
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ರಾಮತೀರ್ಥ ಗುಡ್ಡದ ಮೇಲಿನ ಅಪಾಯಕಾರಿ ಗುಹೆಯಲ್ಲಿ ಉಳಿದುಕೊಂಡಿದ್ದ ವಿದೇಶಿ ಮಹಿಳೆ ಹಾಗೂ ಅವರ ಇಬ್ಬರು ಚಿಕ್ಕ ಹೆಣ್ಣು ಮಕ್ಕಳನ್ನು ಪೊಲೀಸರು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ.
ಗೋಕರ್ಣ ಪಿಎಸ್‌ಐ ಶ್ರೀಧರ ಎಸ್.ಆರ್. ಹಾಗೂ ಸಿಬ್ಬಂದಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಜುಲೈ 9ರಂದು ರಾಮತೀರ್ಥ ಗುಡ್ಡದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಗುಡ್ಡದ ಮೇಲಿನ ಕಾಡಿನ ಪ್ರದೇಶದೊಳಗೆ ಇರುವ ಗುಹೆಯಲ್ಲಿ ಯಾರೂ ಅಪರಿಚಿತರು ಉಳಿದುಕೊಂಡಿರುವುದನ್ನು ಗಮನಿಸಿದ್ದಾರೆ. ಅವರು ಈ ಬಗ್ಗೆ ಪರಿಶೀಲನೆ ನಡೆದಾಗ ಗುಹೆಯಲ್ಲಿ ರಷ್ಯಾದ ಮಹಿಳೆ ನಿನಾ ಕುಟಿನಾ (40) ಹಾಗೂ ಅವರ ಮಕ್ಕಳಾದ ಪ್ರೇಮಾ (6 ವರ್ಷದ 7 ತಿಂಗಳು) ಹಾಗೂ ಅಮಾ (4 ವರ್ಷ) ಅವರೊಂದಿಗೆ ಗುಹೆಯಲ್ಲಿ ವಾಸಿಸುತ್ತಿರುವುದು ಕಂಡುಬಂದಿದೆ. ಅವರು ಮಹಿಳೆಯನ್ನು ವಿಚಾರಿಸಿದಾಗ ತನಗೆ ಅರಣ್ಯದೊಳಗೆ ಉಳಿದು ದೇವರ ಧ್ಯಾನ ಮಾಡಲು ಆಸಕ್ತಿ ಇರುವುದರಿಂದ ಗೋವಾದಿಂದ ಮಕ್ಕಳೊಂದಿಗೆ ಇಲ್ಲಿಗೆ ಬಂದು ಗುಡ್ಡದ ಮೇಲಿನ ಗುಹೆಯಲ್ಲಿ ಉಳಿದುಕೊಂಡ ಧ್ಯಾನ ಮಾಡುತ್ತಿರುವುದಾಗಿ ಹೇಳಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ತಿಳಿಸಿದೆ.

ಗೋಕರ್ಣದ ರಾಮತೀರ್ಥ ಗುಡ್ಡವು ಈ ಹಿಂದೆ ಭೂಕುಸಿತವಾದ ಅಪಾಯಕಾರಿ ಸ್ಥಳವಾಗಿದ್ದು, ವಿಷಕಾರಿ ಜಂತುಗಳು ಇರುವ ಸ್ಥಳವಾಗಿದೆ. ಈ ಕಾರಣದಿಂದ ಈ ಸ್ಥಳದ ಅಪಾಯದ ಬಗ್ಗೆ ರಷ್ಯಾದ ಮಹಿಳೆಗೆ ತಿಳಿಸಿ ಮಕ್ಕಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಮನವರಿಕೆ ಮಾಡಲಾಯಿತು. ನಂತರ ವಿದೇಶಿ ಮಹಿಳೆಯ ಇಚ್ಛೆಯಂತೆ ಅವರನ್ನು ಕುಮಟಾ ತಾಲೂಕಿನ ಬಂಕಿಕೊಡ್ಲ ಗ್ರಾಮದಲ್ಲಿರುವ ಸರ್ಕಾರೇತರ ಸಂಸ್ಥೆಯಾದ ಶಂಕರಪ್ರಸಾದ ಫೌಂಡೇಶನ್‌ಗೆ ಸಂಬಂಧಿಸಿದ ಯೋಗರತ್ನ ಸರಸ್ವತಿ ಸ್ವಾಮೀಜಿ (ಮಹಿಳಾ ಸ್ವಾಮೀಜಿ) ಅವರ ಆಶ್ರಮಕ್ಕೆ ಕರೆದುಕೊಂಡು ಹೋಗಲಾಯಿತು. ಅವರ ಪಾಸ್‌ಪೋರ್ಟ್ ಹಾಗೂ ವೀಸಾದ ಬಗ್ಗೆ ವಿಚಾರಿಸಿದಾಗ, ಅವರು ಅಧ್ಯಾತ್ಮದ ಬಗ್ಗೆ ಹೆಚ್ಚು ಒಲವಿರುವವರಾಗಿದ್ದರಿಂದ ತಾನು ಭಾರತದಲ್ಲೇ ಉಳಿಯಬೇಕು ಎಂಬ ಬಯಕೆಯಿಂದ ಅದರ ಬಗ್ಗೆ ಸರಿಯಾದ ಮಾಹಿತಿ ನೀಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಮಹಿಳೆಯಿಂದ ಅಗತ್ಯ ಮಾಹಿತಿ ಪಡೆಯಬೇಕಾಗಿದ್ದರಿಂದ ಮಹಿಳಾ ಪೊಲೀಸ್ ಅಧಿಕಾರಿ, ಯೋಗ ರತ್ನ ಸರಸ್ವತೀ ಸ್ವಾಮೀಜಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳ ಮೂಲಕ ಆಪ್ತ ಸಮಾಲೋಚನೆ ನಡೆಸಲಾಯಿತು.
ಆಗ ರಷ್ಯನ್ ಮಹಿಳೆಯು ತನ್ನ ಪಾಸ್‌ಪೋರ್ಟ್ ಹಾಗೂ ವೀಸಾ ಗುಹೆಯ ಬಳಿ ಅಥವಾ ಸಮೀಪದ ಕಾಡಿನಲ್ಲಿ ಬಿದ್ದಿರಬಹುದು ಎಂದು ತಿಳಿಸಿದ್ದಾರೆ. ನಂತರ ಈ ಮಹಿಳೆ ಹಾಗೂ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಸ್ವೀಕಾರ ಕೇಂದ್ರಕ್ಕೆ ದಾಖಲಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಅರಣ್ಯ ಇಲಾಖೆಯ ಜೊತೆಗೂಡಿ ಪೊಲೀಸರು ರಾಮತೀರ್ಥದ ಗುಡ್ಡದ ಬಳಿ ಮಹಿಳೆಯ ವೀಸಾ ಹಾಗೂ ಪಾಸ್‌ಪೋರ್ಟ್ ಹುಡುಕಾಟ ನಡೆಸಿದಾಗ ಅದು ಸಿಕ್ಕಿದೆ. ಆದರೆ ವೀಸಾ ಅವಧಿ 17-04-2017ಕ್ಕೆ ಮುಕ್ತಾಯವಾಗಿರುವುದು ಕಂಡುಬಂದಿದೆ. ಹೀಗಾಗಿ ಈ ಬಗ್ಗೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಸಂಪರ್ಕಿಸಿ ಮಾಹಿತಿ ನೀಡಲಾಯಿತು. ಹಾಗೂ ಅವರ ಜೊತೆ ಪತ್ರ ವ್ಯವಹಾರ ನಡೆಸಿ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ರಷ್ಯಾಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಮುಂದಿನ ಕ್ರಮಕ್ಕಾಗಿ ಜುಲೈ 14ರಂದು ಬೆಂಗಳೂರಿನ ಶಾಂತಿನಗರದಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ(FRRO)ಗೆ ಅವರನ್ನು ಹಾಜರುಪಡಿಸಲಾಗುತ್ತದೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ