
ಮುಂಬೈ : ಓಂ ನಮಃ ಶಿವಾಯ ಮತ್ತು ಅದಾಲತ್ ಎಂಬ ಜನಪ್ರಿಯ ದೂರದರ್ಶನ ಕಾರ್ಯಕ್ರಮಗಳನ್ನು ನಿರ್ಮಿಸಿದ ಹಿರಿಯ ನಟ-ನಿರ್ಮಾಪಕ ಧೀರಜಕುಮಾರ ಮಂಗಳವಾರ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಕುಟುಂಬದ ಸ್ನೇಹಿತರೊಬ್ಬರು ತಿಳಿಸಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.
ಧೀರಜಕುಮಾರ ತೀವ್ರ ನ್ಯುಮೋನಿಯಾದಿಂದ ಬಳಲುತ್ತಿದ್ದರು ಮತ್ತು ಅವರನ್ನು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು.
“ಅವರು ಇಂದು (ಮಂಗಳವಾರ) ಬೆಳಿಗ್ಗೆ 11:00 ಗಂಟೆಗೆ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ನ್ಯುಮೋನಿಯಾದಿಂದ ನಿಧನರಾದರು. ಅವರು ಅಸ್ವಸ್ಥರಾಗಿದ್ದರು ಮತ್ತು ಶನಿವಾರ ಜ್ವರ, ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ವಯೋಸಹಜ ಕಾರಣ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು” ಎಂದು ಅವರ ಆಪ್ತ ಮಿತ್ರ ಮತ್ತು ಕುಟುಂಬ ಸ್ನೇಹಿತ ಅಜಯ ಶುಕ್ಲಾ ತಿಳಿಸಿದ್ದಾರೆ.

ಧೀರಜಕುಮಾರ ಹಿಂದಿ ಮತ್ತು ಪಂಜಾಬಿ ಚಲನಚಿತ್ರೋದ್ಯಮಗಳಲ್ಲಿ ಹೆಸರುವಾಸಿಯಾಗಿದ್ದರು. ಅವರ ವೃತ್ತಿಜೀವನವು ಸಿನಿಮಾ ಮತ್ತು ದೂರದರ್ಶನ ಎರಡರಲ್ಲೂ ಐದು ದಶಕಗಳಿಗೂ ಹೆಚ್ಚು ಕಾಲ ವ್ಯಾಪಿಸಿದೆ. ಅವರು 1965 ರ ಪ್ರತಿಭಾ ಸ್ಪರ್ಧೆಯಲ್ಲಿ ಫೈನಲಿಸ್ಟ್ ಆಗಿ ಮನರಂಜನಾ ಉದ್ಯಮದಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು, ಇದರಲ್ಲಿ ಸೂಪರ್ ಸ್ಟಾರ್ ರಾಜೇಶ ಖನ್ನಾ ಮತ್ತು ಚಲನಚಿತ್ರ ನಿರ್ಮಾಪಕ ಸುಭಾಷ ಘಾಯ್ ಕೂಡ ಇದ್ದರು.
1970ರಲ್ಲಿ ತೆರೆಕಂಡ ರಾತೋಂ ಕಾ ರಾಜಾ ಚಿತ್ರದಿಂದ ಪ್ರಾರಂಭಿಸಿ, ಅವರು ಹಲವಾರು ಹಿಂದಿ ಮತ್ತು ಪಂಜಾಬಿ ಚಿತ್ರಗಳಲ್ಲಿ ನಟಿಸಿದರು. ನಂತರ ಅವರು ರೋಟಿ ಕಪಡಾ ಔರ್ ಮಕಾನ್ (1974), ಸರ್ಗಮ್ (1979) ಮತ್ತು ಕ್ರಾಂತಿ (1981) ಸೇರಿ ಅನೇಕ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದರು.
ತಮ್ಮ ಚಲನಚಿತ್ರ ವೃತ್ತಿಜೀವನದ ಹೊರತಾಗಿ, ಧೀರಜಕುಮಾರ ತಮ್ಮ ನಿರ್ಮಾಣ ಕಂಪನಿಯಾದ ಕ್ರಿಯೇಟಿವ್ ಐ ಲಿಮಿಟೆಡ್ ಮೂಲಕ ಭಾರತೀಯ ದೂರದರ್ಶನದಲ್ಲಿ ಶಾಶ್ವತವಾದ ಪ್ರಭಾವ ಬೀರಿದರು. ಅವರು ಹಲವಾರು ಯಶಸ್ವಿ ಮತ್ತು ದೀರ್ಘಕಾಲೀನ ವಿಶೇಷವಾಗಿ ಪೌರಾಣಿಕ ಮತ್ತು ಭಕ್ತಿ ಪ್ರಕಾರದ ಟಿವಿ ಧಾರವಾಹಿಗಳನ್ನು ನಿರ್ಮಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ