ಬೆಚ್ಚಿಬೀಳಿಸುವ ಘಟನೆ : ಎಲ್ಲರೆದುರೇ ಯುವಕನ ತಲೆ ಕತ್ತರಿಸಿ ಮನೆಗೆ ಒಯ್ದು ರುಂಡ ಪಕ್ಕಕ್ಕಿಟ್ಟು ಅಡುಗೆ ಮಾಡುತ್ತಿದ್ದ ಹಂತಕ…!

 ಬಾರಾಬಂಕಿ: ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಶನಿವಾರ ಮನುಕುಲವೇ ಬೆಚ್ಚಿಬೀಳಿಸುವ ಭೀಕರ ಕೊಲೆಯೊಂದು ನಡೆದಿದೆ. 25 ವರ್ಷದ ಯುವಕನೊಬ್ಬನನ್ನು ಸಾರ್ವಜನಿಕವಾಗಿ ಹತ್ಯೆ ಮಾಡಿದ 50 ವರ್ಷದ ವ್ಯಕ್ತಿ, ಬಳಿಕ ಯುವಕನ ಕತ್ತರಿಸಿದ ತಲೆಯನ್ನು ತನ್ನ ಮನೆಗೆ ಕೊಂಡೊಯ್ದು ಆರಾಮವಾಗಿ ಅಡುಗೆ ಮಾಡಲು ಕುಳಿತ ಘಟನೆ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ.
ಬಾರಾಬಂಕಿ ಜಿಲ್ಲೆಯ ಪರಸಾವಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಬ್ಲು (25) ಎಂಬ ವ್ಯಕ್ತಿ ಎಂದಿನಂತೆ ಐಸ್‌ಕ್ರೀಂ ಮಾರಾಟ ಮಾಡಲು ಈ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿನ ನಿವಾಸಿ ಶಂಕರ ಯಾದವ್ ಎಂಬಾತ ಹಾಗೂ ಬಬ್ಲು ನಡುವೆ ಮಾತಿನ ಚಕಮಕಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಶಂಕರ ಯಾದವ ಕೊಡಲಿಯಿಂದ (Sickle) ಬಬ್ಲು ಅವರ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ.
ಸಾರ್ವಜನಿಕರ ಮುಂದೆಯೇ ಶಿರಚ್ಛೇದ
ವರದಿಗಳ ಪ್ರಕಾರ, ಕೊಲೆ ಆರೋಪಿ ಶಂಕರ ಯಾದವ ಎಲ್ಲರ ಮುಂದೆಯೇ ಕೊಡಲಿಯಿಂದ ಬಬ್ಲು ಅವರ ಕುತ್ತಿಗೆ ಸೀಳಿ, ತಲೆಯನ್ನು ದೇಹದಿಂದ ಬೇರ್ಪಡಿಸಿದ್ದಾನೆ. ಅಷ್ಟಕ್ಕೇ ನಿಲ್ಲದ ಆತ, ಕತ್ತರಿಸಿದ ತಲೆಯನ್ನು ಕೈಯಲ್ಲಿ ಹಿಡಿದುಕೊಂಡು ಗ್ರಾಮದ ಬೀದಿಯಲ್ಲೇ ನಡೆದುಕೊಂಡು ತನ್ನ ಮನೆಗೆ ಹೋಗಿದ್ದಾನೆ.
ಅಡುಗೆ ಮನೆಯಲ್ಲಿ ತಲೆಯಿಟ್ಟು ಅಡುಗೆಗೆ ಮುಂದಾದ…!
ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಅರ್ಪಿತ್ ವಿಜಯವರ್ಗಿಯಾ ನೇತೃತ್ವದ ದೊಡ್ಡ ಪೊಲೀಸ್ ತಂಡ ಶಂಕರ ಯಾದವ ಮನೆಯನ್ನು ಸುತ್ತುವರಿಯಿತು. ಪೊಲೀಸರು ಮನೆಯೊಳಗೆ ನುಗ್ಗಿದಾಗ ಅಲ್ಲಿನ ದೃಶ್ಯ ಕಂಡು ಅವರು ಹೌಹಾರಿದ್ದಾರೆ.
ಹಂತಕ ಅಡುಗೆ ಮನೆಯಲ್ಲಿ ಬಬ್ಲು ತಲೆಯನ್ನು ಪಕ್ಕದಲ್ಲಿಟ್ಟುಕೊಂಡು, ಏನೂ ಅರಿಯದವನಂತೆ ಅಡುಗೆ ಮಾಡುತ್ತಿದ್ದ. ಪೊಲೀಸರು ತಕ್ಷಣ ಆತನನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಆಯುಧ ಮತ್ತು ಕತ್ತರಿಸಿದ ತಲೆಯನ್ನು ವಶಪಡಿಸಿಕೊಂಡಿದ್ದಾರೆ.
ಕುಟುಂಬದ ಆಧಾರಸ್ತಂಭವಾಗಿದ್ದ ಬಬ್ಲು
ಮೃತ ಬಬ್ಲು ಮೂವರು ಸಹೋದರರಲ್ಲಿ ಹಿರಿಯವರಾಗಿದ್ದರು. ಕೂಲಿ ಕೆಲಸ ಮತ್ತು ಐಸ್‌ಕ್ರೀಂ ಮಾರಾಟ ಮಾಡುವ ಮೂಲಕ ತನ್ನ ಇಡೀ ಕುಟುಂಬವನ್ನು ಸಲಹುತ್ತಿದ್ದ. ಬಬ್ಲು ನಿಧನದಿಂದ ಆತನ ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಘಟನೆಗೆ ನಿಖರವಾದ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement