ಟಿವಿಕೆ ಪಕ್ಷದ ಮುಖ್ಯಸ್ಥ, ನಟ ವಿಜಯ ಸಮಾವೇಶದಲ್ಲಿ ಕಾಲ್ತುಳಿತ ; 38 ಮಂದಿ ಸಾವು, 62 ಮಂದಿಗೆ ಗಾಯ

ತಮಿಳುನಾಡಿನ ಕರೂರಿನಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥ ಹಾಗೂ ತಮಿಳು ನಟ ವಿಜಯ ನೇತೃತ್ವದ ಬೃಹತ್‌ ರಾಜಕೀಯ ಸಮಾವೇಶದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 38 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸಾವಿರಾರು ಜನರು ಸಮಾವೇಶಗೊಂಡ ವೇಳೆ ನೂಕುನುಗ್ಗಲು ಸಂಭವಿಸಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿನೆಮಾದಿಂದ ರಾಜಕೀಯಕ್ಕೆ ಪ್ರವೇಶಿಸಿದ ನಟ ವಿಜಯ ಜನಸಮೂಹದಲ್ಲಿ ಹಲವರು ಉಸಿರುಗಟ್ಟಿ ಮೂರ್ಛೆ ಹೋದ ನಂತರ ತಮ್ಮ ಭಾಷಣವನ್ನು ತಕ್ಷಣವೇ ನಿಲ್ಲಿಸಿದರು. ಜನರಿಗೆ ತಕ್ಷಣವೇ ನೀರು ವಿತರಿಸಿ, ಅಂಬುಲೆನ್ಸ್ ವ್ಯವಸ್ಥೆ ಮಾಡುವ ಕೆಲಸವನ್ನೂ ಕೈಗೊಂಡರು.
ಮೃತಪಟ್ಟವರಲ್ಲಿ 6 ಮಕ್ಕಳು, 16 ಮಹಿಳೆಯರು
ತಮಿಳುನಾಡು ಅಧಿಕಾರಿಗಳ ಪ್ರಕಾರ, ಈ ದುರ್ಘಟನೆಯಲ್ಲಿ 6 ಮಕ್ಕಳು ಹಾಗೂ 16 ಮಹಿಳೆಯರು ಸೇರಿದಂತೆ 38 ಮಂದಿ ಮೃತಪಟ್ಟಿದ್ದಾರೆ. 62 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಿರುಚಿರಾಪಳ್ಳಿ ಹಾಗೂ ಸೇಲಂನಿಂದ 40ಕ್ಕೂ ಹೆಚ್ಚು ವೈದ್ಯರನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ. ನಟ ವಿಜಯ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವಾಗ ಜನಸಂದಣಿ ನಿಯಂತ್ರಿಸಲಾಗದೆ ಕಾಲ್ತುಳಿತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರ್ಯಾಲಿಯಲ್ಲಿ ಮೂರ್ಛೆ ಹೋದವರಲ್ಲಿ ಕೆಲವು ಮಕ್ಕಳೂ ಸೇರಿದ್ದಾರೆ ಎಂದು ವರದಿಗಳು ತಿಳಿಸಿವೆ.

ಘಟನೆ ಹೇಗೆ ನಡೆಯಿತು?
ಸಮಾರಂಭದ ಸಮಯದಲ್ಲಿ ಜನಸಂದಣಿ ನಿಯಂತ್ರಣ ತಪ್ಪಿದಾಗ ನೂಕುನುಗ್ಗಲು ಉಂಟಾಗಿ ಮಕ್ಕಳು ಸೇರಿದಂತೆ ಹಲವರು ಸ್ಥಳದಲ್ಲಿ ಮೂರ್ಛೆ ಹೋದರು ಎನ್ನಲಾಗಿದೆ. ವಿಜಯ ಅವರು ತಮ್ಮ ವಿಶೇಷ ಬಸ್ಸಿನಿಂದಲೇ ಜನರಿಗೆ ನೀರಿನ ಬಾಟಲಿಗಳನ್ನು ಎಸೆದು ಸಹಾಯ ಮಾಡಲು ಮುಂದಾದರು. ಈ ಮಧ್ಯೆ ಅಂಬುಲೆನ್ಸ್‌ಗಳು ಜನಸಮೂಹದ ಮಧ್ಯೆ ಸಿಕ್ಕುಬಿದ್ದು ತೊಂದರೆಯಾದವರ ಬಳಿಗೆ ತಲುಪುವುದು ಕಷ್ಟವಾಯಿತು. ಮೂರ್ಛೆ ಹೋದವರನ್ನು ಆಂಬ್ಯುಲೆನ್ಸ್‌ಗಳಲ್ಲಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಯಿತು ಮತ್ತು ಅವರಲ್ಲಿ ಕೆಲವರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಕ್ಷಣ ಸಚಿವರಾದ ಸುಬ್ರಮಣಿಯನ್ ಹಾಗೂ ಅಂಬಿಲ್ ಮಹೇಶ ಅವರನ್ನು ತಕ್ಷಣವೇ ಸ್ಥಳಕ್ಕೆ ಕಳುಹಿಸಿದ್ದಾರೆ.
ಸ್ಟಾಲಿನ್ ಅವರು ಭಾನುವಾರ ಕರೂರಿಗೆ ಭೇಟಿ ನೀಡಲಿದ್ದಾರೆ. ಇತರ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ಪೊಲೀಸರು ಈಗಾಗಲೇ ಸ್ಥಳಕ್ಕೆ ತೆರಳುತ್ತಿದ್ದಾರೆ.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಈ ಘಟನೆ ದುಃಖದಾಯಕವಾಗಿದ್ದು, ತಕ್ಷಣ ಸರ್ಕಾರ ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ. ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅವರು, “ಹೀಗೆ ದೊಡ್ಡ ಕಾರ್ಯಕ್ರಮಗಳು ಅಗತ್ಯ ಮುನ್ನೆಚ್ಚರಿಕೆಗಳಿಲ್ಲದೇ ನಡೆಯುವುದು ಅಕ್ಷಮ್ಯ. ಸರ್ಕಾರ ಮತ್ತು ಪೊಲೀಸ್ ಇಲಾಖೆ ಇದರ ಹೊಣೆ ಹೊತ್ತುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ
“ತಮಿಳುನಾಡಿನ ಕರೂರಿನಲ್ಲಿ ನಡೆದ ರಾಜಕೀಯ ಸಭೆಯ ದುರಂತ ಸಂಭವಿಸಿದೆ. ಪ್ರಿಯ ಜನರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ,” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, “ಮೃತರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ
ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ (Stampede) ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ಪ್ರಕಟಿಸಿದ್ದಾರೆ.
ಈ ಕುರಿತು ಎಕ್ಸ್‌ (X) ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಕಾಲ್ತುಳಿತದಲ್ಲಿ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಕ್ಕೂ 10 ಲಕ್ಷ ರೂ. ಪರಿಹಾರ ನೀಡಲಾಗುವುದು. ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬರಿಗೂ 1 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ, ಕಾಲ್ತುಳಿತದ ಘಟನೆ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶರಾದ ಅರುಣಾ ಜಗದೀಶನ್ ಅವರ ನೇತೃತ್ವದಲ್ಲಿ ಆಯೋಗ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ನಟ ರಜನಿಕಾಂತ ಸಂತಾಪ
ತಮಿಳುನಾಡಿನ ಕರೂರಿನಲ್ಲಿ ನಟ, ರಾಜಕಾರಣಿ ವಿಜಯ ಅವರ ರ‍್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 34 ಮಂದಿ ಮೃತಪಟ್ಟಿದ್ದು, ನಟ ರಜನಿಕಾಂತ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಕರೂರಿನಲ್ಲಿ ನಡೆದ ಘಟನೆಯಲ್ಲಿ ಅಮಾಯಕರ ಜೀವಹಾನಿಯ ಸುದ್ದಿ ಹೃದಯವನ್ನು ಕಲಕಿದೆ. ಅಪಾರ ದುಃಖವನ್ನುಂಟು ಮಾಡಿದೆ. ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ತೀವ್ರವಾದ ಸಂತಾಪಗಳು. ಗಾಯಗೊಂಡವರು ಬೇಗನೆ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement