ವಿಶ್ವಸಂಸ್ಥೆ : ಇರಾನ್‌ನಿಂದ ದಿಗ್ಬಂಧನಕ್ಕೊಳಗಾಗಿರುವ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಪುನರಾರಂಭಿಸುವ ಉದ್ದೇಶ ಹೊಂದಿದ್ದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ರಷ್ಯಾ ಮತ್ತು ಚೀನಾ ಮಂಗಳವಾರ ವೀಟೋ (ನಿಷೇಧಾಧಿಕಾರ ಚಲಾಯಿಸಿವೆ) ಮಾಡಿವೆ.
15 ರಾಷ್ಟ್ರಗಳ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಬಹ್ರೇನ್ ಪ್ರಸ್ತಾಪಿಸಿದ ನಿರ್ಣಯದ ಮೇಲೆ ಮತದಾನ ನಡೆಸಿತು. ಇದಕ್ಕೆ ಪ್ರಸ್ತಾನೆಯ ಪರವಾಗಿ 11 ಮತಗಳು ಚಲಾವಣೆಯಾದವು, ಆದರೆ ರಷ್ಯಾ ಮತ್ತು ಚೀನಾ ಇದರ ವಿರುದ್ಧ ಮತ ಚಲಾಯಿಸಿದರೆ, ಇಬ್ಬರು ಸದಸ್ಯರು ಮತದಾನದಿಂದ ದೂರ ಉಳಿದರು. ವೀಟೋ ಅಧಿಕಾರ ಹೊಂದಿರುವ ಕಾಯಂ ಸದಸ್ಯ ರಾಷ್ಟ್ರಗಳಾದ ರಷ್ಯಾ ಮತ್ತು ಚೀನಾ ವಿರುದ್ಧವಾಗಿ ಮತ ಚಲಾಯಿಸಿದ್ದರಿಂದ ಈ ನಿರ್ಣಯವನ್ನು ಅಂಗೀಕರಿಸಲು ಸಾಧ್ಯವಾಗಲಿಲ್ಲ.
ಮಂಗಳವಾರ ಪೂರ್ವ ಸಮಯ ರಾತ್ರಿ 8 ಗಂಟೆಯೊಳಗೆ ಹಾರ್ಮುಜ್ ಜಲಸಂಧಿಯನ್ನು ಪುನರಾರಂಭಿಸುವಂತೆ ಇರಾನ್‌ಗೆ ಎಚ್ಚರಿಕೆ ನೀಡಿದ್ದ ಡೊನಾಲ್ಡ್ ಟ್ರಂಪ್ ಅವರ ಗಡುವು ಮುಗಿಯುವ ಕೆಲವೇ ಗಂಟೆಗಳ ಮೊದಲು ಈ ಮತದಾನ ನಡೆದಿದೆ. ಒಂದು ವೇಳೆ ಇರಾನ್ ಹಾರ್ಮುಜ್ ಜಲಸಂಧಿಯನ್ನು ಎಲ್ಲರಿಗೂಮುಕ್ತವಾಗಿ ತೆರೆಯಲು ವಿಫಲವಾದರೆ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳಂತಹ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಸಂಭಾವ್ಯ ಸೇನಾ ದಾಳಿಗಳನ್ನು ನಡೆಸಲಾಗುವುದು ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ನಿರ್ಣಯದ ಮುಖ್ಯಾಂಶಗಳು:
ಪ್ರಸ್ತುತ ಏಪ್ರಿಲ್ ತಿಂಗಳಿಗೆ ಬಹ್ರೇನ್ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ವಹಿಸಿದೆ. ಆರಂಭಿಕ ಕರಡು ನಿರ್ಣಯವು ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳಲು “ಅಗತ್ಯವಿರುವ ಎಲ್ಲಾ ಮಾರ್ಗಗಳನ್ನು ಬಳಸಲು” ದೇಶಗಳಿಗೆ ಅಧಿಕಾರ ನೀಡುವ ಪ್ರಸ್ತಾವನೆಯನ್ನು ಒಳಗೊಂಡಿತ್ತು.
ಆದರೆ ಬಲಪ್ರಯೋಗಕ್ಕೆ ರಷ್ಯಾ, ಚೀನಾ ಮತ್ತು ಫ್ರಾನ್ಸ್ ವಿರೋಧ ವ್ಯಕ್ತಪಡಿಸಿದ ಕಾರಣ, ಅಂತಿಮ ಕರಡನ್ನು ಕೇವಲ “ರಕ್ಷಣಾತ್ಮಕ ಕ್ರಮಗಳಿಗೆ” ಸೀಮಿತಗೊಳಿಸಿ ಪರಿಷ್ಕರಿಸಲಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ