
ಬೆಂಗಳೂರು: ಕನ್ನಡದ ಖ್ಯಾತ ಸಾಹಿತಿ ಹಾಗೂ ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ. ಎಸ್ ಎಲ್ ಭೈರಪ್ಪ (SL Bhyrappa) ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ನಿನ್ನೆ ಬುಧವಾರ (ಸೆ.24) ನಿಧನರಾದ ಸಾಹಿತಿ ಎಸ್.ಎಲ್. ಭೈರಪ್ಪ (94) ಅವರ ಪಾರ್ಥಿವ ಶರೀರವನ್ನು ಇಂದು ಗುರುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭೈರಪ್ಪನವರ ಪಾರ್ಥಿವ ಶರೀರಕ್ಕೆ ಹೂಗುಚ್ಛವಿಟ್ಟು ಅಂತಿಮ ನಮನ ಸಲ್ಲಿಸಿದರು.
ಬಳಿಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಅವರ ಕುಟುಂಬಸ್ಥರ ಜೊತೆ ಕೆಲಕಾಲ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಮಾಧ್ಯಮದ ಮುಂದೆ ಅವರು ಸ್ಮಾರಕ ನಿರ್ಮಾಣ ಮಾಡುವ ಕುರಿತು ಘೋಷಿಸಿದರು. ಭೈರಪ್ಪ ಹೆಚ್ಚು ಸಮಯ ಮೈಸೂರಿನಲ್ಲಿಯೇ ಇದ್ದರು. ಮೈಸೂರು ಅವರ ನೆಚ್ಚಿನ ಸ್ಥಳ, ಅಲ್ಲಿಯೇ ಹೆಚ್ಚಿನ ಸಮಯ ಸಾಹಿತ್ಯ ಕೃಷಿಯನ್ನು ನಡೆಸಿದ್ದಾರೆ. ಹೀಗಾಗಿ ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಸಾಹಿತ್ಯ, ಚಿಂತನೆಯ ವಿಚಾರದಲ್ಲಿ ಭಿನ್ನಾಭಿಪ್ರಾಯವಿದ್ದರೂ ನಂಬಿದ್ದ ವಿಚಾರಕ್ಕೆ ಬದ್ಧರಾಗಿ ಬರೆದವರು ಭೈರಪ್ಪನವರು. ಆತ್ಮತೃಪ್ತಿಗೆ ಕಾದಂಬರಿ ಬರೆಯುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದರು. ಕಷ್ಟಪಟ್ಟು ಬದುಕಿನಲ್ಲಿ ಮೇಲೆ ಬಂದಿದ್ದರು. ಬದುಕಿನ ಕಷ್ಟಗಳ ಅನುಭವವನ್ನೇ ಕಾದಂಬರಿಯಲ್ಲಿ ಚಿತ್ರಿಸುತ್ತಿದ್ದರು. ಬಹಳ ಸಂಖ್ಯೆಯಲ್ಲಿ ಅವರಿಗೆ ಅಭಿಮಾನಿಗಳು, ಓದುಗರಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಸಾಹಿತ್ಯವೇ ಬೇರೆ, ಸ್ನೇಹವೇ ಬೇರೆ. ನಮ್ಮ ದೃಷ್ಟಿಕೋನಗಳು ಬೇರೆ ಬೇರೆ ಇರಬಹುದು. ಅವರ ದೃಷ್ಟಿಕೋನ, ನನ್ನ ದೃಷ್ಟಿಕೋನ ಒಂದೇ ಆಗಿರಲೂ ಬಹುದು. ವಿಭಿನ್ನ ದೃಷ್ಟಿಕೋನಗಳ ಹೊರತಾಗಿಯೂ, ಬೈರಪ್ಪನವರ ಸಾಹಿತ್ಯಿಕ ಕೊಡುಗೆಯನ್ನು ಮೆಚ್ಚಿಕೊಂಡವ ನಾನು. ಬೈರಪ್ಪನವರಿಗೆ ಪದ್ಮಭೂಷಣ, ಸರಸ್ವತಿ ಸಮ್ಮಾನ, ನಾಡೋಜ, ರಾಜ್ಯೋತ್ಸವ ಮತ್ತು ಪಂಪ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.. ಅವರಿಗೆ ಜ್ಞಾನಪೀಠ ಪ್ರಶಸ್ತಿಯೂ ದೊರೆಯಬೇಕಿತ್ತು. ಅವರು ಪ್ರಶಸ್ತಿಯನ್ನು ಬಯಸಿದವರಲ್ಲ. ಆದರೆ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯಬೇಕಿತ್ತು ಎಂದು ಸಿದ್ದರಾಮಯ್ಯ ಹೇಳಿದರು. ಅವರ ಅಂತ್ಯಕ್ರಿಯೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸಲಿದ್ದು, ರಾಜ್ಯ ಸರ್ಕಾರದಿಂದ ಅವರಿಗೆ ಸರ್ಕಾರಿ ಗೌರವ ನೀಡುವ ಮೂಲಕ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಈ ವೇಳೆ ಸಚಿವರಾದ ಶಿವರಾಜ ತಂಗಡಗಿ, ಮಧು ಬಂಗಾರಪ್ಪ, ಸಂಸದ ತೇಜಸ್ವಿ ಸೂರ್ಯ, ಪತ್ರಕರ್ತ ವಿಶ್ವೇಶ್ವರ ಭಟ್ ಮೊದಲಾದವರು ಇದ್ದರು.
ಪದ್ಮಶ್ರೀ, ಪದ್ಮಭೂಷಣ, ಸರಸ್ವತಿ ಸಮ್ಮಾನ್ ಮೊದಲಾದ ಪುರಸ್ಕಾರಗಳಿಗೆ ಭಾಜನರಾಗಿದ್ದ ಎಸ್‌ಎಲ್.ಭೈರಪ್ಪ ಬುಧವಾರ (ಸೆ.24) ಬೆಂಗಳೂರಿನ ರಾಜರಾಜೇಶ್ವರಿ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿಧನರಾದ ಭೈರಪ್ಪನವರ ಪಾರ್ಥಿವ ಶರೀರವನ್ನು ಇಂದು,ಗುರುವಾರ ಬೆಳಿಗ್ಗೆ 8 ಗಂಟೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿದೆ. ಇಂದು ಮಧ್ಯಾಹ್ನ 2 ಗಂಟೆಯವರೆಗೆ ಇಲ್ಲಿ ಅಂತಿಮ ದರ್ಶನ ಇರಲಿದ್ದು, ಬಳಿಕ ಮೈಸೂರಿಗೆ ಒಯ್ಯಲಾಗುತ್ತದೆ. ಇಂದು ಸಂಜೆ ಹಾಗೂ ನಾಳೆ ಮೈಸೂರಿನಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನ ಇರಲಿದ್ದು, ನಾಳೆ ಮೈಸೂರು ಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಎಸ್.ಎಲ್. ಭೈರಪ್ಪ ಅವರ ಅಂತ್ಯಕ್ರಿಯೆ ನೆರವೇರಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ