ರಾತ್ರೋರಾತ್ರಿ ಆಸ್ಪತ್ರೆಗಳನ್ನು ನಿರ್ಮಿಸುವುದರಿಂದ ಹಿಡಿದು, ಕಡಿದಾದ ಪರ್ವತ ಶ್ರೇಣಿಗಳ ಮೇಲೆ ರಸ್ತೆಗಳನ್ನು ನಿರ್ಮಿಸುವವರೆಗೆ ಚೀನಾ ತನ್ನ ಎಂಜಿನಿಯರಿಂಗ್ ಸಾಧನೆಗಳಿಂದ ಜಗತ್ತನ್ನು ಸದಾ ಬೆರಗುಗೊಳಿಸುತ್ತದೆ. ಇದಕ್ಕೆ ಜ್ವಲಂತ ಉದಾಹರಣೆ, ಚೀನಾದ ಚಾಂಗ್‌ಕಿಂಗ್ ಪ್ರಾಂತ್ಯದ ಶಿಝು ಎಂಬಲ್ಲಿರುವ ‘ದಾವೋಬೈಲಿಯಾಂಗ್’ (Daobeiliang) ಸ್ಕೈ ರೋಡ್.
ಚೀನೀ ಎಂಜಿನಿಯರ್‌ಗಳ ಕೌಶಲ ಮತ್ತು ನಿಖರತೆಗೆ ಈ ರಸ್ತೆ ಒಂದು ಜೀವಂತ ಸಾಕ್ಷಿಯಾಗಿದೆ. ‘ದಾವೋಬೈಲಿಯಾಂಗ್’ ಎಂದರೆ ಕನ್ನಡದಲ್ಲಿ ‘ಕತ್ತಿಯ ಅಲಗು’ ಎಂದರ್ಥ. ಈ ರಸ್ತೆಯು ಇರುವ ಅಪಾಯಕಾರಿ ಸ್ಥಳಕ್ಕೆ ಈ ಹೆಸರು ಅನ್ವರ್ಥವಾಗಿದೆ.
ಕತ್ತಿಯ ಅಲಗಿನ ಮೇಲೆ ಪಯಣ
ಈ ರಸ್ತೆಯು ಅತ್ಯಂತ ಕಿರಿದಾದ ಪರ್ವತದ ತುದಿಯಲ್ಲಿ ನಿರ್ಮಾಣಗೊಂಡಿದೆ. ಇದರ ಎರಡೂ ಬದಿಗಳಲ್ಲಿ ಸುಮಾರು 600 ಮೀಟರ್‌ಗಳಷ್ಟು ಆಳವಾದ ಪ್ರಪಾತವಿದೆ. ಇಂತಹ ಪರಿಸ್ಥಿತಿಯಲ್ಲಿ ಸಣ್ಣ ತಪ್ಪು ಸಂಭವಿಸಿದರೂ ಅದು ಸಾವಿಗೆ ಆಹ್ವಾನ ನೀಡಿದಂತೆಯೇ ಸರಿ. ಸಾಮಾನ್ಯವಾಗಿ ಗುಡ್ಡಗಾಡು ರಸ್ತೆಗಳು ತಿರುವುಗಳು ಮತ್ತು ಮಂಜಿನಿಂದಾಗಿ ಪ್ರಯಾಣ ಸವಾಲಾಗಿಯೇ ಇರುತ್ತವೆ, ಅದರಲ್ಲಿಯೂ ‘ದಾವೋಬೈಲಿಯಾಂಗ್’ ರಸ್ತೆಯು ಜಗತ್ತಿನ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ.
ರಸ್ತೆಯ ಭೀಕರ ಆಯಾಮಗಳು
ರಸ್ತೆಯ ಉದ್ದ ಸುಮಾರು 3 ಕಿಲೋಮೀಟರ್ ಗಳಾಗಿವೆ. ಅಗಲ ಸರಾಸರಿ 5.5 ಮೀಟರ್. ಕೆಲವು ಕಡೆಗಳಲ್ಲಿ ಇದು 3 ಮೀಟರ್‌ಗಿಂತಲೂ ಕಡಿಮೆ ಅಗಲವಿದ್ದು, ಕೇವಲ ಒಂದು ವಾಹನ ಮಾತ್ರ ಚಲಿಸಲು ಸಾಧ್ಯವಿದೆ.
ಹಲವೆಡೆ ರಸ್ತೆಯ ಎರಡೂ ಬದಿಯಲ್ಲಿ ಯಾವುದೇ ರಕ್ಷಣಾ ಗೋಡೆಗಳಿಲ್ಲ (Safety walls). ಹೀಗಾಗಿ ಇಲ್ಲಿ ವಾಹನ ಚಲಾಯಿಸುವುದು ಗಾಳಿಯಲ್ಲಿ ತೇಲುತ್ತಿರುವ ಬೃಹತ್ ಕತ್ತಿಯ ಮೇಲೆ ಸಾಗಿದಂತೆ ಅನುಭವ ನೀಡುತ್ತದೆ. ವಿಶೇಷವೆಂದರೆ, ಈ ರಸ್ತೆಯನ್ನು ಪ್ರವಾಸಿಗರಿಗಾಗಿ ನಿರ್ಮಿಸಿದ್ದಲ್ಲ. ಗಾಳಿ ಶಕ್ತಿ (Wind Energy) ಕಂಪನಿಯೊಂದು ‘ಕಿಯಾವೋ’ ಪರ್ವತದ ತುದಿಯಲ್ಲಿ ಪವನ ಯಂತ್ರಗಳನ್ನು ಅಳವಡಿಸಲು ಮತ್ತು ಅವುಗಳ ನಿರ್ವಹಣೆಗಾಗಿ ಈ ರಸ್ತೆಯನ್ನು ನಿರ್ಮಿಸಿತ್ತು. ಅಂದರೆ, ರೋಮಾಂಚನಕ್ಕಾಗಿ ಅಲ್ಲದೆ ಕೇವಲ ಕೆಲಸದ ಉದ್ದೇಶಕ್ಕಾಗಿ ಇದು ನಿರ್ಮಾಣಗೊಂಡಿತ್ತು.
ಸಾಹಸಿಗಳ ಪಾಲಿನ ಸ್ವರ್ಗ
ರಸ್ತೆಯ ವಿಶಿಷ್ಟ ವಿನ್ಯಾಸ ಮತ್ತು ಅಲ್ಲಿನ ಸಾಹಸದ ರೋಮಾಂಚನವೇ ಈ ಸ್ಥಳವು ಇಂದು ವಿಶ್ವದಾದ್ಯಂತ ಇರುವ ಸಾಹಸಪ್ರಿಯರನ್ನು ಮತ್ತು ಚಾಲಕರನ್ನು ತನ್ನತ್ತ ಕೈಬೀಸಿ ಕರೆಯುವಂತಾಗಿದೆ.
ರಷ್ಯಾದ ‘ಬಾಬಿಯುರ್ಟ್’ (Babyurt) ರಸ್ತೆಯಷ್ಟು ಇದು ಅಪಾಯಕಾರಿ ಅಲ್ಲದಿದ್ದರೂ, ಇಲ್ಲಿನ ಆತಂಕ ಮತ್ತು ಅಡ್ರಿನಾಲಿನ್ ರಶ್ ಅನುಭವಿ ಚಾಲಕರನ್ನೂ ಸಹ ಬೆಚ್ಚಿಬೀಳಿಸುತ್ತದೆ. ಎತ್ತರದ ಭಯವಿಲ್ಲದ ಮತ್ತು ಚಾಲನೆಯಲ್ಲಿ ಅತೀವ ಆತ್ಮವಿಶ್ವಾಸ ಇರುವವರು ಮಾತ್ರ ಇಲ್ಲಿ ಸಾಗುವ ಧೈರ್ಯ ಮಾಡುತ್ತಾರೆ. ಮೇಲಿನಿಂದ ನೋಡಿದಾಗ ಇಲ್ಲಿನ ದೃಶ್ಯಗಳು ನಯನಮನೋಹರವಾಗಿರುತ್ತವೆ, ಆದರೆ ರಸ್ತೆಯ ಮೇಲಿನ ಪ್ರಯಾಣ ಮಾತ್ರ ಅಷ್ಟೇ ಭಯಾನಕವಾಗಿರುತ್ತದೆ. ದಾವೋಬೈಲಿಯಾಂಗ್ ಸ್ಕೈ ರೋಡ್ ಚೀನಾದ ಅದ್ಭುತ ಮೂಲಸೌಕರ್ಯಗಳಲ್ಲಿ ಒಂದಾಗಿದ್ದು, ಮಾನವನ ಧೈರ್ಯ ಮತ್ತು ಆಧುನಿಕ ಎಂಜಿನಿಯರಿಂಗ್‌ನ ಅಭೂತಪೂರ್ವ ಸಮ್ಮಿಲನಕ್ಕೆ ಪ್ರತೀಕವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ