
ಸೂರತ್: ಹಣದಿಂದ ಭಾವನೆಗಳನ್ನು ಖರೀದಿಸಲು ಸಾಧ್ಯವಿಲ್ಲದೆ ಇರಬಹುದು, ಆದರೆ ಹಣದ ವಿವೇಕಯುತ ಬಳಕೆಯು ತೊಂದರೆಯಲ್ಲಿರುವವರ ಜೀವನವನ್ನು ಬೆಳಗಿಸಬಲ್ಲದು. ಇಂತಹ ಒಂದು ಅಪರೂಪದ ಮಾನವೀಯ ನಿದರ್ಶನವು ಸೂರತ್ತಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಇಲ್ಲಿನ ಉದ್ಯಮಿ ಬಾಬುಭಾಯಿ ಜಿರಾವಾಲಾ (ಚೋಡ್ವಾಡ್ಯಾ) ಅವರು ತಮ್ಮ ತಾಯಿಯ ಪುಣ್ಯತಿಥಿಯ ನೆನಪಿಗಾಗಿ ಅಮ್ರೇಲಿ ಜಿಲ್ಲೆಯ ತಮ್ಮ ಜಿರಾ ಗ್ರಾಮದ 290 ರೈತರ 30 ವರ್ಷಗಳಷ್ಟು ಹಳೆಯ ಸಾಲವನ್ನು ತೀರಿಸಿ ಅವರನ್ನು ಋಣಮುಕ್ತಗೊಳಿಸಿದ್ದಾರೆ.
ತಾಯಿಯ ಪುಣ್ಯತಿಥಿಗೆ ಒಂದು ಶ್ರೇಷ್ಠ ಕಾರ್ಯ
ಈ ನಡುವೆ, ಕೈಗಾರಿಕೋದ್ಯಮಿ ಬಾಬುಭಾಯಿ ಮತ್ತು ಅವರ ಹಿರಿಯ ಸಹೋದರ ಘನಶ್ಯಾಮಭಾಯಿ ಅವರು ತಮ್ಮ ತಾಯಿಯ ಪುಣ್ಯತಿಥಿಯನ್ನು ಒಂದು ಶ್ರೇಷ್ಠ ಕಾರ್ಯದ ಮೂಲಕ ಆಚರಿಸಲು ನಿರ್ಧರಿಸಿದರು. ಬಾಬುಭಾಯಿ ಅವರು ಭಾವುಕರಾಗಿ ಮಾತನಾಡಿ, “ಈ ಉದಾತ್ತ ಕಾರ್ಯಕ್ಕೆ ನನ್ನ ತಾಯಿಯೇ ಸ್ಫೂರ್ತಿ. ಯಾವುದೇ ಶಿಲಾಫಲಕದ ಮೇಲೆ ನಮ್ಮ ತಾಯಿಯ ಹೆಸರು ಬರದಿದ್ದರೂ, ಅದು ರೈತರ ಹೃದಯದಲ್ಲಿ ಶಾಶ್ವತವಾಗಿ ಉಳಿಯಬೇಕು ಎಂದು ತಾವು ನಿರ್ಧರಿಸಿದ್ದಾಗಿ ತಿಳಿಸಿದರು. ಈ ನಿರ್ಧಾರದಂತೆ, ಬಾಬುಭಾಯಿ ಅವರು ಲಾಭ ಪಂಚಮಿಯಂದು ಬ್ಯಾಂಕಿನಲ್ಲಿ ಈ ಮೊತ್ತವನ್ನು ಠೇವಣಿ ಇರಿಸಿ, 290 ರೈತರ ಸಾಲವನ್ನು ತಾವೇ ಪಾವತಿಸಿದರು.

30 ವರ್ಷದ ʼನಕಲಿʼ ಸಾಲದ ವಿವಾದ
1995 ರಿಂದ ಬ್ಯಾಂಕ್ ಸಾಲ ಪ್ರಕರಣದ ವಿವಾದ ಬಾಕಿ ಇತ್ತು. 1995ರಲ್ಲಿ ಗ್ರಾಮದ ಜಿರಾ ಸೇವಾ ಸಹಕಾರಿ ಮಂಡಲದ ಆಗಿನ ಆಡಳಿತಾಧಿಕಾರಿಗಳು ರೈತರ ಹೆಸರಿನಲ್ಲಿ ಸಾಲಗಳನ್ನು ಪಡೆದಿದ್ದರು, ಇದು ರೈತರನ್ನು ತುಂಬಾ ಆಕ್ರೋಶಕ್ಕೆ ಕಾರಣವಾಗಿತ್ತು. ಯಾಕೆಂದರೆ ಈ ಮೋಸದ ಸಾಲದ ಹೊರೆಯಿಂದಾಗಿ, ರೈತರ ಮೇಲೆ ಏಳರಿಂದ ಹನ್ನೆರಡು ಪಟ್ಟು ಹಣ ಕಟ್ಟುವ ಪರಿಸ್ಥಿತಿ ಎದುರಾಗಿತ್ತು.
ಸರ್ಕಾರದಿಂದ ಒದಗಿಸಲಾದ ಸಹಾಯ, ಸಾಲಗಳು ಮತ್ತು ಇತರ ಸೌಲಭ್ಯಗಳಿಂದ ರೈತರು ವಂಚಿತರಾಗುತ್ತಿದ್ದರು. ಬ್ಯಾಂಕುಗಳು ಗ್ರಾಮದ ರೈತರಿಗೆ ಯಾವುದೇ ಸಾಲವನ್ನು ನೀಡುತ್ತಿರಲಿಲ್ಲ. ಸಾಲ ಸಿಗದ ಕಾರಣ ರೈತರು ಸಂಕಷ್ಟದಲ್ಲಿದ್ದರು. ಸಾಲದ ವಿವಾದದ ಕಾರಣದಿಂದಾಗಿ, ಸಹೋದರರ ಮಧ್ಯೆ ಭೂಮಿ ಹಂಚಿಕೆಯೂ ಸಾಧ್ಯವಾಗುತ್ತಿರಲಿಲ್ಲ.
ರೈತರು ಹಲವು ಬಾರಿ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಸರ್ಕಾರವು ವಿಚಾರಣಾ ಆಯೋಗವನ್ನು ನೇಮಿಸಿದ್ದರೂ, ಯಾವುದೇ ಸ್ಪಷ್ಟ ಪರಿಹಾರ ಸಿಗದೆ ರೈತರು ನಿರಾಶರಾಗಿದ್ದರು. ಈ ವೇಳೆ ಇದು ನಡೆದಿದೆ.
ನನ್ನ ತಾಯಿಯ ಆಶಯವೆಂದರೆ ತಮ್ಮ ಬಳಿ ಇದ್ದ ಆಭರಣಗಳನ್ನು ಮಾರಾಟ ಮಾಡುವ ಮೂಲಕ ಗ್ರಾಮದ ರೈತರ ಸಾಲವನ್ನು ಮರುಪಾವತಿಸಬೇಕು ಎಂಬ ಆಶಯ ಹೊಂದಿದ್ದರು. ಹೀಗಾಗಿ ನಾವು ತಾಯಿಯ ಬಯಕೆಯನ್ನು ಪೂರ್ಣಗಳಿಸಿದ್ದೇವೆ ಎಂದು ಬಾಬುಭಾಯಿ ಹೇಳಿದ್ದಾರೆ.
ರೈತರು 89,89,209 ರೂ. ಸಾಲವನ್ನು ಹೊಂದಿದ್ದರು. ನನ್ನ ಸಹೋದರ ಮತ್ತು ನಾನು ಬ್ಯಾಂಕ್ ಅಧಿಕಾರಿಗಳನ್ನು ಭೇಟಿಯಾಗಿ ನಮ್ಮ ಆಶಯವನ್ನು ಅವರಿಗೆ ತಿಳಿಸಿದೆವು ಮತ್ತು ಅಧಿಕಾರಿಗಳು ಸಹ ಸಹಕರಿಸಿದರು. ನಾವು ಗ್ರಾಮದ ರೈತರ ಒಟ್ಟು 89,89,209 ರೂಪಾಯಿಗಳನ್ನು ಪಾವತಿಸಿ, ರೈತರ ಹೆಸರಿನಲ್ಲಿ ಯಾವುದೇ ಸಾಲವಿಲ್ಲ ಎಂಬ ಪ್ರಮಾಣಪತ್ರಗಳನ್ನು ಬ್ಯಾಂಕಿನಿಂದ ಪಡೆದುಕೊಂಡು ಎಲ್ಲಾ ರೈತರಿಗೆ ವಿತರಿಸಿದೆವು. ನನ್ನ ಕುಟುಂಬ ಮತ್ತು ನಾನು ನಮ್ಮ ತಾಯಿಯ ಆಸೆಯನ್ನು ಈಡೇರಿಸಿ ಅವರಿಗೆ ನಿಜವಾದ ಗೌರವ ಸಲ್ಲಿಸಿದ್ದಕ್ಕಾಗಿ ಸಂತೋಷಪಡುತ್ತೇವೆ ಎಂದು ಹೇಳಿದ್ದಾರೆ.
ರೈತರಿಗೆ ಹೊಸ ಜೀವನದ ಆರಂಭ
ಜಿರಾ ಗ್ರಾಮದ ಎಲ್ಲಾ 299 ರೈತರಿಗೆ ಅವರ ‘ನೋ ಡ್ಯೂ ಸರ್ಟಿಫಿಕೇಟ್ ((No Dues Certificate)ಗಳನ್ನು’ ನೀಡಿದಾಗ ವಾತಾವರಣವು ಭಾವನಾತ್ಮಕವಾಯಿತು. ಶತಮಾನಗಳಷ್ಟು ಹಳೆಯ ಹೊರೆಗಳಿಂದ ಮುಕ್ತರಾಗಿ, ರೈತರ ಕಣ್ಣುಗಳಲ್ಲಿ ಸಂತೋಷದ ಕಣ್ಣೀರು ತುಂಬಿತ್ತು. ರೈತರು ಜಿರಾಭಾಯಿ ಅವರನ್ನು ಆಶೀರ್ವದಿಸಿದರು. ಸಂಪತ್ತನ್ನು ಮಾನವೀಯತೆಗಾಗಿ ಬಳಸಿದಾಗ, ಅದರ ಮೌಲ್ಯವು ಕೋಟ್ಯಂತರ ರೂಪಾಯಿಗಳಿಗಿಂತ ಹಲವು ಪಟ್ಟು ಹೆಚ್ಚಾಗುತ್ತದೆ ಎಂಬುದನ್ನು ಈ ಸಂದರ್ಭವು ಸಾಬೀತುಪಡಿಸಿತು.
ಮಾನವೀಯ ಕಾರ್ಯಗಳಿಗಾಗಿ ಬಳಸುವ ಸಂಪತ್ತು ಹಣದ ರೂಪದಲ್ಲಿ ಅಳೆಯಲಾಗದ ಪ್ರತಿಫಲವನ್ನು ನೀಡುತ್ತದೆ ಎಂಬುದನ್ನು ಬಾಬುಭಾಯಿಯವರ ಈ ಕಾರ್ಯವು ಸಾಬೀತುಪಡಿಸಿದೆ. ಸೌರಾಷ್ಟ್ರದ ಅಮ್ರೇಲಿ ಜಿಲ್ಲೆಯ ಜೀರಾ ಗ್ರಾಮದ 290 ಕುಟುಂಬಗಳಿಗೆ ಅವರ ತಾಯಿಯ ಪುಣ್ಯತಿಥಿಯು ಒಂದು ಹೊಸ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಈ ರೈತರು ಸಬಲರಾಗಲು ಮತ್ತು ಅವರ ಕುಟುಂಬಗಳು ವರ್ಷಗಳ ಕಾಲ ಬಾಬುಭಾಯಿಯವರನ್ನು ಸ್ಮರಿಸಲು ಈ ಕಾರ್ಯವು ದಾರಿಯಾಗಿದೆ.


CHANNAVEERESH M UPPIN
NO WORDS TO SAY ABOUT SHRI BABU BAI JEERAWALA …. GRATE MAN !