‘ ನಾಚಿಕೆಯಾಗಬೇಕು..’ : ಹುತಾತ್ಮ ಭಾರತದ ಪೈಲಟ್ ಅನ್ನು ಅಪಹಾಸ್ಯ ಮಾಡಿದ ಪಾಕಿಸ್ತಾನಿಗಳನ್ನು ಖಂಡಿಸಿದ ಪಾಕ್‌ ನಿವೃತ್ತ ಏರ್‌ ಕಮಾಂಡರ್‌

ನವದೆಹಲಿ: ದುಬೈ ಏರ್ ಶೋ (Dubai Air Show)ದಲ್ಲಿ ಶುಕ್ರವಾರ (ನವೆಂಬರ್ 21) ನಡೆದ ದುರಂತದಲ್ಲಿ ಭಾರತೀಯ ವಾಯುಪಡೆಯ (IAF) ತೇಜಸ್ (Tejas) ಯುದ್ಧ ವಿಮಾನ ಅಪಘಾತಕ್ಕೀಡಾಗಿ, ಪೈಲಟ್ ನಾಮಾಂಶ್ ಸ್ಯಾಲ್ (Namansh Syal) ಹುತಾತ್ಮರಾಗಿದ್ದಾರೆ. ಈ ದುರಂತದಿಂದ ಭಾರತೀಯರು ತೀವ್ರ ದುಃಖಕ್ಕೊಳಗಾಗಿದ್ದರೆ, ಪಾಕಿಸ್ತಾನದ ಕೆಲವರು ಈ ಘಟನೆ ನಡೆದಿದ್ದಕ್ಕೆ ಸಂತೋಷ ವ್ಯಕ್ತಪಡಿಸಿರುವುದು ಖಂಡನೀಯವಾಗಿದೆ. ಕೆಲವು ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ (X) ಖಾತೆಗಳು ಈ ಬಗ್ಗೆ ಕೀಳುಮಟ್ಟದ ಮತ್ತು ಅಣಕಿಸುವ ಪೋಸ್ಟ್‌ಗಳನ್ನು ಹಾಕಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.
ಇದೇ ವೇಳೆ, ನಿವೃತ್ತ ಪಾಕಿಸ್ತಾನಿ ವಾಯುಪಡೆಯ ಅಧಿಕಾರಿ, ಏರ್ ಕಮಾಂಡರ್ ಪರ್ವೇಜ್ ಅಖ್ತರ್ ಖಾನ್ (Air Commander Pervez Akhtar Khan) ಅವರು ತಮ್ಮೇ ದೇಶವಾದ ಪಾಕಿಸ್ತಾನದ ಈ ಅಣಕಿಸಿದವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ, ಅವರು ಹುತಾತ್ಮ ಭಾರತೀಯ ಪೈಲಟ್‌ಗೆ ಗೌರವ ಸಲ್ಲಿಸಿ, “ಆಕಾಶದ ರಕ್ಷಕ ಮೌನಕ್ಕೆ ಜಾರಿದ್ದಾನೆ” ಎಂದು ಬರೆದಿದ್ದಾರೆ.
“ದುಬೈ ಏರ್ ಶೋನಲ್ಲಿ ಏರೋಬ್ಯಾಟಿಕ್ ಪ್ರದರ್ಶನದ ವೇಳೆ ಭಾರತೀಯ ವಾಯುಪಡೆಯ ತೇಜಸ್ ವಿಮಾನ ಅಪಘಾತಕ್ಕೀಡಾದ ಸುದ್ದಿ ಕೇಳಿ ಹೃದಯ ಒಡೆದಂತಾಗಿದೆ, ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಏರೋಬ್ಯಾಟಿಕ್ಸ್ ಎಂದರೆ ವಿಮಾನಯಾನದ ಅತ್ಯುನ್ನತ ಮಟ್ಟ. ಅಲ್ಲಿ ಕೌಶಲ್ಯ, ಧೈರ್ಯ ಮತ್ತು ನಿಖರತೆ ಅತ್ಯಗತ್ಯ. ಇದು ಕೇವಲ ಸಾಹಸವಲ್ಲ; ಇದು ವೃತ್ತಿಪರ ಪಾಂಡಿತ್ಯದ ಸಾಧನೆ. ದೇಶದ ಹೆಮ್ಮೆ ಮತ್ತು ತಾಂತ್ರಿಕ ವಿಶ್ವಾಸಕ್ಕಾಗಿ ತಮ್ಮ ಜೀವವನ್ನೇ ಪಣಕ್ಕಿಡುವ ಪುರುಷ ಮತ್ತು ಮಹಿಳೆಯರು ಇದನ್ನು ನಿರ್ವಹಿಸಲಾಗುತ್ತದೆ ಎಂದು ಅವರು ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

ಅಣಕ ಮಾಡಿದವರಿಗೆ ತೀವ್ರ ಖಂಡನೆ
ಹುತಾತ್ಮರಾದ ಪೈಲಟ್‌ಗೆ ತೀವ್ರ ಸಂತಾಪ ಸೂಚಿಸಿದ ಪರ್ವೇಜ್ ಅಖ್ತರ್ ಖಾನ್, “ಭಾರತೀಯ ವಾಯುಪಡೆ ಮತ್ತು ಹುತಾತ್ಮ ವಾಯುಯೋಧನ ಶೋಕತಪ್ತ ಕುಟುಂಬಕ್ಕೆ ನನ್ನ ತೀವ್ರವಾದ ಮತ್ತು ಅತ್ಯಂತ ಪ್ರಾಮಾಣಿಕ ಸಂತಾಪಗಳನ್ನು ಅರ್ಪಿಸುತ್ತೇನೆ. ಕೇವಲ ಒಬ್ಬ ಪೈಲಟ್‌ನಷ್ಟೇ ಅಲ್ಲ, ಆಕಾಶದ ಕಾವಲುಗಾರನೇ ಮೌನಕ್ಕೆ ಜಾರಿದ್ದಾನೆ ಎಂದಿದ್ದಾರೆ.
ತಮ್ಮ ಸಹೋದ್ಯೋಗಿಯನ್ನು ಅಪಹಾಸ್ಯ ಮಾಡಿದವರನ್ನು ತರಾಟೆಗೆ ತೆಗೆದುಕೊಂಡ ಅವರು, “ನನಗೆ ದುಃಖ ತಂದಿರುವ ವಿಷಯವೆಂದರೆ, ಗಡಿಯ ನಮ್ಮ ಕಡೆಯ ಕೆಲವು ಜನರು ಸಹಾನುಭೂತಿಯ ಬದಲು ಅಪಹಾಸ್ಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ದೇಶಭಕ್ತಿಯಲ್ಲ; ಇದು ನೈತಿಕ ಅನಕ್ಷರತೆ. ಒಬ್ಬರು ನೀತಿಗಳನ್ನು, ನಿರ್ಧಾರಗಳನ್ನು, ತತ್ವಗಳನ್ನು ಪ್ರಶ್ನಿಸಬಹುದು, ಆದರೆ ತಮ್ಮ ಕರ್ತವ್ಯವನ್ನು ಮಾಡುತ್ತಿರುವ ಸಹ ವಿಮಾನಚಾಲಕನ ಧೈರ್ಯವನ್ನು ಎಂದಿಗೂ ಪ್ರಶ್ನಿಸಬಾರದು,” ಎಂದು ಬರೆದಿದ್ದಾರೆ.

“ಅವರು ಪ್ರಶಂಸೆಗಾಗಿ ಹಾರಾಟ ನಡೆಸಲಿಲ್ಲ, ಬದಲಿಗೆ ತಮ್ಮ ಧ್ವಜಕ್ಕಾಗಿ ಹಾರಿದರು, ನಾವು ನಮ್ಮ ಧ್ವಜಕ್ಕಾಗಿ ಹಾರಿದಂತೆಯೇ. ಇದು ಗೌರವಕ್ಕೆ ಅರ್ಹವಾಗಿದೆ, ಅಪಹಾಸ್ಯಕ್ಕಲ್ಲ” ಎಂದು ಅವರು ಹೇಳಿದ್ದಾರೆ.
“ನಾನು ಸಹ ಇದೇ ರೀತಿ ಕಷ್ಟಕರ ಸಂದರ್ಭಗಳಲ್ಲಿ ನನ್ನ ಸಹೋದರರನ್ನು ಕಳೆದುಕೊಂಡಿದ್ದೇನೆ. ಫ್ಲೈಟ್ ಲೆಫ್ಟಿನೆಂಟ್ ಆಲಮ್ದಾರ್ ಮತ್ತು ಸ್ಕ್ವಾಡ್ರನ್ ಲೀಡರ್ ಹಸ್ನತ್ ಅವರಂತಹ ಧೈರ್ಯಶಾಲಿ ನಾಯಕರು ಅತ್ಯುನ್ನತ ಪ್ರದರ್ಶನದಲ್ಲಿ ಬದುಕಿ ಅಸುನೀಗಿದರು. ಒಂದು ವಿಮಾನ ‘ಮೌನಕ್ಕೆ’ ಜಾರಿದ ತಕ್ಷಣ, ಅಲ್ಲಿ ದೇಶ ಎಂಬುದು ಇರುವುದಿಲ್ಲ. ಅಲ್ಲಿ ಕೇವಲ ನಷ್ಟ ಮತ್ತು ಛಿದ್ರವಾದ ಮೌನದಲ್ಲಿ ಉಳಿದಿರುವ ಕುಟುಂಬ ಮಾತ್ರ ಇರುತ್ತದೆ ಎಂದು ಅವರು ಹೇಳಿದ್ದಾರೆ.
ಕೊನೆಯಲ್ಲಿ, ಏರ್ ಕಮಾಂಡರ್ ಖಾನ್ ಅವರು, “ಒಬ್ಬ ನಿಜವಾದ ವೃತ್ತಿಪರ ಇನ್ನೊಬ್ಬ ವೃತ್ತಿಪರನನ್ನು ಗೌರವಿಸುತ್ತಾನೆ. ಒಬ್ಬ ನಿಜವಾದ ಯೋಧನು ಶತ್ರುಗಳ ಗಡಿಯಲ್ಲಿದ್ದರೂ ಮತ್ತೊಬ್ಬ ಯೋಧನಿಗೆ ಸೆಲ್ಯೂಟ್ ಮಾಡುತ್ತಾನೆ. ಇದಕ್ಕಿಂತ ಕಡಿಮೆ ಅದು ನಮ್ಮ ಸಮವಸ್ತ್ರಕ್ಕೆ ಕಳಂಕ ತರುತ್ತದೆ. ದುರಂತಗಳ ಆಚೆಗೂ ಹುತಾತ್ಮ ಪೈಲಟ್‌ಗಳಿಗೆ ಯಾವಾಗಲೂ ನೀಲಿ ಆಕಾಶವಿರಲಿ. ಪದಗಳು ಸೋತ ಜಾಗದಲ್ಲಿ ಅವರ ಕುಟುಂಬಗಳು ಧೈರ್ಯವನ್ನು ಕಂಡುಕೊಳ್ಳಲಿ,” ಎಂದು ಹೇಳುವ ಮೂಲಕ ತಮ್ಮ ಪೋಸ್ಟ್ ಅನ್ನು ಅವರು ಮುಕ್ತಾಯಗೊಳಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement