ಪೆಟ್ರೋಲ್, ಡೀಸೆಲ್‌ ಅಭಾವದಿಂದ ಕಂಗೆಟ್ಟ ಪಾಕಿಸ್ತಾನ: ಗಣರಾಜ್ಯೋತ್ಸವ ಪರೇಡ್‌, ಸಂಭ್ರಮಾಚರಣೆ ರದ್ದುಗೊಳಿಸಿದ ಪಾಕ್‌…!

ಇಸ್ಲಾಮಾಬಾದ್‌ : ಮಧ್ಯಪ್ರಾಚ್ಯದಲ್ಲಿ ಇರಾನ್ ಯುದ್ಧದಿಂದ ಉಂಟಾಗಿರುವ ಇಂಧನ ಬಿಕ್ಕಟ್ಟು ಈಗ ಪಾಕಿಸ್ತಾನಕ್ಕೆ ಹೊಸ ಸಮಸ್ಯೆ ತಂದೊಡ್ಡಿದೆ. ವರದಿಗಳ ಪ್ರಕಾರ, ಮಾರ್ಚ್ 23 ರಂದು ನಡೆಯಬೇಕಿದ್ದ ಪಾಕಿಸ್ತಾನದ ‘ಗಣರಾಜ್ಯೋತ್ಸವ’ದ (Republic Day) ಮಿಲಿಟರಿ ಪರೇಡ್ ಮತ್ತು ಔಪಚಾರಿಕ ನಡಾವಳಿಗಳನ್ನು ರದ್ದುಗೊಳಿಸಲು ಪಾಕಿಸ್ತಾನದ ಪ್ರಧಾನ ಮಂತ್ರಿ ಕಾರ್ಯಾಲಯ ಮಂಗಳವಾರ ನಿರ್ಧರಿಸಿದೆ.
ಪ್ರಧಾನಿ ಶೆಹಬಾಜ್ ಶರೀಫ್ ಅವರ ಕಚೇರಿಯು, “ಪ್ರಸ್ತುತ ಕೊಲ್ಲಿ ರಾಷ್ಟ್ರಗಳಲ್ಲಿನ ತೈಲ ಬಿಕ್ಕಟ್ಟು ಮತ್ತು ಸರ್ಕಾರ ಘೋಷಿಸಿರುವ ಮಿತವ್ಯಯ ಕ್ರಮಗಳ ಹಿನ್ನೆಲೆಯಲ್ಲಿ, ಮಾರ್ಚ್ 23 ಕ್ಕೆ ನಿಗದಿಯಾಗಿದ್ದ ಪಾಕಿಸ್ತಾನ ದಿನದ ಸೇನಾ ಪರೇಡ್ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಸಮಾರಂಭಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ, ಎಂದು ತಿಳಿಸಿದೆ.

ಹಾರ್ಮುಜ್ ಜಲಸಂಧಿಯಿಂದ (Strait of Hormuz) ತೈಲ ಪೂರೈಕೆಯಲ್ಲಿನ ವ್ಯತ್ಯಯ ಮತ್ತು ಮಿತವ್ಯಯ ಕ್ರಮಗಳ ಜಾರಿಯಿಂದಾಗಿ ಪಾಕಿಸ್ತಾನವು ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ. ಪಾಕಿಸ್ತಾನವು ಉದಯವಾಗಿ ಒಂಬತ್ತು ವರ್ಷಗಳ ನಂತರ ಮಾರ್ಚ್ 23, 1956 ರಂದು, ಪಾಕಿಸ್ತಾನವು ತನ್ನ ಮೊದಲ ಸಂವಿಧಾನವನ್ನು ಅಂಗೀಕರಿಸುವುದರೊಂದಿಗೆ ಔಪಚಾರಿಕವಾಗಿ ಗಣರಾಜ್ಯವಾಯಿತು.
“ಗಣರಾಜ್ಯೋತ್ಸವದ ಆಚರಣೆಗಳನ್ನು ಕೇವಲ ಧ್ವಜಾರೋಹಣದ ಮೂಲಕ ಸರಳವಾಗಿ ಮತ್ತು ಗೌರವಯುತವಾಗಿ ಆಚರಿಸಲಾಗುವುದು,” ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಸಾಮಾನ್ಯವಾಗಿ ಇಸ್ಲಾಮಾಬಾದ್‌ನಲ್ಲಿ 31 ಕುಶಾಲತೋಪುಗಳು ಮತ್ತು ಪ್ರಾಂತೀಯ ರಾಜಧಾನಿಗಳಲ್ಲಿ 21 ಕುಶಾಲತೋಪುಗಳ ಗೌರವದೊಂದಿಗೆ ಈ ದಿನ ಆರಂಭವಾಗಿ, ನಂತರ ಸಶಸ್ತ್ರ ಪಡೆಗಳ ಭವ್ಯ ಪರೇಡ್ ನಡೆಯುತ್ತಿತ್ತು.
ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ಈ ಸಂದರ್ಭವನ್ನು ಅತ್ಯಂತ ಸರಳವಾಗಿ ಆಚರಿಸಬೇಕು. ಸೀಮಿತ ಸಮಾರಂಭಗಳ ನಡುವೆಯೂ ದಿನದ ಮಹತ್ವ ಮತ್ತು ಸಂದೇಶಕ್ಕೆ ಧಕ್ಕೆ ಬರಬಾರದು ಎಂದು ಪ್ರಧಾನಿ ಕಾರ್ಯಾಲಯ ಸೂಚಿಸಿದೆ.

ಪ್ರಮುಖ ಸುದ್ದಿ :-   ಕ್ರಿಕೆಟ್ ದಂತಕತೆ ಸರ್ ಗ್ಯಾರಿ ಸೋಬರ್ಸ್ ನಿಧನ

ಇಂಧನ ಬಿಕ್ಕಟ್ಟು ಮತ್ತು ಪಾಕಿಸ್ತಾನದ ಆತಂಕ
ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದ ಕೆಲವೇ ದಿನಗಳಲ್ಲಿ, ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನವು ತೀವ್ರ ಆತಂಕಕ್ಕೊಳಗಾಗಿದೆ. ರಸ್ತೆಗಳಲ್ಲಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸರ್ಕಾರವು ಕೋವಿಡ್ ಕಾಲದಂತೆ ‘ಮನೆಯಿಂದ ಕೆಲಸ’ (Work from home) ಮತ್ತು ಆನ್‌ಲೈನ್ ತರಗತಿಗಳ ಮೊರೆ ಹೋಗಿದೆ.
ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿರುವುದು ಪಾಕಿಸ್ತಾನದ ಆರ್ಥಿಕತೆಯನ್ನು ಧ್ವಂಸಗೊಳಿಸಿದೆ. ಏಕೆಂದರೆ ಪಾಕಿಸ್ತಾನದ ಶೇಕಡಾ 85-99 ರಷ್ಟು ಕಚ್ಚಾ ತೈಲ ಮತ್ತು ಎಲ್‌ಎನ್‌ಜಿ (LNG) ಆಮದುಗಳು (ಹೆಚ್ಚಾಗಿ ಕತಾರ್ ಮತ್ತು ಯುಎಇಯಿಂದ) ಈ ಜಲಸಂಧಿಯ ಮೂಲಕವೇ ಸಾಗುತ್ತವೆ. ಈ ಮಾರ್ಗವು ಬಹುತೇಕ ಸ್ಥಗಿತಗೊಂಡಿರುವುದರಿಂದ ಪಾಕಿಸ್ತಾನದಲ್ಲಿ ತೈಲ ಬೆಲೆ ಗಗನಕ್ಕೇರಿದೆ.

ಆರ್ಥಿಕ ಹೊರೆ:
‘ನ್ಯೂಯಾರ್ಕ್ ಟೈಮ್ಸ್’ ವರದಿಯ ಪ್ರಕಾರ, ಯುದ್ಧದಿಂದಾಗಿ ಪಾಕಿಸ್ತಾನದ ಮಾಸಿಕ ಇಂಧನ ಆಮದು ವೆಚ್ಚವು 1.7 ಬಿಲಿಯನ್ ಡಾಲರ್‌ನಿಂದ 3.5 – 4.5 ಬಿಲಿಯನ್ ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆಯಿದೆ.
ಎಲ್‌ಎನ್‌ಜಿ ಕೊರತೆಯಿಂದಾಗಿ ಪಾಕಿಸ್ತಾನಿಗಳು ಪರ್ಯಾಯ ಇಂಧನಗಳನ್ನು ಹುಡುಕುವಂತಾಗಿದೆ ಮತ್ತು ತಕ್ಷಣದ ವಿದ್ಯುತ್ ಪಡಿತರ ಜಾರಿಗೆ ಬಂದಿದೆ.
ಈ ಬಿಕ್ಕಟ್ಟು ಹಣದುಬ್ಬರವನ್ನು ಹೆಚ್ಚಿಸಿದೆ ಮತ್ತು ಗಲ್ಫ್ ದೇಶಗಳಲ್ಲಿ ವಾಸಿಸುತ್ತಿರುವ 47 ಲಕ್ಷ ಪಾಕಿಸ್ತಾನಿಯವರಿಂದ ಬರುವ ಹಣದ ಹರಿವಿಗೂ (Remittances) ಧಕ್ಕೆ ತರುವ ಭೀತಿ ಮೂಡಿಸಿದೆ.
ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಚಿವರು ಮತ್ತು ಶಾಸಕರ ವೇತನ ಕಡಿತಗೊಳಿಸಲಾಗಿದೆ. ಇಂಧನ ಉಳಿಸಲು ವಿದೇಶಿ ಪ್ರವಾಸಗಳನ್ನು ಕೇವಲ ಅತ್ಯಗತ್ಯ ಕೆಲಸಗಳಿಗೆ ಸೀಮಿತಗೊಳಿಸಲಾಗಿದೆ (ಎಕಾನಮಿ ಕ್ಲಾಸ್ ಪ್ರಯಾಣ ಮಾತ್ರ).
ಪ್ರಸ್ತುತ ಪಾಕಿಸ್ತಾನದ ಬಳಿ ಕೇವಲ 11 ದಿನಗಳಿಗೆ ಆಗುವಷ್ಟು ಕಚ್ಚಾ ತೈಲ ಮತ್ತು 9 ದಿನಗಳ ಎಲ್‌ಪಿಜಿ ದಾಸ್ತಾನು ಮಾತ್ರ ಉಳಿದಿದೆ. ತನ್ನ ಇಂಧನ ಅಗತ್ಯಕ್ಕಾಗಿ 80% ಕ್ಕಿಂತ ಹೆಚ್ಚು ಆಮದನ್ನೇ ನಂಬಿಕೊಂಡಿರುವ ದೇಶಕ್ಕೆ ಇದನ್ನು ನಿರವಹಿಸುವುದು ಅತಿ ದೊಡ್ಡ ಸವಾಲಾಗಿದೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement