ಮೈ ಜುಂ ಎನ್ನುವ ವೀಡಿಯೊ | ಪೊಲೀಸರ ಸಮಯ ಪ್ರಜ್ಞೆ : ಸೇತುವೆಯಿಂದ ಕೆಳಕ್ಕೆ ಜಿಗಿಯುತ್ತಿದ್ದ 14 ವರ್ಷದ ಬಾಲಕಿ ರಕ್ಷಿಸಿದ ವ್ಯಕ್ತಿ

ದಿಯೋರಿಯಾ: ಉತ್ತರ ಪ್ರದೇಶದ ದಿಯೋರಿಯಾದಲ್ಲಿ ಪೊಲೀಸರ ಸಮಯಪ್ರಜ್ಞೆ ಮತ್ತು ಜಾಗರೂಕತೆಯಿಂದ 14 ವರ್ಷದ ಬಾಲಕಿಯೊಬ್ಬಳು ಸಾವಿನ ದವಡೆಯಿಂದ ಪಾರಾಗಿದ್ದಾಳೆ. ಸೇತುವೆಯಿಂದ ನದಿಗೆ ಹಾರಲು ಯತ್ನಿಸುತ್ತಿದ್ದ ಬಾಲಕಿಯನ್ನು ಗಸ್ತು ತಿರುಗುತ್ತಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಗಮನಿಸಿ ರಕ್ಷಿಸಿದ್ದಾರೆ. ಈ ಘಟನೆ ರಾಂಪುರ ಕಾರ್ಖಾನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಗಳವಾರ ಸಂಜೆ ಸುಮಾರು 4:30ರ ಸುಮಾರಿಗೆ, ಸಿಒ (ನಗರ) ಸಂಜಯಕುಮಾರ ರೆಡ್ಡಿ ಮತ್ತು ಪೊಲೀಸ್ ಠಾಣಾ ಮುಖ್ಯಸ್ಥ ಅಭಿಷೇಕ ಯಾದವ್ ಅವರು ಪೊಲೀಸ್ ತಂಡದೊಂದಿಗೆ ಹಳೇ ಪಟನವಾ ಸೇತುವೆ ಬಳಿ ಗಸ್ತು ತಿರುಗುತ್ತಿದ್ದರು. ಈ ವೇಳೆ, ಸೇತುವೆಯ ಮೇಲೆ ಬುರ್ಖಾ ಧರಿಸಿದ್ದ ಬಾಲಕಿಯೊಬ್ಬಳು ಅಳುತ್ತಾ, ನದಿಗೆ ಹಾರಲು ಪ್ರಯತ್ನಿಸುತ್ತಿರುವುದು ಅವರ ಗಮನಕ್ಕೆ ಬಂದಿದೆ. ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸ್ ತಂಡ ತಕ್ಷಣ ಕಾರ್ಯಪ್ರವೃತ್ತವಾಯಿತು.

ಸಿಒ ಸಂಜಯಕುಮಾರ ರೆಡ್ಡಿ ಅವರು ಶಾಂತವಾಗಿ ಬಾಲಕಿಯೊಂದಿಗೆ ಮಾತನಾಡಿ, ಆಕೆಯ ಗಮನ ಬೇರೆಡೆ ಹೋಗದಂತೆ ನೋಡಿಕೊಂಡರು. ಇದೇ ವೇಳೆ, ಬಾಲಕಿಯನ್ನು ರಕ್ಷಿಸಲು ಸ್ಥಳದಲ್ಲಿದ್ದ ಯುವಕನೊಬ್ಬ ಮೇಲಿನಿಂದ ಸೇತುವೆಯ ಕಂಬದ ಮೇಲೆ ಜಿಗಿದಿದ್ದಾನೆ. ಆ ಸಂದರ್ಭದಲ್ಲಿ ಬಾಲಕಿ ಕಂಬದಿಂದ ಕೆಳಗೆ ಹಾರಲು ಪ್ರಯತ್ನಿಸಿದ್ದಾಳೆ. ಆದರೆ ಯುವಕ ತಕ್ಷಣವೇ ಕೈಯಿಂದ ಆಕೆಯನ್ನು ಬಲವಾಗಿ ಹಿಡಿದು ಆಕೆ ಸೇತುವೆಯಿಂದ ಕೆಳಗೆ ಬೀಳದಂತೆ ತಡೆದಿದ್ದಾನೆ. ಆದರೆ ಆಕೆ ನೇತಾಡಲು ಪ್ರಾರಂಭಿಸಿದ್ದಾಳೆ. ಇದನ್ನು ಕಂಡ ತಕ್ಷಣ ಪೊಲೀಸರೂ ಧುಮುಕಿ, ಸ್ಥಳೀಯರ ಸಹಾಯದಿಂದ ಬಾಲಕಿಯನ್ನು ಸುರಕ್ಷಿತವಾಗಿ ಮೇಲಕ್ಕೆ ಎಳೆದು ರಕ್ಷಿಸಿದ್ದಾರೆ. ಬಾಲಕಿ ತೀವ್ರ ಆತಂಕದಲ್ಲಿದ್ದ ಕಾರಣ, ಆಕೆಯನ್ನು ತಕ್ಷಣ ಪೊಲೀಸ್ ಠಾಣೆಗೆ ಕರೆತರಲಾಯಿತು.

ಪ್ರಮುಖ ಸುದ್ದಿ :-   ವಿಡಿಯೊ | ಹಾಡಹಗಲೇ ಶಸ್ತ್ರಸಜ್ಜಿತರಿಂದ ಚಿನ್ನಾಭರಣ ಅಂಗಡಿ ದರೋಡೆ ; ಚಿನ್ನ-ನಗದು ಲೂಟಿ, ಹಲವು ಸುತ್ತು ಗುಂಡು ಹಾರಿಸಿ ಪರಾರಿ...!

ಪೊಲೀಸ್ ಠಾಣೆಯಲ್ಲಿ ಮಹಿಳಾ ಕಾನ್‌ಸ್ಟೆಬಲ್‌ಗಳು ಬಾಲಕಿಯೊಂದಿಗೆ ಮಾತನಾಡಿ ಸಮಾಧಾನಪಡಿಸಿದರು. ಕ್ರಮೇಣ ಬಾಲಕಿ ತನ್ನ ಹೆಸರು ಹಶ್ಮುನ್ ನಿಶಾ ಅಲಿಯಾಸ್ ಪ್ರೀತಿ (14) ಎಂದು, ತಂದೆಯ ಹೆಸರು ಮೊಹಮ್ಮದ್ದೀನ್ ಮತ್ತು ತಾನು ಬಾಲಪುರ ಶ್ರೀನಗರದ ನಿವಾಸಿ ಎಂದು ತಿಳಿಸಿದ್ದಾಳೆ. ತನ್ನ ಚಿಕ್ಕಮ್ಮ ಚಾಂದನಿ ಜೊತೆ ಹೊರಗೆ ಹೋಗಿದ್ದಾಗ ಆಕೆಯಿಂದ ಬೇರ್ಪಟ್ಟು ದಾರಿ ತಪ್ಪಿದ್ದರಿಂದ ಮನನೊಂದು ಆತ್ಮಹತ್ಯೆ ಯತ್ನಿಸಿದ್ದಾಗಿ ಬಾಲಕಿ ತಿಳಿಸಿದ್ದಾಳೆ. ಪೊಲೀಸರು ಬಾಲಕಿಯ ಕುಟುಂಬವನ್ನು ಸಂಪರ್ಕಿಸಿದಾಗ, ಆಕೆಯ ತಾಯಿ ಸಲ್ಮಾ ಮತ್ತು ಕುಟುಂಬಸ್ಥರು ಠಾಣೆಗೆ ಬಂದಿದ್ದಾರೆ.

“ನನ್ನ ಮಗಳು ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ಅತಿಯಾಗಿ ದುಃಖಿತಳಾಗುತ್ತಾಳೆ, ಜೋರಾಗಿ ಅಳುತ್ತಾಳೆ. ಬಹುಶಃ ಇಂದೂ ಅದೇ ಕಾರಣಕ್ಕೆ ಈ ಅಪಾಯಕಾರಿ ಹೆಜ್ಜೆ ಇಡಲು ಯತ್ನಿಸಿದ್ದಾಳೆ” ಎಂದು ತಾಯಿ ಸಲ್ಮಾ ಹೇಳಿದ್ದಾರೆ. ವೈದ್ಯಕೀಯ ತಪಾಸಣೆ ಬಳಿಕ ಪೊಲೀಸರು ಬಾಲಕಿಯನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರಿಸಿದರು. ಮಗಳನ್ನು ಸುರಕ್ಷಿತವಾಗಿ ಕಂಡ ಕುಟುಂಬದವರು ಪೊಲೀಸ್ ಅಧಿಕಾರಿಗಳು ಮತ್ತು ಇಡೀ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.
ಠಾಣಾ ಮುಖ್ಯಸ್ಥ ಅಭಿಷೇಕ ಯಾದವ್ ಅವರು, “ಬಾಲಕಿಗೆ ಕೌನ್ಸೆಲಿಂಗ್‌ನ ಅಗತ್ಯವಿದೆ. ಕುಟುಂಬಸ್ಥರು ಮಗುವಿನ ಮೇಲೆ ನಿಗಾ ಇಡಬೇಕು. ಅಗತ್ಯವಿದ್ದರೆ ಮಾನಸಿಕ ಆರೋಗ್ಯ ತಜ್ಞರಿಂದ ಸಲಹೆ ಪಡೆಯಬೇಕು” ಎಂದು ತಿಳಿಸಿದ್ದಾರೆ.
ಸಮಯಕ್ಕೆ ಸರಿಯಾಗಿ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಜೀವ ಉಳಿಸಿದ ಧೀರ ವ್ಯಕ್ತಿಯ ಸಾಹಸಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಮುಖ ಸುದ್ದಿ :-   ʼಆಪರೇಷನ್ ಸಿಂಧೂರʼದಲ್ಲಿ ಭಾರತಕ್ಕೆ ಭಾರಿ ಯಶಸ್ಸು; ತನ್ನ ಸೋಲು ಮುಚ್ಚಿಕೊಳ್ಳಲು ಸುಳ್ಳು ಕಥೆ ಕಟ್ಟಿದ ಪಾಕ್‌ ಸೇನೆ : ನೂರೀನ್ ನಿಯಾಝಿ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement