ವೀಡಿಯೊ..| ವಿಚಿತ್ರ -ಭಯಾನಕ ಅಪಘಾತ ; ಬಸ್‌, ಕಾರುಗಳ ಮೇಲೆ ವಿಮಾನದಂತೆ ಹಾರಿ ನೆಲಕ್ಕೆ ಅಪ್ಪಳಿಸಿದ ಐಶಾರಾಮಿ ಕಾರು…!

ಅತ್ಯಂತ ಭಯಾನಕ ಮತ್ತು ಅಚ್ಚರಿ ಮೂಡಿಸುವ ರಸ್ತೆ ಅಪಘಾತವೊಂದು ನಡೆದಿದ್ದು, ವೇಗವಾಗಿ ಬಂದ ಮರ್ಸಿಡಿಸ್ ಕಾರು ನಿಯಂತ್ರಣ ತಪ್ಪಿ ಬಸ್ ಹಾಗೂ ಎರಡು ಕಾರುಗಳ ಮೇಲೆ ವಿಮಾನದಂತೆ ಆಕಾಶಕ್ಕೆ ಹಾರಿ ನಂತರ ಸಮೀಪದ ಪೆಟ್ರೋಲ್ ಬಂಕ್ ಬಳಿ ಅಪ್ಪಳಿಸಿದ ಘಟನೆ ನಡೆದಿದೆ. ಇದು ರೊಮೇನಿಯಾದ ಓರ್ಡಿಯಾ ನಗರದಲ್ಲಿ ನಡೆದಿದೆ ಎಂದು ವರಿಯಾಗಿದೆ.
ಡಿಸೆಂಬರ್ 3 ರಂದು ನಡೆದ ಈ ವಿಸ್ಮಯಕಾರಿ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೀಡಿಯೊ ವಿಶ್ವದಾದ್ಯಂತ ವೈರಲ್ ಆಗಿದೆ ಎಂದು ‘ಯೂರೋ ವೀಕ್ಲಿ ನ್ಯೂಸ್’ ವರದಿ ಮಾಡಿದೆ.
ವೈರಲ್ ಆಗಿರುವ ದೃಶ್ಯದಲ್ಲಿ, ಅತಿ ವೇಗದಲ್ಲಿ ಬಂದ ಮರ್ಸಿಡಿಸ್ ಕಾರು ಟ್ರಾಫಿಕ್‌ ವೃತ್ತದಲ್ಲಿ ವಿರುದ್ಧ ದಿಕ್ಕಿನಿಂದ ಪ್ರವೇಶಿಸಿ, ರಸ್ತೆಯ ತಡೆಗೋಡೆಗೆ (Kerb) ಅಪ್ಪಳಿಸಿದೆ. ಇದರ ಪರಿಣಾಮವಾಗಿ ಕಾರು ಬಹುತೇಕ ಕೆಲವು ಅಡಿಗಳಷ್ಟು ಆಕಾಶಕ್ಕೆ ಚಿಮ್ಮಿದೆ.

ಆಗಸದಲ್ಲಿ ಹಾರಿದ ವಾಹನವು ಎದುರಿನಿಂದ ಬರುತ್ತಿದ್ದ ಕಾರುಗಳ ಮೇಲೆ ಹಾರಿ, ಕೊನೆಗೆ ಪೆಟ್ರೋಲ್ ಬಂಕ್‌ನಿಂದ ಕೆಲವೇ ಮೀಟರ್ ದೂರದಲ್ಲಿರುವ ಲೋಹದ ಕಂಬಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಪೆಟ್ರೋಲ್ ಬಂಕ್ ಸ್ಫೋಟಗೊಳ್ಳುವಂತಹ ದೊಡ್ಡ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.
ಚಾಲಕನಿಗೆ ಮಧುಮೇಹದ ತೀವ್ರ ಸಂಚಲನವೇ ಕಾರಣ
ಸುದ್ದಿ ವರದಿಗಳ ಪ್ರಕಾರ, ಕಾರು ಚಲಾಯಿಸುತ್ತಿದ್ದ 55 ವರ್ಷದ ಚಾಲಕನಿಗೆ ಮಧುಮೇಹದ (Diabetic Episode) ತೀವ್ರ ಸಂಚಲನದಿಂದಾಗಿ ಚಾಲನೆ ವೇಳೆ ಪ್ರಜ್ಞೆ ತಪ್ಪಿರುವುದು ಪೊಲೀಸರ ತನಿಖೆಯಿಂದ ದೃಢಪಟ್ಟಿದೆ. ನಿಯಂತ್ರಣ ಕಳೆದುಕೊಂಡ ಆತ ಅತಿ ವೇಗದಲ್ಲಿ ಜಂಕ್ಷನ್‌ಗೆ ನುಗ್ಗಿದ ಕಾರಣ ಮೇಲಕ್ಕೆ ಆಗಸದಲ್ಲಿ ಚಿಮ್ಮಿ ಮುಂದಕ್ಕೆ ನೆಗೆದಿದೆ.

ಪ್ರಮುಖ ಸುದ್ದಿ :-   ಹಲ್ಲುಗಳ ನಡುವಿನ ಕೊಳೆ ತಾನೇ ಪತ್ತೆಹಚ್ಚಿ ಸ್ವಚ್ಛಗೊಳಿಸುವ ಎಐ(AI) ಕ್ಯಾಮೆರಾ-ಜೆಟ್ ತಂತ್ರಜ್ಞಾನದ ಟೂತ್‌ಬ್ರಶ್‌ ಈಗ ಲಭ್ಯ

ಸಮೀಪದ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಜನರು, ಕಾರು ನೆಲಕ್ಕೆ ಅಪ್ಪಳಿಸಿದಾಗ ಗುಡುಗಿನಂತಹ ದೊಡ್ಡ ಶಬ್ದ ಕೇಳಿ ಬಂದಿರುವುದಾಗಿ ತಿಳಿಸಿದ್ದಾರೆ. ತುರ್ತು ಸಿಬ್ಬಂದಿ ಕೂಡಲೇ ಕಾರಿನ ಅವಶೇಷಗಳಿಂದ ಚಾಲಕನನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಾಲಕನಿಗೆ ಹಲವು ಮೂಳೆ ಮುರಿತಗಳಾಗಿದ್ದರೂ, ಜೀವಕ್ಕೆ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆತ ಬದುಕುಳಿದಿರುವುದು ಪವಾಡವೇ ಸರಿ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಚಾಲಕನ ಪರವಾನಗಿಯನ್ನು 90 ದಿನಗಳ ಕಾಲ ಅಮಾನತುಗೊಳಿಸಿದ್ದು, 1,600 ರೊಮೇನಿಯನ್ ಲ್ಯೂ (ಸುಮಾರು ₹ 27,000) ದಂಡ ವಿಧಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement