
ಢಾಕಾ : ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಅಸ್ಥಿರತೆಯ ನಡುವೆ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿ ಮುಂದುವರಿದಿದೆ. ಭಾನುವಾರ (ಜನವರಿ 11) ರಾತ್ರಿ ಫೆನಿ ಜಿಲ್ಲೆಯ ದಗೊನ್ಬುಯಾನ್ ಪ್ರದೇಶದಲ್ಲಿ ಸಮೀರಕುಮಾರ ದಾಸ್ (28) ಎಂಬ ಆಟೋ ಚಾಲಕನನ್ನು ಗುಂಪೊಂದು ಹೊಡೆದು ಕೊಂದಿದೆ. ಈ ಘಟನೆಯೊಂದಿಗೆ, ಕಳೆದ 23 ದಿನಗಳಲ್ಲಿ ನಡೆದ 7ನೇ ಹಿಂದೂ ಹತ್ಯೆ ಇದಾಗಿದೆ.
ದಾಳಿಕೋರರು ಸಮೀರ್ ಅವರ ಮೇಲೆ ಹಲ್ಲೆ ನಡೆಸಿ ಅವರ ಆಟೋವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇದು ದರೋಡೆಗಾಗಿ ನಡೆದ ಕೊಲೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯ ನಂತರ ತಿಳಿಸಿದ್ದಾರೆ.

ಕುಟುಂಬದವರ ಪ್ರಕಾರ, ಸಮೀರ ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಆಟೋರಿಕ್ಷಾದಲ್ಲಿ ಮನೆಯಿಂದ ಹೊರಟಿದ್ದರು, ತಡರಾತ್ರಿಯಾದರೂ ಹಿಂತಿರುಗದಿದ್ದಾಗ, ಕುಟುಂಬದವರು ಅವರನ್ನು ಹುಡುಕಲು ಪ್ರಾರಂಭಿಸಿದ್ದರು. ಬೆಳಗಿನ ಜಾವ 2 ಗಂಟೆ ಸುಮಾರಿಗೆ, ಜಗತ್ಪುರ ಗ್ರಾಮದ ಹೊಲವೊಂದರಲ್ಲಿ ಸ್ಥಳೀಯರು ಅವರ ಶವವನ್ನು ಪತ್ತೆ ಮಾಡಿದ್ದಾರೆ. ದಗನ್ಭುಯಾನ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ಸಮೀರ್ ಹತ್ಯೆಗೆ ಮನೆಯಲ್ಲಿ ತಯಾರಿಸಿದ ಆಯುಧಗಳನ್ನು ಬಳಸಲಾಗಿದೆ. ಪ್ರಾಥಮಿಕ ತನಿಖೆಗಳು ಕೊಲೆ ಪೂರ್ವ ಯೋಜಿತ ಎಂದು ಕಂಡುಬರುತ್ತಿದೆ. ತನಿಖೆ ಮುಂದುವರೆದಿದ್ದು, ಈವರೆಗೆ ಯಾರನ್ನೂ ಬಂಧಿಸಿಲ್ಲ.
ನರಸಿಂಗಡಿ ಜಿಲ್ಲೆಯಲ್ಲಿ ಹಿಂದೂ ಕಿರಾಣಿ ಅಂಗಡಿ ಮಾಲೀಕನ ಮೇಲೆ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಸಿಲ್ಹೆಟ್ನಲ್ಲಿ ಜೋಯ್ ಮೊಹಾಪಾತ್ರ ಎಂಬವರು ಮೊಬೈಲ್ ಕಂತು ಪಾವತಿಯ ವಿವಾದದಲ್ಲಿ ಅಂಗಡಿ ಮಾಲೀಕನ ಕಿರುಕುಳ ತಾಳಲಾರದೆ ವಿಷ ಸೇವಿಸಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ವಾಯುವ್ಯ ಬಾಂಗ್ಲಾದೇಶದಲ್ಲಿ ಕಳ್ಳತನದ ಆರೋಪ ಹೊರಿಸಿ ಬೆನ್ನಟ್ಟಿದ ಗುಂಪಿನಿಂದ ತಪ್ಪಿಸಿಕೊಳ್ಳಲು ಹೋಗಿ ಮಿಥುನ್ ಸರ್ಕಾರ್ (25) ಎಂಬುವವರು ಕಾಲುವೆಗೆ ಬಿದ್ದು ಮೃತಪಟ್ಟಿದ್ದಾರೆ.
ಸಂಘಟನೆಗಳ ಆತಂಕ:
ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಐಕ್ಯತಾ ಪರಿಷತ್ತು ಕಳೆದ ಎರಡು ವಾರಗಳಲ್ಲಿ ನಡೆದ ದೌರ್ಜನ್ಯಗಳ ಪಟ್ಟಿಯನ್ನು ನೀಡಿದೆ. ಇದರಲ್ಲಿ ಹಿಂದೂ ವಿಧವೆಯ ಮೇಲೆ ಅತ್ಯಾಚಾರ, ಜ್ಯುವೆಲ್ಲರಿ ಅಂಗಡಿಗಳ ಲೂಟಿ ಮತ್ತು ಕುರಿಗ್ರಾಮ್ ಜಿಲ್ಲೆಯ ಹಿಂದೂ ಡೆಪ್ಯುಟಿ ಕಮಿಷನರ್ ಅವರಿಗೆ ಚುನಾವಣಾ ಕರ್ತವ್ಯದ ವೇಳೆ ಬೆದರಿಕೆ ಹಾಕಿದ ಘಟನೆಗಳು ಸೇರಿವೆ.
ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಈ ಹತ್ಯೆಗಳನ್ನು ಖಂಡಿಸಿದೆ. ಆದರೆ, ಈ ಘಟನೆಗಳನ್ನು “ಕೋಮು ಸಂಘರ್ಷ” ಎಂದು ಒಪ್ಪಿಕೊಳ್ಳಲು ನಿರಾಕರಿಸಿರುವ ಸರ್ಕಾರ, ಇವು ಕೇವಲ “ಅಪವಾದಾತ್ಮಕ ಘಟನೆಗಳು” ಎಂದು ಬಣ್ಣಿಸಿದೆ. ಫೆಬ್ರವರಿ 12 ರಂದು ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ