ನಿಧಾನ ಚಲಿಸುತ್ತಿದ್ದ ನೂರಾರು ವಾಹನಗಳು, ನಂತರ ದೊಡ್ಡ ಸ್ಫೋಟ ; ದೆಹಲಿ ಕಾರ್ ಸ್ಫೋಟದ ಕ್ಷಣದ ವೀಡಿಯೊ ವೈರಲ್‌

ನವದೆಹಲಿ: ರಾಷ್ಟ್ರ ರಾಜಧಾನಿಯ ಕೆಂಪುಕೋಟೆ (Red Fort) ಬಳಿ ನಿಧಾನವಾಗಿ ಚಲಿಸುತ್ತಿದ್ದ ಕಾರಿನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಸಿಸಿಟಿವಿ ದೃಶ್ಯಾವಳಿಗಳು ಬುಧವಾರ ಬಹಿರಂಗಗೊಂಡಿವೆ. ಈ ಭಯೋತ್ಪಾದಕ ದಾಳಿಯಲ್ಲಿ ಇದುವರೆಗೆ ಒಂಬತ್ತು ಮಂದಿ ಸಾವನ್ನಪ್ಪಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆಯನ್ನು ಆರಂಭಿಸಿದೆ.
ಸಿಸಿಟಿವಿಯಲ್ಲಿ ಸೆರೆಯಾದ 15-ಸೆಕೆಂಡುಗಳ ವೀಡಿಯೊ ತುಣುಕಿನಲ್ಲಿ, ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ವಾಹನ ದಟ್ಟಣೆ ಹೆಚ್ಚಿರುವ ಪ್ರದೇಶದಲ್ಲಿ ಡಜನ್‌ಗಟ್ಟಲೆ ವಾಹನಗಳು ನಿಧಾನವಾಗಿ ಚಲಿಸುತ್ತಿರುವುದು ಕಂಡುಬಂದಿದೆ. ಈ ವೇಳೆ, ಸ್ಫೋಟದ ಮೂಲವೆಂದು ನಂಬಲಾದ ಐ20 ಕಾರ್ (i20 car) ಪ್ರದೇಶದಲ್ಲಿ ಸ್ಫೋಟಗೊಂಡಾಗ ದೊಡ್ಡ ಬೆಂಕಿಯ ಚೆಂಡು ಕಾಣಿಸಿಕೊಂಡಿದೆ. ಸಿಸಿಟಿವಿ ನಿಯಂತ್ರಣ ಕೊಠಡಿ ನೀಡಿದ ದೃಶ್ಯಾವಳಿಯ ಪ್ರಕಾರ, ಸೋಮವಾರ ಸಂಜೆ 6:50 ಕ್ಕೆ ಸ್ಫೋಟ ಸಂಭವಿಸಿದ್ದು, ಹಲವು ವಾಹನಗಳು ಸುಟ್ಟು ಕರಕಲಾಗಿವೆ.

ವೈಟ್ ಕಾಲರ್” ಭಯೋತ್ಪಾದಕ ಜಾಲ ಪತ್ತೆ, ವೈದ್ಯರ ಬಂಧನ
ಈ ಭೀಕರ ಸ್ಫೋಟ ಸಂಭವಿಸುವ ಕೆಲವೇ ಗಂಟೆಗಳ ಮೊದಲು, ಕಾಶ್ಮೀರ, ಹರಿಯಾಣ ಮತ್ತು ಉತ್ತರ ಪ್ರದೇಶದಾದ್ಯಂತ ಹರಡಿಕೊಂಡಿದ್ದ ಜೈಶ್-ಎ-ಮೊಹಮ್ಮದ್ (Jaish-e-Mohammed) ಮತ್ತು ಅನ್ಸಾರ್ ಗಜ್ವಾತ್-ಉಲ್-ಹಿಂದ್ (Ansar Ghazwat-ul-Hind) ಒಳಗೊಂಡಿರುವ “ವೈಟ್ ಕಾಲರ್” ಭಯೋತ್ಪಾದಕ ಜಾಲವನ್ನು ಬೇಧಿಸುವಲ್ಲಿ ಪೊಲೀಸ್‌ ತಂಡಗಳು ಯಶಸ್ವಿಯಾಗಿದ್ದವು. ಈ ಕಾರ್ಯಾಚರಣೆಯಲ್ಲಿ ಮೂವರು ವೈದ್ಯರು ಸೇರಿದಂತೆ ಒಟ್ಟು ಎಂಟು ಜನರನ್ನು ಬಂಧಿಸಿ, 2,900 ಕೆ.ಜಿ. ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಸೋಮವಾರ ಬಂಧಿತರಾದವರಲ್ಲಿ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯಕ್ಕೆ (Al Falah University) ಸಂಬಂಧಿಸಿದ ಡಾ. ಮುಜಮ್ಮಿಲ್ ಗಾನೈ ಮತ್ತು ಮಹಿಳಾ ವೈದ್ಯೆ ಡಾ. ಶಾಹೀನ್ ಸಯೀದ್ ಸೇರಿದ್ದಾರೆ. ಇವರ ವಶದಿಂದ 360 ಕೆ.ಜಿ. ಅಮೋನಿಯಂ ನೈಟ್ರೇಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. ದೆಹಲಿಯಿಂದ ಸುಮಾರು 45 ಕಿ.ಮೀ. ದೂರದಲ್ಲಿರುವ ಹರಿಯಾಣದ ಫರಿದಾಬಾದ್ ಜಿಲ್ಲೆಯ ಧೌಜ್‌ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯವು ಯುಜಿಸಿ ಮಾನ್ಯತೆ ಪಡೆದ ಖಾಸಗಿ ಸಂಸ್ಥೆಯಾಗಿದೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ಕೆಂಪುಕೋಟೆ ಬಳಿ ಸ್ಫೋಟಗೊಂಡ ಕಾರನ್ನು ಚಲಾಯಿಸುತ್ತಿದ್ದ ಡಾ. ಉಮರ್ ನಬಿ ಸಹ ಅಲ್ ಫಲಾಹ್ ವಿಶ್ವವಿದ್ಯಾಲಯದೊಂದಿಗೆ ಸಂಪರ್ಕ ಹೊಂದಿದ್ದ. ನಬಿ ಸ್ಫೋಟದಲ್ಲಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ನಂಬಲಾಗಿದೆ.
ಸದ್ಯ ಸ್ಫೋಟಗೊಂಡ ಕಾರಿನ ಸಂಬಂಧ ಗುರುಗ್ರಾಮದ ಮೂವರು ಮತ್ತು ಫರಿದಾಬಾದ್‌ನ ಒಬ್ಬರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದು, ನಗರದಾದ್ಯಂತ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ದೆಹಲಿಯ ಎಲ್ಲಾ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಅರೆಸೇನಾ ಪಡೆಗಳನ್ನು ದೊಡ್ಡ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಹೆಚ್ಚಿದ ಭದ್ರತಾ ಕ್ರಮಗಳ ಭಾಗವಾಗಿ, ನಗರಕ್ಕೆ ಪ್ರವೇಶಿಸುವ ಮತ್ತು ಹೊರಹೋಗುವ ವಾಹನಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement