ನವದೆಹಲಿ: ಸುಮಾರು 20 ವರ್ಷಗಳ ಸುದೀರ್ಘ ಮಾತುಕತೆಯ ನಂತರ, ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ಜನವರಿ 27 ರಂದು ನವದೆಹಲಿಯಲ್ಲಿ ಐತಿಹಾಸಿಕ ‘ಮುಕ್ತ ವ್ಯಾಪಾರ ಒಪ್ಪಂದ’ಕ್ಕೆ (FTA) ಸಹಿ ಹಾಕಿವೆ. ವಿಶ್ವದ ಜನಸಂಖ್ಯೆಯ ಕಾಲು ಭಾಗ ಹಾಗೂ ಜಾಗತಿಕ ಜಿಡಿಪಿಯ ಶೇ. 25 ರಷ್ಟನ್ನು ಪ್ರತಿನಿಧಿಸುವ ಈ ಎರಡು ಆರ್ಥಿಕತೆಗಳ ಒಕ್ಕೂಟವು ಈಗ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ.
ಆದರೆ, ಈ ಒಪ್ಪಂದವು ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ತಲ್ಲಣ ಸೃಷ್ಟಿಸಿದೆ. ಭಾರತಕ್ಕೆ ಸಿಕ್ಕಿರುವ ಈ ಬೃಹತ್ ರಿಯಾಯಿತಿಗಳಿಂದ ತಮ್ಮ ದೇಶದ ರಫ್ತು ವಹಿವಾಟಿಗೆ ಹೊಡೆತ ಬೀಳಲಿದೆ ಎಂದು ಪಾಕಿಸ್ತಾನ ಆತಂಕ ವ್ಯಕ್ತಪಡಿಸಿದೆ.
ಇಷ್ಟು ದಿನ ಯುರೋಪಿಯನ್ ಮಾರುಕಟ್ಟೆಯಲ್ಲಿ ಪಾಕಿಸ್ತಾನವು ಭಾರತಕ್ಕಿಂತ ಮೇಲುಗೈ ಸಾಧಿಸಿತ್ತು. ಇದಕ್ಕೆ ಮುಖ್ಯ ಕಾರಣ ‘GSP Plus’ ಮಾನ್ಯತೆ.
ಈ ಯೋಜನೆಯಡಿ ಪಾಕಿಸ್ತಾನವು ಜವಳಿ ಮತ್ತು ಸಿದ್ಧ ಉಡುಪುಗಳು ಸೇರಿದಂತೆ ತನ್ನ ಶೇ. 66 ರಷ್ಟು ರಫ್ತುಗಳ ಮೇಲೆ ಯಾವುದೇ ತೆರಿಗೆ ಇಲ್ಲದೆ ಯುರೋಪ್ಗೆ ರಫ್ತು ಮಾಡುತ್ತಿತ್ತು.
ಇದೇ ಸಮಯದಲ್ಲಿ ಭಾರತೀಯ ರಫ್ತುದಾರರು ಶೇ. 9 ರಿಂದ 12 ರಷ್ಟು ತೆರಿಗೆ ಪಾವತಿಸಬೇಕಿತ್ತು. ಆದರೂ ಸಹ, ಭಾರತವು ಯುರೋಪ್ಗೆ 5.6 ಶತಕೋಟಿ ಡಾಲರ್ ರಫ್ತು ಮಾಡುತ್ತಿದ್ದರೆ, ತೆರಿಗೆ ರಿಯಾಯಿತಿ ಇದ್ದ ಪಾಕಿಸ್ತಾನ 6.2 ಶತಕೋಟಿ ಡಾಲರ್ ರಫ್ತು ಮಾಡುತ್ತಿತ್ತು. ಈಗ ಭಾರತಕ್ಕೆ ‘ಶೂನ್ಯ ಸುಂಕ’ದ ಲಾಭ ಸಿಗುವುದರಿಂದ, ಪಾಕಿಸ್ತಾನ ಹೊಂದಿದ್ದ ವಿಶೇಷ ಸ್ಥಾನಮಾನದ ಲಾಭ ಇಲ್ಲದಂತಾಗುತ್ತದೆ.
ಎರಡು ಕಡೆಯಿಂದ ಪಾಕಿಸ್ತಾನಕ್ಕೆ ಪೆಟ್ಟು
ಪಾಕಿಸ್ತಾನ ಈಗ ಇಕ್ಕಟ್ಟಿಗೆ ಸಿಲುಕಿದೆ. ಈಗ ಪಾಕಿಸ್ತಾನವು ಎರಡು ಅಲಗಿನ ಕತ್ತಿಯನ್ನು ಎದುರಿಸುತ್ತಿದೆ. ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಆಗಿದ್ದರಿಂದ ಪಾಕಿಸ್ತಾನ ಈಗ ಭಾರತಕ್ಕೆ ತಮ್ಮ ಲಾಭವನ್ನು ಕಳೆದುಕೊಳ್ಳುತ್ತಿದ್ದಾರೆ.
ಒಂದು ಕಡೆ ಭಾರತವು ಕಡಿಮೆ ಬೆಲೆಯಲ್ಲಿ ಗುಣಮಟ್ಟದ ವಸ್ತುಗಳನ್ನು ಯುರೋಪ್ಗೆ ನೀಡಲು ಸಿದ್ಧವಾಗಿದ್ದರೆ, ಇನ್ನೊಂದು ಕಡೆ ಪಾಕಿಸ್ತಾನಕ್ಕೆ ಸಿಕ್ಕಿರುವ ‘GSP Plus’ ಮಾನ್ಯತೆ ಮುಂದಿನ ವರ್ಷ (2027 ) ಡಿಸೆಂಬರ್ಗೆ ಕೊನೆಗೊಳ್ಳಲಿದೆ. ಒಂದು ವೇಳೆ ಇದು ನವೀಕರಣಗೊಳ್ಳದಿದ್ದರೆ ಪಾಕಿಸ್ತಾನದ ರಫ್ತು ಸಂಪೂರ್ಣವಾಗಿ ಕುಸಿಯುವ ಭೀತಿ ಅದಕ್ಕೆ ಎದುರಾಗಿದೆ.
“ಭಾರತವು ಯುರೋಪಿಯನ್ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿ ಬೆಳೆದಿದೆ. ಇದು ಪಾಕಿಸ್ತಾನದ ಅನುಕೂಲಗಳನ್ನು ಇಲ್ಲವಾಗಿಸಿದೆ,” ಎಂದು ಆಲ್ ಪಾಕಿಸ್ತಾನ್ ಟೆಕ್ಸ್ಟೈಲ್ ಮಿಲ್ಸ್ ಅಸೋಸಿಯೇಷನ್ ಮುಖ್ಯಸ್ಥ ಕಾಮ್ರಾನ್ ಅರ್ಷದ್ ಹೇಳಿದ್ದಾರೆ.
ಒಂದು ಕೋಟಿ ಉದ್ಯೋಗಗಳ ಮೇಲೆ ಪರಿಣಾಮ?
ಪಾಕಿಸ್ತಾನದ ಮಾಜಿ ವಾಣಿಜ್ಯ ಸಚಿವ ಡಾ. ಗೋಹರ್ ಎಜಾಜ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಳವಳ ವ್ಯಕ್ತಪಡಿಸಿದ್ದು, “ಯುರೋಪಿಯನ್ ಒಕ್ಕೂಟದೊಂದಿಗಿನ ನಮ್ಮ ಶೂನ್ಯ ತೆರಿಗೆಯ ‘ಹನಿಮೂನ್’ ಮುಗಿದಿದೆ. ಇದರಿಂದ ದೇಶದ 1 ಕೋಟಿ ಉದ್ಯೋಗಗಳು ಅಪಾಯದಲ್ಲಿವೆ,” ಎಂದು ಎಚ್ಚರಿಸಿದ್ದಾರೆ.
ಭಾರತದ ಶೇ. 95 ರಷ್ಟು ಶ್ರಮ ಆಧಾರಿತ ರಫ್ತುಗಳಿಗೆ ಯುರೋಪ್ನಲ್ಲಿ ತೆರಿಗೆ ವಿನಾಯಿತಿ ಸಿಗಲಿದೆ. ಬದಲಿಗೆ, ಯುರೋಪ್ನ ಐಷಾರಾಮಿ ಕಾರುಗಳು ಮತ್ತು ವೈನ್ ಭಾರತದಲ್ಲಿ ಅಗ್ಗವಾಗಲಿವೆ.ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಈ ಬಗ್ಗೆ ಯುರೋಪಿಯನ್ ಒಕ್ಕೂಟದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ