ಭೋಪಾಲ್: ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದಾದ ಭೋಪಾಲದ ಏಮ್ಸ್ (AIIMS) ಆಸ್ಪತ್ರೆಯ ಲಿಫ್ಟ್ನೊಳಗೆ ನಡೆದ ಭೀಕರ ದರೋಡೆ ಪ್ರಕರಣವು ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸಿದೆ. ಭಾನುವಾರ ನಡೆದ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿದೆ.
ಗೈನೆಕಾಲಜಿ ವಿಭಾಗದಲ್ಲಿ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿರುವ ವರ್ಷಾ ಸೋನಿ ಎಂಬವರು ದರೋಡೆಗೆ ಒಳಗಾದವರು. ಅವರು ರಕ್ತನಿಧಿಯ ಹಿಂಭಾಗದಲ್ಲಿರುವ ಲಿಫ್ಟ್ನಲ್ಲಿ ಏಕಾಂಗಿಯಾಗಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಗಳ ಪ್ರಕಾರ, ಮಾಸ್ಕ್ ಧರಿಸಿದ್ದ ಯುವಕನೊಬ್ಬ ಲಿಫ್ಟ್ ಪ್ರವೇಶಿಸಿ, ನೇತ್ರ ವಿಜ್ಞಾನ ವಿಭಾಗ ಎಲ್ಲಿದೆ ಎಂದು ವರ್ಷಾ ಅವರಲ್ಲಿ ಮಾತುಕತೆ ನಡೆಸಿದ್ದಾನೆ.
ಲಿಫ್ಟ್ ಮೂರನೇ ಮಹಡಿಗೆ ತಲುಪಿದಾಗ, ಹೊರಗೆ ಹೆಜ್ಜೆ ಇಟ್ಟವನೇ ತಕ್ಷಣ ಹಿಂದೆ ತಿರುಗಿ ವರ್ಷಾ ಅವರ ಮೇಲೆ ದಾಳಿ ಮಾಡಿದ್ದಾನೆ. ಅವರ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರ ಮತ್ತು ಮುತ್ತಿನ ಹಾರವನ್ನು ಕಸಿಯಲು ಯತ್ನಿಸಿದ್ದಾನೆ. ವರ್ಷಾ ಅವರು ಪ್ರತಿರೋಧ ತೋರಿದರೂ, ದರೋಡೆಕೋರ ಅವರನ್ನು ತಳ್ಳಿ ಮಾಂಗಲ್ಯ ಸರದೊಂದಿಗೆ ಪರಾರಿಯಾಗಿದ್ದಾನೆ. ಕಿತ್ತಾಟದ ನಡುವೆ ಮುತ್ತಿನ ಹಾರ ತುಂಡಾಗಿ ನೆಲಕ್ಕೆ ಬಿದ್ದಿದೆ.
ಭದ್ರತಾ ವೈಫಲ್ಯದ ಆರೋಪ:
ಘಟನೆ ನಡೆದ ಸಮಯದಲ್ಲಿ ಲಿಫ್ಟ್ ಬಳಿ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ. ದಾಳಿಯಿಂದ ಕಂಗೆಟ್ಟ ವರ್ಷಾ ಅವರು ದಾಳಿಕೋರನ ಹಿಂಬಾಲಿಸಿದ್ದಾರೆ. ಆದರೆ ಪ್ರಯೋಜನವಾಗಲಿಲ್ಲ. ನಂತರ ಅವರು ಲಿಫ್ಟ್ ಬಳಿಯೇ ಕುಳಿತಿದ್ದರು. ನಂತರ ಭದ್ರತಾ ಸಿಬ್ಬಂದಿಯೊಬ್ಬರು ಗಸ್ತಿನಲ್ಲಿದ್ದಾಗ ಅವರನ್ನು ಗಮನಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಬಾಗ್ಸೆವಾನಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಭಾನುವಾರದಂದು ಭದ್ರತೆ ಕಡಿಮೆಯಿದ್ದ ಕಾರಣ ಆರೋಪಿಯು ಐಪಿಡಿ ಗೇಟ್ ಮೂಲಕ ತಪ್ಪಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ