ಇಸ್ಲಾಮಾಬಾದ್/ಕರಾಚಿ: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸುತ್ತಿರುವ ಸರಣಿ ವೈಮಾನಿಕ ದಾಳಿಗಳ ವಿರುದ್ಧ ಪಾಕಿಸ್ತಾನದ ಸಂಸದ ಹಾಗೂ ಜಮಿಯತ್ ಉಲೇಮಾ-ಎ-ಇಸ್ಲಾಂ-ಎಫ್ (JUI-F) ಮುಖ್ಯಸ್ಥ ಮೌಲಾನಾ ಫಜ್ಲರ್ ರೆಹಮಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತವು ಪಾಕಿಸ್ತಾನದ ನೆಲದ ಮೇಲಿನ ಉಗ್ರರ ತಾಣಗಳನ್ನು ಧ್ವಂಸಗೊಳಿಸಲು ನಡೆಸಿದ ‘ಆಪರೇಷನ್ ಸಿಂಧೂರ’ವನ್ನು ಉಲ್ಲೇಖಿಸಿ, ಪಾಕಿಸ್ತಾನದ ನಾಯಕತ್ವದ ಇಬ್ಬಂದಿ ನೀತಿಯನ್ನು ಅವರು ಪ್ರಶ್ನಿಸಿದ್ದಾರೆ.
ಪಾಕಿಸ್ತಾನದ ತರ್ಕವನ್ನೇ ಪ್ರಶ್ನಿಸಿದ ರೆಹಮಾನ್
ಕರಾಚಿಯ ಲಿಯಾರಿಯಲ್ಲಿ ನಡೆದ ‘ಮಜ್ಲಿಸ್-ಎ-ಇತ್ತೆಹಾದ್-ಎ-ಉಮ್ಮತ್’ ಸಮಾವೇಶದಲ್ಲಿ ಮಾತನಾಡಿದ ರೆಹಮಾನ್ ಅವರು, ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನೇತೃತ್ವದಲ್ಲಿ ಅಫ್ಘಾನಿಸ್ತಾನದ ಮೇಲೆ ನಡೆಸಲಾಗುತ್ತಿರುವ ದಾಳಿಗಳನ್ನು ಖಂಡಿಸಿದರು.
“ನಾವು ಅಫ್ಘಾನಿಸ್ತಾನದಲ್ಲಿರುವ ನಮ್ಮ ಶತ್ರುಗಳ ಮೇಲೆ ದಾಳಿ ಮಾಡಿದ್ದೇವೆ ಎಂದು ಸಮರ್ಥಿಸಿಕೊಳ್ಳುವುದಾದರೆ, ಭಾರತವೂ ಕೂಡ ಇದೇ ತರ್ಕವನ್ನು ಬಳಸಿ ಬಹಲ್ವಾಪುರ, ಮುರಿದ್ಕೆ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿಗೆ ಕಾರಣವಾದ ಉಗ್ರರ ಕೇಂದ್ರ ಕಚೇರಿಗಳ ಮೇಲೆ ದಾಳಿ ಮಾಡಬಹುದು. ಆಗ ನೀವು ಯಾವ ಆಧಾರದ ಮೇಲೆ ಆಕ್ಷೇಪ ಎತ್ತುತ್ತೀರಿ?” ಎಂದು ರೆಹಮಾನ್ ನೇರವಾಗಿ ಪ್ರಶ್ನಿಸಿದ್ದಾರೆ.
ಪಾಕ್-ಅಫ್ಘಾನಿಸ್ತಾನ ಸಂಘರ್ಷ
ಫಜ್ಲೂರ್ ರೆಹಮಾನ್ ಅವರು ಅಫ್ಘಾನಿಸ್ತಾನದ ಬಗೆಗಿನ ಪಾಕಿಸ್ತಾನ ಸರ್ಕಾರದ ನೀತಿಯನ್ನು ನಿರಂತರವಾಗಿ ಟೀಕಿಸುತ್ತಿದ್ದಾರೆ. ಅಕ್ಟೋಬರ್‌ನಲ್ಲಿ, ದ್ವಿಪಕ್ಷೀಯ ಉದ್ವಿಗ್ನತೆಯ ಉತ್ತುಂಗದಲ್ಲಿದ್ದಾಗ, ಅವರು ಎರಡು ರಾಷ್ಟ್ರಗಳ ನಡುವೆ ಮಧ್ಯಸ್ಥಿಕೆ ವಹಿಸಲು ಮುಂದಾದರು. “ಹಿಂದೆ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ನಾನು ಪಾತ್ರವಹಿಸಿದ್ದೇನೆ ಮತ್ತು ನಾನು ಇನ್ನೂ ಹಾಗೆ ಮಾಡಬಹುದು” ಎಂದು ಅವರು ಹೇಳಿದ್ದಾರೆ ಎಂದು ಡಾನ್ ವರದಿ ಮಾಡಿತ್ತು.
ರೆಹಮಾನ್ ಈ ಪ್ರದೇಶದಲ್ಲಿ ಗಮನಾರ್ಹ ಪ್ರಭಾವ ಬೀರುತ್ತಾರೆ ಮತ್ತು ತಾಲಿಬಾನ್‌ನ ಸರ್ವೋಚ್ಚ ನಾಯಕ ಹೈಬತುಲ್ಲಾ ಅಖುಂಡ್‌ಜಾದಾ ಅವರನ್ನು ಭೇಟಿಯಾದ ಏಕೈಕ ಪಾಕಿಸ್ತಾನಿ ಸಂಸದರಾಗಿದ್ದಾರೆ.
ಇತ್ತೀಚೆಗೆ, ಭಾರತವು ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಮಾಡಿದ ದಾಳಿಗಳನ್ನು ಖಂಡಿಸಿತು. “ಗಡಿ ಘರ್ಷಣೆಗಳಲ್ಲಿ ಹಲವಾರು ಅಫ್ಘಾನ್ ನಾಗರಿಕರು ಸಾವಿಗೀಡಾಗಿದ್ದಾರೆ ಎಂಬ ವರದಿಗಳನ್ನು ನಾವು ನೋಡಿದ್ದೇವೆ” ಎಂದು ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀಧ ಜೈಸ್ವಾಲ್ ವಾರದ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
“ಅಫ್ಘಾನಿಸ್ತಾನದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಭಾರತ ಬೆಂಬಲಿಸುತ್ತದೆ. ಅಮಾಯಕ ಜನರ ಮೇಲಿನ ಇಂತಹ ದಾಳಿಗಳು ಒಪ್ಪುವಂಥದ್ದಲ್ಲ ” ಎಂದು ಅವರು ಹೇಳಿದ್ದಾರೆ.
ತಾರಕಕ್ಕೇರಿದ ಪಾಕ್-ಅಫ್ಘಾನ್ ಸಂಘರ್ಷ
2021 ರಲ್ಲಿ ತಾಲಿಬಾನ್ ಆಡಳಿತಕ್ಕೆ ಬಂದ ನಂತರ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದೆ. ಅಫ್ಘಾನಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸುತ್ತಿದ್ದರೆ, ಈ ಆರೋಪವನ್ನು ಅಫ್ಘಾನಿಸ್ತಾನ ತಳ್ಳಿಹಾಕಿದೆ.


ನಿಮ್ಮ ಕಾಮೆಂಟ್ ಬರೆಯಿರಿ