ಟಿ20 ವಿಶ್ವಕಪ್‌ 2026 : ಭಾರತದ ವಿರುದ್ಧದ ಪಂದ್ಯ ಆಡಲ್ಲ ಎಂದಿದ್ದ ಪಾಕಿಸ್ತಾನ ಯೂ ಟರ್ನ್‌ ಹೊಡೆಯಲು ಕಾರಣಗಳೇನು..?

ಕಳೆದ ಕೆಲವು ದಿನಗಳಿಂದ ಜಾಗತಿಕ ಕ್ರಿಕೆಟ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಅನಿಶ್ಚಿತತೆ ಕೊನೆಗೊಂಡಿದೆ. ಫೆಬ್ರವರಿ 15 ರಂದು ನಡೆಯಲಿರುವ ಭಾರತ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ಪ್ರಸ್ತಾವಿತ ನಿರ್ಧಾರದಿಂದ ಪಾಕಿಸ್ತಾನ ಸರ್ಕಾರ ಹಿಂದೆ ಸರಿದಿದೆ. ರಾಜತಾಂತ್ರಿಕ ಸಂಘರ್ಷ ಮತ್ತು ಬಹಿಷ್ಕಾರದ ಎಚ್ಚರಿಕೆ ನೀಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB), ಕೊನೆಗೂ ಐಸಿಸಿ (ICC) ಮತ್ತು ಇತರ ಸದಸ್ಯ ರಾಷ್ಟ್ರಗಳ ತೀವ್ರ ಒತ್ತಡಕ್ಕೆ ಮಣಿದು ಯೂ ಟರ್ನ್‌ ಹೊಡೆದುಫೆಬ್ರವರಿ 15ರಂದು ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಂದ್ಯವನ್ನು ಆಡುವುದಾಗಿ ಪ್ರಕಟಿಸಿದೆ.
ಸುಮಾರು 4,500 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಭಾರತದ ವಿರುದ್ಧದ ಈ ಹೈವೋಲ್ಟೇಜ್ ಪಂದ್ಯ ಬಹಿಷ್ಕರಿಸಿದ್ದ ಪಾಕಿಸ್ತಾನ ಕೊನೆಕ್ಷಣದಲ್ಲಿ “ಯು-ಟರ್ನ್” ಹೊಡೆದು ಆಡಲು ಒಪ್ಪಿಕೊಂಡಿರುವುದಕ್ಕೆ ಕಾರಣಗಳೇನು ಎಂಬುದರ ಬಗ್ಗೆ ಈಗ ಚರ್ಚೆಯಾಗುತ್ತಿದೆ.

ರಾಜಕೀಯ ಹಠಮಾರಿ ಧೋರಣೆಯಿಂದ ಹಿನ್ನಡೆಯ ವರೆಗೆ
ಫೆಬ್ರವರಿ ಆರಂಭದಲ್ಲಿ ಬಾಂಗ್ಲಾದೇಶವನ್ನು ಟೂರ್ನಿಯಿಂದ ಹೊರಗಿಟ್ಟ ಐಸಿಸಿ ನಿರ್ಧಾರವನ್ನು ವಿರೋಧಿಸಿ, ಪಾಕಿಸ್ತಾನ ಸರ್ಕಾರವು ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಘೋಷಿಸಿತ್ತು.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಜೊತೆಗಿನ ಒಗ್ಗಟ್ಟನ್ನು ಪ್ರದರ್ಶಿಸಲು, ಪಾಕಿಸ್ತಾನವು ಈ ತಿಂಗಳ ಆರಂಭದಲ್ಲಿ ಈ ವಿವಾದಾತ್ಮಕ ನಿರ್ಧಾರವನ್ನು ಪ್ರಕಟಿಸಿದ ನಂತರ ಸುಮಾರು 10 ದಿನಗಳ ಕಾಲ ಈ ಬಿಕ್ಕಟ್ಟು ಮುಂದುವರಿದಿತ್ತು. ಭದ್ರತಾ ಕಾರಣಗಳನ್ನು ನೀಡಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ ನಂತರ ಬಾಂಗ್ಲಾದೇಶವನ್ನು ವಿಶ್ವಕಪ್‌ನಿಂದ ಹೊರಹಾಕಿದ್ದು “ಅನ್ಯಾಯ” ಎಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಅವರು ವಾದಿಸಿದ್ದರು.
ಹಾಗಾದರೆ, ಈ ನಿರ್ಧಾರವನ್ನು ಬದಲಿಸಲು ಪಾಕಿಸ್ತಾನಕ್ಕೆ ಒತ್ತಡ ಹೇರಿದ್ದು ಯಾವುದು? ಐಸಿಸಿ ಐಸಿಸಿ (ICC) ಕಠಿಣ ನಿಲುವು, ಉನ್ನತ ಅಧಿಕಾರಿಗಳು ಮತ್ತು ಅದರ ಮಂಡಳಿಯ ಸದಸ್ಯರ ನಿರಂತರ ಒತ್ತಡ, ಜೊತೆಗೆ ಆರ್ಥಿಕ ನಷ್ಟದ ಭೀತಿಯು ಟೂರ್ನಿಯ ಅತ್ಯಂತ ಲಾಭದಾಯಕ ಪಂದ್ಯವನ್ನು ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದವು ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ಬಹಿಷ್ಕಾರದ ನಿರ್ಧಾರಕ್ಕೆ ಐಸಿಸಿ ತಕ್ಷಣ ಪ್ರತಿಕ್ರಿಯೆ ನೀಡಿತು. ಜಾಗತಿಕ ಟೂರ್ನಿಯಲ್ಲಿ ಆಯ್ದ ಪಂದ್ಯಗಳಲ್ಲಿ ಮಾತ್ರ ಭಾಗವಹಿಸುವುದು ಕ್ರೀಡಾ ಸಮಗ್ರತೆ ಮತ್ತು ನ್ಯಾಯಸಮ್ಮತತೆಯನ್ನು ಕುಗ್ಗಿಸುತ್ತದೆ ಎಂದು ಐಸಿಸಿ ಹೇಳಿಕೆ ನೀಡಿತು. ಅಲ್ಲದೆ, ಈಗಾಗಲೇ ನಿಗದಿಯಾಗಿರುವ ಪಂದ್ಯವನ್ನು ಆಡಲು ನಿರಾಕರಿಸುವುದು ಪಾಕಿಸ್ತಾನ ಕ್ರಿಕೆಟ್ ಮೇಲೆ ದೀರ್ಘಕಾಲದ ಪರಿಣಾಮ ಬೀರಬಹುದು ಎಂದು ಎಚ್ಚರಿಸಿತು. ಈ ಪಂದ್ಯವನ್ನು ರದ್ದುಗೊಳಿಸುವುದರಿಂದ ಐಸಿಸಿಗೆ ಮಾತ್ರವಲ್ಲದೆ ಹಲವು ಸದಸ್ಯ ರಾಷ್ಟ್ರಗಳ ಕ್ರಿಕೆಟ್ ಮಂಡಳಿಗಳಿಗೆ ಪ್ರಸಾರ ಆದಾಯದಲ್ಲಿ ಭಾರಿ ನಷ್ಟ ಉಂಟಾಗುತ್ತದೆ ಮತ್ತು ವಾಣಿಜ್ಯಿಕವಾಗಿ ದೊಡ್ಡ ಹೊಡೆತ ಬೀಳುತ್ತದೆ ಎಂದು ಅಧಿಕಾರಿಗಳು ಒತ್ತಿಹೇಳಿದರು. ನಿಖರವಾದ ಅಂಕಿಅಂಶಗಳನ್ನು ಅಧಿಕೃತವಾಗಿ ಬಹಿರಂಗಪಡಿಸದಿದ್ದರೂ, ಭಾರತ-ಪಾಕಿಸ್ತಾನ ಪಂದ್ಯವು ಇಡೀ ಟೂರ್ನಿಯ ಅತಿ ಹೆಚ್ಚು ಆದಾಯ ತರುವ ಪಂದ್ಯಗಳಲ್ಲಿ ಒಂದಾಗಿದೆ ಎಂದು ವರದಿಯಾಗಿದೆ.
ಪಾಕಿಸ್ತಾನವು ಒಂದು ವೇಳೆ ಪಂದ್ಯವನ್ನು ಬಹಿಷ್ಕರಿಸಿದರೆ: ಪಾಕಿಸ್ತಾನ ತಂಡದ ಪಾಯಿಂಟ್ಸ್‌ಗಳನ್ನು ಕಡಿತಗೊಳಿಸುವುದು, ಐಸಿಸಿಯಿಂದ ಪಾಕಿಸ್ತಾನಕ್ಕೆ ಬರುವ ವಾರ್ಷಿಕ ಆದಾಯಕ್ಕೆ ಕತ್ತರಿ ಹಾಕುವುದು, ಪ್ರಸಾರಕ ಸಂಸ್ಥೆಗಳ ನಷ್ಟವನ್ನು (ಸುಮಾರು 1,470 ಕೋಟಿ ರೂ.) ತುಂಬಿಕೊಡುವಂತೆ ದಂಡ ವಿಧಿಸುವ ಬಗ್ಗೆ ಎಚ್ಚರಿಕೆ ನೀಡಲಾಯಿತು.

ಅಲ್ಲದೆ, ಅದೇ ಸಮಯದಲ್ಲಿ, ಜಾಗತಿಕ ಕ್ರಿಕೆಟ್ ಹಿತದೃಷ್ಟಿಯಿಂದ ತನ್ನ ಬಹಿಷ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಪಾಕಿಸ್ತಾನವನ್ನು ಒತ್ತಾಯಿಸಿತು. ಆದರೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಎದುರಾಗಬಹುದಾದ ಆರ್ಥಿಕ ಹೊಡೆತದ ಭೀತಿಯೇ ಪಾಕಿಸ್ತಾನ ತನ್ನ ನಿಲುವನ್ನು ಬದಲಿಸಲು ಪ್ರಮುಖ ಕಾರಣ ಎನ್ನಲಾಗಿದೆ.
ಶ್ರೀಲಂಕಾದ ರಾಜತಾಂತ್ರಿಕ ಮನವಿ
ಭಾರತ-ಪಾಕಿಸ್ತಾನ ಪಂದ್ಯವು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿದ್ದು, ಇದು ಆ ದೇಶದ ಪ್ರವಾಸೋದ್ಯಮಕ್ಕೆ ದೊಡ್ಡ ಉತ್ತೇಜನ ನೀಡಲಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ (SLC) ಅತ್ಯಂತ ಮಹತ್ವದ ಪಾತ್ರ ವಹಿಸಿತು. 2009ರಲ್ಲಿ ಪಾಕಿಸ್ತಾನದಲ್ಲಿ ಶ್ರೀಲಂಕಾ ತಂಡದ ಮೇಲೆ ಉಗ್ರರ ದಾಳಿ ನಡೆದಾಗಲೂ, ಪಾಕಿಸ್ತಾನದಲ್ಲಿ ಶ್ರೀಲಂಕಾ ಕ್ರಿಕೆಟ್ ಉಳಿಯಲು ತಾವು ನೀಡಿದ ಬೆಂಬಲವನ್ನು ಶ್ರೀಲಂಕಾ ಪಾಕಿಸ್ತಾನಕ್ಕೆ ನೆನಪಿಸಿತು. ಭಾರತ-ಪಾಕ್ ಪಂದ್ಯ ರದ್ದಾದರೆ ಆತಿಥೇಯ ರಾಷ್ಟ್ರಕ್ಕೆ ಆಗುವ ನಷ್ಟವನ್ನು ವಿವರಿಸಿ, ಪಾಕಿಸ್ತಾನವು ತನ್ನ ವಾದವನ್ನು ಕೈಬಿಡಬೇಕೆಂದು ಒತ್ತಾಯಿಸಿ ಪತ್ರ ಬರೆಯಿತು.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ಲಾಹೋರ್‌ನಲ್ಲಿ ನಡೆದ ತುರ್ತು ಸಭೆ
ಭಾನುವಾರ ಲಾಹೋರ್‌ನಲ್ಲಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಮಿನುಲ್ ಇಸ್ಲಾಂ ಮತ್ತು ಐಸಿಸಿ ನಿರ್ದೇಶಕ ಇಮ್ರಾನ್ ಖ್ವಾಜಾ ನಡುವೆ ಸುದೀರ್ಘ ಸಭೆ ನಡೆಯಿತು. ಬಾಂಗ್ಲಾದೇಶದ ಮೇಲಿನ ಶಿಸ್ತು ಕ್ರಮಗಳನ್ನು ಸಡಿಲಗೊಳಿಸುವ ಭರವಸೆಯ ಮೇಲೆ ಪಾಕಿಸ್ತಾನವು ತನ್ನ ಬಹಿಷ್ಕಾರದ ನಿರ್ಧಾರವನ್ನು ವಾಪಸ್ ಪಡೆಯಲು ಒಪ್ಪಿಕೊಂಡಿರುವುದಾಗಿ ಹೇಳಿಕೊಂಡಿದೆ.
ಮುಖಭಂಗ ತಪ್ಪಿಸಿಕೊಳ್ಳುವ ಪ್ರಯತ್ನ
ಸೋಮವಾರ ರಾತ್ರಿ ಪಾಕಿಸ್ತಾನ ಸರ್ಕಾರವು ಅಧಿಕೃತವಾಗಿ ಪಾಕ್‌ ತಂಡವು ಭಾರತದ ವಿರುದ್ಧ ಆಡಲಿದೆ ಎಂದು ಸ್ಪಷ್ಟಪಡಿಸಿದೆ. ಹೊರನೋಟಕ್ಕೆ ಇದು “ಕ್ರಿಕೆಟ್‌ನ ಹಿತದೃಷ್ಟಿಯಿಂದ ಕೈಗೊಂಡ ನಿರ್ಧಾರ” ಎಂದು ಬಿಂಬಿಸಲಾಗುತ್ತಿದ್ದರೂ, ತೆರೆಮರೆಯ ಆರ್ಥಿಕ ನಷ್ಟದ ಭೀತಿ ಮತ್ತು ರಾಜತಾಂತ್ರಿಕ ಒಂಟಿತನವೇ ಈ ನಾಟಕೀಯ ಬದಲಾವಣೆಗೆ ಕಾರಣ ಎಂಬುದು ಸ್ಪಷ್ಟವಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement