ವಿಮಾನದ ಚಕ್ರದ ಬಳಿ ಅಡಗಿಕೊಂಡು 1000 ಕಿಮೀ ಪ್ರಯಾಣಿಸಿ ದೆಹಲಿಗೆ ಬಂದ 13 ವರ್ಷದ ಅಫ್ಘಾನ್ ಬಾಲಕ; ಬದುಕುಳಿದದ್ದೇ ಪವಾಡ…!

ನವದೆಹಲಿ: ಅಪಘಾನಿಸ್ತಾನದ ಕಾಬೂಲಿನಿಂದ ದೆಹಲಿಗೆ ವಿಮಾನದಲ್ಲಿ ಅದರ ಚಕ್ರದ ಬಳಿ ಲ್ಯಾಂಡಿಂಗ್ ಗೇರಿನಲ್ಲಿ ಅಡಗಿಕೊಂಡು 13 ವರ್ಷದ ಅಫ್ಘಾನ್ ಬಾಲಕ ಪ್ರಯಾಣ ಮಾಡಿದ್ದಾನೆ…!
ಈಗ ಈತನನ್ನು ಪುನಃ ಅಫ್ಘಾನಿಸ್ತಾನಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ವಿಮಾನವು ಇರಾನ್‌ಗೆ ಹೋಗುತ್ತಿದೆ ಎಂದು ತಪ್ಪಾಗಿ ಭಾವಿಸಿದ ಬಾಲಕ, ಕಾಬೂಲಿನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಬರುವ KAM ಏರ್ ವಿಮಾನ RQ4401 ಏರಿದ್ದಾನೆ. ಮತ್ತು ವಿಮಾನದ ಹಿಂದಿನ ಚಕ್ರದ ಕುಳಿಯಲ್ಲಿ ಅಡಗಿಕೊಂಡಿದ್ದಾನೆ. ವಿಮಾನವು ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾರತೀಯ ಕಾಲಮಾನ ಬೆಳಿಗ್ಗೆ 8:46 ಕ್ಕೆ ಹೊರಟು 10:20 ಕ್ಕೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು. ವಿಮಾನ ಇಳಿದ ನಂತರ, ಬಾಲಕ ವಿಮಾನದ ಬಳಿಯ ನಿರ್ಬಂಧಿತ ಪ್ರದೇಶದಲ್ಲಿ ನಡೆದಾಡುತ್ತಿರುವುದು ಕಂಡುಬಂದ ನಂತರ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಕ್ಷಣವೇ ಮಾಹಿತಿ ನೀಡಲಾಯಿತು. ಈತನ ಅಪಾಯಕಾರಿ ಪ್ರಯಾಣವು ಭಾರತೀಯ ಮತ್ತು ಅಫ್ಘಾನ್ ವಾಯುಯಾನ ಭದ್ರತಾ ಸಂಸ್ಥೆಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲು ಎಚ್ಚರಿಕೆ ನೀಡಿದಂತಾಗಿದೆ.

ಕಾಬೂಲ್‌ನಲ್ಲಿ ಭದ್ರತಾ ತಪಾಸಣೆಗಳನ್ನು ತಪ್ಪಿಸಿಕೊಂಡು ಬಾಲಕ ವಿಮಾನದ ಟೈರ್‌ ಕುಳಿಯಲ್ಲಿ ಯಾರಿಗೂ ಕಾಣದಂತೆ ಅಡಗಿಕೊಂಡು ಹೇಗೆ ಪ್ರಯಾಣಿಸಿದ ಎಂಬುದು ಈಗ ಪ್ರಶ್ನೆಯಾಗಿದೆ. ಭದ್ರತೆ ಕ್ಯಾಮರಾಗಳು ಬಾಲಕ ವಿಮಾನ ಲ್ಯಾಂಡಿಂಗ್ ಆದ ನಂತರ ವಿಮಾನದ ಚಕ್ರದ ಕುಳಿಯಿಂದ ಹೊರಬರುತ್ತಿರುವುದನ್ನು ತೋರಿಸಿದವು. ಟರ್ಮಿನಲ್ 3 ರಲ್ಲಿನ ನಿರ್ವಾಹಕ ನಿರ್ಬಂಧಿತ ಏಪ್ರನ್ ಪ್ರದೇಶದಲ್ಲಿ ಬಾಲಕ ಅಲೆದಾಡುತ್ತಿರುವುದನ್ನು ಗುರುತಿಸಿ ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಬಾಲಕನನ್ನು ವಶಕ್ಕೆ ಪಡೆದುಕೊಂಡಿತು ಮತ್ತು ನಂತರ ವಲಸೆ ಅಧಿಕಾರಿಗಳು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಆತನನ್ನು ಪ್ರಶ್ನಿಸಿದರು. ನಂತರ “ಈತನನ್ನು ಭಾನುವಾರ ಸಂಜೆ 3:31 ಕ್ಕೆ ಅದೇ ವಿಮಾನಯಾನ ಸಂಸ್ಥೆಯಾದ KAM ಏರ್‌ನಲ್ಲಿ ವಾಪಸ್ ಅಪಘಾನಿಸ್ತಾನಕ್ಕೆ ಕಳುಹಿಸಲಾಯಿತು” ಎಂದು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಆತ ಅಪ್ರಾಪ್ತನಾಗಿರುವುದರಿಂದ ಮತ್ತು ವೀಸಾ ಇಲ್ಲದೆ ದೇಶವನ್ನು ಪ್ರವೇಶಿಸಿದ್ದರಿಂದ, ಆತನಿಗೆ ದಂಡ ವಿಧಿಸಲಾಗಿಲ್ಲ. ಆತನನ್ನು ಸುರಕ್ಷಿತವಾಗಿ ಕುಟುಂಬಕ್ಕೆ ಹಿಂದಿರುಗಿಸುವುದು ನಮ್ಮ ಆದ್ಯತೆಯಾಗಿತ್ತು” ಎಂದು ಅಧಿಕಾರಿ ಹೇಳಿದ್ದಾರೆ. ಉನ್ನತ ಮಟ್ಟದ ಚರ್ಚೆಗಳ ನಂತರ ಗಡೀಪಾರು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬಾಲಕನನ್ನು ವಾಪಸ್ ಕಳುಹಿಸುವಲ್ಲಿ ಪ್ರಮಾಣಿತ ಕಾರ್ಯವಿಧಾನಗಳನ್ನು ಅನುಸರಿಸಲಾಯಿತು ಎಂದು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ಬಾಲಕ ಬದುಕಿ ಉಳಿದಿದ್ದೇ ಪವಾಡ…!
ವಿಮಾನಯಾನ ತಜ್ಞರು ಬಾಲಕ ಬುದುಕಿ ಉಳಿದಿದ್ದೇ ಒಂದರ್ಥದಲ್ಲಿ “ಪವಾಡ” ಎಂದು ಕರೆದಿದ್ದಾರೆ. ವಿಮಾನದ ಚಕ್ರದ ಕುಳಿ(wheel bay)ಯಲ್ಲಿ ಕುಳಿತುಕೊಂಡು ಬರುವುದು ಅತ್ಯಂತ ಅಪಾಯಕಾರಿ. ಆಮ್ಲಜನಕದ ಕೊರತೆ, ಕುಸಿಯುವ ತಾಪಮಾನ ಮತ್ತು ಚಕ್ರಗಳಿಂದ ಅಪಾಯವಾಗುವಂತಹ ಸಾಧ್ಯತೆ ಇರುತ್ತದೆ. ವಿಮಾನವು 30,000 ಅಡಿ ಎತ್ತರದಲ್ಲಿ ಹಾರುತ್ತಿರುವಾಗ ಅಂತಹ ಪರಿಸ್ಥಿತಿಗಳು ಬದುಕುಳಿಯುವುದನ್ನು ಬಹುತೇಕ ಅಸಾಧ್ಯವಾಗಿಸುತ್ತದೆ. ವಿಮಾನಯಾನ ತಜ್ಞ ಕ್ಯಾಪ್ಟನ್ ಮೋಹನ ರಂಗನಾಥನ್ ಪ್ರಕಾರ, ಹುಡುಗ ವಿಮಾನದ ವೀಲ್ ಬೇಯಲ್ಲಿ ಮುಚ್ಚಿದ ಜಾಗದಲ್ಲಿ ಕುಳಿತಿರಬಹುದು. ವಿಮಾನ “ಚಕ್ರದ ಕುಳಿ ಸಾಮಾನ್ಯವಾಗಿ ಒತ್ತಡ ಇರುತ್ತದೆ ಮತ್ತು ತಾಪಮಾನ ಕಡಿಮೆಲ್ಲ. ಆದರೆ ಲ್ಯಾಂಡಿಂಗ್ ಗೇರ್ ಹಿಂತೆಗೆದುಕೊಂಡಾಗ ಆತ ಮುಚ್ಚಲ್ಪಟ್ಟ ವಿಭಾಗದೊಳಗೆ ಇದ್ದರೆ, ಆತನನ್ನು ಅದು ಮಾರಕ ಪರಿಸ್ಥಿತಿಗಳಿಂದ ರಕ್ಷಿಸಿರಬಹುದು ಎಂದು ಹೇಳಿದ್ದಾರೆ.

ಚಂಡೀಗಢದ ಡಾ. ರಿತಿನ್ ಮೊಹಿಂದ್ರಾ ಅವರ ಪ್ರಕಾರ, 30,000 ಅಡಿ ಎತ್ತರದಲ್ಲಿ ಈ ರೀತಿ ಪರಿಸ್ಥಿತಿಯಲ್ಲಿ ಬದುಕುಳಿಯುವುದು ಅತ್ಯಂತ ಅಪರೂಪ. “ಆ ಎತ್ತರದಲ್ಲಿ, ಆಮ್ಲಜನಕದ ಮಟ್ಟವು ಕುಸಿಯುತ್ತದೆ ಮತ್ತು ತಾಪಮಾನವು -40 ಡಿಗ್ರಿ ಸೆಲ್ಸಿಯಸ್ ಮತ್ತು -60 ಡಿಗ್ರಿ ಸೆಲ್ಸಿಯಸ್ ನಡುವೆ ತೀವ್ರವಾಗಿ ಕುಸಿಯುತ್ತದೆ. ಕೆಲವೇ ನಿಮಿಷಗಳಲ್ಲಿ ವ್ಯಕ್ತಿ ಪ್ರಜ್ಞೆ ತಪ್ಪಬಹುದು; ನಂತರ ಸಾವು ಸಂಭವಿಸಬಹುದು ” ಎಂದು ಅವರು ಹೇಳುತ್ತಾರೆ.
ಜಾಗತಿಕವಾಗಿ, ವೀಲ್ ಬೇಗಳಲ್ಲಿ ಅಡಗಿಕೊಂಡು ಬರಲು ಪ್ರಯತ್ನಿಸುವ ಸುಮಾರು ಶೇಕಡಾ 20 ರಷ್ಟು ಜನರು ಮಾತ್ರ ಬದುಕಿ ಉಳಿಯುತ್ತಾರೆ. ಅಂದರೆ 5 ಜನರಲ್ಲಿ 1 ಮಾತ್ರ ಹೈಪೋಕ್ಸಿಯಾ, ಲಘೂಷ್ಣತೆ, ಫ್ರಾಸ್‌ಬೈಟ್ ಮತ್ತು ಗಾಯದಂತಹ ಅಪಾಯಗಳಿಂದ ಪಾರಾಗಿ ಬದುಕುಳಿಯುತ್ತಾರೆ. ಹುಡುಗ ಈ ಎಲ್ಲ ಅಪಾಯಗಳನ್ನು ದಾಟಿದ್ದು ಒಂದು ಪವಾಡ ಎಂದು ಹೇಳಲಾಗುತ್ತಿದೆ.
ಈ ಘಟನೆಯು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯಲ್ಲಿನ ಲೋಪಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ, ಇದು ಕಟ್ಟುನಿಟ್ಟಿನ ತಪಾಸಣೆಗೆ ಕರೆ ನೀಡಿದೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

 

.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement