ವೀಡಿಯೊಗಳು…| ದುಬೈ ಏರ್ ಶೋನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ ; ಪೈಲಟ್ ಸಾವು : ವಿಮಾನ ಬೀಳುವ ದೃಶ್ಯಗಳು ಸೆರೆ

 ನವದೆಹಲಿ: ದುಬೈ ಏರ್ ಶೋನಲ್ಲಿ ವೈಮಾನಿಕ ಪ್ರದರ್ಶನ ನೀಡುತ್ತಿದ್ದ ಭಾರತೀಯ ವಾಯುಪಡೆಯ (IAF) ತೇಜಸ್ ಯುದ್ಧ ವಿಮಾನವು ಶುಕ್ರವಾರ ಮಧ್ಯಾಹ್ನ ಪತನಗೊಂಡಿದೆ. ಈ ಅಪಘಾತದಲ್ಲಿ ಪೈಲಟ್ ಸಾವಿಗೀಡಾಗಿದ್ದಾರೆ ಎಂದು ಭಾರತೀಯ ವಾಯುಪಡೆ ದೃಢಪಡಿಸಿದೆ. ಈ ಘಟನೆ ದುಬೈನ ಅಲ್ ಮಕ್ತೂಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ವೈಮಾನಿಕ ಪ್ರದರ್ಶನ ನೋಡಲು ಸೇರಿದ್ದ ಜನಸಮೂಹ ತೀವ್ರ ಆಘಾತಕ್ಕೆ ಒಳಗಾಯಿತು.
ಸಾಹಸ ಪ್ರದರ್ಶನದ ಸಮಯದಲ್ಲಿ ವಿಮಾನವು ನಿಯಂತ್ರಣ ಕಳೆದುಕೊಂಡಂತೆ ಕಂಡುಬಂದಿತು ಮತ್ತು ಪ್ರದರ್ಶನ ಪ್ರದೇಶದಿಂದ ಸ್ವಲ್ಪ ದೂರದಲ್ಲಿ ಅಪಘಾತಕ್ಕೀಡಾಯಿತು. ಘಟನೆಯ ವೀಡಿಯೊ ಈಗ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಿದಾಡುತ್ತಿದೆ. ಅಪಘಾತಕ್ಕೆ ಕೆಲವೇ ಕ್ಷಣಗಳ ಮೊದಲು ವಿಮಾನವು ಬಹುತೇಕ ಲಂಬವಾಗಿ ಮೇಲಕ್ಕೆ ಹಾರುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಆದರೆ ಕೆಲವು ಕ್ಷಣಗಳ ನಂತರ, ಜೆಟ್ ಕೆಳಗೆ ಬೀಳುವುದನ್ನು ಮತ್ತೊಂದು ವೀಡಿಯೊ ತೋರಿಸಿದೆ. ಮತ್ತು ಅಪಘಾತದ ಸ್ಥಳದಿಂದ ಕಪ್ಪು ಹೊಗೆ ಕಂಡುಬಂತು. ಮತ್ತು ದೊಡ್ಡ ಬೆಂಕಿಯ ಜ್ವಾಲೆಯು ಗೋಚರಿಸಿತು.

” ದುಬೈ ಏರ್ ಶೋನಲ್ಲಿ ವೈಮಾನಿಕ ಪ್ರದರ್ಶನದ ವೇಳೆ ಐಎಎಫ್‌ (IAF)ನ ತೇಜಸ್ ವಿಮಾನವು ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಪೈಲಟ್‌ ಮಾರಣಾಂತಿಕ ಗಾಯಗಳಾಗಿತ್ತು ಭಾರತೀಯ ವಾಯುಪಡೆಯು ಈ ಪ್ರಾಣಹಾನಿಗಾಗಿ ತೀವ್ರವಾಗಿ ವಿಷಾದಿಸುತ್ತದೆ ಮತ್ತು ಈ ದುಃಖದ ಸಮಯದಲ್ಲಿ ಮೃತರ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತದೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖಾ ನ್ಯಾಯಾಲಯವನ್ನು (Court of Inquiry) ರಚಿಸಲಾಗುತ್ತಿದೆ,” ಎಂದು ಐಎಎಫ್‌ ಹೇಳಿಕೆಯಲ್ಲಿ ತಿಳಿಸಿದೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಅಭಿವೃದ್ಧಿಪಡಿಸಿದ ಈ ಏಕ-ಆಸನದ ಲಘು ಯುದ್ಧ ವಿಮಾನ (LCA) ಸ್ಥಳೀಯ ಕಾಲಮಾನ ಸುಮಾರು 2:10 ಕ್ಕೆ ಪತನಗೊಂಡಿದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ, ಪೈಲಟ್ ಅವರಿಗೆ ನೆಗೆಟಿವ್ ಜಿ-ಫೋರ್ಸ್ ಟರ್ನ್ ನಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ನೆಗೆಟಿವ್ ಜಿ-ಫೋರ್ಸ್ ಎಂದರೆ ಗುರುತ್ವಾಕರ್ಷಣೆಗೆ ವಿರುದ್ಧ ದಿಕ್ಕಿನಲ್ಲಿ ಅನುಭವಿಸುವ ಶಕ್ತಿ ಎಂದರ್ಥ.

ಪ್ರಮುಖ ಸುದ್ದಿ :-   ಬಂಗಾಳ ರಾಜಕೀಯದಲ್ಲಿ ಸುನಾಮಿ ; ದೀದಿಗೆ ಬಿಗ್ ಶಾಕ್ : ಟಿಂಎಂಸಿ ಶಾಸಕರ ಬೆಂಬಲದಿಂದಲೇ ವಿಧಾನಸಭೆ ವಿಪಕ್ಷದ ನಾಯಕನಾದ ಉಚ್ಚಾಟಿತ ಶಾಸಕ..!

https://x.com/i/status/1991838415793655845

ಈ ಅಪಘಾತವು ವಿಶ್ವದ ಅತಿದೊಡ್ಡ ವಾಯುಯಾನ ಪ್ರದರ್ಶನಗಳಲ್ಲಿ ಒಂದಾದ ಎರಡು ವರ್ಷಗಳಿಗೊಮ್ಮೆ ನಡೆಯುವ ದುಬೈ ಏರ್ ಶೋನಲ್ಲಿ ಸಂಭವಿಸಿದೆ. ಈ ವಾರ ಎಮಿರೇಟ್ಸ್ ಮತ್ತು ಫ್ಲೈದುಬೈ ಬಹು-ಬಿಲಿಯನ್ ಡಾಲರ್ ಮೌಲ್ಯದ ವಿಮಾನಗಳಿಗೆ ಆರ್ಡರ್ ನೀಡುವಂತಹ ಪ್ರಮುಖ ಘೋಷಣೆಗಳನ್ನು ಈ ಕಾರ್ಯಕ್ರಮದಲ್ಲಿ ಮಾಡಲಾಗಿತ್ತು.
ಕಳೆದ ಎರಡು ವರ್ಷಗಳಲ್ಲಿ ತೇಜಸ್ ವಿಮಾನಕ್ಕೆ ಸಂಬಂಧಿಸಿದ ಎರಡನೇ ಅಪಘಾತ ಇದಾಗಿದೆ. ಮಾರ್ಚ್ 2024 ರಲ್ಲಿ, ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಒಂದು ತೇಜಸ್ ಯುದ್ಧ ವಿಮಾನ ಪತನವಾಗಿತ್ತು. 2001 ರಲ್ಲಿ ಮೊದಲ ಪರೀಕ್ಷಾರ್ಥ ಹಾರಾಟ ಮಾಡಿದ ನಂತರ 23 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಅಪಘಾತವಾಗಿತ್ತು. ಆ ಸಂದರ್ಭದಲ್ಲಿ, ಪೈಲಟ್ ಸುರಕ್ಷಿತವಾಗಿ ಹೊರಬಂದಿದ್ದರು.

ತೇಜಸ್ 4.5-ನೇ ತಲೆಮಾರಿನ ಬಹು-ಪಾತ್ರದ ಯುದ್ಧ ವಿಮಾನವಾಗಿದೆ (multi-role combat aircraft), ಇದು ವಾಯು-ರಕ್ಷಣಾ ಕಾರ್ಯಾಚರಣೆಗಳು, ಆಕ್ರಮಣಕಾರಿ ವಾಯು ಬೆಂಬಲ ಮತ್ತು ನಿಕಟ-ಸಮರ ಕಾರ್ಯಾಚರಣೆಗಳನ್ನು ನಿರ್ವಹಿಸಲು ನಿರ್ಮಿಸಲಾಗಿದೆ. ಇದು ತನ್ನ ಕೆಟಗರಿಯಲ್ಲಿ ಅತಿ ಹಗುರ ಮತ್ತು ಚಿಕ್ಕ ಫೈಟರ್‌ಗಳಲ್ಲಿ ಒಂದಾಗಿದೆ.
ಈ ಜೆಟ್‌ನ ಪ್ರಮುಖ ಲಕ್ಷಣವೆಂದರೆ ಅದರ ಮಾರ್ಟಿನ್-ಬೇಕರ್ ಝೀರೋ-ಝೀರೋ ಇಜೆಕ್ಷನ್ ಸೀಟ್ (Martin-Baker zero-zero ejection seat). ಟೇಕ್-ಆಫ್, ಲ್ಯಾಂಡಿಂಗ್ ಅಥವಾ ಕಡಿಮೆ ಮಟ್ಟದ ಕುಶಲ ಪ್ರದರ್ಶನದ ಸಮಯದಲ್ಲಿ ಶೂನ್ಯ ಎತ್ತರ ಮತ್ತು ಶೂನ್ಯ ವೇಗದಲ್ಲಿಯೂ ಸಹ ಪೈಲಟ್‌ಗಳು ಸುರಕ್ಷಿತವಾಗಿ ಹೊರಬರಲು ಇದು ಅವಕಾಶ ನೀಡುತ್ತದೆ.
ಏರ್ ಶೋನ ವೀಕ್ಷಕರು ರನ್‌ವೇ ಬಳಿಯ ವೀಕ್ಷಕ ಆವರಣದಿಂದಲೇ ಅಪಘಾತವನ್ನು ನೋಡಿದ್ದಾರೆ. ವೀಡಿಯೊಗಳಲ್ಲಿ, ತೇಜಸ್ ತನ್ನ ಪ್ರದರ್ಶನವನ್ನು ಪ್ರದರ್ಶಿಸುತ್ತಿರುವಾಗ ಎತ್ತರವನ್ನು ಕಳೆದುಕೊಂಡು ವೇಗವಾಗಿ ಇಳಿಯುವುದು ಕಂಡುಬಂದಿದೆ. ಕೆಲವೇ ಸೆಕೆಂಡುಗಳಲ್ಲಿ, ದಟ್ಟ ಕಪ್ಪು ಹೊಗೆಯು ಮೇಲಕ್ಕೆ ಏರಿತು.

ಪ್ರಮುಖ ಸುದ್ದಿ :-   ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ ಪ್ರಮಾಣ ವಚನ, 13 ಸಚಿವರಿಂದಲೂ ಪ್ರಮಾಣವಚನ ಸ್ವೀಕಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement