ನವದೆಹಲಿ: ದೆಹಲಿಯ ಕೆಂಪುಕೋಟೆ (Red Fort) ಬಳಿ ಸೋಮವಾರ ಸಂಜೆ ನಡೆದ ಭೀಕರ ಸ್ಫೋಟಕ್ಕೆ ಸಂಬಂಧಿಸಿದಂತೆ ಮಹತ್ವದ ಸಿಸಿಟಿವಿ ದೃಶ್ಯಾವಳಿ ಬಹಿರಂಗವಾಗಿದೆ. ಈ ಸ್ಫೋಟದಲ್ಲಿ ಒಂಭತ್ತು ಜನರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.
ಸ್ಫೋಟಗೊಂಡ ಹ್ಯುಂಡೈ ಐ20 (Hyundai i20) ಕಾರು ಸ್ಫೋಟಕ್ಕೆ ಕೆಲವೇ ನಿಮಿಷಗಳ ಮೊದಲು, ಐತಿಹಾಸಿಕ ಸುನೆಹ್ರಿ ಮಸೀದಿ (Sunehri Masjid) ಬಳಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ನಿಂತಿರುವುದು ದೃಶ್ಯಾವಳಿಯಲ್ಲಿ ದಾಖಲಾಗಿದೆ.
ಬೆಳ್ಳಿ ಬಣ್ಣದ ಈ ಐ20 ಕಾರು ಮಧ್ಯಾಹ್ನ 3:19ಕ್ಕೆ ಮಸೀದಿಗೆ ಹೊಂದಿಕೊಂಡಿರುವ ಪಾರ್ಕಿಂಗ್ ಪ್ರದೇಶವನ್ನು ಪ್ರವೇಶಿಸಿದೆ ಮತ್ತು ಸಂಜೆ 6:48ರವರೆಗೆ ಅಲ್ಲೇ ಇತ್ತು. ಸಂಜೆ 7 ಗಂಟೆಗೆ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಗೇಟ್ ನಂ. 1 ಬಳಿಯ ಸುಭಾಷ ಮಾರ್ಗ್‌ನಲ್ಲಿ ಸ್ಫೋಟ ಸಂಭವಿಸುವ ಕೆಲವೇ ಕ್ಷಣಗಳ ಮೊದಲು ಕಾರು ಅಲ್ಲಿಂದ ಹೊರಟಿರುವುದು ದಾಖಲಾಗಿದೆ. ಶಂಕಿತ ಆತ್ಮಹತ್ಯಾ ಬಾಂಬರ್ ಡಾ. ಉಮರ್ ಮೊಹಮ್ಮದ್, ಕೋಟೆಯ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಕಾರಿನೊಳಗೆ ಇದ್ದ ಎಂದು ಮೂಲಗಳು ತಿಳಿಸಿವೆ.
ದೆಹಲಿ ಪೊಲೀಸರ ಮೂಲಗಳ ಪ್ರಕಾರ, ತನಿಖಾಧಿಕಾರಿಗಳು ಕಾರು ನಿಲ್ಲಿಸಿದವರು ಮತ್ತು ತೆಗೆದುಕೊಂಡು ಹೋದವರನ್ನು ಗುರುತಿಸಲು, ಸಂಚಾರ ದೀಪದವರೆಗಿನ ಅದರ ಚಲನೆಯನ್ನು ಪತ್ತೆಹಚ್ಚಲು ಮತ್ತು ಪಾರ್ಕಿಂಗ್ ಅಟೆಂಡೆಂಟ್‌ರನ್ನು ಪ್ರಶ್ನಿಸಲು ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಸ್ಫೋಟದ ಕೆಲವೇ ನಿಮಿಷಗಳ ಮೊದಲು ಕಾರು ನಿರ್ಗಮನ
ಇನ್ನೊಂದು ಸಿಸಿಟಿವಿ ತುಣುಕಿನಲ್ಲಿ ಸ್ಫೋಟಕ್ಕೆ ಸ್ವಲ್ಪ ಮೊದಲು, ಅದೇ ಕಾರು ಸಂಜೆಯ ದಟ್ಟಣೆಯ ಟ್ರಾಫಿಕ್ ನಡುವೆ ಚಲಿಸುತ್ತಿರುವುದು ಸೆರೆಯಾಗಿದೆ. ದೃಶ್ಯಾವಳಿಯಲ್ಲಿ ಚಾಲಕ ಕಪ್ಪು ಮುಖವಾಡ (Face Mask) ಧರಿಸಿರುವುದು ಗೋಚರಿಸಿದೆ.
ಇನ್ನೊಂದು ಕ್ಯಾಮರಾ ಕೋನವು ಅನುಮಾನವನ್ನು ತೀವ್ರಗೊಳಿಸಿದೆ; ಮುಖವಾಡ ಧರಿಸಿದ ವ್ಯಕ್ತಿಯು ಭಯೋತ್ಪಾದಕ ಗುಂಪಿನೊಂದಿಗೆ ಸಂಬಂಧ ಹೊಂದಿದ್ದ ಫರಿದಾಬಾದ್ ಮೂಲದ ತಲೆಮರೆಸಿಕೊಂಡಿರುವ ವ್ಯಕ್ತಿ ಡಾ. ಉಮರ್ ಮೊಹಮ್ಮದ್ ಅವರಂತೆ ಕಾಣುತ್ತಿದ್ದಾನೆ ಎನ್ನಲಾಗಿದೆ. ಚಾಲಕನ ಗುರುತನ್ನು ಪರಿಶೀಲಿಸಲು ತನಿಖಾಧಿಕಾರಿಗಳು ಈಗ ಅನೇಕ ಸಿಸಿಟಿವಿ ಕೋನಗಳನ್ನು ವಿಶ್ಲೇಷಿಸುತ್ತಿದ್ದಾರೆ. ದೃಶ್ಯಾವಳಿ ಮತ್ತು ಸ್ಥಳೀಯ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕನಿಷ್ಠ 13 ಶಂಕಿತರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಸ್ಫೋಟದ ಶಂಕಿತ ಆತ್ಮಹತ್ಯಾ ಬಾಂಬರ್ ಡಾ. ಉಮರ್ ಮೊಹಮ್ಮದ್, ಕೋಟೆಯ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಕಾರಿನೊಳಗೆ ಇದ್ದರು ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಕಾರು ನಿಲ್ಲಿಸಿದ ಆತ ಒಂದು ಕ್ಷಣವೂ ಕಾರಿನಿಂದ ಇಳಿಯಲಿಲ್ಲ. ಶಂಕಿತ ಆತ್ಮಹತ್ಯಾ ಬಾಂಬರ್ ಯಾರಿಗೋ ಕಾಯುತ್ತಿದ್ದ ಅಥವಾ ಪಾರ್ಕಿಂಗ್ ಸ್ಥಳದಲ್ಲಿ ಸೂಚನೆಗಳಿಗಾಗಿ ಕಾಯುತ್ತಿದ್ದ ಎಂದು ಶಂಕಿಸಲಾಗಿದೆ.
ಗೃಹ ಸಚಿವರ ಹೇಳಿಕೆ, ತನಿಖೆ ತೀವ್ರ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ಫೋಟ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖಾ ಸಂಸ್ಥೆಗಳು ಈ ಹೈ-ಇಂಟೆನ್ಸಿಟಿ ಸ್ಫೋಟವನ್ನು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿವೆ. ಮಂಗಳವಾರ ಉನ್ನತ ಭದ್ರತಾ ಅಧಿಕಾರಿಗಳೊಂದಿಗೆ ಸ್ಫೋಟದ ಬಗ್ಗೆ ವಿವರವಾದ ವಿಶ್ಲೇಷಣೆ ನಡೆಸಲಾಗುವುದು ಎಂದು ಹೇಳಿದ್ದಾರೆ. “ಎಲ್ಲಾ ಸಾಧ್ಯತೆಗಳನ್ನು ಪರಿಶೋಧಿಸಲಾಗುತ್ತಿದೆ ಮತ್ತು ಎಲ್ಲಾ ಆಯ್ಕೆಗಳನ್ನು ಗಣನೆಗೆ ತೆಗೆದುಕೊಂಡು ಸಂಪೂರ್ಣ ತನಿಖೆ ನಡೆಸಲಾಗುವುದು” ಎಂದು ಗೃಹ ಸಚಿವರು ತಿಳಿಸಿದ್ದಾರೆ.
ಕಾಶ್ಮೀರ ನಂಟು: ರೈಡ್‌ಗಳು, ಬಂಧನ
ತನಿಖೆಯನ್ನು ದೆಹಲಿಯ ಆಚೆಗೂ ವಿಸ್ತರಿಸಲಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ರಾತ್ರೋರಾತ್ರಿ ಹಲವು ದಾಳಿಗಳನ್ನು ನಡೆಸಲಾಗಿದೆ.
ಈ ಘಟನೆಗೆ ಸಂಬಂಧಿಸಿದ ಭಯೋತ್ಪಾದಕ ಗುಂಪಿನ ಪಟ್ಟಿಯಲ್ಲಿ ಹೆಸರು ಕಂಡುಬಂದಿರುವ ಶೋಪಿಯಾನ್‌ನ ನಾಡಿಗಾಂನ ಇಮ್ರಾನ್ ಅಲಿಯಾಸ್ ಮೌಲ್ವಿ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಪುಲ್ವಾಮಾದಲ್ಲಿ, ನಿವೃತ್ತ ಪಟ್ವಾರಿ ಗುಲಾಮ್ ಮೊಹಮ್ಮದ್ ದಾರ್ ಪುತ್ರ ಮತ್ತು ಟಿಪ್ಪರ್ ಚಾಲಕನಾದ ತಾರಿಕ್ ಅಹ್ಮದ್ ದಾರ್ (38) ಎಂಬಾತನನ್ನು ರಾತ್ರಿಯೇ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕಾರಿಗೆ ಸರಣಿ ಮಾಲೀಕತ್ವ
ದೆಹಲಿ ಪೊಲೀಸರು ಹ್ಯುಂಡೈ ಐ20 ಕಾರಿನ ಮಾಲೀಕತ್ವದ ಸರಣಿಯನ್ನು ಪತ್ತೆಹಚ್ಚಿದ್ದು, ಇದು ಅಂತಿಮವಾಗಿ ಪ್ರಮುಖ ಶಂಕಿತ ಡಾ. ಉಮರ್ ಮೊಹಮ್ಮದ್ ಕಡೆಗೆ ತಲುಪಿದೆ. ಈ ಮಾಲೀಕತ್ವದ ಸರಣಿಯಲ್ಲಿ ಕಾರು ಅನೇಕ ಬಾರಿ ಕೈ ಬದಲಾಗಿದೆ.
ಗುಪ್ತಚರ ಮೂಲಗಳ ಪ್ರಕಾರ, ಕಾರು ಮೂಲತಃ ಎಂಡಿ ಸಲ್ಮಾನ್ ಒಡೆತನದಲ್ಲಿತ್ತು, ನಂತರ ಅದನ್ನು ನಾದೀಮ್ ಎಂಬಾತನಿಗೆ ಮಾರಾಟ ಮಾಡಲಾಯಿತು. ನದೀಮ್ ಅದನ್ನು ಫರಿದಾಬಾದ್‌ನ ರಾಯಲ್ ಕಾರ್ ಝೋನ್ ಎಂಬ ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್‌ಗೆ ಮಾರಾಟ ಮಾಡಿದ್ದಾನೆ.
ಅಲ್ಲಿಂದ, ವಾಹನವನ್ನು ಆಮೀರ್ ಎಂಬಾತ ಖರೀದಿಸಿದ್ದಾನೆ, ನಂತರ ಅದನ್ನು ಪುಲ್ವಾಮಾ ಮೂಲದ ತಾರಿಕ್ ಖರೀದಿಸಿದ್ದಾನೆ, ತಾರಿಕ್ ಕೂಡ ಫರಿದಾಬಾದ್ ಭಯೋತ್ಪಾದಕ ಗುಂಪಿನ ಸದಸ್ಯರಾಗಿದ್ದಾನೆ ಎಂದು ನಂಬಲಾಗಿದೆ. ಅಂತಿಮವಾಗಿ, ಈ ವಾಹನವು ಕೆಂಪುಕೋಟೆ ಸ್ಫೋಟದ ಪ್ರಮುಖ ಶಂಕಿತ ಡಾ. ಉಮರ್ ಮೊಹಮ್ಮದ್ ಬಳಿ ಬಂದಿದೆ.
ಕಾರಿನ ಹಸ್ತಾಂತರಗಳು ಕಾನೂನುಬದ್ಧವಾಗಿದೆಯೇ ಅಥವಾ ಮಾಲೀಕತ್ವವನ್ನು ಮರೆಮಾಚಲು ಉದ್ದೇಶಪೂರ್ವಕ ಪ್ರಯತ್ನವೇ ಎಂಬುದನ್ನು ನಿರ್ಧರಿಸಲು ದೆಹಲಿ ಪೊಲೀಸರ ವಿಶೇಷ ದಳ ಮತ್ತು ಅಪರಾಧ ವಿಭಾಗವು ಅಮೀರ್ ಮತ್ತು ತಾರಿಕ್ ಇಬ್ಬರನ್ನೂ ವಿಚಾರಣೆ ನಡೆಸುತ್ತಿದೆ.
ಸೆಪ್ಟೆಂಬರ್ 20, 2025 ರಂದು ಫರಿದಾಬಾದ್‌ನಲ್ಲಿ ಅಕ್ರಮ ಪಾರ್ಕಿಂಗ್ ಮಾಡಿದ್ದಕ್ಕಾಗಿ ಇದೇ ವಾಹನಕ್ಕೆ ದಂಡ ವಿಧಿಸಲಾಗಿತ್ತು, ಈ ವಿವರವನ್ನು ಅಪರಾಧ ವಿಭಾಗವು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ.
ತನಿಖಾಧಿಕಾರಿಗಳು ಕಬ್ಜಾದ ಹಾದಿಯನ್ನು ಅಸ್ಪಷ್ಟಗೊಳಿಸಲು ವಂಚನೆಯ ದಾಖಲೆಗಳನ್ನು ಬಳಸಲಾಗಿದೆ ಎಂದು ಶಂಕಿಸಿದ್ದಾರೆ, ಏಕೆಂದರೆ ಅನೇಕ ವಹಿವಾಟುಗಳು ಅನೌಪಚಾರಿಕವಾಗಿ ಮತ್ತು ಸರಿಯಾದ ನೋಂದಣಿ ಇಲ್ಲದೆ ನಡೆದಿವೆ. ಅನೇಕ ವಿನಿಮಯಗಳು ನಡೆದಿದ್ದರೂ, ಕಾರಿನ ಆರ್‌ಸಿ (ನೋಂದಣಿ ಪ್ರಮಾಣಪತ್ರ) ಇನ್ನೂ ಸಲ್ಮಾನ್ ಹೆಸರಿನಲ್ಲಿಯೇ ಉಳಿದಿದೆ.
ಏತನ್ಮಧ್ಯೆ, ದೆಹಲಿಯ ಅತಿ ಹೆಚ್ಚು ಜನದಟ್ಟಣೆಯ ಪ್ರದೇಶಗಳಲ್ಲಿ ಒಂದಾದ ಚಾಂದನಿ ಚೌಕ್ ಬಳಿಯ ಸ್ಫೋಟದ ಸ್ಥಳವನ್ನು ಸೀಲ್ ಮಾಡಲಾಗಿದೆ ಮತ್ತು ವಿಧಿವಿಜ್ಞಾನ ತಂಡಗಳು ತಮ್ಮ ವಿಶ್ಲೇಷಣೆಯನ್ನು ಮುಂದುವರಿಸಿವೆ. ಟ್ರಾಫಿಕ್‌ನ ರೆಡ್ ಸಿಗ್ನಲ್ ವೇಳೆ ವಾಹನಗಳು ನಿಂತಿರುವಾಗ ಸಂಭವಿಸಿದ ಈ ಕಾರು ಸ್ಫೋಟ ಸಂಭವಿಸಿದ್ದು, ಸಮೀಪದ ವಾಹನಗಳನ್ನು ಹಾನಿಗೊಳಿಸಿದೆ ಮತ್ತು ಅಂಗಡಿಗಳ ಮುಂಭಾಗದ ಗಾಜುಗಳನ್ನು ಒಡೆದು ಹಾಕಿದ್ದು, ಜನನಿಬಿಡ ಪ್ರದೇಶದಲ್ಲಿ ಭಯವನ್ನು ಸೃಷ್ಟಿಸಿದೆ.
ನೆರೆಯ ಹರಿಯಾಣದ ಫರಿದಾಬಾದ್‌ನಲ್ಲಿ 2,900 ಕೆಜಿ ಸ್ಫೋಟಕಗಳ ಬೃಹತ್ ಸಾಗಣೆ ಪತ್ತೆಯಾದ ದಿನದಂದೇ ದೆಹಲಿಯಲ್ಲಿ ಈ ಘಟನೆ ಸಂಭವಿಸಿದೆ. ತನಿಖಾಧಿಕಾರಿಗಳು ಮಾಡ್ಯೂಲ್‌ನ ಇಬ್ಬರು ಪ್ರಮುಖ ಸದಸ್ಯರಾದ ಡಾ. ಮುಜಮ್ಮಿಲ್ ಶಕೀಲ್ ಮತ್ತು ಡಾ. ಆದಿಲ್ ರಾಥರ್ ಎಂಬವರನ್ನು ಬಂಧಿಸಿ ಸ್ಫೋಟಕಗಳನ್ನು ವಶಪಡಿಸಿಕೊಂಡ ನಂತರ, ಕಾರಿನ ಮಾಲೀಕ ಡಾ. ಉಮರ್ ಮೊಹಮ್ಮದ್ ಭಯಭೀತನಾಗಿ ಕೆಂಪು ಕೋಟೆಯ ಬಳಿ ಸ್ಫೋಟಿಸಿರಬಹುದು ಎಂದು ಮೂಲಗಳು ಶಂಕಿಸಿವೆ. ಇನ್ನೂ ಇಬ್ಬರು ಸಹಚರರೊಂದಿಗೆ ದಾಳಿಯನ್ನು ಯೋಜಿಸಲಾಗಿತ್ತು ಮತ್ತು ಕಾರಿನಲ್ಲಿ ಡಿಟೋನೇಟರ್ ಅನ್ನು ಇರಿಸಿದ್ದರು ಎಂದು ಮೂಲಗಳು ಶಂಕಿಸಿವೆ.
ಫರಿದಾಬಾದ್‌ನಲ್ಲಿ ಪತ್ತೆಯಾದ ಅಮೋನಿಯಂ ನೈಟ್ರೇಟ್ ಅನ್ನು ಸ್ಫೋಟಕ್ಕೆ ಬಳಸಲಾಗಿದೆ ಎಂದು ಮೂಲಗಳು ತಿಳಿಸಿವೆ.


ನಿಮ್ಮ ಕಾಮೆಂಟ್ ಬರೆಯಿರಿ