಕನನ್ನು ರಕ್ಷಿಸಿದೆ. ಮಾಲೀಕನನ್ನು ಕಾಪಾಡಲು ಹುಲಿಯ ವಿರುದ್ಧವೇ ಹೋರಾಡಿದ ನಾಯಿ ಹುಲಿಯನ್ನು ಹೆದರಿಸಿ ಕಾಡಿಗೆ ಓಡಿಸಲು ಸಫಲವಾದರೂ ಹುಲಿಯೊಟ್ಟಿಗಿನ ಕಾಳಗದಲ್ಲಿ ಉಂಟಾದ ಗಾಯಗಳಿಂದಾಗಿ ಕೆಲ ಸಮಯದ ನಂತರ ವೀರ ಮರಣ ಹೊಂದಿದೆ. ಈ ಘಟನೆ ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಉಮಾರಿಯಾ ಜಿಲ್ಲೆಯ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ಬಳಿ ಇರುವ ಭರ್ಹುತ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತನ್ನ ಪ್ರಾಣ ಅರ್ಪಿಸಿ ತನ್ನ ಒಡೆಯನನ್ನು ಹುಲಿಯಿಂದ ರಕ್ಷಿಸಿದ ನಾಯಿಗಾಗಿ ಇಡೀ ಗ್ರಾಮವೇ ಮರುಗುತ್ತಿದೆ.

ಈ ನಾಯಿಯನ್ನು ಅವರ ಮನೆಯವರು ಪ್ರೀತಿಯಿಂದ ‘ಪಂತು’ ಎಂದು ಕರೆಯುತ್ತಿದ್ದರು. ಈ ಜರ್ಮನ್ ಶೆಫರ್ಡ್ ನಾಯಿಯ ಮಾಲೀಕ ಶಿವಂ ಬಡಗಯ್ಯ ಎಂಬವರು ತಮ್ಮ ಜಮೀನಿನಲ್ಲಿದ್ದಾಗ ಇದ್ದಕ್ಕಿದ್ದಂತೆ ಹುಲಿ ಅವರ ಮುಂದೆ ಪ್ರತ್ಯಕ್ಷವಾಗಿದೆ. ಅವರಿಗೆ ಏನೂ ಮಾಡಬೇಕೆಂದು ತಿಳಿಯದಾಗಿದೆ. ಹುಲಿ ಮಾಲೀಕನ ಮೇಲೆ ದಾಳಿ ಮಾಡಲು ಮುಂದಾದಾಗ ಮಾಲೀಕನ ರಕ್ಷಣೆಗೆ ಧಾವಿಸಿದ ‘ಪಂತು’ ತನ್ನ ಪ್ರಾಣವನ್ನೂ ಲೆಕ್ಕಿಸದೆ ತನಗಿಂತ ಶಕ್ತಿಶಾಲಿಯಾದ ಹುಲಿಯ ಮೇಲೆ ಎರಗಿದೆ.
ಜರ್ಮನ್ ಶೆಫರ್ಡ್ ನಾಯಿ ತನ್ನ ಮೇಲೆ ದಾಳಿ ಮಾಡುವುದನ್ನು ಹುಲಿ ನಿರೀಕ್ಷಿಸಿರಲಿಲ್ಲ. ಕ್ಷಣಕಾಲ ಚಕಿತಗೊಂಡ ಹುಲಿ ನಾಯಿಯೊಂದಿಗೆ ಕಾದಾಟಕ್ಕೆ ಇಳಿಯಿತು. ನಂತರ ಎರಡೂ ಪ್ರಾಣಿಗಳ ನಡುವೆ ಭೀಕರ ಕಾದಾಟನಡೆದು ‘ಪಂತು’ ತೀವ್ರವಾಗಿ ಗಾಯಗೊಂಡಿತು. ಈ ವೇಳೆ ನಾಯಿಯನ್ನು ಕಚ್ಚಿ ಹಿಡಿದ ಹುಲಿ ಅದರನ್ನು ಗ್ರಾಮದ ಹೊರವಲಯಕ್ಕೆ ಎಳೆದೊಯ್ದಿತು.

ಪ್ರಮುಖ ಸುದ್ದಿ :-   ಕ್ರಿಕೆಟರ್‌ ಯುಜ್ವೇಂದ್ರ ಚಾಹಲ್- ಧನಶ್ರೀ ವರ್ಮಾ ವಿಚ್ಛೇದನ ಈಗ ಅಧಿಕೃತ

ಆದರೆ ಜರ್ಮನ್ ಶೆಫರ್ಡ್ ನಾಯಿ ಹೆದರದೆ ‘ಪಂತು’ ತನ್ನ ಹೋರಾಟವನ್ನು ಮುಂದುವರಿಸಿ ಅದರಿಂದ ತಪ್ಪಿಸಿಕೊಂಡು ಪುನಃ ಹುಲಿಯ ಮೇಲೆ ಆಕ್ರಮಣಕ್ಕೆ ಮುಂದಾಯಿತು. ಅಂತಿಮವಾಗಿ ನಾಯಿಯ ವೀರಾವೇಶಕ್ಕೆ ಹುಲಿ ವಿಚಲಿತವಾಯಿತು ಮತ್ತು ಅಲ್ಲಿಂದ ಓಡಿ ಹೋಯಿತು ಎಂದು ಮಾಲೀಕ ಶಿವಂ ಹೇಳಿದ್ದಾರೆ.
ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡ ನಾಯಿಯನ್ನು ಶಿವಂ ಅವರು ತಕ್ಷಣವೇ ಪಶುವೈದ್ಯ ಡಾ.ಅಖಿಲೇಶ ಸಿಂಗ್ ಬಳಿಗೆ ಕರೆದೊಯ್ದರು. ಆದರೆ ತೀವ್ರವಾಗಿ ಗಾಯಗೊಂಡಿದ್ದ ನಾಯಿಯನ್ನು ಅವರಿಗೆ ಉಳಿಸಲು ಸಾಧ್ಯವಾಗಿಲ್ಲ. ಕೆಲಸಮಯದ ನಂತರ ಅದು ಇಹಲೋಕ ತ್ಯಜಿಸಿತು. ಜರ್ಮನ್ ಶೆಫರ್ಡ್ ನಾಯಿಯ ಕುತ್ತಿಗೆಗೆ ಗಂಭೀರವಾದ ಗಾಯವಾಗಿತ್ತು ಎಂದು ಡಾ. ಸಿಂಗ್ ತಿಳಿಸಿದ್ದಾರೆ. ನಾಯಿಯ ಮೈಮೇಲೆ ಪರಚಿದ ಹುಲಿಯ ಉಗುರುಗಳ ಗುರುತುಗಳೂ ಇದ್ದವು. ಈ ಗಾಯಗಳು ಬಹಳ ಆಳವಾಗಿದ್ದವು. ಚಿಕಿತ್ಸೆ ವೇಳೆ ನಾಯಿ ನಡೆಯಲು ಆರಂಭಿಸಿತ್ತು. ಆದರೆ ಸ್ವಲ್ಪ ಹೊತ್ತಿನ ಬಳಿಕ ಅದು ಮೃತಪಟ್ಟಿತು ಎಂದು ಅವರು ಹೇಳಿದ್ದಾರೆ.
ಆದರೆ ತನ್ನ ಶೌರ್ಯ ಮತ್ತು ತನ್ನ ಮಾಲೀಕನ ಮೇಲಿನ ಅಚಲ ನಿಷ್ಠೆ ತೋರಿ ಹುಲಿಯ ಬಾಯಿಯಿಂದ ಮಾಲೀಕನನ್ನು ಕಾಪಾಡಿದ ನಾಯಿಯ ಸಾವಿಗೆ ಇಡೀ ಗ್ರಾಮವೇ ಕಂಬನಿ ಮಿಡಿದಿದೆ.

ಪ್ರಮುಖ ಸುದ್ದಿ :-   ಛತ್ತೀಸ​ಗಢದಲ್ಲಿ ಎರಡು ಪ್ರತ್ಯೇಕ ಎನ್​ಕೌಂಟರ್​ ; 22 ನಕ್ಸಲರ ಹತ್ಯೆ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement