ಭಾರತದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಿಂದಾದ ಹಾನಿಯನ್ನು ದೃಢಪಡಿಸಿದ ಜೈಶ್-ಎ-ಮೊಹಮ್ಮದ್ (ಜೆಇಎಂ) ಕಮಾಂಡರ್ ಮಸೂದ್ ಇಲ್ಯಾಸ್ ಕಾಶ್ಮೀರಿ, ಮೇ 7 ರಂದು ಬಹಾವಲ್ಪುರದಲ್ಲಿ ಭಾರತ ನಡೆಸಿದ ನಿಖರ ದಾಳಿಯು ಜೆಎಎಂ ಮುಖ್ಯಸ್ಥ ಮಸೂದ್ ಅಜರ್ ಕುಟುಂಬವನ್ನು ಛಿದ್ರಗೊಳಿಸಿದೆ ಎಂದು ಕಾರ್ಯಕ್ರಮವೊಂದರಲ್ಲಿ ಒಪ್ಪಿಕೊಂಡಿದ್ದಾನೆ.
ತಮ್ಮ ಅಡಗುಣತಾಣಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ಹೇಗೆ ಪ್ರವೇಶಿಸಿ ದಾಳಿ ಮಾಡಿದವು ಎಂಬುದರ ಕುರಿತು ಜೆಇಎಂ ಕಮಾಂಡರ್ ಮಸೂದ್ ಇಲ್ಯಾಸ್ ಕಾಶ್ಮೀರಿ ವಿವರಿಸುವ ವಿಡಿಯೋವೊಂದು ಆನ್ ಲೈನ್ ನಲ್ಲಿ ಭಾರಿ ವೈರಲ್ ಆಗುತ್ತಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಏಪ್ರಿಲ್ 22 ರಂದು ಪಾಕಿಸ್ತಾನ ನಡೆಸಿದ ಪಹಲ್ಗಾಮ್ ದಾಳಿಯ ನಂತರ ಭಾರತದ ಆಪರೇಷನ್ ಸಿಂಧೂರ್ ಜೆಇಎಂನ ಆಂತರಿಕ ನೈತಿಕತೆಯನ್ನು ಹಾಳುಮಾಡಿದೆ ಎಂದು ಕಾಶ್ಮೀರಿ ಒಪ್ಪಿಕೊಂಡಿದ್ದಾನೆ.
“ಭಯೋತ್ಪಾದನೆ ಅಪ್ಪಿಕೊಂಡು, ಈ ದೇಶದ ಗಡಿಗಳನ್ನು ರಕ್ಷಿಸಲು ನಾವು ದೆಹಲಿ, ಕಾಬೂಲ್ ಮತ್ತು ಕಂದಹಾರ್‌ನಲ್ಲಿ ಹೋರಾಡಿದ್ದೇವೆ. ಎಲ್ಲವನ್ನೂ ತ್ಯಾಗ ಮಾಡಿದ ನಂತರ, ಮೇ 7 ರಂದು ಮೌಲಾನಾ ಮಸೂದ್ ಅಜರ್‌ನ ಕುಟುಂಬವನ್ನು ಬಹವಾಲ್ಪುರದಲ್ಲಿ ಭಾರತೀಯ ಪಡೆಗಳು ಛಿದ್ರಗೊಳಿಸಿದವು” ಎಂದು ಕಾಶ್ಮೀರಿ ಉರ್ದುವಿನಲ್ಲಿ ಹೇಳಿದ್ದಾನೆ. ಬಂದೂಕು ಹಿಡಿದ ಹಲವು ಭದ್ರತಾ ಸಿಬ್ಬಂದಿ ಆತನನ್ನು ಸುತ್ತುವರೆದಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ವೀಡಿಯೊ ವೈರಲ್ ಆಗಿರುವುದು ಬಹಾವಲ್ಪುರದಲ್ಲಿ ಈ ಭಯೋತ್ಪಾದಕ ಸಂಘಟನೆಗಳ ಆಳವಾದ ಬೇರುಗಳು ಮತ್ತು ಭಯೋತ್ಪಾದಕ ನಾಯಕತ್ವವನ್ನು ರಕ್ಷಿಸುವಲ್ಲಿ ಪಾಕಿಸ್ತಾನದ ಒಳಗೊಳ್ಳುವಿಕೆಯನ್ನು ಬಹಿರಂಗಪಡಿಸುತ್ತದೆ ಎಂದು ಭಾರತದ ಉನ್ನತ ಗುಪ್ತಚರ ಮೂಲಗಳು ತಿಳಿಸಿವೆ.
ಬಹಾವಲ್ಪುರದ ಮೇಲೆ ಭಾರತೀಯ ವಾಯುದಾಳಿಯಲ್ಲಿ ತನ್ನ ಕುಟುಂಬದ 10 ಸದಸ್ಯರು ಸಾವಿಗೀಡಾಗಿದ್ದಾರೆ ಎಂದು ಅಜರ್ ಹೇಳಿಕೊಂಡಿದ್ದರು.
ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಅವರು ಭಾರತದ ವಾಯು ರಕ್ಷಣಾ ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿ ವ್ಯವಸ್ಥೆಗಳು ಐದು ಪಾಕಿಸ್ತಾನಿ ಯುದ್ಧ ವಿಮಾನಗಳನ್ನು ಮತ್ತು ವಾಯು ಕಣ್ಗಾವಲು, ವಿಶೇಷ ಮಿಲಿಟರಿ ವಿಮಾನವಾದ AEW&C/ELINT ವಿಮಾನವನ್ನು ನಾಶಪಡಿಸಿವೆ ಎಂದು ಹೇಳಿದ್ದರು.
ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಉನ್ನತ ಕಮಾಂಡರ್ ಮಸೂದ್ ಇಲ್ಯಾಸ್ ಕಾಶ್ಮೀರಿ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆದ ನಂತರ ಹೊಸ ವಿವಾದ ಭುಗಿಲೆದ್ದಿದೆ. ಅದರಲ್ಲಿ ಆತ ಪಾಕಿಸ್ತಾನ ಸೇನೆ ಮತ್ತು ಅದರ ಮುಖ್ಯಸ್ಥ ಅಸಿಮ್ ಮುನೀರ್ ಭಾರತದ ಆಪರೇಷನ್ ಸಿಂಧೂರದಲ್ಲಿ ಕೊಲ್ಲಲ್ಪಟ್ಟವರ “ಅಂತ್ಯಕ್ರಿಯೆಗಳಿಗೆ ಜನರಲ್‌ಗಳನ್ನು ಕಳುಹಿಸಿದ್ದಾರೆ” ಎಂದು ಹೇಳಿಕೊಂಡಿದ್ದಾನೆ.
ದಶಕಗಳಿಂದ, ಪಾಕಿಸ್ತಾನವು ತನ್ನ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪುಗಳನ್ನು ಪ್ರಾಯೋಜಿಸುವುದನ್ನು ಅಧಿಕೃತವಾಗಿ ನಿರಾಕರಿಸಿದೆ. ಆದರೂ 38 ನೇ ವಾರ್ಷಿಕ ಮಿಷನ್ ಮುಸ್ತಫಾ ಸಮ್ಮೇಳನದಲ್ಲಿ ಮಾತನಾಡಿದ ಕಾಶ್ಮೀರಿ, ಮುನೀರ್ ನೇತೃತ್ವದ ಪಾಕಿಸ್ತಾನದ ಸೇನೆಯು ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತೀಯ ಸೇನಾ ಕಾರ್ಯಾಚರಣೆಗಳಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರ ಅಂತ್ಯಕ್ರಿಯೆಗಳಲ್ಲಿ ಭಾಗವಹಿಸಲು ಹಿರಿಯ ಅಧಿಕಾರಿಗಳನ್ನು ಕಳುಹಿಸಿದೆ ಎಂದು ಬಹಿರಂಗವಾಗಿ ಆರೋಪಿಸಿದ್ದಾನೆ.
ಮೇ ತಿಂಗಳಲ್ಲಿ ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಅಮೆರಿಕವು ಭಯೋತ್ಪಾದಕ ಎಂದು ಹೆಸರಿಸಿದ ಅಬ್ದುರ್ ರೌಫ್ ಅಂತ್ಯಕ್ರಿಯೆಯಲ್ಲಿ ಪ್ರಾರ್ಥನೆಗಳನ್ನು ನಡೆಸುತ್ತಿರುವ ಛಾಯಾಚಿತ್ರವನ್ನು ಬಹಿರಂಗಪಡಿಸಿದ್ದರು. ಹತ್ಯೆಗೀಡಾದವರನ್ನು ಪಾಕಿಸ್ತಾನದ ರಾಷ್ಟ್ರಧ್ವಜದಲ್ಲಿ ಸುತ್ತಿ “ಸರ್ಕಾರಿ ಗೌರವ” ನೀಡಲಾಗಿತ್ತು.
“ನಮ್ಮ ಮಟ್ಟಿಗೆ ಹೇಳುವುದಾದರೆ, ಈ ಸೌಲಭ್ಯಗಳಲ್ಲಿ ಕೊಲ್ಲಲ್ಪಟ್ಟ ವ್ಯಕ್ತಿಗಳು ಭಯೋತ್ಪಾದಕರು. ಭಯೋತ್ಪಾದಕರಿಗೆ ಸರ್ಕಾರಿ ಅಂತ್ಯಕ್ರಿಯೆ ನೀಡುವುದು ಪಾಕಿಸ್ತಾನದಲ್ಲಿ ಒಂದು ಪದ್ಧತಿಯಾಗಿರಬಹುದು ಎಂದು ಮಿಶ್ರಿ ಟೀಕಿಸಿದ್ದರು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಡಿ ಜೈಶ್-ಎ-ಮೊಹಮ್ಮದ್ (JeM) ಮತ್ತು ಲಷ್ಕರ್-ಎ-ತೊಯ್ಬಾ (LeT) ಉಗ್ರ ಸಂಘಟನೆಗಳ ಮೂಲಸೌಕರ್ಯವನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನ ಮತ್ತು ಪಿಒಕೆ ಒಳಗಿನ ಒಂಬತ್ತು ಭಯೋತ್ಪಾದಕ ಕೇಂದ್ರಗಳ ಮೇಲೆ ನಡೆಸಿ ಧ್ವಂಸಗೊಳಿಸದ್ದವು. ಬಹವಾಲ್ಪುರ್, ಕೋಟ್ಲಿ ಮತ್ತು ಮುರಿಡ್ಕೆಯಲ್ಲಿನ ಸ್ಥಳಗಳು ಸೇರಿದಂತೆ ಒಂಬತ್ತು ಉಗ್ರರ ಕೇಂದ್ರಗಳು ಹಾನಿಯಾಗಿರುವುದಾಗಿ ಪಾಕಿಸ್ತಾನ ಕೂಡಾ ಒಪ್ಪಿಕೊಂಡಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ