ಇರಾನ್ ಮೇಲೆ ದ್ವಿಮುಖ ಭೂಸೇನಾ ದಾಳಿಗೆ ಅಮೆರಿಕ ಯೋಜನೆ ; ಟ್ರಂಪ್ ಅಂತಿಮ ನಿರ್ಧಾರಕ್ಕೆ ಕಾಯುತ್ತಿರುವ ಸೇನೆ : ವರದಿ

ವಾಷಿಂಗ್ಟನ್: ಪರ್ಷಿಯನ್ ಕೊಲ್ಲಿಗೆ ಸಾವಿರಾರು ಹೆಚ್ಚುವರಿ ಸೈನಿಕರನ್ನು ರವಾನಿಸುತ್ತಿರುವ ಅಮೆರಿಕವು ಇರಾನ್ ಮೇಲೆ ಎರಡು ಸಂಭಾವ್ಯ ಭೂಸೇನಾ ದಾಳಿಗಳನ್ನು ನಡೆಸುವ ಕುರಿತು ಗಂಭೀರ ಚಿಂತನೆ ನಡೆಸುತ್ತಿದೆ. ಈ ಕಾರ್ಯಾಚರಣೆಗಳಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಂತಿಮ ಅನುಮೋದನೆ ಬಾಕಿ ಇದೆ ಎಂದು ‘ದಿ ಅಟ್ಲಾಂಟಿಕ್’ ವರದಿ ಮಾಡಿದೆ.
ವರದಿಯ ಪ್ರಕಾರ, ಅಮೆರಿಕದ ಮಿಲಿಟರಿ ಅಧಿಕಾರಿಗಳು ಎರಡು ಪ್ರಮುಖ ಗುರಿಗಳನ್ನು ಹೊಂದಿದ್ದಾರೆ.
ಇರಾನ್‌ನ ತೈಲ ರಫ್ತಿನ ಶೇ. 90ರಷ್ಟು ಭಾಗವನ್ನು ನಿಯಂತ್ರಿಸುವ ಖಾರ್ಗ್ ದ್ವೀಪವನ್ನು ವಶಪಡಿಸಿಕೊಂಡು, ಇರಾನ್‌ನ ಆದಾಯದ ಮೂಲಕ್ಕೆ ಪೆಟ್ಟು ನೀಡುವುದು ಒಂದು ಮುಖ್ಯ ಗುರಿಯಾದರೆ, ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಪುಷ್ಟೀಕರಿಸಿದ ಯುರೇನಿಯಂ ಅನ್ನು ವಶಪಡಿಸಿಕೊಳ್ಳಲು ವಿಶೇಷ ಪಡೆಗಳನ್ನು ಇರಾನ್ ಒಳಭಾಗಕ್ಕೆ ಕಳುಹಿಸುವುದು ಮತ್ತೊಂದು ಗುರಿಯಾಗಿದೆ ಎನ್ನಲಾಗಿದೆ.

ಅಪಾಯಕಾರಿ ಹೆಜ್ಜೆ:
ಇರಾನ್ ಮಣ್ಣಿನಲ್ಲಿ ಅಮೆರಿಕದ ಸೈನಿಕರನ್ನು ಇಳಿಸುವುದು ಟ್ರಂಪ್ ಆಡಳಿತದ ಅತ್ಯಂತ ಅಪಾಯಕಾರಿ ಮಿಲಿಟರಿ ಕ್ರಮವಾಗಬಹುದು ಎಂದು ವಿಶ್ಲೇಷಿಸಲಾಗಿದೆ. ಈ ದಾಳಿಯಿಂದ ಯುದ್ಧವು ಬೇಗನೆ ಕೊನೆಗೊಳ್ಳುತ್ತದೆ ಅಥವಾ ಇರಾನ್ ಸರ್ಕಾರ ಪತನವಾಗುತ್ತದೆ ಎಂಬ ಗ್ಯಾರಂಟಿ ಇಲ್ಲ ಎಂದು ಮೂಲಗಳು ಎಚ್ಚರಿಸಿವೆ. ಅಲ್ಲದೆ, ಜಾಗತಿಕ ತೈಲ ಮಾರುಕಟ್ಟೆಗೆ ಸಂಕಷ್ಟ ತಂದೊಡ್ಡಿರುವ ‘ಹಾರ್ಮುಜ್ ಜಲಸಂಧಿ’ಯನ್ನು ಪುನಃ ತೆರೆಯುವುದು ಈ ಕಾರ್ಯಾಚರಣೆಯಿಂದ ಸಾಧ್ಯವಾಗದಿರಬಹುದು ಎನ್ನಲಾಗಿದೆ.
ಈಗಾಗಲೇ ಸುಮಾರು 3,500 ಅಮೆರಿಕನ್‌ ಮರೀನ್ ಸೈನಿಕರು ಈ ಪ್ರದೇಶಕ್ಕೆ ಆಗಮಿಸಿದ್ದಾರೆ. ಇನ್ನೂ 3,500 ಸೈನಿಕರು ಶೀಘ್ರದಲ್ಲೇ ಬರಲಿದ್ದಾರೆ.
ನೂರಾರು ವಿಶೇಷ ಕಾರ್ಯಾಚರಣಾ ಪಡೆಗಳು (Special Operations forces) ಕೂಡ ಸನ್ನದ್ಧ ಸ್ಥಿತಿಯಲ್ಲಿವೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

ಸವಾಲುಗಳೇನು?
ವಿಶೇಷವಾಗಿ ಇರಾನ್ ಒಳಭಾಗಕ್ಕೆ ನುಗ್ಗಿ ಯುರೇನಿಯಂ ಅನ್ನು ವಶಪಡಿಸಿಕೊಳ್ಳುವ ಯೋಜನೆ ಭಾರೀ ರಿಸ್ಕ್‌ನಿಂದ ಕೂಡಿದೆ. ಇರಾನ್ ಸೇನೆಯ ಪ್ರತಿರೋಧ, ಹೊಂಚುದಾಳಿ ಮತ್ತು ವಶಪಡಿಸಿಕೊಂಡ ವಸ್ತುಗಳನ್ನು ಸುರಕ್ಷಿತವಾಗಿ ಸಾಗಿಸುವಲ್ಲಿ ತಾಂತ್ರಿಕ ಸವಾಲುಗಳು ಎದುರಾಗಬಹುದು ಎಂದು ವರದಿ ಹೇಳಿದೆ.
ಸಂಧಾನವೇ ಅಥವಾ ಸಂಘರ್ಷವೇ?
ಸದ್ಯಕ್ಕೆ ಅಧ್ಯಕ್ಷ ಟ್ರಂಪ್ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಈ ಭೂಸೇನಾ ದಾಳಿಯ ಬೆದರಿಕೆಯು ಇರಾನ್ ಅನ್ನು ಸಂಧಾನಕ್ಕೆ ತರುವ ತಂತ್ರವೂ ಆಗಿರಬಹುದು. ಒಂದು ವೇಳೆ ಮಾತುಕತೆ ವಿಫಲವಾದರೆ, ಅಮೆರಿಕವು ದೀರ್ಘಕಾಲದ ಯುದ್ಧ ಮತ್ತು ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯದಂತಹ ಕಠಿಣ ಸನ್ನಿವೇಶಗಳನ್ನು ಎದುರಿಸಬೇಕಾಗಬಹುದು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement