ಶ್ರೀಲಂಕಾ: ದಿತ್ವಾ ಚಂಡುಮಾರುತದಿಂದಾಗಿ ಶ್ರೀಲಂಕಾದಾದ್ಯಂತ ಭೀಕರ ಪ್ರವಾಹಗಳು ಸೃಷ್ಟಿಯಾಗಿದ್ದು, ಈವರೆಗೆ 123 ಜನ ಸಾವಿಗೀಡಾಗಿದ್ದಾರೆ ಹಾಗೂ 130 ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಭೀಕರ ಪ್ರವಾಹದ ಪರಿಣಾಮ ಈ ವನ್ಯಜೀವಿಗಳ ಮೇಲೆಯೂ ಆಗಿದ್ದು, ಬದುಕುಳಿಯಲು ಹತಾಶ ಪ್ರಯತ್ನ ಮಾಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಭೀಕರ ಪ್ರವಾಹದಲ್ಲಿ ಸೆರೆ ಸಿಕ್ಕ ಅಪರೂಪದ ಹಾಗೂ ಅಷ್ಟೇ ಹೃದಯ ತಟ್ಟುವ ವೀಡಿಯೊ ದೃಶ್ಯದಲ್ಲಿ, ಹೆಚ್ಚುತ್ತಿರುವ ನದಿ ನೀರಿನಿಂದ ಪಾರಾಗಲು ಚಿರತೆಯಿಂದ ನೀರಿನಲ್ಲಿ ಸಿಲುಕಿಕೊಂಡಿದ್ದ ಆನೆಯ ಬೆನ್ನೇರಿ ಕುಳಿತುಕೊಂಡು ಪ್ರಾಣ ರಕ್ಷಣೆ ಮಾಡಿಕೊಂಡಿರುವುದು ಕಂಡುಬಂದಿದೆ.
ವೇಗವಾಗಿ ನದಿಯ ಪ್ರವಾಹದಲ್ಲಿ ಸಿಲುಕಿದ ಚಿರತೆ ಹೆಚ್ಚುತ್ತಿರುವ ನೀರಿನ ಮಟ್ಟದಿಂದ ಪಾರಾಗಲು ಅನಿವಾರ್ಯವಾಗಿ ತನ್ನದೇ ರೀತಿ ನೀರಿನಲ್ಲಿ ಸಿಲುಕಿಕೊಂಡಿದ್ದ ಆದರೆ ಬಂಡೆಯಂತೆ ಪ್ರವಾಹ ಎದುರಿಸಿ ನಿಂತಿದ್ದ ದೈತ್ಯ ಕಾಡಾನೆಯ ಬೆನ್ನಿನ ಮೇಲೆ ಹತ್ತಿ ಕುಳಿತು ಜೀವ ಉಳಿಸಿಕೊಂಡಿರುವುದು ವೀಡಿಯೊದಲ್ಲಿ ಕಂಡುಬರುತ್ತದೆ. ಪ್ರವಾಹದ ನೀರು ಆನೆಯ ಸುತ್ತಲೂ ಉಕ್ಕಿ ಹರಿಯುತ್ತಿದ್ದರೂ, ಆನೆ ಮರವೊಂದರ ಮುಂದೆ ಪ್ರವಾಹದ ಮಧ್ಯೆಯೇ ಗಟ್ಟಿಯಾಗಿ ಬಂಡೆಯಂತೆಯೇ ನಿಂತುಕೊಂಡಿರುವುದನ್ನು ನೋಡಬಹುದು.
ಈ ಆನೆಯನ್ನು ಬದುಕಿನ ಒಂದು ಭರವಸೆಯಾಗಿ ಕಂಡ ಚಿರತೆಯು ಪ್ರವಾಹದಿಂದ ಪಾರಾಗಿ ಬದುಕಿದರೆ ಸಾಕೆಂದು ದೈತ್ಯ ಆನೆಯ ಬೆನ್ನೇರಿ ಕುಳಿತುಕೊಳ್ಳುವ ಧೈರ್ಯ ಮಾಡಿದಂತೆ ಅನಿಸುತ್ತದೆ. ಯಾಕೆಂದರೆ ಆನೆ ಸ್ವಲ್ಪ ಮೈಕೊಡವಿದರೂ ಚಿರತೆ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಆದರೆ ಆನೆ ಚಿರತೆಗೆ ಏನೂ ಮಾಡದೆ, ತನ್ನ ಶರೀರವನ್ನು ಅಲ್ಲಾಡಿಸದೆ ಬಂಡೆಯಂತೆ ನಿಂತುಕೊಂಡು ಚಿರತೆಗೆ ಬೆನ್ನ ಮೇಲೆ ಆಶ್ರಯ ನೀಡಿರುವುದು ಕಂಡುಬಂದಿದೆ.
ಪ್ರವಾಹಗಳು ಕೇವಲ ಮನುಷ್ಯರನ್ನು ಮಾತ್ರವಲ್ಲದೆ, ಪ್ರಾಣಿಗಳನ್ನೂ ತೀವ್ರ ಸಂಕಷ್ಟಕ್ಕೆ ತಳ್ಳಿದೆ ಎಂದು ಈ ದೃಶ್ಯವು ಒತ್ತಿಹೇಳುತ್ತದೆ. ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸುತ್ತಿರುವಾಗ, ಈ ಘಟನೆಯು ವನ್ಯಜೀವಿಗಳ ಆವಾಸಸ್ಥಾನಗಳಿಗೆ ಬಲವಾದ ರಕ್ಷಣೆ ನೀಡುವ ಮತ್ತು ದ್ವೀಪದ ಪ್ರಾಣಿಗಳನ್ನು ಕಾಪಾಡಲು ಹೆಚ್ಚು ಪರಿಣಾಮಕಾರಿ ವಿಪತ್ತು-ನಿರ್ವಹಣೆ ಯೋಜನೆಗಳ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.


ನಿಮ್ಮ ಕಾಮೆಂಟ್ ಬರೆಯಿರಿ