ವೀಡಿಯೊ..| 1000 ಕಿಮೀ ದೂರದಿಂದ ನಿಖರ ಡ್ರೋನ್‌ ದಾಳಿ ; ಕಾರಿನಲ್ಲಿ ಹೋಗುತ್ತಿದ್ದಾಗ ಇರಾನ್‌ ಸೇನಾ ನಾಯಕನ ಹತ್ಯೆ ಮಾಡಿದ ಇಸ್ರೇಲ್‌…!

ಪಶ್ಚಿಮ ಇರಾನ್‌ನಲ್ಲಿ ನಡೆದ ವಾಯುದಾಳಿಯಲ್ಲಿ, ಐಆರ್‌ಜಿಸಿ ಕುಡ್ಸ್ ಪಡೆಯ ಹಿರಿಯ ಅಧಿಕಾರಿ ಬೆಹ್ನಮ್ ಶಹ್ರಿಯಾರಿ ಕೊಲ್ಲಲ್ಪಟ್ಟರು ಎಂದು ಇಸ್ರೇಲ್‌ ಸೇನೆ ಶನಿವಾರ ತಿಳಿಸಿದೆ, ಇಸ್ರೇಲ್‌ನಿಂದ 1,000 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದ ಪ್ರದೇಶದಲ್ಲಿ ಕಾರಿನಲ್ಲಿ ಹೋಗುತ್ತಿರುವಾಗ ಇಸ್ರೇಲ್‌ ನಡೆಸಿದ ನಿಖರ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಹೇಳಿದೆ.
ಬೆಹ್ನಮ್ ಶಹರಿಯಾರಿ ಪಶ್ಚಿಮ ಇರಾನ್‌ನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲೇ ಖಚಿತ ಗುಪ್ತಚರ ಮಾಹಿತಿಯನ್ನು ಆಧಾರಿಸಿ ಇಸ್ರೇಲ್‌ ಸೇನೆ ಡ್ರೋನ್‌ ಹಾರಿಸಿ ಇಸ್ರೇಲ್‌ನಿಂದ 1,000 ಕಿ.ಮೀ ದೂರದಲ್ಲಿದ್ದ ಪ್ರದೇಶದ ಮೇಲೆ ನಿಖರವಾಗಿ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಐಡಿಎಫ್‌ (IDF) ಹೇಳಿಕೊಂಡಿದೆ. ಅಷ್ಟೇ ಅಲ್ಲದೇ ಕಾರಿನ ಮೇಲೆ ದಾಳಿ ಮಾಡುತ್ತಿರುವ ವೀಡಿಯೊ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಶಹ್ರಿಯಾರಿ ಕುಡ್ಸ್ ಪಡೆಯ ಯೂನಿಟ್ 190ರ ಮುಖ್ಯಸ್ಥರಾಗಿದ್ದರು, ಇದು ಇರಾನ್‌ನ ಪ್ರಾಕ್ಸಿ ಗುಂಪುಗಳಿಗೆ, ವಿಶೇಷವಾಗಿ ಲೆಬನಾನ್‌ನ ಹೆಜ್ಬೊಲ್ಲಾ, ಗಾಜಾದಲ್ಲಿನ ಪ್ಯಾಲೆಸ್ತೈನ್‌ ಭಯೋತ್ಪಾದಕ ಗುಂಪುಗಳು ಮತ್ತು ಯೆಮೆನ್‌ನಲ್ಲಿನ ಹೌತಿಗಳಿಗೆ ರಹಸ್ಯವಾಗಿ ಶಸ್ತ್ರಾಸ್ತ್ರಗಳ ವರ್ಗಾವಣೆ ಮಾಡುತ್ತಿತ್ತು ಎಂದು ಇಸ್ರೇಲ್‌ ಆರೋಪಿಸಿದೆ.
ಇಸ್ರೇಲ್ 2009 ರಿಂದಲೂ ಶಹರಿಯಾರಿ ಮೇಲೆ ಕಣ್ಣಿಟ್ಟಿತ್ತು. ಇರಾನಿನ ಈ ಅಧಿಕಾರಿ “ಇಸ್ರೇಲ್‌ ಅನ್ನು ನಾಶಮಾಡುವ ಇರಾನ್ ಆಡಳಿತದ ಯೋಜನೆಯನ್ನು ಮುನ್ನಡೆಸಲು ವಿವಿಧ ಭಯೋತ್ಪಾದಕ ಸಂಘಟನೆಗಳಿಗೆ ಶಸ್ತ್ರಾಸ್ತ್ರ ನೀಡಲು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ” ಎಂದು ಐಡಿಎಫ್ ಹೇಳಿದೆ.

“ಶಹ್ರಿಯಾರಿ ನೇರವಾಗಿ ಹೆಜ್ಬೊಲ್ಲಾ ಮತ್ತು ಹಮಾಸ್ ಭಯೋತ್ಪಾದಕ ಸಂಘಟನೆಗಳೊಂದಿಗೆ ಹಾಗೂ ಹೌತಿ ಮತ್ತು ಇತರ ಗುಂಪುಗಳ ಜೊತೆ ಕೆಲಸ ಮಾಡಿದರು, ಈ ಗುಂಪುಗಳು ಯುದ್ಧದ ಸಮಯದಲ್ಲಿ ಇಸ್ರೇಲಿ ಪ್ರದೇಶದ ಮೇಲೆ ಹಾರಿಸಲಾದ ಹಲವಾರು ಕ್ಷಿಪಣಿಗಳು ಮತ್ತು ರಾಕೆಟ್‌ಗಳನ್ನು ಇವರು ಪೂರೈಸಿದರು” ಎಂದು ಹೇಳಿಕೆ ತಿಳಿಸಿದೆ.
ಶಸ್ತ್ರಾಸ್ತ್ರಗಳ ಜೊತೆಗೆ, ಐಆರ್‌ಜಿಸಿ ಕಮಾಂಡರ್ “ಟರ್ಕಿ ಮತ್ತು ಲೆಬನಾನ್‌ನಲ್ಲಿನ ತನ್ನ ವಿಶಿಷ್ಟ ಸಂಪರ್ಕಗಳ ಮೂಲಕ ಭಯೋತ್ಪಾದಕ ಸಂಘಟನೆಗಳಿಗೆ ವಾರ್ಷಿಕವಾಗಿ ನೂರಾರು ಮಿಲಿಯನ್ ಡಾಲರ್‌ಗಳನ್ನು ವರ್ಗಾಯಿಸುವುದನ್ನು ಮೇಲ್ವಿಚಾರಣೆ ಮಾಡುತ್ತಿದ್ದರು, ಇದಕ್ಕಾಗಿ ಫ್ರಂಟ್‌ ಕಂಪನಿಗಳು, ಕರೆನ್ಸಿ ವಿನಿಮಯ ಕೇಂದ್ರಗಳು ಮತ್ತು ಹಣ ಕೊರಿಯರ್‌ಗಳ ಜಾಲವನ್ನು ಬಳಸಿದರು” ಎಂದು ಐಡಿಎಫ್ ಹೇಳಿದೆ.
ಶಹರಿಯಾರಿಯ ಹತ್ಯೆಯನ್ನು “ಇಸ್ರೇಲ್ ಸುತ್ತಮುತ್ತಲಿನ ಭಯೋತ್ಪಾದಕ ಸಂಘಟನೆಗಳ ಸಾಮರ್ಥ್ಯಕ್ಕೆ ತೀವ್ರ ಹೊಡೆತ” ಎಂದು ಶ್ಲಾಘಿಸಿದ ಇಸ್ರೇಲಿ ಸೆನೆ, ಅವರ ಸಾವು ಭಯೋತ್ಪಾದಕ ಸಂಘಟನೆಗಳು ಮರುಸಂಘಟನೆಗೊಳ್ಳುವ ಮತ್ತು ಬಲಗೊಳ್ಳುವ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಅಮೆರಿಕ ಅಧ್ಯಕ್ಷ ಟ್ರಂಪ್ ಹೆಸರನ್ನು ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ ಪಾಕಿಸ್ತಾನ...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement