ಇಸ್ರೇಲ್‌ನ ಮೊಸಾದ್ (Mossad) ಮತ್ತು ಗುಪ್ತಚರ ಪಡೆಗಳು ಇರಾನ್‌ನ ಅತ್ಯಂತ ಸುರಕ್ಷಿತ ಹಾಗೂ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾದ ಅಲಿ ಲಾರಿಜಾನಿಯನ್ನು ಭದ್ರತಾಗೋಡೆಗಳ ಮಧ್ಯೆ ಪತ್ತೆಹಚ್ಚಿರುವುದು ಇಸ್ರೇಲಿನ ಗುಪ್ತಚರ ಸಂಸ್ಥೆಗಳ ಸಾಮರ್ಥ್ಯವನ್ನು ಅನಾವರಣ ಮಾಡುವಂತಿದೆ. ಅಭೇದ್ಯ ಭದ್ರತಾ ಗೋಡೆಗಳ ನಡುವೆ ಅಡಗಿದ್ದ ಇರಾನಿನ “ನಂಬರ್ 2” ವ್ಯಕ್ತಿಯನ್ನು ಪತ್ತೆ ಹಚ್ಚಿದ ನಂತರ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಲಾರಿಜಾನಿ ಸಾವಿಗೀಡಾಗಿದ್ದಾರೆ. ಅಷ್ಟೊಂದು ಸುರಕ್ಷತೆಯಲ್ಲಿರುವ ಲಾರಿಜಾನಿ ಅವರನ್ನು ಇಸ್ರೇಲ್ ಪತ್ತೆ ಹಚ್ಚಿದ್ದು ಹೇಗೆ ಎಂಬುದು ಈಗ ಚರ್ಚೆಯಾಗುತ್ತಿದೆ.
ಇರಾನಿನ ಪರಮೋಚ್ಚ ನಾಯಕ ಅಲಿ ಖಮೇನಿಯ ಸಾವಿನ ನಂತರ, ಲಾರಿಜಾನಿ ಇಸ್ರೇಲ್‌ನ ಮುಂದಿನ ಟಾರ್ಗೆಟ್ ಎಂಬುದು ಇರಾನ್‌ಗೆ ತಿಳಿದಿತ್ತು. ಹೀಗಾಗಿ, ಲಾರಿಜಾನಿ ಅವರು ಕಳೆದ ಎರಡು ವಾರಗಳಿಂದ ಒಂದೇ ಕಡೆ ಇರುತ್ತಿರಲಿಲ್ಲ. ಪ್ರತಿದಿನ ತಮ್ಮ ಅಡಗುತಾಣಗಳನ್ನು ಬದಲಾಯಿಸುತ್ತಿದ್ದರು. ಆದರೆ, ಇಸ್ರೇಲಿ ಗುಪ್ತಚರ ಸಂಸ್ಥೆಗಳು ಲಾರಿಜಾನಿ ಬಳಸಬಹುದಾದ ಪ್ರತಿಯೊಂದು ಸಂಭಾವ್ಯ ‘ಸುರಕ್ಷಿತ ಅಡಗುತಾಣಗಳ ‘ಗಳ ಮೇಲೆ ತಾಂತ್ರಿಕವಾಗಿ ಕಣ್ಣಿಟ್ಟಿದ್ದವು. ಅವರು ಎಲ್ಲಿಗೆ ಹೋದರೂ ಅವರ ನೆರಳಿನಂತೆ ಇಸ್ರೇಲ್‌ನ ನಿರಂತರ ನಿಗಾ ಇಟ್ಟಿತ್ತು.
ಸ್ಥಳೀಯರೇ ನೀಡಿದ ‘ಸುಳಿವು’
ತಂತ್ರಜ್ಞಾನಕ್ಕಿಂತ ಹೆಚ್ಚಾಗಿ ಇಸ್ರೇಲ್‌ಗೆ ಈ ಬಾರಿ ಸಹಾಯ ಮಾಡಿದ್ದು “ಹ್ಯೂಮನ್ ಇಂಟೆಲಿಜೆನ್ಸ್”. ಇರಾನ್‌ನ ರಾಜಧಾನಿ ತೆಹ್ರಾನ್‌ನ ಒಳಗೇ ಇರುವ ಕೆಲವು ನಿವಾಸಿಗಳು ಲಾರಿಜಾನಿ ಇರುವಿಕೆಯ ಬಗ್ಗೆ ಇಸ್ರೇಲ್‌ಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಇರಾನ್‌ನ ಒಳಗಿರುವ ಇಸ್ರೇಲಿ ಏಜೆಂಟ್‌ಗಳು ಮತ್ತು ಸ್ಥಳೀಯ ಮೂಲಗಳು ಲಾರಿಜಾನಿಯ ಪ್ರತಿ ಚಲನವಲನದ ಮೇಲೆ ನಿಗಾ ಇಟ್ಟಿದ್ದವು.
. ‘ಕುದ್ಸ್ ದಿನ’ದ ಅತಿಯಾದ ಆತ್ಮವಿಶ್ವಾಸ
ಲಾರಿಜಾನಿ ತನ್ನ ಭದ್ರತೆಯ ಬಗ್ಗೆ ಎಷ್ಟೇ ಎಚ್ಚರಿಕೆ ವಹಿಸಿದ್ದರೂ, ಕೆಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಮ್ಮನ್ನು ತಾವು ಬಹಿರಂಗಪಡಿಸಿಕೊಂಡಿದ್ದರು. ವಿಶೇಷವಾಗಿ ‘ಕುದ್ಸ್ ದಿನ’ದ ರ‍್ಯಾಲಿಗಳಲ್ಲಿ ಅವರು ಕಾಣಿಸಿಕೊಂಡಿದ್ದು ಇಸ್ರೇಲ್‌ಗೆ ದೊಡ್ಡ ಸುಳಿವು ನೀಡಿತು. ಇಸ್ರೇಲಿ ಅಧಿಕಾರಿಗಳ ಪ್ರಕಾರ, ಲಾರಿಜಾನಿಯ ಈ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಹಸಿವು ಅವರ ಮುಖವನ್ನು ಜನಸಾಮಾನ್ಯರು ಗುರುತಿಸಲು ಮತ್ತು ಅವರ ಚಲನವಲನವನ್ನು ಟ್ರ್ಯಾಕ್ ಮಾಡಲು ದಾರಿಯಾಯಿತು.
ಮಗಳ ಮೇಲಿನ ಪ್ರೀತಿಯೇ ಮುಳುವಾಯಿತು
ಎಷ್ಟೇ ಪ್ರಬಲ ಭದ್ರತಾ ಅಧಿಕಾರಿಯಾಗಿದ್ದರೂ, ವೈಯಕ್ತಿಕ ಭಾವನೆಗಳೇ ಲಾರಿಜಾನಿಗೆ ಮುಳುವಾದವು. ಮಂಗಳವಾರ ಅವರು ಯಾರೂ ಊಹಿಸದ ಸಮಯದಲ್ಲಿ ಪರ್ದಿಸ್ ಉಪನಗರದಲ್ಲಿದ್ದ ತಮ್ಮ ಮಗಳ ಮನೆಗೆ ಭೇಟಿ ನೀಡಲು ನಿರ್ಧರಿಸಿದರು. ಇದು ಅತ್ಯಂತ ಗೌಪ್ಯ ಭೇಟಿಯಾಗಿದ್ದರೂ, ಇಸ್ರೇಲ್‌ನ ಕಣ್ಗಾವಲು ವ್ಯವಸ್ಥೆಯು ಅದನ್ನು ಪತ್ತೆಹಚ್ಚಿತು. ಅವರು ಮನೆ ಪ್ರವೇಶಿಸಿದ ಕೆಲವೇ ಕ್ಷಣಗಳಲ್ಲಿ ಇಸ್ರೇಲ್‌ನ ಕ್ಷಿಪಣಿಗಳು ಆ ಮನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದವು. ಡಿಜಿಟಲ್ ಕಣ್ಗಾವಲು, ಸ್ಥಳೀಯರು ನೀಡಿದ ಸುಳಿವು ಮತ್ತು ಲಾರಿಜಾನಿ ಮಾಡಿದ ಸಣ್ಣ ತಪ್ಪುಗಳು ಸೇರಿ ಇಸ್ರೇಲ್ ದಾಳಿ ಮಾಡಲು ಕಾರಣವಾಯಿತು. ಈ ದಾಳಿಯಲ್ಲಿ ಲಾರಿಜಾನಿ ಅವರ ಜೊತೆಗೆ ಅವರ ಪುತ್ರ, ಒಬ್ಬ ಅಧಿಕಾರಿ ಮತ್ತು ಹಲವು ಅಂಗರಕ್ಷಕರು ಸಾವಿಗೀಡಾಗಿದ್ದಾರೆ.
ಕೇವಲ ಲಾರಿಜಾನಿ ಮಾತ್ರವಲ್ಲದೆ, ಮಾರ್ಚ್ 16-17ರ ಮಧ್ಯರಾತ್ರಿ ತೆಹ್ರಾನ್‌ನಲ್ಲಿ ನಡೆದ ದಾಳಿಯಲ್ಲಿ ಬಸಿಜ್ ಅರೆಸೇನಾ ಪಡೆಯ ಮುಖ್ಯಸ್ಥ ಘೋಲಮ್ರೆಜಾ ಸೊಲೈಮಾನಿ ಕೂಡ ಹತರಾಗಿದ್ದಾರೆ. ಒಂದೇ ವಾರದಲ್ಲಿ ಇಬ್ಬರು ಪ್ರಬಲ ಸೇನಾ ನಾಯಕರನ್ನು ಕಳೆದುಕೊಂಡಿರುವುದು ಇರಾನಿಗೆ ಹೊಡೆತವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ