ಶಿವಮೊಗ್ಗ: ಸದ್ಯದಲ್ಲಿಯೇ ಮದುವೆಯಾಗಬೇಕಿದ್ದ ಜೋಡಿ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮದುವೆ ನಿಶ್ಚಯವಾಗಿದ್ದ ಜೋಡಿ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ (Shivamogga) ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್ ಬಳಿ ಸಂಭವಿಸಿದೆ ಎಂದು ವರದಿಯಾಗಿದೆ.
ಶಿಕಾರಿಪುರ ತಾಲೂಕಿನ ಮಟ್ಟಿಕೊಪ್ಪ ಗ್ರಾಮದ ರೇಖಾ (20) ಹಾಗೂ ಗಂಗೊಳ್ಳಿ ಗ್ರಾಮದ ಬಸವನಗೌಡ ದ್ಯಾಮನಗೌಡ (25) ಎಂಬವರು ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಗಾರ್ಮೆಂಟ್ಸ್ ಕೆಲಸಕ್ಕೆ ತೆರಳುವವರನ್ನು ಶಿರಾಳಕೊಪ್ಪ ಕಡೆಯಿಂದ ಕರೆದೊಯ್ಯುತ್ತಿದ್ದ ಕಾರು ಮತ್ತು ಬಸವನಗೌಡ ಮತ್ತು ರೇಖಾ ಸಂಚರಿಸುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್ ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದಿದೆ. ಕಾರಿನ ಮುಂಭಾಗ ತೀವ್ರ ಹಾನಿಗೊಳಗಾಗಿದೆ.
ಕೆಲ ದಿನಗಳ ಹಿಂದಷ್ಟೇ ಇವರ ಮದುವೆ ನಿಶ್ಚಯವಾಗಿತ್ತು ಎಂದು ಹೇಳಲಾಗಿದೆ. ಎರಡೂ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ