
ಅಶ್ಗಾಬಾತ್ (ತುರ್ಕಮೆನಿಸ್ತಾನ): ತುರ್ಕಮೆನಿಸ್ತಾನದಲ್ಲಿ ನಡೆದ ಅಂತಾರಾಷ್ಟ್ರೀಯ ವೇದಿಕೆಯೊಂದರಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರನ್ನು ಭೇಟಿ ಮಾಡಲು ಬರೋಬ್ಬರಿ 40 ನಿಮಿಷಗಳ ಕಾಲ ಕಾಯುವಂತೆ ಮಾಡಿದ್ದರಿಂದ ತೀವ್ರ ಮುಜುಗರಕ್ಕೆ ಒಳಗಾದ ಪ್ರಸಂಗ ನಡೆದಿದೆ. ಈ ಘಟನೆ ರಾಜತಾಂತ್ರಿಕ ವಲಯದಲ್ಲಿ ಪಾಕಿಸ್ತಾನಕ್ಕೆ ದೊಡ್ಡ ಮುಖಭಂಗ ತಂದಿದೆ.
ಮಾಜಿ ಸೋವಿಯತ್ ರಾಷ್ಟ್ರವಾದ ತುರ್ಕಮೆನಿಸ್ತಾನ ತನ್ನ ನಿಷ್ಪಕ್ಷಪಾತ ನೀತಿಯ (Declaration of Neutrality) 30ನೇ ವಾರ್ಷಿಕೋತ್ಸವದ ಗೌರವಾರ್ಥ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ರಷ್ಯಾ, ಟರ್ಕಿ, ಇರಾನ್ ಮತ್ತು ಪಾಕಿಸ್ತಾನದ ನಾಯಕರು ಈ ಸಂದರ್ಭದಲ್ಲಿ ಆಹ್ವಾನಿತರಾಗಿದ್ದರು. ಸಭೆಯ ನೇಪಥ್ಯದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರನ್ನು ಭೇಟಿಯಾಗಬೇಕಿತ್ತು. ಆದರೆ, ಇದು ಅನಿರೀಕ್ಷಿತ ತಿರುವು ಪಡೆದುಕೊಂಡಿತು.
ಆರ್.ಟಿ. ಇಂಡಿಯಾ ಬಿಡುಗಡೆ ಮಾಡಿದ ವೀಡಿಯೊದಲ್ಲಿ, ಪುತಿನ್ ಅವರೊಂದಿಗಿನ ನಿಗದಿತ ಮಾತುಕತೆಗೂ ಮುನ್ನ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರ ಜೊತೆ 40 ನಿಮಿಷ ಹೊರಗಡೆ ಕಾದ ಬಳಿಕ ತಾಳ್ಮೆ ಕಳೆದುಕೊಂಡ ಷರೀಫ್, ರಷ್ಯಾ ಅಧ್ಯಕ್ಷ ಪುತಿನ್ ಮತ್ತು ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ನಡುವೆ ಮಾತುಕತೆ ನಡೆಯುತ್ತಿದ್ದ ಕೊಠಡಿಗೆ ದಿಢೀರ್ ಪ್ರವೇಶಿಸಿ (gate-crash) ತ್ವರಿತ ಮಾತುಕತೆಗೆ ಪ್ರಯತ್ನಿಸಿದರು. ಈ ತ್ವರಿತ ಸಂವಾದದ ನಂತರ ಅವರು ಕೇವಲ 10 ನಿಮಿಷಗಳಲ್ಲಿ ಅಲ್ಲಿಂದ ಹೊರಹೋದರು ಎಂದು ವರದಿಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ:
ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. “ಪುಟಿನ್ ಭಿಕ್ಷುಕರಿಗಾಗಿ ತನ್ನ ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. “ಟ್ರಂಪ್ ಕೂಡ ಈ ಭಿಕ್ಷುಕರೊಂದಿಗೆ ಹೀಗೆ ಮಾಡ್ತಾರೆ ಎಂದು ಮತ್ತೋರ್ವ ಬಳಕೆದಾರರು ಅಪಹಾಸ್ಯ ಮಾಡಿದ್ದಾರೆ.
ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ. ಬಳಕೆದಾರರು ಇದನ್ನು ರಾಜತಾಂತ್ರಿಕ ಮುಜುಗರ ಎಂದು ಕರೆದಿದ್ದಾರೆ.
“ಪುತಿನ್ ಮತ್ತು ಎರ್ಡೋಗನ್ ಅವರ ಚರ್ಚೆಯಲ್ಲಿ ಕೇವಲ 10 ನಿಮಿಷದ ಅತಿಥಿ ಪಾತ್ರಕ್ಕಾಗಿ (cameo) ಶೆಹಬಾಜ್ ಷರೀಫ್ 40 ನಿಮಿಷ ಕಾಯ್ದರು. ನಂತರ ತಪ್ಪಾದ ‘ಜೂಮ್ ಕಾಲ್’ಗೆ ಸೇರಿದವರಂತೆ ಹೊರನಡೆದರು. ಜಿಯೋಪಾಲಿಟಿಕಲ್ ಕ್ಯಾಫೆಟೇರಿಯಾದಲ್ಲಿ ‘ಕ್ಷಮಿಸಿ, ತಪ್ಪಾದ ಟೇಬಲ್ಗೆ ಬಂದೆ’ ಎಂದು ಹೇಳಿದಂತಾಗಿದೆ,” ಎಂದು ಬಳಕೆದಾರರೊಬ್ಬರು ವ್ಯಂಗ್ಯವಾಡಿದ್ದಾರೆ.
“ಜಾಗತಿಕ ಮಟ್ಟದಲ್ಲಿ ಗೇಟ್-ಕ್ರ್ಯಾಶಿಂಗ್… ಪಾಕಿಸ್ತಾನದ ವಿದೇಶಾಂಗ ನೀತಿಗೆ ಹೊಸ ವ್ಯಾಖ್ಯಾನ ಸಿಕ್ಕಿದೆ,” ಎಂದು ಇನ್ನೊಬ್ಬರು ಟ್ವಿಟರ್ (X) ನಲ್ಲಿ ಬರೆದಿದ್ದಾರೆ. ಮತ್ತೊಬ್ಬರು “ಪುತಿನ್ ಭಿಕ್ಷುಕರಿಗೆ ತಮ್ಮ ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ” ಎಂದು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ತುರ್ಕಮೆನಿಸ್ತಾನದ ಮಹತ್ವ:
ಈ ಕಾರ್ಯಕ್ರಮವು ವಿಶ್ವದ ನಾಲ್ಕನೇ ಅತಿದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಹೊಂದಿರುವ ತುರ್ಕಮೆನಿಸ್ತಾನಕ್ಕೆ ಮಹತ್ವದ ಮೈಲಿಗಲ್ಲಾಗಿದೆ. ಈ ರಾಷ್ಟ್ರವು 1995 ರಲ್ಲಿ ತನ್ನ ಮೊದಲ ಅಧ್ಯಕ್ಷ ಸಪರ್ಮುರತ್ ನಿಯಾಜೋವ್ ಅವರ ನೇತೃತ್ವದಲ್ಲಿ ತನ್ನನ್ನು ಅಧಿಕೃತವಾಗಿ ನಿಷ್ಪಕ್ಷಪಾತ ರಾಷ್ಟ್ರವೆಂದು ಘೋಷಿಸಿಕೊಂಡಿತ್ತು.
ತುರ್ಕಮೆನಿಸ್ತಾನ್ ಕೂಡ ವಿಶ್ವ ವ್ಯಾಪಾರ ಸಂಸ್ಥೆಗೆ ಸೇರಲು ಮತ್ತು ಆರ್ಥಿಕತೆಯನ್ನು ಅನಿಲ ರಫ್ತಿನಿಂದ ದೂರವಿಡಲು ಬಯಸುತ್ತಿದೆ ಎಂದು ಹೇಳುತ್ತದೆ, ಅವುಗಳಲ್ಲಿ ಹೆಚ್ಚಿನವು ಚೀನಾಕ್ಕೆ ರಫ್ತಾಗುತ್ತಿವೆ.


ನಿಮ್ಮ ಕಾಮೆಂಟ್ ಬರೆಯಿರಿ