ವಿಶ್ವದ ಪ್ರಮುಖ ತೈಲ ಸಾರಿಗೆ ಮಾರ್ಗವಾದ ಹಾರ್ಮುಜ್ ಜಲಸಂಧಿಯ (Strait of Hormuz) ಮೇಲೆ ನಿಯಂತ್ರಣ ಪಡೆಯಲು ಅಮೆರಿಕ ಸೇನೆಯು ತನ್ನ ಮೊದಲ ಪ್ರಮುಖ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿದೆ. ಇರಾನ್‌ನ ಕರಾವಳಿ ತೀರದಲ್ಲಿರುವ ಕ್ಷಿಪಣಿ ಉಡಾವಣಾ ಕೇಂದ್ರಗಳ ಮೇಲೆ ಅಮೆರಿಕ ತನ್ನ ಅತ್ಯಂತ ಶಕ್ತಿಶಾಲಿ ‘ಬಂಕರ್ ಬಸ್ಟರ್’ ಬಾಂಬ್‌ಗಳ ಮೂಲಕ ದಾಳಿ ನಡೆಸಿರುವುದಾಗಿ ಪ್ರಕಟಿಸಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ನೀಡಿರುವ ಮಾಹಿತಿಯ ಪ್ರಕಾರ, ಸುಮಾರು 5,000 ಪೌಂಡ್ (ಅಂದಾಜು 2,268 ಕೆ.ಜಿ) ತೂಕದ ‘ಡೀಪ್ ಪೆನೆಟ್ರೇಟರ್’ ಬಾಂಬ್‌ಗಳನ್ನು ಇರಾನ್‌ನ ಭೂಗತ ಕ್ಷಿಪಣಿ ನೆಲೆಗಳ ಮೇಲೆ ಹಾಕಲಾಗಿದೆ.
“ಈ ನೆಲೆಗಳಲ್ಲಿದ್ದ ಇರಾನ್‌ನ ಹಡಗು ವಿರೋಧಿ ಕ್ರೂಸ್ ಕ್ಷಿಪಣಿಗಳು ಅಂತಾರಾಷ್ಟ್ರೀಯ ಹಡಗು ಸಂಚಾರಕ್ಕೆ ಸಂಚಕಾರ ತಂದಿದ್ದವು. ಹಾಗಾಗಿ ಈ ಕ್ರಮ ಅನಿವಾರ್ಯವಾಗಿತ್ತು,” ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ‘X’ ನಲ್ಲಿ ತಿಳಿಸಿದೆ.
ಏನಿದು 5,000 ಪೌಂಡ್ ‘ಬಂಕರ್ ಬಸ್ಟರ್’ ಬಾಂಬ್?
ಇವುಗಳನ್ನು ಗಟ್ಟಿಯಾದ ಅಥವಾ ಭೂಮಿಯ ಆಳದಲ್ಲಿ ಅಡಗಿಸಿಟ್ಟಿರುವ ಶಸ್ತ್ರಾಸ್ತ್ರಗಳನ್ನು ಧ್ವಂಸಗೊಳಿಸಲು ಬಳಸಲಾಗುತ್ತದೆ.
ಒಂದು ಬಾಂಬ್‌ನ ಅಂದಾಜು ಬೆಲೆ $288,000 (ಸುಮಾರು ₹2.4 ಕೋಟಿ). ಕಳೆದ ವರ್ಷ ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ಬಳಸಲಾಗಿದ್ದ 30,000 ಪೌಂಡ್ ಬಾಂಬ್‌ಗಳಿಗಿಂತ ಇವು ಸ್ವಲ್ಪ ಕಡಿಮೆ ತೀವ್ರತೆಯನ್ನು ಹೊಂದಿವೆ.
ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ: ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಯುದ್ಧಕ್ಕೆ ಪ್ರತಿಕಾರವಾಗಿ ಇರಾನ್ ಈ ಜಲಸಂಧಿಯನ್ನು ಬಂದ್ ಮಾಡಿತ್ತು. ಇದರಿಂದಾಗಿ ಜಗತ್ತಿನ ಒಟ್ಟು ತೈಲ ಪೂರೈಕೆಯ ಶೇ. 20ರಷ್ಟು ಸ್ಥಗಿತಗೊಂಡು, ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆಗಳು ಏರಿಕೆಯಾಗಿದ್ದವು.
ಮಿತ್ರರಾಷ್ಟ್ರಗಳ ನೆರವು ನಿರಾಕರಣೆ: ಟ್ರಂಪ್ ಆಕ್ರೋಶ
ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಸಹಕರಿಸುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಕರೆಯನ್ನು ನ್ಯಾಟೋ (NATO) ಸೇರಿದಂತೆ ಹೆಚ್ಚಿನ ಮಿತ್ರರಾಷ್ಟ್ರಗಳು ತಿರಸ್ಕರಿಸಿವೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಟ್ರಂಪ್, “ನಾವು ನ್ಯಾಟೋಗೆ ಇಷ್ಟೊಂದು ಸಹಾಯ ಮಾಡಿದ್ದರೂ ಅವರು ನಮಗೆ ಬೆಂಬಲ ನೀಡುತ್ತಿಲ್ಲ. ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವುದನ್ನು ತಡೆಯುವುದು ಎಲ್ಲರ ಹಿತದೃಷ್ಟಿಯಿಂದ ಮುಖ್ಯವಾಗಿದೆ,” ಎಂದು ಕಿಡಿಕಾರಿದ್ದಾರೆ.
ಆದರೆ, ಇರಾನ್ ಮಾತ್ರ ತನ್ನ ಪರಮಾಣು ಕಾರ್ಯಕ್ರಮ ಕೇವಲ ಶಾಂತಿಯುತ ಉದ್ದೇಶಗಳಿಗಾಗಿ (ವಿದ್ಯುತ್ ಉತ್ಪಾದನೆ) ಇದೆ ಎಂದು ವಾದಿಸುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ