ವೀಡಿಯೊ | ಮಿಲಿಟರಿ ಇತಿಹಾಸದಲ್ಲೇ ಅತಿ ದೂರದ ಟಾರ್ಗೆಟ್‌ ಧ್ವಂಸ : 300 ಕಿಮೀ ದೂರದಲ್ಲೇ ವಿಮಾನ ಹೊಡೆದುರುಳಿಸಿದ ಭಾರತದ ಎಸ್-400…!

ನವದೆಹಲಿ: ಭಾರತೀಯ ವಾಯುಪಡೆಯು (IAF) ತನ್ನ ಅತ್ಯಾಧುನಿಕ ದೀರ್ಘ ವ್ಯಾಪ್ತಿಯ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯಾದ S-400 ಸುದರ್ಶನ ಕಾರ್ಯಾಚರಣೆಯ ರೋಚಕ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
ವಾಯುಪಡೆ ಬಿಡುಗಡೆ ಮಾಡಿರುವ ಈ ವಿಡಿಯೊದಲ್ಲಿ, ರಾಡಾರ್ ವ್ಯವಸ್ಥೆಯು ಅತೀ ದೂರದಲ್ಲಿರುವ ವೈರಿ ಟಾರ್ಗೆಟ್‌ ಅನ್ನು ಪತ್ತೆಹಚ್ಚುತ್ತದೆ. ಕೂಡಲೇ ಕ್ಷಿಪಣಿಯು ಹಾರಿಹೋಗಿ ಆ ಟಾರ್ಗೆಟ್‌ ಅನ್ನು ಧ್ವಂಸಗೊಳಿಸಿದೆ. “ಸೇನಾ ಇತಿಹಾಸದಲ್ಲೇ ದಾಖಲಾದ ಅತಿ ದೂರದ ‘ಕಿಲ್’ (ದಾಳಿ) ಇದು. ಶತ್ರು ಕಣ್ಣಿಗೆ ಕಾಣಿಸದಿರಬಹುದು, ಆದರೆ ನಮ್ಮ ಸುದರ್ಶನನ (S-400) ಕೈಗೆ ಸಿಗದಷ್ಟು ದೂರದಲ್ಲಿಲ್ಲ” ಎಂಬ ಸಂದೇಶವನ್ನು ವಿಡಿಯೋದಲ್ಲಿ ನೀಡಲಾಗಿದೆ.

ಆಪರೇಷನ್ ಸಿಂಧೂರ (2025):
ಈ ವಿಡಿಯೋದಲ್ಲಿ ಮೇ 2025ರಲ್ಲಿ ನಡೆದ ‘ಆಪರೇಷನ್ ಸಿಂಧೂರ’ವನ್ನು ಉಲ್ಲೇಖಿಸಲಾಗಿದೆ. ಆ ಕಾರ್ಯಾಚರಣೆಯ ಸಮಯದಲ್ಲಿ ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯು ಪಾಕಿಸ್ತಾನದ ಗಡಿಯೊಳಗೆ ಸುಮಾರು 300 ಕಿ.ಮೀ ದೂರದಲ್ಲಿದ್ದ ಟಾರ್ಗೆಟ್‌ ಅನ್ನು ನಿಖರವಾಗಿ ಹೊಡೆದುರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದು ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ವಾಯು ಶಕ್ತಿ-2026 ಕ್ಕೆ ಸಿದ್ಧತೆ:
ರಾಜಸ್ಥಾನದ ಪೋಖ್ರಾನ್‌ನಲ್ಲಿ ಶೀಘ್ರದಲ್ಲೇ ನಡೆಯಲಿರುವ ‘ವಾಯು ಶಕ್ತಿ-2026’ (Vayu Shakti-2026) ಬೃಹತ್ ಸಮರಾಭ್ಯಾಸಕ್ಕೂ ಮುನ್ನ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ. ಈ ಅಭ್ಯಾಸದಲ್ಲಿ ಭಾರತೀಯ ವಾಯುಪಡೆಯು ತನ್ನ ಬಲಿಷ್ಠ ಕಾರ್ಯಾಚರಣಾ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ.

ಪ್ರಮುಖ ಸುದ್ದಿ :-   ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ ಪ್ರಮಾಣ ವಚನ, 13 ಸಚಿವರಿಂದಲೂ ಪ್ರಮಾಣವಚನ ಸ್ವೀಕಾರ

ಏನಿದು S-400 ?
ಇದು ರಷ್ಯಾದ ಅಲ್ಮಾಜ್-ಆಂಟೆ ಕಂಪನಿಯು ತಯಾರಿಸಿದ ದೀರ್ಘ ವ್ಯಾಪ್ತಿಯ ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿದೆ. ಭಾರತದಲ್ಲಿ ಇದನ್ನು ‘ಸುದರ್ಶನ ಚಕ್ರ’ ಎಂದು ಕರೆಯಲಾಗುತ್ತದೆ.
2018 ರಲ್ಲಿ ಭಾರತವು ರಷ್ಯಾದ ಜೊತೆ ಸುಮಾರು 5.4 ಬಿಲಿಯನ್ ಡಾಲರ್ ವೆಚ್ಚದಲ್ಲಿ ಐದು ರೆಜಿಮೆಂಟ್‌ಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು. 2021 ರಿಂದ ಇವುಗಳ ಪೂರೈಕೆ ಆರಂಭವಾಗಿದೆ.

ಇದು ಶತ್ರು ವಿಮಾನಗಳು, ಡ್ರೋನ್‌ಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪತ್ತೆಹಚ್ಚಿ ನಾಶಪಡಿಸುವ ಸಾಮರ್ಥ್ಯ ಹೊಂದಿದೆ.
ಇದರ 40N6 ಕ್ಷಿಪಣಿಯು 400 ಕಿ.ಮೀ ದೂರದವರೆಗಿನ ಗುರಿಯನ್ನು ತಲುಪಬಲ್ಲದು. ಇದರ ರಾಡಾರ್ ಸರಿಸುಮಾರು 600 ಕಿ.ಮೀ ದೂರದವರೆಗಿನ ಚಟುವಟಿಕೆಗಳನ್ನು ಗಮನಿಸಬಲ್ಲದು. ಇದು ಏಕಕಾಲದಲ್ಲಿ ಹಲವು ಟಾರ್ಗೆಟ್‌ಗಳನ್ನು ಗುರುತಿಸಿ ದಾಳಿ ಮಾಡಬಲ್ಲದು. ಆಕಾಶ ಮತ್ತು ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳೊಂದಿಗೆ ಸೇರಿ ಇದು ಭಾರತಕ್ಕೆ ಭದ್ರತೆಯ ಕವಚವನ್ನು ನೀಡುತ್ತದೆ.
ಪೋಖ್ರಾನ್‌ನಲ್ಲಿ ನಡೆಯಲಿರುವ ವಾಯು ಶಕ್ತಿ ಅಭ್ಯಾಸದಲ್ಲಿ ತೇಜಸ್, ರಫೇಲ್, ಜಾಗ್ವಾರ್, ಮಿರಾಜ್-2000, ಸುಖೋಯ್-30MKI ನಂತಹ ಯುದ್ಧವಿಮಾನಗಳೂ ಪಾಲ್ಗೊಳ್ಳಲಿವೆ.

ಪ್ರಮುಖ ಸುದ್ದಿ :-   ಒಎಸ್‌ಎಂ ಮೌಲ್ಯಮಾಪನ ವಿವಾದದ ಬೆನ್ನಲ್ಲೇ ಬಿಗ್ ಸರ್ಜರಿ: ಸಿಬಿಎಸ್‌ಇ ನೂತನ ಮುಖ್ಯಸ್ಥರಾಗಿ ಲೋಖಂಡೆ ಪ್ರಶಾಂತ ಸೀತಾರಾಮ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement