
ಅನೇಕರಿಗೆ, ಅವರು ‘ಜೀವಂತವಾಗಿ ಉಳಿದ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ’. ಆದರೆ, ಅಹಮದಾಬಾದ್ ಏರ್ ಇಂಡಿಯಾ ವಿಮಾನ (AI-171) ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯಾದ 40 ವರ್ಷದ ವಿಶ್ವಾಸಕುಮಾರ ರಮೇಶ ಅವರಿಗೆ, ಈ ಬದುಕುಳಿಯುವಿಕೆ ಒಂದು ಪವಾಡವೂ ಹೌದು, ಶಾಪವೂ ಹೌದು. ಈ ದುರಂತದಲ್ಲಿ ವಿಮಾನದಲ್ಲಿದ್ದ 241 ಜನ ಮತ್ತು ನೆಲದ ಮೇಲಿದ್ದ 19 ಜನ ಸಾವಿಗೀಡಾಗಿದ್ದಾರೆ.
ಲಂಡನ್‌ಗೆ ಹೊರಟಿದ್ದ ಈ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವು ಜೂನ್ 12 ರಂದು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್-ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ, ಬಿ.ಜೆ. ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿತ್ತು. ವಿಮಾನದಲ್ಲಿದ್ದ 241 ಜನರ ಪೈಕಿ, ತುರ್ತು ನಿರ್ಗಮನ ದ್ವಾರದ ಸಮೀಪ, 11A ಸೀಟಿನಲ್ಲಿ ಕುಳಿತಿದ್ದ ವಿಶ್ವಾಸಕುಮಾರ ರಮೇಶ ಅವರು ಮಾತ್ರ ಜೀವಂತವಾಗಿ ಹೊರಬಂದಿದ್ದರು. ಅವರ ಸಹೋದರ ಅಜಯಕುಮಾರ ರಮೇಶ ಎಂಬವರು, ಕೆಲವೇ ಸೀಟುಗಳ ದೂರದಲ್ಲಿದ್ದರು ಮತ್ತು ದುರಂತದಲ್ಲಿ ಮೃತಪಟ್ಟಿದ್ದರು.

“ನನ್ನ ಬೆನ್ನೆಲುಬನ್ನು ಕಳೆದುಕೊಂಡೆ”
ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯಾಗಿರುವ ವಿಶ್ವಾಸಕುಮಾರ ರಮೇಶ ಅವರು ಬಿಬಿಸಿಗೆ ನೀಡಿದ ಹೇಳಿಕೆಯಲ್ಲಿ, “ನಾನು ಮಾತ್ರ ಬದುಕುಳಿದಿದ್ದೇನೆ. ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಇದು ಪವಾಡ,” ಎಂದಿದ್ದಾರೆ. “ನಾನು ನನ್ನ ತಮ್ಮನನ್ನು ಕಳೆದುಕೊಂಡೆ. ನನ್ನ ತಮ್ಮ ನನ್ನ ಬೆನ್ನೆಲುಬು. ಕಳೆದ ಕೆಲವು ವರ್ಷಗಳಿಂದ ಅವರು ನನಗೆ ಯಾವಾಗಲೂ ಬೆಂಬಲ ನೀಡುತ್ತಿದ್ದರು ಎಂದು ದುಃಖ ತೋಡಿಕೊಂಡಿದ್ದಾರೆ.
ಭಾರತದ ವಿಮಾನ ಅಪಘಾತ ತನಿಖಾ ದಳದ (AAIB) ಪ್ರಾಥಮಿಕ ವರದಿಗಳ ಪ್ರಕಾರ, ಟೇಕ್-ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಇಂಧನ ಪೂರೈಕೆ ಕಡಿತಗೊಂಡಿದ್ದರಿಂದ ವಿಮಾನದ ಎರಡೂ ಎಂಜಿನ್‌ಗಳು ಶಕ್ತಿಯನ್ನು ಕಳೆದುಕೊಂಡಿದ್ದವು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಡ್ರೀಮ್‌ಲೈನರ್ ವಿಮಾನವು ಹಾಸ್ಟೆಲ್‌ನ ದಕ್ಷಿಣ ಭಾಗಕ್ಕೆ ಅಪ್ಪಳಿಸಿದಾಗ ದೊಡ್ಡ ಸ್ಫೋಟದ ಶಬ್ದ ಮತ್ತು ಬೆಂಕಿ ಚೆಂಡು ಕಾಣಿಸಿತ್ತು. ದುರಂತದ ನಂತರದ ವಿಡಿಯೋಗಳಲ್ಲಿ, ವಿಶ್ವಾಸಕುಮಾರ ರಮೇಶ ಅವರು ದಿಗ್ಭ್ರಮೆಗೊಂಡು, ಹೊಗೆ ಆವರಿಸಿದ್ದ ಸ್ಥಳದಿಂದ ಹೊರನಡೆಯುತ್ತಿರುವುದು ಕಂಡುಬಂದಿತ್ತು.
ಪ್ರತಿದಿನವೂ ಕಾಡುತ್ತಿದೆ ಆ ನೆನಪುಗಳು…
ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿದ್ದ ವಿಶ್ವಾಸಕುಮಾರ ರಮೇಶ ಅವರನ್ನು ಮರುದಿನವೇ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಮಾಡಿದ್ದರು. “ನಾನು ಹೇಗೆ ಬದುಕಿದೆ ಎಂದು ನನಗೆ ಗೊತ್ತಿಲ್ಲ ಎಂದು ಅವರಿಗೆ ಹೇಳಿದೆ. ಎಲ್ಲವೂ ಅಷ್ಟು ಬೇಗ ನಡೆದುಹೋಯಿತು,” ಎಂದು ಅವರು ಆ ಸಮಯದಲ್ಲಿ ತಿಳಿಸಿದ್ದರು. ಜೂನ್ 17 ರಂದು ಡಿಎನ್‌ಎ ದೃಢೀಕರಣದ ನಂತರ ಅವರ ಸಹೋದರನ ಅವಶೇಷಗಳನ್ನು ಕುಟುಂಬಕ್ಕೆ ಹಸ್ತಾಂತರಿಸಿದ ದಿನವೇ, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಲೆಸ್ಟರ್‌ನಲ್ಲಿರುವ ತಮ್ಮ ಮನೆಗೆ ಮರಳಿದ ನಂತರ, ಆ ದಿನದ ನೆನಪುಗಳು ತಮ್ಮನ್ನು ಕಾಡುತ್ತಿವೆ ಎಂದು ರಮೇಶ ಹೇಳುತ್ತಾರೆ. “ಈಗ ನಾನು ಏಕಾಂಗಿ. ನಾನು ನನ್ನ ಕೋಣೆಯಲ್ಲಿ ಒಬ್ಬನೇ ಕುಳಿತಿರುತ್ತೇನೆ, ನನ್ನ ಹೆಂಡತಿ, ನನ್ನ ಮಗನೊಂದಿಗೆ ಮಾತನಾಡುವುದಿಲ್ಲ. ನನ್ನ ಮನೆಯಲ್ಲಿ ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ ಎಂದು ಅವರು ಬಿಬಿಸಿಗೆ ತಿಳಿಸಿದ್ದಾರೆ.
ಅವರಿಗೆ ಪೋಸ್ಟ್-ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (PTSD) ಇರುವುದು ದೃಢಪಟ್ಟಿದೆ ಮತ್ತು ಅವರು ದೈಹಿಕ ನೋವು ಹಾಗೂ ಮಾನಸಿಕ ಆಘಾತದಿಂದ ಬಳಲುತ್ತಿದ್ದಾರೆ ಎಂದು ಅವರ ಸಲಹೆಗಾರರು ದೃಢಪಡಿಸಿದ್ದಾರೆ. ಏರ್ ಇಂಡಿಯಾ (ಈಗ ಟಾಟಾ ಗ್ರೂಪ್ ಒಡೆತನದಲ್ಲಿದೆ) ಅವರು ₹ 22 ಲಕ್ಷಕ್ಕೆ ಸಮನಾದ 21,500 UK ಪೌಂಡ್‌ಗಳ ಮಧ್ಯಂತರ ಪರಿಹಾರವನ್ನು ನೀಡಿದೆ, ಇದನ್ನು ವಿಶ್ವಾಸಕುಮಾರ ರಮೇಶಸ್ವೀಕರಿಸಿದ್ದಾರೆ. ಆದರೆ, ಈ ಪರಿಹಾರವು ತೀರಾ ಕಡಿಮೆ ಎಂದು ಅವರ ಸಲಹೆಗಾರರು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ