ನೀಟ್ ಪರೀಕ್ಷೆ ಬರೆ ಎಂದಿದ್ದಕ್ಕೆ ತಂದೆಯನ್ನೇ ಕೊಂದ ಮಗ…! ತಂಗಿಯ ಎದುರೇ ದೇಹ ಕತ್ತರಿಸಿ ಡ್ರಮ್‌ನಲ್ಲಿ ಅಡಗಿಸಿಟ್ಟಿದ್ದ…!

ಲಕ್ನೋ: ತಂದೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 21 ವರ್ಷದ ಯುವಕನೊಬ್ಬನನ್ನು ಲಕ್ನೋ ಪೊಲೀಸರು ಬಂಧಿಸಿದ್ದಾರೆ. ಲಕ್ನೋ ನಗರದ ಆಶಿಯಾನಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಸ್ಥಳೀಯ ಉದ್ಯಮಿ ಮಾನ್ವೇಂದ್ರ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದೆ. ಫೆಬ್ರವರಿ 20 ರಿಂದ ಮಾನ್ವೇಂದ್ರ ಅವರು ನಾಪತ್ತೆಯಾಗಿದ್ದರು. ಪೊಲೀಸರ ತೀವ್ರ ಶೋಧದ ನಂತರ ಅವರ ಮೃತದೇಹ ಪತ್ತೆಯಾಗಿದ್ದು, ಮಗ ಅಕ್ಷತ್ ಪ್ರತಾಪ ಸಿಂಗ್‌ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಮಾನ್ವೇಂದ್ರ ಅವರ ಮನೆಯಿಂದ ಭೀಕರ ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದಾಗ ಮನೆಯ ಆವರಣದಲ್ಲಿ ಮೃತದೇಹ ಪತ್ತೆಯಾಗಿದೆ. ದೇಹದ ಕೆಲವು ಭಾಗಗಳನ್ನು ಡ್ರಮ್ ಒಂದರಲ್ಲಿ ಸಂಗ್ರಹಿಸಿಡಲಾಗಿತ್ತು, ಇನ್ನು ಕೆಲವು ಭಾಗಗಳನ್ನು ಈಗಾಗಲೇ ಮನೆಯಿಂದ ಬೇರೆಡೆಗೆ ಸಾಗಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ನೀಟ್ ಪರೀಕ್ಷೆಯ ಜಗಳ ಕೊಲೆಯಲ್ಲಿ ಅಂತ್ಯ
ಲಕ್ನೋ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ತಂದೆ ಮಾನ್ವೇಂದ್ರ ಪ್ರತಾಪ್ ಸಿಂಗ್ ವರ್ಧಮಾನ್ ಪ್ಯಾಥಾಲಜಿಯ ಮಾಲೀಕರಾಗಿದ್ದರು. ನೀಟ್ ಪರೀಕ್ಷೆಗೆ ತಯಾರಿ ನಡೆಸುವಂತೆ ತಂದೆ ಆಗಾಗ್ಗೆ ಒತ್ತಡ ಹೇರುತ್ತಿದ್ದರು ಮತ್ತು ಗದರಿಸುತ್ತಿದ್ದರು ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ, ಇದು ಮನೆಯಲ್ಲಿ ಪದೇ ಪದೇ ಜಗಳಕ್ಕೆ ಕಾರಣವಾಗಿತ್ತು. ಅಕ್ಷತ್ ಬಿಕಾಂ ವಿದ್ಯಾರ್ಥಿಯಾಗಿದ್ದು, ಈ ಹಿಂದೆ ಜೀವಶಾಸ್ತ್ರದಲ್ಲಿ 12 ನೇ ತರಗತಿಯಲ್ಲಿ ಉತ್ತೀರ್ಣನಾಗಿದ್ದ. ಆತ ತಂದೆ ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದ. ಆರೋಪಿಯ ತಾಯಿ 2018 ರಲ್ಲಿ ನಿಧನರಾಗಿದ್ದರು. ಫೆಬ್ರವರಿ 20 ರಂದು ಮುಂಜಾನೆ 4:30 ರ ಸುಮಾರಿಗೆ ತಂದೆ ಮತ್ತು ಮಗನ ನಡುವೆ ತೀವ್ರ ವಾಗ್ವಾದ ನಡೆದಿತ್ತು. ‘ನೀಟ್’ (NEET) ಪರೀಕ್ಷೆಯಲ್ಲಿ ಉತ್ತೀರ್ಣನಾಗುವಂತೆ ತಂದೆ ಒತ್ತಡ ಹೇರುತ್ತಿದ್ದ ಹಿನ್ನೆಲೆಯಲ್ಲಿ ಈ ಜಗಳ ನಡೆದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ವಿಚಾರಣೆಯ ವೇಳೆ, ಅಕ್ಷತ್ ತನ್ನ ತಂದೆಯ ಪರವಾನಗಿ ಹೊಂದಿದ್ದ ಗನ್‌ನಿಂದ ಗುಂಡು ಹಾರಿಸಿ ಕೊಂದಿರುವುದಾಗಿ ತಿಳಿಸಿದ್ದಾನೆ. ನಂತರ ಮೂರನೇ ಮಹಡಿಯಲ್ಲಿದ್ದ ದೇಹವನ್ನು ಕೆಳಮಹಡಿಯ ಕೋಣೆಯೊಂದಕ್ಕೆ ಸಾಗಿಸಿದ್ದಾನೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಆತನ ಸಹೋದರಿ ಇದನ್ನು ನೋಡಿದಾಗ, ಅವಳನ್ನು ಹೆದರಿಸಿ ಬಾಯ್ಮುಚ್ಚಿಸಿದ್ದ. ನಂತರ ಅವಳ ಮುಂದೆಯೇ ದೇಹವನ್ನು ತುಂಡು ಮಾಡಿದ್ದ ಮತ್ತು ದೇಹದ ಭಾಗಗಳನ್ನು ಪ್ಲಾಸ್ಟಿಕ್‌ನಲ್ಲಿ ಪ್ಯಾಕ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಅವುಗಳನ್ನು ಸದಾರುಣ ಬಳಿ ಎಸೆದಿದ್ದ. ಮುಂಡ ಸೇರಿದಂತೆ ಕೆಲವು ಭಾಗಗಳನ್ನು ಮನೆಯೊಳಗೆ ಇರಿಸಲಾಗಿದ್ದ ನೀಲಿ ಡ್ರಮ್‌ನಲ್ಲಿ ಹಾಕಿಟ್ಟಿದ್ದ ಎಂದು ತಿಳಿಸಿದ್ದಾರೆ.
ಮಾನ್ವೇಂದ್ರ ಸಿಂಗ್ ಅವರ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಗ ಅಕ್ಷತ್ ನೀಡಿದ ಹೇಳಿಕೆಗಳಲ್ಲಿ ಸಂಶಯ ಮೂಡಿತ್ತು. ವಿವರವಾದ ವಿಚಾರಣೆಗೆ ಒಳಪಡಿಸಿದಾಗ ಆತ ಸತ್ಯ ಒಪ್ಪಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ವಿಧಿವಿಜ್ಞಾನ ತಂಡ (Forensic Team) ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement