ವಿಶ್ವಸಂಸ್ಥೆ : ಇತರರು ಅಸಾಧ್ಯವೆಂದು ಕರೆದದ್ದನ್ನು ನಾನು ಕೇವಲ ಏಳು ತಿಂಗಳಲ್ಲಿ ಸಾಧಿಸಿದ್ದೇನೆ. ಏಳು “ಅಂತ್ಯವಿಲ್ಲದ” ಯುದ್ಧಗಳನ್ನು ಕೊನೆಗೊಳಿಸಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 80ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದ ಮಾತನಾಡುವಾಗ ಹೇಳಿಕೊಂಡಿದ್ದಾರೆ.
ಈ ವರ್ಷದ ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ತಲುಪುವುದರಲ್ಲಿ ತಮ್ಮ ಪಾತ್ರವಿದೆ ಎಂಬ ತಮ್ಮ ಈ ಮೊದಲಿನ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಟ್ರಂಪ್ ಅವರ ಹೇಳಿಕೆಯನ್ನು ಭಾರತ ದೃಢವಾಗಿ ನಿರಾಕರಿಸಿದರೂ, ಅಮೆರಿಕದ ಅಧ್ಯಕ್ಷರು ತಮ್ಮ ಹೇಳಿಕೆಯನ್ನು ಪದೇ ಪದೇ ಪುನರುಚ್ಚರಿಸುತ್ತಿದ್ದಾರೆ. ಮತ್ತು ಮಂಗಳವಾರ ವಿಶ್ವಸಂಸ್ಥೆಯಲ್ಲಿ ಅದನ್ನೇ ಪುನರಾವರ್ತಿಸಿದ್ದಾರೆ.
“ಕೇವಲ 7 ತಿಂಗಳಲ್ಲಿ, ನಾನು 7 ಅಂತ್ಯವಿಲ್ಲದ ಯುದ್ಧಗಳನ್ನು ಕೊನೆಗೊಳಿಸಿದ್ದೇನೆ” ಎಂದು ಟ್ರಂಪ್ ವಿಶ್ವ ನಾಯಕರ ಮುಂದೆ ಹೇಳಿಕೊಂಡಿದ್ದಾರೆ. ಕೆಲವು 31 ವರ್ಷಗಳಿಂದ ನಡೆಯುತ್ತಿದ್ದವು, ಒಂದು 36 ವರ್ಷಗಳಿಂದ ನಡೆಯುತ್ತಿತ್ತು. ನಾನು 7 ಯುದ್ಧಗಳನ್ನು ಕೊನೆಗೊಳಿಸಿದೆ ಮತ್ತು ಎಲ್ಲಾ ಸಂದರ್ಭಗಳಲ್ಲಿ ಯುದ್ಧಗಳಿಂದ ಸಾವಿರಾರು ಜನರು ಕೊಲ್ಲಲ್ಪಟ್ಟರು ಎಂದು ಹೇಳಿದರು.
ಕಾಂಬೋಡಿಯಾ ಮತ್ತು ಥೈಲ್ಯಾಂಡ್, ಸೆರ್ಬಿಯಾ, ಕಾಂಗೋ ಮತ್ತು ರುವಾಂಡಾ, ಪಾಕಿಸ್ತಾನ ಮತ್ತು ಭಾರತ, ಇಸ್ರೇಲ್ ಮತ್ತು ಇರಾನ್, ಈಜಿಪ್ಟ್ ಮತ್ತು ಇಥಿಯೋಪಿಯಾ, ಮತ್ತು ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಸೇರಿದಂತೆ ಹಲವಾರು ಯುದ್ಧಗಳನ್ನು ತಾನು ಮುಕ್ತಾಯಗೊಳಿಸಿದ್ದೇನೆಂದು ಟ್ರಂಪ್ ಪಟ್ಟಿ ಮಾಡಿದರು.
ನೊಬೆಲ್ ಪ್ರಶಸ್ತಿ ಪಡೆಯುವ ಬಯಕೆಯನ್ನು ಎಂದಿಗೂ ಮರೆಮಾಚದ ಟ್ರಂಪ್, ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದ ನಂತರ ಉಂಟಾದ ಮಿಲಿಟರಿ ಬಿಕ್ಕಟ್ಟಿನ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ತಲುಪಲು ಮಧ್ಯಸ್ಥಿಕೆ ವಹಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದೇನೆ ಎಂದು ಹಲವಾರು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಮಾರಕ ದಾಳಿಯ ನಂತರ ಭಾರತವು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿತ್ತು.
ಮೇ 10 ರಂದು, ವಾಷಿಂಗ್ಟನ್ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಗಳ ನಂತರ ಭಾರತ ಮತ್ತು ಪಾಕಿಸ್ತಾನ “ಪೂರ್ಣ ಮತ್ತು ತಕ್ಷಣದ” ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಡಾಗಿನಿಂದ ಈ ಹಕ್ಕನ್ನು ಪ್ರತಿಪಾದಿಸಿದ್ದಾರೆ. ಈಗ ವಿಶ್ವಸಂಸ್ಥೆಯಲ್ಲಿಯೂ ಇದನ್ನು ಹೇಳಿಕೊಂಡಿದ್ದಾರೆ.
ಪಾಕಿಸ್ತಾನದ ಜೊತೆ ಕದನ ವಿರಾಮಕ್ಕೆ ತಲುಪಲು ಮೂರನೇ ದೇಶದ ಮಧ್ಯಸ್ಥಿಕೆ ಇಲ್ಲ. ಎರಡು ದೇಶಗಳ ಮಿಲಿಟರಿಗಳ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ (DGMOs) ನಡುವಿನ ನೇರ ಮಾತುಕತೆಗಳ ಮೂಲಕ ಕದನ ವಿರಾಮಕ್ಕೆ ಬರಲಾಗಿದೆ ಎಂದು ಭಾರತ ನಿರಂತರವಾಗಿ ಸಮರ್ಥಿಸಿಕೊಂಡಿದೆ.
ಈ ತಿಂಗಳ ಅಪರೂಪದ ನಡೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಕದನ ವಿರಾಮದಲ್ಲಿ ಮೂರನೇ ದೇಶದ ಮಧ್ಯಸ್ಥಿಕೆ ಇರಲಿಲ್ಲ ಎಂಬ ಭಾರತ ಹೇಳುತ್ತ ಬಂದಿದ್ದನ್ನು ಒಪ್ಪಿಕೊಂಡಿದ್ದಾರೆ. ದ್ವಿಪಕ್ಷೀಯ ವಿಷಯಗಳಲ್ಲಿ “ಭಾರತ ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಗೆ ಎಂದಿಗೂ ಒಪ್ಪಲಿಲ್ಲ” ಎಂದು ಅವರು ಅಲ್ ಜಜೀರಾ ಸುದ್ದಿವಾಹಿನಿಗೆ ತಿಳಿಸಿದ್ದಾರೆ. “ಮೂರನೇ ವ್ಯಕ್ತಿಯ ಒಳಗೊಳ್ಳುವಿಕೆಗೆ ನಮ್ಮ ಅಭ್ಯಂತರವಿಲ್ಲ, ಆದರೆ ಭಾರತವು ಇದು ದ್ವಿಪಕ್ಷೀಯ ವಿಷಯ ಎಂದು ಸ್ಪಷ್ಟವಾಗಿ ಹೇಳುತ್ತಿದೆ” ಎಂದು ದಾರ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಬಗ್ಗೆ ಟ್ರಂಪ್ ಟೀಕೆ
ಏಳು ಯುದ್ಧಗಳನ್ನು ಕೊನೆಗೊಳಿಸುವಲ್ಲಿ ಪಾತ್ರ ವಹಿಸಿದ್ದೇನೆ ಎಂದು ಹೇಳಿಕೊಂಡ ಟ್ರಂಪ್, ವಿಶ್ವಸಂಸ್ಥೆಯ ಬಗ್ಗೆ ತಮ್ಮ ಟೀಕೆಯನ್ನು ದ್ವಿಗುಣಗೊಳಿಸಿದ್ದಾರೆ. “ವಿಶ್ವಸಂಸ್ಥೆ ಮಾಡುವ ಬದಲು ನಾನು ಈ ಕೆಲಸಗಳನ್ನು ಮಾಡಬೇಕಾಗಿ ಬಂದಿದೆ ಮತ್ತು ದುಃಖಕರವೆಂದರೆ, ವಿಶ್ವಸಂಸ್ಥೆ ಅವುಗಳಲ್ಲಿ ಯಾವುದಕ್ಕೂ ಸಹಾಯ ಮಾಡಲು ಪ್ರಯತ್ನಿಸಲಿಲ್ಲ ಎಂದು ಟ್ರಂಪ್ ಹೇಳಿದರು.
“ನಾನು ಏಳು ಯುದ್ಧಗಳನ್ನು ಕೊನೆಗೊಳಿಸಿದೆ, ಪ್ರತಿಯೊಂದು ರಾಷ್ಟ್ರದ ನಾಯಕರೊಂದಿಗೆ ವ್ಯವಹರಿಸಿದೆ ಆದರೆ ವಿಶ್ವಸಂಸ್ಥೆಯಿಂದ ಇದಕ್ಕೆ ಫೋನ್ ಕರೆ ಸಹ ಬರಲಿಲ್ಲ” ಎಂದು ಟ್ರಂಪ್ ಹೇಳಿದರು. “ವಿಶ್ವಸಂಸ್ಥೆಯಿಂದ ನನಗೆ ಸಿಕ್ಕಿದ್ದು ಎಸ್ಕಲೇಟರ್ ಮಾತ್ರ, ಅದು ಮೇಲಕ್ಕೆ ಹೋಗುವಾಗ ಮಧ್ಯದಲ್ಲಿಯೇ ನಿಂತುಹೋಯಿತು. ಪ್ರಥಮ ಮಹಿಳೆ (ಮೆಲಾನಿಯಾ ಟ್ರಂಪ್) ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ, ಅವರು ಬೀಳುತ್ತಿದ್ದರು. ಆದರೆ ಅವರು ಉತ್ತಮ ಸ್ಥಿತಿಯಲ್ಲಿದ್ದಾರೆ. “ನಾವಿಬ್ಬರೂ ಉತ್ತಮ ಸ್ಥಿತಿಯಲ್ಲಿದ್ದೇವೆ” ಎಂದು ಟ್ರಂಪ್ ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ