ದೆಹಲಿ ಕೆಂಪು ಕೋಟೆ ಕಾರು ಸ್ಫೋಟ : ಫರಿದಾಬಾದ್‌ ಬಂಧನದ ನಂತರ ಭಯಭೀತನಾದ ಶಂಕಿತ ಉಗ್ರ ಸ್ಫೋಟಿಸಿಕೊಂಡನೇ…?

ನವದೆಹಲಿ: ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆಯ ಹೊರಗೆ ನಡೆದ ಕಾರು ಸ್ಫೋಟವು ಬಹುಶಃ ಫಿದಾಯಿನ್ ಶೈಲಿಯ ಭಯೋತ್ಪಾದಕ ದಾಳಿಯಾಗಿರಬಹುದು, ಇದನ್ನು ಫರಿದಾಬಾದ್ ಮೂಲದ ಭಯೋತ್ಪಾದಕ ಘಟಕದ ಪ್ರಮುಖ ಸದಸ್ಯ ಡಾ. ಮೊಹಮ್ಮದ್ ಉಮರ್ ನಡೆಸಿದ್ದಾನೆ ಎಂದು ಉನ್ನತ ಗುಪ್ತಚರ ಮೂಲಗಳು ಭಾವಿಸಿವೆ.
ಫರಿದಾಬಾದ್ ಘಟಕದ ಪ್ರಮುಖ ಆರೋಪಿ ಡಾ. ಮುಜಮ್ಮಿಲ್ ಶಕೀಲ್ ಬಂಧನದ ನಂತರ ಉಮರ್ ಭಯಭೀತರಾನಾಗಿದ್ದ ಎಂದು ನಂಬಲಾಗಿದೆ. ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ಬಳಿ ಉಮರ್ ಉದ್ದೇಶಪೂರ್ವಕವಾಗಿ ಸ್ಫೋಟಕಗಳಿಂದ ತುಂಬಿದ ಹುಂಡೈ i20 ಅನ್ನು ಸ್ಫೋಟಿಸಿರಬಹುದು. ಈ ಘಟನೆಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ.
ದೆಹಲಿಯ ಐತಿಹಾಸಿಕ ಕೆಂಪು ಕೋಟೆ (Red Fort) ಬಳಿ ನಡೆದ ಪ್ರಬಲ ಸ್ಫೋಟದ ತನಿಖೆಯಲ್ಲಿ ಭಯೋತ್ಪಾದನೆ ನೇಮಕಾತಿ ಹಾಗೂ ಕಾರ್ಯಾಚರಣೆಯಲ್ಲಿ ಬದಲಾವಣೆಗಳು ಕಂಡುಬಂದಿವೆ. ಈ ಸ್ಫೋಟದ ಮೂರು ವಾರಗಳ ಮೊದಲು ಶ್ರೀನಗರದ ಹಲವು ಭಾಗಗಳಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (Jaish-e-Mohammad) ಬೆಂಬಲಿತ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದವು. ಈ ಘಟನೆಯನ್ನು ತನಿಖೆ ಮಾಡಿದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಉತ್ತರ ಪ್ರದೇಶ, ಹರಿಯಾಣ ಹಾಗೂ ದೆಹಲಿ ವರೆಗೂ ತಲುಪಿದ್ದು, ಈ ತನಿಖೆಯು ಭಯೋತ್ಪಾದಕ ನೇಮಕಾತಿಯಲ್ಲಿನ ಮೂಲಭೂತ ಬದಲಾವಣೆಯನ್ನು ಬಯಲು ಮಾಡಿದೆ. ಇದನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು “ವೈಟ್‌ ಕಾಲರ್ ಭಯೋತ್ಪಾದನಾ ಪರಿಸರ ವ್ಯವಸ್ಥೆ” ಎಂದು ಬಣ್ಣಿಸಿದ್ದಾರೆ.

ಮೂವರು ಕಾಶ್ಮೀರಿ ವೈದ್ಯರ ವಿಚಾರಣೆ
ಸೋಮವಾರ (ನವೆಂಬರ್‌ 11) ಸಂಜೆ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಮೂವರು ಕಾಶ್ಮೀರಿ ವೈದ್ಯರಾದ ಡಾ. ಅಬ್ದೀಲ್ ಅಹ್ಮದ್ ರಥೆರ್, ಡಾ. ಮುಜಮ್ಮಿಲ್ ಶಕೀಲ್ ಮತ್ತು ಡಾ. ಉಮರ್ ಮೊಹಮ್ಮದ್ ಎಂಬವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ರಥೆರ್ ಮತ್ತು ಹರಿಯಾಣದ ಫರಿದಾಬಾದ್‌ನಲ್ಲಿ ಶಕೀಲ್‌ನನ್ನು ಬಂಧಿಸಿದ ನಂತರ, ಬಾಂಬ್ ತಯಾರಿಕೆಗೆ ಬಳಸುವ ಅಪಾರ ಪ್ರಮಾಣದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಭದ್ರತಾ ಸಂಸ್ಥೆಗಳ ಪ್ರಕಾರ, ಫರಿದಾಬಾದ್‌ನ ಎರಡು ಕೊಠಡಿಗಳಿಂದ ವಶಪಡಿಸಿಕೊಂಡಿರುವ ಸುಮಾರು 2,900 ಕೆ.ಜಿ. ಬಾಂಬ್ ತಯಾರಿಕಾ ಸಾಮಗ್ರಿಯು ಅಮೋನಿಯಂ ನೈಟ್ರೇಟ್ ಎಂದು ಶಂಕಿಸಲಾಗಿದೆ. ಆರಂಭಿಕ ತನಿಖೆಯಲ್ಲಿ, ಕೆಂಪು ಕೋಟೆ ಬಳಿ ನಡೆದ ಸ್ಫೋಟದಲ್ಲೂ ಇದೇ ರಾಸಾಯನಿಕವನ್ನು ಬಳಸಲಾಗಿದೆ ಎಂದು ತಿಳಿದುಬಂದಿದೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ಕೆಂಪು ಕೋಟೆ ಬಳಿ ಸಂಭವಿಸಿದ್ದು ಏನು?
ಸೋಮವಾರ ಸಂಜೆ ಸುಮಾರು 6:52 ರ ಸುಮಾರಿಗೆ, ಕೆಂಪು ಕೋಟೆ ಬಳಿಯ ನೇತಾಜಿ ಸುಭಾಷ ಮಾರ್ಗದ ಟ್ರಾಫಿಕ್ ಸಿಗ್ನಲ್‌ನಲ್ಲಿ ಬಿಳಿ ಬಣ್ಣದ ಹ್ಯುಂಡೈ ಐ20 ಕಾರು ನಿಂತಿತ್ತು. ಇದರ ಒಂದು ಬದಿಯಲ್ಲಿ ಕೆಂಪು ಕೋಟೆ ಇದ್ದರೆ, ಇನ್ನೊಂದು ಬದಿಯಲ್ಲಿ ಚಾಂದನಿ ಚೌಕ್ ಇತ್ತು. ಇದ್ದಕ್ಕಿದ್ದಂತೆ, ಕಾರು ಮತ್ತು ಸುತ್ತಮುತ್ತಲಿನ ಹಲವು ವಾಹನಗಳನ್ನು ಛಿದ್ರಗೊಳಿಸಿದ ಪ್ರಬಲ ಸ್ಫೋಟ ಸಂಭವಿಸಿತು.
ಕಣ್ಣಾರೆ ಕಂಡವರ ಪ್ರಕಾರ, ಅವರು “ದೊಡ್ಡ ಬೆಂಕಿಯ ಗೋಲ” ವನ್ನು ಕಂಡರು. 15ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಅರ್ಧ ಗಂಟೆಯ ನಂತರ ಬೆಂಕಿಯನ್ನು ಹತೋಟಿಗೆ ತಂದವು. ಈ ಸ್ಫೋಟದಿಂದ ಒಂಬತ್ತು ಜನರು ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಭಾರತದ ಭದ್ರತಾ ಸಂಸ್ಥೆಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾದ ಈ ಸ್ಫೋಟದ ಹಿಂದೆ ಇರುವ ಸಂಚನ್ನು ಮುಂದಿನ 12 ಗಂಟೆಗಳ ಒಳಗೆ ಬಹು ಭದ್ರತಾ ಸಂಸ್ಥೆಗಳು ಪತ್ತೆ ಹಚ್ಚಿದವು.

ಅನೇಕರ ಕೈ ಬದಲಿಸಿದ ಕಾರು…
ಸ್ಫೋಟದ ನಂತರ, ಪೊಲೀಸರು HR26CE7674 ನೋಂದಣಿ ಸಂಖ್ಯೆಯ ಐ20 ಕಾರಿನ ಮಾಲೀಕತ್ವದ ದಾಖಲೆಗಳನ್ನು ಪತ್ತೆಹಚ್ಚಿದರು. ಕಾರು ಸಲ್ಮಾನ್ ಹೆಸರಿನಲ್ಲಿ ನೋಂದಣಿಯಾಗಿತ್ತು. ಸಲ್ಮಾನ್‌ನನ್ನು ವಿಚಾರಿಸಿದಾಗ, ಆತ ಮಾರ್ಚ್‌ನಲ್ಲಿ ದೇವಿಂದರಗೆ, ನಂತರ ಅದು ಅಮೀರ್‌ಗೆ, ಆ ನಂತರ ತಾರಿಕ್‌ಗೆ ಮತ್ತು ತಾರೀಕ್‌ನಿಂದ ಡಾ. ಉಮರ್ ಮೊಹಮ್ಮದ್‌ಗೆ ಮಾರಾಟವಾಗಿರುವುದು ತಿಳಿದುಬಂದಿದೆ.
ಪೋಸ್ಟರ್ ಪ್ರಕರಣದಲ್ಲಿ ಬಂಧಿತನಾಗಿದ್ದ ಆದೀಲ್‌ನ ಆಪ್ತ ಸಹವರ್ತಿ ಉಮರ್, ಸ್ಫೋಟ ಸಂಭವಿಸುವ ಸಮಯದಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಎಂದು ನಂಬಲಾಗಿದೆ. ಸ್ಫೋಟದ ಮೊದಲು ಸಿಸಿಟಿವಿ ದೃಶ್ಯಾವಳಿಯು ಉಮರ್‌ನ ಮುಖದ ಭಾಗವನ್ನು ತೋರಿಸಿದ್ದು, ಪೊಲೀಸರು ಕಾರು ಚಾಲಕನ ಗುರುತನ್ನು ದೃಢೀಕರಿಸಲು ಡಿಎನ್‌ಎ ಪರೀಕ್ಷೆಗೆ ಯೋಜಿಸುತ್ತಿದ್ದಾರೆ.

ಆತ್ಮಹತ್ಯಾ ದಾಳಿಯ ಶಂಕೆ?
ಅಧಿಕಾರಿಗಳು ಇದನ್ನು ಇನ್ನೂ ‘ಭಯೋತ್ಪಾದಕ ದಾಳಿ’ ಎಂಬ ಪದವನ್ನು ಬಳಸದಿದ್ದರೂ, ಪೊಲೀಸರು ಭಯೋತ್ಪಾದನಾ ಪ್ರಕರಣಗಳಲ್ಲಿ ಬಳಸುವ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭದ್ರತಾ ಸಂಸ್ಥೆಗಳು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿವೆ ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, ಭಯೋತ್ಪಾದನಾ ವಿರೋಧಿ ಸಂಸ್ಥೆ ರಾಷ್ಟ್ರೀಯ ತನಿಖಾ ದಳ (NIA) ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ತನಿಖಾಧಿಕಾರಿಗಳು ಇದು ಭಯಭೀತನಾದ ಉಮರ್ ನಡೆಸಿದ ಆತ್ಮಹತ್ಯಾ ದಾಳಿ ಇರಬಹುದೇ ಎಂದು ಪರಿಶೀಲಿಸುತ್ತಿದ್ದಾರೆ. ತಮ್ಮ ಸಹಚರರ ಬಂಧನ ಮತ್ತು ಬೃಹತ್ ಪ್ರಮಾಣದ ಬಾಂಬ್ ತಯಾರಿಕಾ ಸಾಮಗ್ರಿಗಳ ವಶಪಡಿಸಿಕೊಳ್ಳುವಿಕೆಯಿಂದ ಭಯಗೊಂಡ ಉಮರ್ ಹತಾಶೆಯಿಂದ ಆತ್ಮಹತ್ಯಾ ದಾಳಿ ನಡೆಸಲು ನಿರ್ಧರಿಸಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಹೊಸ ಯುಗದ ಉಗ್ರರ ಮುಖಗಳು?
ಉಮರ್, ಆದೀಲ್ ಮತ್ತು ಮುಜಮ್ಮಿಲ್ ವೃತ್ತಿಯಲ್ಲಿ ವೈದ್ಯರು. ಆದೀಲ್ ಅನಂತನಾಗ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡಿ ನಂತರ ಸಹರಾನ್‌ಪುರದ ಖಾಸಗಿ ಆಸ್ಪತ್ರೆಗೆ ಹೋಗಿದ್ದ. ಮುಜಮ್ಮಿಲ್ ಕಳೆದ ಮೂರು ವರ್ಷಗಳಿಂದ ಅಲ್ ಫಲಾ ಸ್ಕೂಲ್ ಆಫ್ ಮೆಡಿಕಲ್ ಸೈನ್ಸಸ್ & ರಿಸರ್ಚ್ ಸೆಂಟರ್‌ನಲ್ಲಿ ಹಿರಿಯ ನಿವಾಸಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಮುಜಮ್ಮಿಲ್‌ನ ಸಹೋದ್ಯೋಗಿ, ಲಕ್ನೋದ ವೈದ್ಯೆ ಡಾ. ಶಾಹೀನ್ ಶಾಹಿದ್ ಎಂಬವಳ ಕಾರಿನಿಂದಲೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ನಂತರ ಆಕೆಯನ್ನು ಬಂಧಿಸಲಾಗಿದೆ.
ವೈದ್ಯರಂತಹ ಉನ್ನತ ಶಿಕ್ಷಣ ಪಡೆದ ವೃತ್ತಿಪರರ ಒಳಗೊಳ್ಳುವಿಕೆಯು ಭಯೋತ್ಪಾದಕ ಸಂಘಟನೆಗಳು ತಮ್ಮ ನೇಮಕಾತಿಯನ್ನು ಗುರುತಿಸುವಲ್ಲಿ ಮೂಲಭೂತ ಬದಲಾವಣೆಯ ಸಂಕೇತವಾಗಿದೆ ಎಂದು ಭದ್ರತಾ ಸಂಸ್ಥೆಗಳು ಹೇಳಿವೆ. ಈ “ವೈಟ್ ಕಾಲರ್” ಉಗ್ರರ ಗುಂಪು ವಿಚಾರಣೆಗೆ, ಸಮನ್ವಯಕ್ಕೆ, ಹಣದ ವರ್ಗಾವಣೆಗೆ ಮತ್ತು ಲಾಜಿಸ್ಟಿಕ್ಸ್‌ಗೆ ಎನ್‌ಕ್ರಿಪ್ಟ್ ಮಾಡಿದ ಚಾನೆಲ್‌ಗಳನ್ನು ಬಳಸುತ್ತಿದ್ದರು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement