
ಅಮೆರಿಕ ಮತ್ತು ಇಸ್ರೇಲ್ ಸಂಘಟಿತವಾಗಿ ನಡೆಸಿದ ವಾಯುದಾಳಿಗಳಿಂದ ಇರಾನ್ ನಗರಗಳಲ್ಲಿ ಭಾರಿ ವಿನಾಶ ಸಂಭವಿಸಿದೆ. ಈ ಘಟನೆಯು ಇರಾನ್ನ ವಾಯು ರಕ್ಷಣಾ ವ್ಯವಸ್ಥೆ(air defence system)ಯು ಶತ್ರುವಿನ ಕ್ಷಿಪಣಿಗಳನ್ನು ತಡೆಯುವಲ್ಲಿ ವಿಫಲವಾಗಿರುವುದನ್ನು ಎತ್ತಿ ತೋರಿಸಿದೆ. ಇರಾನ್ ತನ್ನ ಶಸ್ತ್ರಾಸ್ತ್ರಗಳ ಬಲ ಹೆಚ್ಚಿಸಲು ಇತ್ತೀಚೆಗಷ್ಟೇ ಚೀನಾದಿಂದ ಖರೀದಿಸಿದ್ದ HQ-9B ವಾಯು ರಕ್ಷಣಾ ವ್ಯವಸ್ಥೆಯು ಶತ್ರು ದೇಶಗಳ ಕ್ಷಿಪಣಿಗಳನ್ನು ಪತ್ತೆ ಮಾಡಿ ತಡೆಯುವಲ್ಲಿ ವಿಫಲವಾದಂತೆ ತೋರುತ್ತಿದೆ. ಈ ಹಿಂದೆ ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಪ್ರತಿಕಾರವಾಗಿ ಭಾರತವು ‘ಆಪರೇಷನ್ ಸಿಂಧೂರ’ ನಡೆಸಿದಾಗಲೂ, ಪಾಕಿಸ್ತಾನದ ಈ ಚೀನಾ ನಿಮರ್ಮಿತ HQ-9B ವಾಯು ರಕ್ಷಣಾ ವ್ಯವಸ್ಥೆಯು ವೈರಿ ಕ್ಷಿಪಣಿಗಳನ್ನು ಪತ್ತೆ ಹಚ್ಚಿ ತಡೆಯುವಲ್ಲಿ ವಿಫಲವಾಗಿತ್ತು. ಇರಾನ್ನಲ್ಲಿನ ಈ ಕಳಪೆ ಪ್ರದರ್ಶನವು ಈಗ ಯುದ್ಧ ವಿಶ್ಲೇಷಕರು ಚೀನಾದ ವಾಯು ರಕ್ಷಣಾ ವ್ಯವಸ್ಥೆ(air defence system)ಯ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಎತ್ತುವಂತೆ ಮಾಡಿದೆ.

ಈ ವೈಫಲ್ಯವು ತಾಂತ್ರಿಕ ದೋಷಗಳನ್ನು ಸೂಚಿಸಬಹುದಾದರೂ, ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾದ ನಂತರ ಅವಸರವಸರವಾಗಿ ರೂಪಿಸಲಾದ ಈ ವಾಯು ರಕ್ಷಣಾ ವ್ಯವಸ್ಥೆಯನ್ನು ಅಮೆರಿಕ ಮತ್ತು ಇಸ್ರೇಲ್ನ ಸಂಯೋಜಿತ ವಾಯುಪಡೆಗಳು ಸುಲಭವಾಗಿ ಮೆಟ್ಟಿ ನಿಂತಿರುವ ಸಾಧ್ಯತೆಯೂ ಇದೆ.
ಏನಿದು HQ-9B ವ್ಯವಸ್ಥೆ?
ಚೀನಾ ಏರೋಸ್ಪೇಸ್ ಸೈನ್ಸ್ ಅಂಡ್ ಇಂಡಸ್ಟ್ರಿ ಕಾರ್ಪೊರೇಷನ್ ಅಭಿವೃದ್ಧಿಪಡಿಸಿದ HQ-9B, ರಷ್ಯಾದ S-300PMU ಮತ್ತು ಅಮೆರಿಕದ ಪೇಟ್ರಿಯಾಟ್ PAC-2 ವ್ಯವಸ್ಥೆಗಳಿಂದ ಪ್ರೇರಿತವಾದ ವಾಯು ರಕ್ಷಣಾ ವ್ಯವಸ್ಥೆಯಾಗಿದೆ. ಆದರೆ ಈಗ ಇದು ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನವಾಗಿ ವಿಕಸನಗೊಂಡಿದೆ. 2006 ರಲ್ಲಿ ಮೊದಲ ಬಾರಿಗೆ ಪರೀಕ್ಷಿಸಲ್ಪಟ್ಟ ಈ ವ್ಯವಸ್ಥೆಯು ಕಳೆದ ದಶಕದಿಂದ ಬಳಕೆಯಲ್ಲಿದೆ. ವರದಿಗಳ ಪ್ರಕಾರ, ಇದರ ವ್ಯಾಪ್ತಿ 260 ಕಿ.ಮೀ ಆಗಿದ್ದು, ಅಧಿಕ ಎತ್ತರದಲ್ಲಿ ಬರುವ ಕ್ಷಿಪಣಿಗಳನ್ನು ಹೊಡೆದುರುಳಿಸಲು ಇನ್ನೂ 50 ಕಿ.ಮೀ ಎತ್ತರದವರೆಗೆ ಏರಿಸಬಹುದು. ಆಕ್ಟಿವ್ ರೇಡಾರ್ ಹೋಮಿಂಗ್ ಮತ್ತು ಪ್ಯಾಸಿವ್ ಇನ್ಫ್ರಾರೆಡ್ ಸೀಕರ್ನಂತಹ ವೈಶಿಷ್ಟ್ಯಗಳು ಇದನ್ನು ಸ್ಟೆಲ್ತ್ (ಕಣ್ಣಿಗೆ ಕಾಣದ) ವಿಮಾನಗಳ ವಿರುದ್ಧ ಪರಿಣಾಮಕಾರಿಯಾಗಿ ಎಂದು ಹೇಳಲಾಗುತ್ತಿತ್ತು. ಇದು ಏಕಕಾಲದಲ್ಲಿ 6-8 ಟಾರ್ಗೆಟ್ಗಳನ್ನು ಗುರಿಯಾಗಿಸಬಲ್ಲದು ಮತ್ತು 100 ಗುರಿಗಳನ್ನು ಪತ್ತೆಹಚ್ಚಬಲ್ಲದು ಎಂದು ವರದಿಯಾಗಿದೆ. ಚೀನಾ ಇದನ್ನು ಬೀಜಿಂಗ್, ಟಿಬೆಟ್ ಮತ್ತು ದಕ್ಷಿಣ ಚೀನಾ ಸಮುದ್ರದಂತಹ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಿದೆ.
ಇರಾನ್ ಶಸ್ತ್ರಾಗಾರಕ್ಕೆ ಇದು ಸೇರ್ಪಡೆಯಾಗಿದ್ದು ಹೇಗೆ?
ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾದಂತೆ, ಇರಾನ್ ತನ್ನ ಭದ್ರತೆಯನ್ನು ಬಲಪಡಿಸಲು ಮುಂದಾಯಿತು. ಚೀನಾದೊಂದಿಗೆ ‘ತೈಲಕ್ಕಾಗಿ ಶಸ್ತ್ರಾಸ್ತ್ರ’ (Oil-for-weapon) ಒಪ್ಪಂದದ ಭಾಗವಾಗಿ ಇರಾನ್ತೈಲದ ಬದಲಿಗೆ ಈ HQ-9B ವ್ಯವಸ್ಥೆಯನ್ನು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ. 2025 ರ ಸಂಘರ್ಷದ ಸಮಯದಲ್ಲಿ ಇಸ್ರೇಲಿ ಕ್ಷಿಪಣಿಗಳ ವಿರುದ್ಧ ರಷ್ಯಾದ S-300PMU-2 ಕಳಪೆ ಪ್ರದರ್ಶನ ನೀಡಿದ ನಂತರ, ಇರಾನ್ ತನ್ನ ರಕ್ಷಣಾ ವ್ಯವಸ್ಥೆಯನ್ನು ಚೀನಾದ HQ-9B ಖರೀದಿಸಿ ವಾಯು ರಕ್ಷಣಾ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಿತ್ತು. ಇದನ್ನು ನಟಾಂಜ್ ಪರಮಾಣು ಸಂಕೀರ್ಣ, ಫೋರ್ಡೋ ಅಣು ಪುಷ್ಟೀಕರಣ ಘಟಕ ಮತ್ತು ತೆಹ್ರಾನ್ ಹಾಗೂ ಇಸ್ಫಹಾನ್ ಬಳಿಯ ವಾಯುನೆಲೆಗಳಂತಹ ಪ್ರಮುಖ ಪ್ರದೇಶಗಳಲ್ಲಿ ನಿಯೋಜಿಸಲಾಗಿತ್ತು.
ತೀವ್ರಗೊಳ್ಳುತ್ತಿರುವ ಸಂಘರ್ಷ
ತಿಂಗಳುಗಳ ಕಾಲ ನಡೆದ ವಾಗ್ವಾದಗಳ ನಂತರ, ಅಮೆರಿಕ ಮತ್ತು ಇಸ್ರೇಲ್ ಶನಿವಾರ ಇರಾನ್ ನಗರಗಳ ಮೇಲೆ ಸಂಘಟಿತ ದಾಳಿ ನಡೆಸಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ತೀವ್ರವಾಗಿ ಪ್ರತಿಕ್ರಿಯಿಸಿದೆ. ಇರಾನ್ನ ರಾಜಧಾನಿ ತೆಹ್ರಾನ್ ಸೇರಿದಂತೆ ಒಟ್ಟು 31 ಪ್ರಾಂತ್ಯಗಳಲ್ಲಿ 20ಕ್ಕೂ ಹೆಚ್ಚು ಪ್ರಾಂತ್ಯಗಳು ಇಸ್ರೇಲ್-ಅಮೆರಿಕ ದಾಳಿಯಿಂದ ಬಾಧಿತವಾಗಿವೆ.
ಈ ದಾಳಿ-ಪ್ರತಿ ದಾಳಿಗಳು ಮಧ್ಯಪ್ರಾಚ್ಯದಾದ್ಯಂತ ಪರಿಣಾಮ ಬೀರಿದ್ದು, ವಿಶ್ವದ ಅತ್ಯಂತ ಕಾರ್ಯನಿರತ ವಿಮಾನ ನಿಲ್ದಾಣಗಳಲ್ಲಿ ಒಂದಾದ ದುಬೈ ವಿಮಾನ ನಿಲ್ದಾಣವನ್ನು ಮುಚ್ಚುವಂತೆ ಮಾಡಿದೆ.
ಇರಾನ್ ಈ ಸಂಘರ್ಷವನ್ನು ಮತ್ತಷ್ಟು ವಿಸ್ತರಿಸಿದ್ದು, ಅಮೆರಿಕದ ಮಿತ್ರರಾಷ್ಟ್ರಗಳಾದ ಕತಾರ್ ಮತ್ತು ಯುಎಇ (UAE) ಮೇಲೆ ದಾಳಿ ಮಾಡುವ ಮೂಲಕ ಶತ್ರುಗಳ ಪರ ನಿಂತರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಸಂದೇಶ ರವಾನಿಸಿದೆ.
ಇಸ್ರೇಲ್-ಅಮೆರಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಕೊಲ್ಲಲ್ಪಟ್ಟಿದ್ದಾರೆ. ಇದಕ್ಕೆ ಪ್ರತಿಕಾರವಾಗಿ ಇರಾನ್ “ಇತಿಹಾಸದಲ್ಲೇ ಅತ್ಯಂತ ಭಯಾನಕ ಆಕ್ರಮಣ” ನಡೆಸುವುದಾಗಿ ಪ್ರತಿಜ್ಞೆ ಮಾಡಿದೆ. ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಖಮೇನಿಯನ್ನು “ಇತಿಹಾಸದ ಅತ್ಯಂತ ದುಷ್ಟ ವ್ಯಕ್ತಿಗಳಲ್ಲಿ ಒಬ್ಬ” ಎಂದು ಬಣ್ಣಿಸಿದ್ದು, ಮಧ್ಯಪ್ರಾಚ್ಯ ಮತ್ತು ಜಗತ್ತಿನಲ್ಲಿ ಶಾಂತಿ ಸ್ಥಾಪನೆಯ ಗುರಿ ತಲುಪುವವರೆಗೆ ಅಮೆರಿಕದ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ