ಭೂ ಕುಸಿತದಿಂದ ಗ್ರಾಮವೇ ನಾಶವಾದ್ರೂ ಅಪಾಯದ ಬಗ್ಗೆ ಮಧ್ಯರಾತ್ರಿ ಎಚ್ಚರಿಸಿ 67 ಜನರ ಜೀವ ಉಳಿಸಿದ ನಾಯಿ..!

ನವದೆಹಲಿ: ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ, ಭಾರತದ ವಿವಿಧ ಭಾಗಗಳಲ್ಲಿ ಭೂ ಕುಸಿತ, ಹಠಾತ್ ಪ್ರವಾಹ ಮತ್ತು ಮೇಘಸ್ಫೋಟಗಳು ಸಂಭವಿಸುತ್ತಿವೆ. ಇದರ ಮಧ್ಯೆ ಹಿಮಾಚಲ ಪ್ರದೇಶದ ನಾಯಿಯೊಂದು ಅನೇಕರ ಜೀವ ಉಳಿಸುವ ಕೆಲಸ ಮಾಡುವ ಮೂಲಕ ಸುದ್ದಿಯಲ್ಲಿದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸಿಯಾಥಿ ಗ್ರಾಮದಲ್ಲಿ ಭೀಕರ ಭೂಕುಸಿತ ಸಂಭವಿಸುವ ಕೆಲವೇ ಕ್ಷಣಗಳ ಮೊದಲು, ಹಳ್ಳಿಯ ನಾಯಿಯೊಂದು ಮನೆಯವರನ್ನು ಎಚ್ಚರಿಸುವ ಮೂಲಕ 20 ಕುಟುಂಬಗಳ 67 ಜೀವಗಳನ್ನು ಉಳಿಸಿದೆ. ಜೂನ್ 30 ರ ಮಧ್ಯರಾತ್ರಿಯ ಸುಮಾರಿಗೆ ಮಂಡಿಯ ಧರಂಪುರ ಪ್ರದೇಶದಲ್ಲಿರುವ ಸಿಯಾತಿ ಗ್ರಾಮದಲ್ಲಿ ಈ ಗಮನಾರ್ಹ ಘಟನೆ ನಡೆದಿದೆ.
ಜೂನ್ 30 ರಂದು ಮಧ್ಯರಾತ್ರಿಯಿಂದ ಬೆಳಗಿನ ಜಾವ 1 ಗಂಟೆಯ ನಡುವೆ, ಸುರಿದ ಬಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ಮಂಡಿಯ ಧರಂಪುರ ಪ್ರದೇಶದ ಸಿಯಾಥಿ ಗ್ರಾಮವು ನಾಶವಾಯಿತು.

ಭೂಕುಸಿತದಿಂದ ನಿವಾಸಿಗಳು ತಪ್ಪಿಸಿಕೊಳ್ಳಲು ಸಹಾಯ ಮಾಡಿದ ನಾಯಿ…!
ವರದಿಗಳ ಪ್ರಕಾರ, ಸಿಯಾಥಿ ನಿವಾಸಿಯಾದ ನರೇಂದ್ರ ಅವರಿಗೆ ಸೇರಿದ ಹಾಗೂ ಮನೆಯ ಎರಡನೇ ಮಹಡಿಯಲ್ಲಿ ಮಲಗಿದ್ದ ನಾಯಿ ಇದ್ದಕ್ಕಿದ್ದಂತೆ ಜೋರಾಗಿ ಬೊಗಳಲು ಪ್ರಾರಂಭಿಸಿ ಮನೆಯವರನ್ನು ಎಚ್ಚರಿಸಿದೆ.
ತಮ್ಮ ಮನೆಯ ನಾಯಿ ಮನೆಯ ಎರಡನೇ ಮಹಡಿಯಲ್ಲಿ ಮಲಗಿತ್ತು. ಮಧ್ಯರಾತ್ರಿ ಸಮಯದಲ್ಲಿ ನಾವೆಲ್ಲ ಗಾಢ ನಿದ್ದೆಯಲ್ಲಿದ್ದಾಗ ಅದು ಇದ್ದಕ್ಕಿದ್ದಂತೆ ನಿರಂತರವಾಗಿ ಬೊಗಳಲು ಪ್ರಾರಂಭಿಸಿತು. ಆಗ ಭಾರೀ ಮಳೆ ಸುರಿಯುತ್ತಿತ್ತು ಎಂದು ನರೇಂದ್ರ ಅವರು ಹೇಳಿದ್ದಾರೆ.
“ನಾಯಿ ಬೊಗಳುವಿಕೆಯಿಂದ ನನಗೆ ಎಚ್ಚರವಾಯಿತು. ನಾಯಿಯ ಅಸಾಮಾನ್ಯ ನಡವಳಿಕೆ ಅನುಮಾನ ಮೂಡಿಸಿತು. ಆಗ ನಾನು ನಾಯಿ ಯಾಕೆ ಇಷ್ಟೊಂದು ಬೊಗಳುತ್ತಿದೆ ಎಂದು ನೋಡಲು ಎದ್ದು ಹೋದಾಗ, ಮನೆಯ ಗೋಡೆಯಲ್ಲಿ ದೊಡ್ಡ ಬಿರುಕು ಬಿಟ್ಟಿರುವುದು ಕಂಡಿತು ಮತ್ತು ನೀರು ಅದರೊಳಗೆ ನುಗ್ಗಲು ಪ್ರಾರಂಭಿಸಿತ್ತು ಎಂದು ಅವರು ಹೇಳಿದ್ದಾರೆ. ತಕ್ಷಣವೇ ತಾನು ನಾಯಿ ಜೊತೆ ಕೆಳಗೆ ಓಡಿ ಹೋಗಿ ಮನೆಯವರನ್ನು ಎಬ್ಬಿಸಿ ಅಪಾಯದ ಬಗ್ಗೆ ಎಚ್ಚರಿಸಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬಾಲಕಿಗೆ ಝಡ್‌+ ಭದ್ರತೆ : ಪುಟ್ಟ ಹುಡುಗಿ ಶಾಲಾ ಬಸ್ಸಿನಿಂದ ಇಳಿದ ಕೂಡಲೇ ಮನೆಗೆ ಕರೆದೊಯ್ಯುವ ನಾಯಿಗಳ ಹಿಂಡು | ವೀಕ್ಷಿಸಿ

ನಂತರ ನರೇಂದ್ರ ಅವರು ಗ್ರಾಮದ ಇತರ ನಿವಾಸಿಗಳನ್ನೂ ಎಬ್ಬಿಸಿ ಈ ಬಗ್ಗೆ ಎಚ್ಚರಿಕೆ ನೀಡಿ ಸುರಕ್ಷಿತ ಸ್ಥಳಕ್ಕೆ ಓಡಿಹೋಗುವಂತೆ ಸೂಚಿಸಿದ್ದಾರೆ. ಮಳೆಯ ಅಬ್ಬರ ಹೇಗಿತ್ತು ಎಂದರೆ ಅಪಾಯವನ್ನು ಅರಿತ ಜನರು, ತಕ್ಷಣವೇ ಎಲ್ಲವನ್ನೂ ಬಿಟ್ಟು ಸುರಕ್ಷಿತ ಸ್ಥಳಕ್ಕೆ ಓಡಿಹೋದರು. ಇದಾದ ಸ್ವಲ್ಪ ಸಮಯದ ನಂತರ, ಗ್ರಾಮದಲ್ಲಿ ಭಾರಿ ಭೂಕುಸಿತ ಸಂಭವಿಸಿ ಸುಮಾರು ಒಂದು ಡಜನ್ ಮನೆಗಳು ನೆಲಸಮವಾದವು. ಕೇವಲ ನಾಲ್ಕರಿಂದ ಐದು ಮನೆಗಳು ಮಾತ್ರ ಈಗ ಕಾಣುತ್ತಿವೆ, ಉಳಿದವು ಭೂಕುಸಿತದಿಂದ ಮಣ್ಣಿನ ಅಡಿಯಲ್ಲಿ ಹೂತುಹೋಗಿವೆ. ಆ ರಾತ್ರಿ ನಾಯಿಯೇ ನಮ್ಮನ್ನು ದೇವರಂತೆ ನಮ್ಮನ್ನು ರಕ್ಷಿಸಿದೆ. ಬೇರೆ ಯಾರಿಗೂ ಗೊತ್ತಾಗದಿದ್ದಾಗ ಅದು ಎಚ್ಚರಿಕೆ ನೀಡಿದೆ ಎಂದು ಗ್ರಾಮಸ್ಥರು ಈಗ ಹೇಳುತ್ತಾರೆ.

ಕಳೆದ ಏಳು ದಿನಗಳಿಂದ ತ್ರಯಂಬಳ ಗ್ರಾಮದ ನೈನಾ ದೇವಿ ದೇವಸ್ಥಾನದಲ್ಲಿ ಬದುಕುಳಿದವರು ಈಗ ಇದ್ದಾರೆ. ಏತನ್ಮಧ್ಯೆ, ದುರಂತದ ನಂತರ ಅನೇಕರು ಅಧಿಕ ರಕ್ತದೊತ್ತಡ, ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾರೆ. ಈ ದುರಂತದ ನಂತರ, ಸ್ಥಳೀಯ ಸಮುದಾಯಗಳು ಸಹಾಯವನ್ನು ನೀಡಿವೆ ಮತ್ತು ಸರ್ಕಾರವು ಪ್ರತಿ ಪೀಡಿತ ಕುಟುಂಬಕ್ಕೆ ತಕ್ಷಣದ ಸಹಾಯವಾಗಿ 10,000 ರೂ.ಗಳನ್ನು ನೀಡಿದೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ (SDMA) ಪಡೆದ ಮಾಹಿತಿಯ ಪ್ರಕಾರ, ಜೂನ್ 20 ರಂದು ಮಾನ್ಸೂನ್ ಆರಂಭವಾದಾಗಿನಿಂದ ಹಿಮಾಚಲ ಪ್ರದೇಶದಲ್ಲಿ ಮಳೆಯ ಕಾರಣಕ್ಕೆ ಒಟ್ಟು 78ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ 50 ಜನರು ಭೂಕುಸಿತ, ದಿಢೀರ್ ಪ್ರವಾಹದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಭಾರೀ ಮಳೆಯು ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ಈವರೆಗೆ 23 ದಿಢೀರ್ ಪ್ರವಾಹಗಳು, 19 ಮೇಘಸ್ಫೋಟ ಘಟನೆಗಳು ಮತ್ತು 16 ಭೂಕುಸಿತಗಳು ಸಂಭವಿಸಿವೆ ಎಂದು ವರದಿಯಾಗಿವೆ.

ಪ್ರಮುಖ ಸುದ್ದಿ :-   ನಾಳೆ (ಜುಲೈ 9) ಭಾರತ ಬಂದ್ : 25 ಕೋಟಿ ಕಾರ್ಮಿಕರ ಮುಷ್ಕರ ; ಯಾವೆಲ್ಲ ಸೇವೆಗಳಿಗೆ ತೊಂದರೆಯಾಗಬಹುದು..?

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement