
ಗುರುಗ್ರಾಮ: ಕ್ಷುಲ್ಲಕ ಕಾರಣಕ್ಕೆ ಸರ್ಕಾರಿ ವೈದ್ಯರೊಬ್ಬರು ಅಮಲೇರಿದ ಸ್ಥಿತಿಯಲ್ಲಿ ಸ್ವಿಗ್ಗಿ ಡೆಲಿವರಿ ಏಜೆಂಟ್ ಅವರಿಗೆ ತನ್ನ ಎಸ್‌ಯುವಿ ಕಾರನ್ನು ಪದೇ ಪದೇ ಡಿಕ್ಕಿ ಹೊಡೆಸಿದ ಭೀಕರ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಟಿಂಕು ಪನ್ವಾರ್ ಎಂಬ ಯುವಕ ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಯಾತಪುರದ ಸೆಕ್ಟರ್ 93ರಲ್ಲಿರುವ ಸ್ವಿಗ್ಗಿ ವೇರ್‌ಹೌಸ್ ಬಳಿ ಈ ಘಟನೆ ಸಂಭವಿಸಿದೆ. ದೌಲತಾಬಾದ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯುರ್ವೇದ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿರುವ ನವೀನ್ ಯಾದವ್ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ ಎಂದು ಹೇಳಲಾಗಿದೆ.

ಸ್ವಿಗ್ಗಿ ವೇರ್‌ಹೌಸ್ ಬಳಿ ಯಾವಾಗಲೂ ಡೆಲಿವರಿ ಏಜೆಂಟ್‌ಗಳು ಕಿಕ್ಕಿರಿದು ಇರುತ್ತಾರೆ ಎಂಬ ಕಾರಣಕ್ಕೆ ವೈದ್ಯ ನವೀನ್ ಯಾದವ್ ಅಸಮಾಧಾನಗೊಂಡಿದ್ದ ಎನ್ನಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ವೈದ್ಯ ತನ್ನ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರನ್ನು ವೇಗವಾಗಿ ತಿರುಗಿಸಿ ಮರದ ಕೆಳಗೆ ನಿಂತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡೆಲಿವರಿ ಏಜೆಂಟ್ ಟಿಂಕು ಇದನ್ನು ಪ್ರತಿಭಟಿಸಿದಾಗ, ಆಕ್ರೋಶಗೊಂಡ ವೈದ್ಯರು ಆತನ ಮೇಲೆ ಪದೇ ಪದೇ ಕಾರನ್ನು ಹರಿಸಿದ್ದಾನೆ.
ಸಾರ್ವಜನಿಕರ ಮೇಲೂ ಕಾರು ಹರಿಸಲು ಯತ್ನ
ಸ್ಥಳದಲ್ಲಿದ್ದ ಇತರ ಏಜೆಂಟ್‌ಗಳು ತಡೆಯಲು ಯತ್ನಿಸಿದಾಗ, ಅವರ ಮೇಲೂ ಕಾರು ಹರಿಸಲು ಪ್ರಯತ್ನಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ವೇಳೆ ರಸ್ತೆಯ ಬದಿಯಲ್ಲಿದ್ದ ಹಲವು ಬೈಕ್‌ಗಳು ಜಖಂಗೊಂಡಿವೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನವೀನ್ ಯಾದವ್ ನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಈತನ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ವೈದ್ಯನ ವಿರುದ್ಧ ಕೊಲೆ ಯತ್ನ (Attempt to Murder) ಪ್ರಕರಣವನ್ನು ದಾಖಲಿಸಲಾಗಿದ್ದು, ಘಟನೆಯ ಸಮಯದಲ್ಲಿ ೀತ ಮದ್ಯಪಾನ ಮಾಡಿದ್ದ ಎಂದು ಶಂಕಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ