ನವದೆಹಲಿ/ ಬೆಂಗಳೂರು : ಪಶ್ಚಿಮ ಏಷ್ಯಾದಲ್ಲಿ (Middle East) ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ವಾಣಿಜ್ಯ ಅಡುಗೆ ಅನಿಲ (Commercial LPG) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಬೆಂಗಳೂರು, ಚೆನ್ನೈ ಮತ್ತು ಮುಂಬೈ ನಗರಗಳ ಹೋಟೆಲ್ ಹಾಗೂ ರೆಸ್ಟೋರೆಂಟ್ ಉದ್ಯಮಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಪರಿಸ್ಥಿತಿಯನ್ನು ನಿಭಾಯಿಸಲು ತೈಲ ಸಂಸ್ಕರಣಾಗಾರಗಳಿಗೆ ಎಲ್ಪಿಜಿ ಉತ್ಪಾದನೆಯನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಇರಾನ್-ಇಸ್ರೇಲ್-ಅಮೆರಿಕ ಸಂಘರ್ಷದಿಂದಾಗಿ ಸಮುದ್ರ ಮಾರ್ಗದ ಇಂಧನ ಪೂರೈಕೆಯಲ್ಲಿ ಅಡಚಣೆಯಾಗಿದ್ದು, ಕಳೆದ ಶನಿವಾರವಷ್ಟೇ ಅನಿಲ ಸಿಲಿಂಡರ್ ಬೆಲೆ ಏರಿಸಲಾಗಿತ್ತು. ಗೃಹ ಬಳಕೆಯ ಸಿಲಿಂಡರ್ ಬೆಲೆ ₹60 ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆ ₹115 ರಷ್ಟು ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಹೋಟೆಲ್ ಬಂದ್ ಭೀತಿ
ಬೆಂಗಳೂರು ಹೋಟೆಲ್ ಮಾಲೀಕರ ಸಂಘವು ಸೋಮವಾರ ಹೇಳಿಕೆ ನೀಡಿದ್ದು, ಅನಿಲ ಪೂರೈಕೆ ಸ್ಥಗಿತಗೊಂಡಿರುವುದರಿಂದ ಮಾರ್ಚ್ 10 ರಿಂದ ನಗರದಾದ್ಯಂತ ಹೋಟೆಲ್ ಗಳ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.“ಅನಿಲ ಪೂರೈಕೆ ನಿಂತರೆ ಹೋಟೆಲ್ಗಳನ್ನು ಮುಚ್ಚಬೇಕಾಗುತ್ತದೆ. ಇದು ವಿದ್ಯಾರ್ಥಿಗಳು, ರೋಗಿಗಳು ಮತ್ತು ದಿನನಿತ್ಯ ಹೋಟೆಲ್ ಅವಲಂಬಿಸಿರುವ ಸಾಮಾನ್ಯ ಜನರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಹೇಳಿದೆ.
ತೈಲ ಕಂಪನಿಗಳು 70 ದಿನಗಳ ಕಾಲ ನಿರಂತರ ಪೂರೈಕೆಯ ಭರವಸೆ ನೀಡಿದ್ದವು, ಆದರೆ ಇದ್ದಕ್ಕಿದ್ದಂತೆ ಪೂರೈಕೆಯಲ್ಲಿ ಅಡಚಣೆಯಾಗಿರುವುದು ದೊಡ್ಡ ಹೊಡೆತ ನೀಡಿದೆ ಎಂದು ಸಂಘದ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾರೆ.
ಮುಂಬೈ ನಲ್ಲಿ ಪರಿಸ್ಥಿತಿ ಗಂಭೀರ
ವಾಣಿಜ್ಯ ಸಿಲಿಂಡರ್ಗಳ ಕೊರತೆಯಿಂದಾಗಿ ಮುಂಬೈನ ಶೇ. 20ರಷ್ಟು ಹೋಟೆಲ್ಗಳು ಈಗಾಗಲೇ ಕಾರ್ಯ ಸ್ಥಗಿತಗೊಳಿಸಿವೆ. ದಾದರ್ ಮತ್ತು ಅಂಧೇರಿಯಂತಹ ಭಾಗದ ಐಕಾನಿಕ್ ಹೋಟೆಲ್ಗಳು ತಮ್ಮ ಮೆನುವಿನಿಂದ ದೀರ್ಘಕಾಲ ಬೇಯಿಸಬೇಕಾದ ‘ದಾಲ್ ಮಖನಿ’ ಅಥವಾ ‘ರವಾ ದೋಸೆ’ಯಂತಹ ಖಾದ್ಯಗಳನ್ನು ಕೈಬಿಟ್ಟಿವೆ.
ಉಳಿದ ಅನಿಲ ದಾಸ್ತಾನು ಕಡಿಮೆ ಖರ್ಚು ಮಾಡಲು ತಮ್ಮ ಹೋಟೆಲ್ ತೆರೆಯುವ ಸಮಯವನ್ನು ಕಡಿಮೆ ಮಾಡಿದ್ದಾರೆ. ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮ ಸಂಸ್ಥೆ ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (FHRAI) ಸೋಮವಾರ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ಗಳ ಕೊರತೆಯನ್ನು ಸಹ ಗುರುತಿಸಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿಗೆ ಬರೆದ ಪತ್ರದಲ್ಲಿ, ಅದು “ತಳಮಟ್ಟದಲ್ಲಿ ವ್ಯಾಪಕ ಅಡಚಣೆ”ಯನ್ನು ಗುರುತಿಸಿದೆ. ಮಾರ್ಚ್ 5 ರ ಸರ್ಕಾರಿ ಆದೇಶವನ್ನು ಉಲ್ಲೇಖಿಸಿ ಹಲವಾರು ವಿತರಕರು ಸರಬರಾಜುಗಳನ್ನು ತಡೆಹಿಡಿಯುತ್ತಿದ್ದಾರೆ ಎಂದು FHRAI ಹೇಳಿದೆ.
ಚೆನ್ನೈನಲ್ಲಿ ಇದೇ ಸಮಸ್ಯೆ….
ಚೆನ್ನೈ ಹೋಟೆಲ್ ಸಂಘದ ಅಧ್ಯಕ್ಷ ಎಂ. ರವಿ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, ಐಟಿ ಪಾರ್ಕ್ಗಳು ಮತ್ತು ಆಸ್ಪತ್ರೆಗಳಿಗೆ ಆಹಾರ ಪೂರೈಕೆ ಮಾಡಲು ನಿರಂತರ ಅನಿಲ ಪೂರೈಕೆ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.
ಚೆನ್ನೈನಲ್ಲಿ, ಪರಿಸ್ಥಿತಿ “ಈಗ ಇನ್ನಷ್ಟು ಗಂಭೀರವಾಗಿದೆ” ಎಂದು ಹೋಟೆಲ್ಗಳ ಸಂಘ ಹೇಳಿದೆ. “ಹಲವು ಸ್ಟಾರ್ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು ಔತಣಕೂಟ ಬುಕಿಂಗ್ಗಳನ್ನು ಮಾಡುತ್ತಿದ್ದು, ಅವುಗಳ ಮೇಲೆಯೂ ಪರಿಣಾಮ ಬೀರುತ್ತದೆ. ಆಹಾರ ಉದ್ಯಮಕ್ಕೆ ವಾಣಿಜ್ಯ LPG ಪೂರೈಕೆ ಕಡಿಮೆಯಾಗುವುದರಿಂದ ತಮಿಳುನಾಡಿನಾದ್ಯಂತ ಹೆಚ್ಚಿನ ಸಾರ್ವಜನಿಕರಿಗೆ ಅಡ್ಡಿಯಾಗುತ್ತದೆ” ಎಂದು ಅವರು ಹೇಳಿದ್ದಾರೆ. ಆಹಾರ ಉದ್ಯಮಕ್ಕೆ ವಾಣಿಜ್ಯ LPG ಯ ನಿರಂತರ ಪೂರೈಕೆ ಮಾಡಬೇಕು ಎಂದು ಅವರು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.
ಸರ್ಕಾರದ ಕ್ರಮಗಳೇನು?
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಪರಿಸ್ಥಿತಿ ಸುಧಾರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.
ತೈಲ ಸಂಸ್ಕರಣಾಗಾರಗಳಲ್ಲಿ ಎಲ್ಪಿಜಿ ಉತ್ಪಾದನೆ ಹೆಚ್ಚಳಕ್ಕೆ ಆದೇಶ.
ಕಾಳಸಂತೆ ತಡೆಯಲು ಸಿಲಿಂಡರ್ ಬುಕ್ಕಿಂಗ್ ನಡುವೆ 25 ದಿನಗಳ ಕಡ್ಡಾಯ ಅಂತರ ಜಾರಿ.
ಆಸ್ಪತ್ರೆ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಆಮದು ಮಾಡಿಕೊಂಡ ಎಲ್ಪಿಜಿ ಪೂರೈಕೆಯಲ್ಲಿ ಆದ್ಯತೆ.
ಹೋಟೆಲ್ ಮತ್ತು ಕೈಗಾರಿಕೆಗಳ ಪೂರೈಕೆ ಬಗ್ಗೆ ಪರಿಶೀಲಿಸಲು ತೈಲ ಕಂಪನಿಗಳ ಕಾರ್ಯನಿರ್ವಾಹಕ ನಿರ್ದೇಶಕರ ಸಮಿತಿ ರಚನೆ.
“ಭಾರತವು ಸುರಕ್ಷಿತ ಸ್ಥಿತಿಯಲ್ಲಿದೆ ಮತ್ತು ಆತಂಕ ಪಡುವ ಅಗತ್ಯವಿಲ್ಲ. ಹಾರ್ಮುಜ್ ಜಲಸಂಧಿಯಲ್ಲದ ಇತರ ಮಾರ್ಗಗಳ ಮೂಲಕ ಇಂಧನ ಆಮದು ಸುಗಮವಾಗಿ ನಡೆಯುತ್ತಿದೆ,” ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಭರವಸೆ ನೀಡಿದ್ದಾರೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಂಗಳವಾರ ಬೆಳಿಗ್ಗೆ ಬ್ರೆಂಟ್ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್ಗೆ $92.45ಕ್ಕೆ ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಸ್ವಲ್ಪ ಮಟ್ಟದ ಚೇತರಿಕೆ ಕಂಡುಬಂದಿದೆ.


ನಿಮ್ಮ ಕಾಮೆಂಟ್ ಬರೆಯಿರಿ