ಅಪ್ರತಿಮ ನಿಷ್ಠೆ | ಆಹಾರ-ನೀರು ತ್ಯಜಿಸಿ ಕೊನೆಯವರೆಗೂ ಮಾಲೀಕನ ಶವ ಬಿಟ್ಟು ಕದಲದ ನಾಯಿ : ದೇಹ ಹಿಂಬಾಲಿಸಿ 4 ಕಿಮೀ ಓಟ !

ಶಿವಪುರಿ (ಮಧ್ಯಪ್ರದೇಶ): ಪ್ರಾಣಿಗಳು ಮನುಷ್ಯರಿಗಿಂತ ಹೆಚ್ಚು ನಿಷ್ಠಾವಂತ ಎಂಬ ಮಾತಿಗೆ ಸಾಕ್ಷಿಯಾದ ಮನಕಲಕುವ ಘಟನೆಯೊಂದು ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ. ತನ್ನ ಯಜಮಾನ ಮೃತಪಟ್ಟಿದ್ದರೂ, ಆತನನ್ನು ಬಿಟ್ಟಿರಲಾರದೆ ಶ್ವಾನವೊಂದು ತೋರಿದ ಪ್ರೀತಿ ಮತ್ತು ನಿಷ್ಠೆ ಈಗ ಸಾವಿರಾರು ಜನರ ಕಣ್ಣಿನಲ್ಲಿ ನೀರು ತರಿಸಿದೆ.
ಶಿವಪುರಿ ಜಿಲ್ಲೆಯ ಬಡೋರಾ ಗ್ರಾಮದ ನಿವಾಸಿ ಜಗದೀಶ ಪ್ರಜಾಪತಿ (40) ಎಂಬುವವರು ಸೋಮವಾರ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಜಗದೀಶ ಅವರ ನಿಗೂಢ ಸಾವಿಗಿಂತಲೂ ಹೆಚ್ಚಾಗಿ, ಅವರ ಸಾಕುನಾಯಿ ತೋರಿದ ನಿಷ್ಠ ಹಾಗೂ ಮಮಕಾರ ಈಗ ಸುದ್ದಿಯ ಕೇಂದ್ರಬಿಂದುವಾಗಿದೆ. ಅದು ಯಜಮಾನ ಸತ್ತ ಕ್ಷಣದಿಂದ ಅಂತಿಮ ವಿಧಿವಿಧಾನಗಳವರೆಗೆ ಯಜಮಾನನನ್ನು ಬಿಡಲಿಲ್ಲ..
ರಾತ್ರಿಯಿಡೀ ಶವದ ಜೊತೆ ಕಳೆದ ಶ್ವಾನ…ಶವ ಹೊತ್ತ  ಟ್ರ್ಯಾಕ್ಟರ್ ಹಿಂದೆ 4 ಕಿಮೀ ಓಟ:
ಜಗದೀಶ ಸಾವಿಗೀಡಾದ ನಂತರ, ಅವರ ಕುಟುಂಬದವರು ಬರುವವರೆಗೂ ಶ್ವಾನವು ಶವದ ಪಕ್ಕದಲ್ಲೇ ಕುಳಿತಿತ್ತು. ಕುಟುಂಬ ಸದಸ್ಯರು ಮನೆಗೆ ತಲುಪಿದಾಗ, ಅವರು ಹೃದಯವಿದ್ರಾವಕ ದೃಶ್ಯವನ್ನು ಕಂಡರು. ಜಗದೀಶ ಅವರ ಸಾಕು ನಾಯಿ ಅವರ ದೇಹದ ಪಕ್ಕದಲ್ಲಿ ಸದ್ದಿಲ್ಲದೆ ಕುಳಿತಿತ್ತು. ನಾಯಿ ಬೊಗಳಲಿಲ್ಲ, ಅಳಲಿಲ್ಲ ಅಥವಾ ಚಲಿಸಲಿಲ್ಲ. ಅದು  ಇಡೀ ರಾತ್ರಿ ಸದ್ದು ಮಾಡದೆ, ಆಹಾರ-ನೀರನ್ನು ತ್ಯಜಿಸಿ ತನ್ನ ಯಜಮಾನನಿಗೆ ಕಾವಲುಗಾರನಂತೆ ಕಾಯುತ್ತಿತ್ತು.

ಮಂಗಳವಾರ ಬೆಳಿಗ್ಗೆ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಜಗದೀಶ ಅವರ ದೇಹವನ್ನು ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಹಾಕಿ ‘ಕರೇರಾ’ ಪಟ್ಟಣಕ್ಕೆ ಕೊಂಡೊಯ್ಯುತ್ತಿದ್ದರು. ಈ ವೇಳೆ ತನ್ನ ಯಜಮಾನನನ್ನು ತನ್ನಿಂದ ದೂರ ಮಾಡುತ್ತಿದ್ದಾರೆ ಎಂದು ಭಾವಿಸಿದ ಶ್ವಾನವು, ಟ್ರ್ಯಾಕ್ಟರ್ ಹಿಂದೆಯೇ ಓಡಲು ಶುರು ಮಾಡಿದೆ. ಸುಡು ಬಿಸಿಲನ್ನೂ ಲೆಕ್ಕಿಸದೆ ಸತತ 4 ಕಿಲೋಮೀಟರ್ ಕಾಲ ಅದು ಟ್ರ್ಯಾಕ್ಟರ್ ಅನ್ನು ಹಿಂಬಾಲಿಸಿದೆ.

ಪ್ರಮುಖ ಸುದ್ದಿ :-   ಭಾರತದ ವ್ಯಾಪಕ ಸಂಪರ್ಕ ಬಳಸಿ ಯುದ್ಧದ ಹಾದಿಯಲ್ಲಿರುವ ದೇಶಗಳನ್ನು ಸಂವಾದಕ್ಕೆ ಕರೆತನ್ನಿ : ಪ್ರಧಾನಿ ಮೋದಿಗೆ ಇರಾನ್ ಅಧ್ಯಕ್ಷರ ಮನವಿ
ಈ ದೃಶ್ಯವನ್ನು ಕಂಡ ಗ್ರಾಮಸ್ಥರು ಮತ್ತು ಹಾದಿಹೋಕರು ನಾಯಿಯ ನಿರ್ಮಲ ಪ್ರೀತಿಗೆ ಮರುಗಿದ್ದಾರೆ. ನಾಯಿಯ ಈ ಸ್ಥಿತಿಯನ್ನು ಕಂಡು ಮರುಗಿದ ಕುಟುಂಬಸ್ಥರು, ಕೊನೆಗೆ ಅದನ್ನು ಟ್ರ್ಯಾಕ್ಟರ್ ಮೇಲೆ ಹತ್ತಿಸಿಕೊಂಡಿದ್ದಾರೆ.
ಅಂತ್ಯಕ್ರಿಯೆಯಲ್ಲೂ ಮೌನ ರೋದನ:
ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಯುವವರೆಗೂ ಅಲ್ಲಿಯೇ ಕಾಯುತ್ತಿದ್ದ ಶ್ವಾನ, ನಂತರ ಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆಯಲ್ಲೂ ಪಾಲ್ಗೊಂಡಿತು. ಚಿತೆಯ ಪಕ್ಕದಲ್ಲೇ ಮೌನವಾಗಿ ಕುಳಿತು ತನ್ನ ನೋವನ್ನು ವ್ಯಕ್ತಪಡಿಸಿತು. ಯಾರು ಎಷ್ಟೇ ಸಮಾಧಾನ ಪಡಿಸಿದರೂ, ಆಹಾರ ನೀಡಿದರೂ ಅದು ಯಾವುದನ್ನೂ ಸ್ವೀಕರಿಸದೆ ಯಜಮಾನನಿಗೆ ತನ್ನ ನಿಷ್ಠೆ ತೋರಿ ತನಿಗಾಗಿ ಮಿಡಿಯಿತು.
ಈ ಹೃದಯಸ್ಪರ್ಶಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, “ಪ್ರೀತಿಗೆ ಭಾಷೆಯ ಹಂಗಿಲ್ಲ, ಪ್ರಾಣಿಗಳಿಗೂ ಭಾವನೆಗಳಿವೆ” ಎಂದು ಅನೇಕರು ಮರುಗುತ್ತಿದ್ದಾರೆ. ಮನುಷ್ಯ ಸಂಬಂಧಗಳ ನಡುವೆ ಸ್ವಾರ್ಥ ಹೆಚ್ಚಾಗುತ್ತಿರುವ ಈ ಕಾಲದಲ್ಲಿ, ಈ ಶ್ವಾನದ ನಿಷ್ಠೆ ಎಲ್ಲರಿಗೂ ದೊಡ್ಡ ಪಾಠವಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement